ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಮಾವೊವಾದಿಗಳ ದಾಳಿ

ಅರಣ್ಯ ಇಲಾಖೆ ಕಚೇರಿ, ಕೆಎಫ್‌ಸಿ ರೆಸ್ಟೊರೆಂಟ್‌ಗೆ ಹಾನಿ
Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಎರಡು ವಾರಗಳ ಹಿಂದಷ್ಟೇ ವಯನಾಡ್‌ನಲ್ಲಿ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದ ಮಾವೊವಾದಿಗಳು ಸೋಮವಾರ ಪಾಲಕ್ಕಾಡ್‌ ಮತ್ತು ವಯನಾಡ್‌ಗಳಲ್ಲಿ ಅರಣ್ಯ ಇಲಾಖೆಯ ಎರಡು ಕಚೇರಿಗಳು ಹಾಗೂ ಕೆಎಫ್‌ಸಿ ರೆಸ್ಟೊರೆಂಟ್‌ ಮೇಲೆ ದಾಳಿ ನಡೆಸಿದ್ದಾರೆ.

ನಸುಕಿನಲ್ಲಿ ಈ ದಾಳಿ ನಡೆದಿದ್ದು ಯಾವುದೇ ಸಾವು– ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆದ ಸ್ಥಳಗಳಲ್ಲಿ ಮಾವೊವಾದಿ ಗುಂಪಿಗೆ ಸೇರಿದ ಫಲಕ ಹಾಗೂ ಭಿತ್ತಿಪತ್ರಗಳು ಪತ್ತೆಯಾಗಿವೆ. ಪಾಲಕ್ಕಾಡ್‌ನ ‘ಸೈಲೆಂಟ್‌ ವ್ಯಾಲಿ ಫಾರೆಸ್ಟ್‌’ ವಲಯದಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಳಿಯ ಕಾರಣ ಈ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಟ್ಟಪಾಡಿ ವಿಭಾಗದ ಮುಕ್ಕೋಳದಲ್ಲಿರುವ ಅರಣ್ಯ ಇಲಾಖೆ ಕಚೇರಿ ಮೇಲೆ ನಡೆದ ದಾಳಿಯಲ್ಲಿ  ಪೀಠೋಪ­ಕರಣ ಮತ್ತು ಕಂಪ್ಯೂಟರ್‌ಗಳು,ಕಿಟಕಿಗಳು ಧ್ವಂಸಗೊಂಡಿವೆ. ಕಚೇರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖೆ ಜೀಪ್‌ಗೆ ಮಾವೊವಾದಿಗಳು ಬೆಂಕಿ ಹಚ್ಚಿದ್ದಾರೆ.

ಪಾಲಕ್ಕಾಡ್‌ನ ಚಂದ್ರನಗರದಲ್ಲಿನ ಕೆಂಟುಕಿ ಫ್ರೈಡ್‌ ಚಿಕನ್‌ ರೆಸ್ಟೊರೆಂಟ್‌ (ಕೆಎಫ್‌ಸಿ) ಮೇಲೆಯೂ ಮಾವೊ­ವಾದಿಗಳ ಗುಂಪು ದಾಳಿ ಮಾಡಿ,  ಅಮೆರಿಕ ವಿರೋಧಿ ಘೋಷಣೆಗಳಿರುವ ಭಿತ್ತಿಪತ್ರಗಳನ್ನು ಎಸೆದು ಹೋಗಿದೆ. ವಯನಾಡು ಜಿಲ್ಲೆಯ ವೆಲ್ಲಮುಂಡ ಅರಣ್ಯ ಇಲಾಖೆ ವಲಯದ ಕುನ್ಹೊಮ್‌ನಲ್ಲಿನ ವನ ಸಂರಕ್ಷಣಾ ಸಮಿತಿ ಕಚೇರಿಯನ್ನು ಶಂಕಿತ ಮಾವೊವಾದಿಗಳು ಧ್ವಂಸಗೊಳಿಸಿ­ದ್ದಾರೆ.

ಅಲ್ಲಿ ದೊರೆತಿರುವ ಭಿತ್ತಿಪತ್ರಗಳು ಮತ್ತು ದಾಳಿಯ ಸ್ವರೂಪ ಇದು ಮಾವೊವಾದಿಗಳ ಕೃತ್ಯವೆಂದು ಸೂಚಿಸುತ್ತದೆ ಎಂದು ವಯನಾಡು ಜಿಲ್ಲಾಧಿಕಾರಿ ಕೇಶವೇಂದ್ರ ಕುಮಾರ್‌ ಸುದ್ದಿಸಂಸ್ಥೆಗೆ ತಿಳಿಸಿದರು. ಈ ಘಟನೆಗಳಿಂದಾಗಿ ಮಾವೊವಾದಿಗಳ ಪತ್ತೆ ಕಾರ್ಯಾ­ಚರಣೆಯನ್ನು ತೀವ್ರಗೊಳಿಸಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT