ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ರಾಷ್ಟ್ರೀಯ ಕ್ರೀಡಾ ಸಂಭ್ರಮ...

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕೇರಳ ರಾಜ್ಯ ಇದೀಗ ರಾಷ್ಟ್ರೀಯ ಕ್ರೀಡಾಕೂಟದ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಒಲಿಂಪಿಕ್ಸ್‌ ಆಂದೋಲನಕ್ಕೆ ಸಂಬಂಧಿಸಿದಂತೆ ಭಾರತದ ಬಹು ಮುಖ್ಯ ಕ್ರೀಡಾಹಬ್ಬ ಇದು. ಇಂತಹ ಮಹತ್ವದ ಕೂಟಕ್ಕೆ ಎರಡನೇ ಬಾರಿ ಆತಿಥ್ಯ ವಹಿಸಿದ ಹೆಮ್ಮೆ ಕೇರಳದ್ದಾಗಿದೆ.
ಒಲಿಂಪಿಕ್‌ ಆಂದೋಲನ ಸುಮಾರು 9ದಶಕಗಳ ಹಿಂದೆಯೇ ಭಾರತದಲ್ಲಿ ತನ್ನ ಅಂಬೆಗಾಲಿಟ್ಟಿತ್ತು.

ಅವಿಭಜಿತ ಪಂಜಾಬ್‌ ಪ್ರಾಂತ್ಯದ ಲಾಹೋರ್‌ ನಗರದಲ್ಲಿ 1924ರಲ್ಲಿ ಮೊದಲ ‘ಭಾರತೀಯ ಒಲಿಂಪಿಕ್‌ ಕ್ರೀಡಾಕೂಟ’ ನಡೆದಿತ್ತು. ಆ ನಂತರ ಎರಡು ವರ್ಷಗಳಿಗೊಮ್ಮ ಕೂಟವನ್ನು ನಡೆಸಲು ಭಾರತ ಒಲಿಂಪಿಕ್‌ ಸಂಸ್ಥೆ ನಿರ್ಧರಿಸಿತ್ತು. 1940ರಿಂದ ಈ ಕೂಟವನ್ನೇ ‘ರಾಷ್ಟ್ರೀಯ ಕ್ರೀಡಾಕೂಟ’ ಎಂದು ಹೆಸರಿಸಲಾಯಿತು. ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಕ್ರೀಡಾಕೂಟ ಲಖನೌ ನಗರದಲ್ಲಿ ನಡೆದಿತ್ತು.

ಇದೀಗ ಕೇರಳ ರಾಜ್ಯದಲ್ಲಿ 35ನೇ ಕೂಟ ನಡೆಯುತ್ತಿದೆ. ಸಾಮಾನ್ಯವಾಗಿ ಈವರೆಗೆ ಈ ಕ್ರೀಡಾಕೂಟದ ಬಹುತೇಕ ಸ್ಪರ್ಧೆಗಳು ಒಂದೇ ನಗರದಲ್ಲೇ ನಡೆಯುತ್ತಿದ್ದುದರಿಂದ, ಆತಿಥೇಯ ನಗರದ ಮೂಲಕವೇ ಸಂಬಂಧಪಟ್ಟ ವರ್ಷದ ಕ್ರೀಡಾಕೂಟವನ್ನು ಗುರುತಿಸಲಾಗುತಿತ್ತು. ಆದರೆ ಇದೇ ಮೊದಲ ಬಾರಿಗೆ ಕೇರಳದ ಹಲವು ಜಿಲ್ಲೆಗಳಲ್ಲಿ ಈ ಕೂಟದ ವಿವಿಧ ಸ್ಪರ್ಧೆಗಳು ನಡೆಯುತ್ತಿರುವುದೊಂದು ವಿಶೇಷ.

ಈ ಸಲ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಕೇರಳದ ರಾಜಧಾನಿ ತಿರುವನಂತಪುರದಲ್ಲಿಯೇ ನಡೆಯುತ್ತವೆ. ಅಥ್ಲೆಟಿಕ್ಸ್‌ ಸೇರಿದಂತೆ ಹಲವು ಪ್ರಮುಖ ಕ್ರೀಡಾ ವಿಭಾಗದ ಸ್ಪರ್ಧೆಗಳು ಕೂಡ ಇದೇ ನಗರದಲ್ಲಿ ನಡೆಯಲಿವೆ. ಜನವರಿ 31ರಿಂದ ಫೆಬ್ರುವರಿ 14ರವರೆಗೆ ನಡೆಯಲಿರುವ ಈ ಕ್ರೀಡಾಕೂಟಕ್ಕಾಗಿಯೇ ಕೇರಳದ ತಿರುವನಂತಪುರ, ಕೊಲ್ಲಮ್‌, ಕೊಚ್ಚಿ, ತ್ರಿಶೂರ್‌, ಅಲೆಪ್ಪಿ, ಕೋಯಿಕ್ಕೋಡ್‌ಗಳಲ್ಲಿ ವಿವಿಧ ಕ್ರೀಡೆಗಳಿಗೆ ಅಗತ್ಯವಾದ ಸುಮಾರು 40 ‘ಕ್ರೀಡಾಂಗಣ’ಗಳನ್ನು ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ.

ಕೇರಳದ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಎತ್ತರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದಾರೆ. ಪಿ.ಟಿ.ಉಷಾ, ಅಂಜು ಬಾಬ್ಬಿ ಜಾರ್ಜ್‌, ಕೆ.ಎಂ.ಬೀನಾಮೋಳ್‌, ಶೈನಿ ವಿಲ್ಸನ್‌, ಐ.ಎಂ. ವಿಜಯನ್‌, ಕೆ.ಸಿ. ಏಲಮ್ಮ, ಟಿ.ಸಿ. ಯೋಹನನ್‌, ಜಿಮ್ಮಿ ಜಾರ್ಜ್‌, ವಿ.ಎಂ.ಕುಟ್ಟಿ ಕೃಷ್ಣನ್‌, ಪಾಪಚ್ಚನ್‌, ಜೊ ಪಾಲ್‌ ಅಂಚೇರಿ, ಪಿ.ಜೆ.ಜೋಸೆಫ್‌, ಕೆ.ಸಾರಮ್ಮ, ವಿಲ್ಸನ್‌ ಚೆರಿಯನ್‌, ರೂಪಾ ಉಣ್ಣಿಕೃಷ್ಣನ್‌, ಮರ್ಸಿ ಕುಟ್ಟನ್‌, ಎಂ.ಡಿ.ವಲ್ಸಮ್ಮ ಸೇರಿದಂತೆ ನೂರಾರು ಕ್ರೀಡಾಪಟುಗಳು ತಮ್ಮ ಎತ್ತರದ ಸಾಧನೆಯಿಂದ ರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲಿ ಕೇರಳ ರಾಜ್ಯಕ್ಕೆ ಮಹತ್ವದ ಸ್ಥಾನ ತಂದುಕೊಟ್ಟಿದ್ದಾರೆ.

ಇಂತಹ ಅದ್ಭುತ ಕ್ರೀಡಾಪರಂಪರೆಯ ಕೇರಳವು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲ ಸಲವೇನಲ್ಲ. 1987ರಲ್ಲಿ 27ನೇ ರಾಷ್ಟ್ರೀಯ ಕೂಟಕ್ಕೂ ಆತಿಥ್ಯ ವಹಿಸಿತ್ತು. ಆದರೆ ಈ ಸಲ ಆ ರಾಜ್ಯ ಹಿಂದೆಂದೂ ಕಂಡರಿಯದಷ್ಟು ವೈಭವಯುತವಾಗಿ ಈ ಕೂಟವನ್ನು ನಡೆಸಲು ತೀರ್ಮಾನಿಸಿದಂತಿದೆ. ಈ ಕೂಟವನ್ನು ಸಂಘಟಿಸುವ ನೆಪದಲ್ಲಿ ಕೇರಳ ಸರ್ಕಾರ ಆ ರಾಜ್ಯದಾದ್ಯಂತ ಹಲವಾರ ಕ್ರೀಡಾ ಕೇಂದ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಿರುವುದೊಂದು ವಿಶೇಷ.

ಈ ಕ್ರೀಡಾಕೂಟವನ್ನು ಸಂಘಟಿಸುವುದರ ಜತೆಗೇ ‘ಕ್ರೀಡಾ ಪ್ರವಾಸೋದ್ಯಮ’ವನ್ನೂ ಅಲ್ಲಿನ ಸರ್ಕಾರ ಉದ್ದೇಶವಾಗಿಟ್ಟುಕೊಂಡಿರುವುದು ಗೊತ್ತಾಗುತ್ತದೆ. ಯಾವುದೇ ರಾಜ್ಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯುವುದರಿಂದ ಆ ರಾಜ್ಯದಲ್ಲಿ ವಿಶೇಷವಾದ ಕ್ರೀಡಾಸೌಲಭ್ಯಗಳು ರೂಪುಗೊಳ್ಳಲು ಅದು ಪೂರಕವಾಗುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ 1997ರಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಿತ್ತಲ್ಲಾ, ಆಗ ಕಂಠೀರವ ಕ್ರೀಡಾಂಗಣವನ್ನು ಅತ್ಯಾಧುನಿಕವಾಗಿ ನವೀಕರಣಗೊಳಿಸಲಾಯಿತು.

ಕೋರಮಂಗಲ ದಲ್ಲೊಂದು ಒಳಾಂಗಣ ಕ್ರೀಡಾಂಗಣ ನಿರ್ಮಾಣವೂ ಸೇರಿದಂತೆ ನಗರದ ಕೆಲವು ಕಡೆ ಕ್ರೀಡಾಸೌಲಭ್ಯಗಳನ್ನು ಉನ್ನತಮಟ್ಟಕ್ಕೆ ಏರಿಸಲಾಗಿತ್ತು. ರಾಂಚಿಯಲ್ಲಿ ನಡೆದಿದ್ದ 34ನೇ ಕೂಟದಲ್ಲಿ ಸರ್ವಿಸಸ್‌ ತಂಡದವರು 70 ಚಿನ್ನವೂ ಸೇರಿದಂತೆ ಒಟ್ಟು 162 ಪದಕ ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದರೆ, ಮಣಿಪುರ 48 ಬಂಗಾರವೂ ಸೇರಿದ 118 ಪದಕ ಗಳಿಸಿ ಎರಡನೇ ಸ್ಥಾನ ಗಳಿಸಿತ್ತು. ಈ ಸಲ ಈ ಎರಡೂ ತಂಡಗಳು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲಿಕ್ಕಾಗಿ ಶಕ್ತಿ ಮೀರಿ ಯತ್ನಿಸಲಿವೆ.

ಆತಿಥ್ಯ ವಹಿಸಿಕೊಂಡಿರುವ ಕೇರಳವು ಈ ಕೂಟದಲ್ಲಿ ಅತ್ಯಧಿಕ ಪದಕಗಳನ್ನು ಗಳಿಸಿ ಅಗ್ರಸ್ಥಾನಕ್ಕೆ ಏರುವುದನ್ನು ತನ್ನ ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡಿದೆ. ಈ ದಿಸೆಯಲ್ಲಿ ಕೇರಳದ ಬಹುತೇಕ ಕ್ರೀಡಾಪಟುಗಳು ಕಳೆದ ಒಂದು ವರ್ಷದಿಂದ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಈ ಸಲ ಬಹುತೇಕ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಪೈಪೋಟಿ ಕಂಡು ಬರುವುದಂತು ನಿಜ. ಈ ಸಲ ಒಟ್ಟು 1369 ಪದಕಗಳಲ್ಲಿ ಅತ್ಯಧಿಕ ಪದಕಗಳನ್ನು ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲದ ವಿಷಯ. 

ಕರ್ನಾಟಕದ ಸವಾಲು...
ಕರ್ನಾಟಕ ತಂಡ ಈ ಸಲ ಕೇರಳದಲ್ಲಿ ಎತ್ತರದ ಸಾಮರ್ಥ್ಯ ತೋರುವ ಹೆಗ್ಗುರಿ ಇರಿಸಿಕೊಂಡಿದೆ. ಅಥ್ಲೆಟಿಕ್ಸ್‌, ಕಬಡ್ಡಿ, ಈಜು, ಶೂಟಿಂಗ್‌, ವಾಲಿಬಾಲ್‌ ಸೇರಿದಂತೆ ಹಲವು ಕ್ರೀಡಾವಿಭಾಗಗಳಲ್ಲಿ ಎತ್ತರದ ಸಾಮರ್ಥ್ಯ ತೋರುವ ಮಹದಾಸೆ ಕರ್ನಾಟಕ ತಂಡದಲ್ಲಿದೆ. 

‘ಕರ್ನಾಟಕದ ಒಟ್ಟು 450 ಕ್ರೀಡಾಪಟುಗಳ ತಂಡ ಈ ಸಲ ಪದಕ ಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನ ಗಳಿಸಿದರೆ ಅಚ್ಚರಿ ಇಲ್ಲ’ ಎಂದು ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್‌ ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 

2011ರಲ್ಲಿ ರಾಂಚಿಯಲ್ಲಿ ನಡೆದ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ 16 ಚಿನ್ನವೂ ಸೇರಿದಂತೆ ಒಟ್ಟು 55 ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿತ್ತು. ಆ ಕೂಟದಲ್ಲಿ ಬೆಂಗಳೂರಿನ ಈಜುಗಾರ ಗಗನ್‌ ಉಲ್ಲಾಳ್‌ಮಠ ಅವರು 6ಚಿನ್ನ 2ಕಂಚಿನ ಪದಕಗಳನ್ನು ಗಳಿಸಿದ್ದರು.

ಈ ಸಲ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆಲ್ಲುವ ಕ್ರೀಡಾಪಟುಗಳಿಗೆ ಕ್ರಮವಾಗಿ ₨3ಲಕ್ಷ, ₨2ಲಕ್ಷ ಮತ್ತು ₨1ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರು ವುದು ರಾಜ್ಯದ ಕ್ರೀಡಾಪಟುಗಳಿಗೆ ಉತ್ತೇಜನಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT