ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳದ ಮಕ್ಕಳಿಗೆ ಹೀಗೆ ಕಲಿಸಿ

Last Updated 24 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕಿವುಡ–ಮೂಗ ಎಂಬ ಜೋಡಿ ಪದಗಳನ್ನು ಕಿವಿ ಕೇಳದ ಮಕ್ಕಳಿಗೆ ಬಳಸುವುದು ಅಭ್ಯಾಸವಾಗಿದೆ. ಆದರೆ ಕಿವುಡ­ರೆಲ್ಲ ಮೂಗರಲ್ಲ. ಅವರನ್ನು ಸಮಾಜದ ನಡವಳಿಕೆಯೇ ಕಿವುಡರನ್ನಾಗಿಸುತ್ತದೆ. ಅಂಥವರನ್ನು ನೋಡಿದೊಡನೆ ಸಾಮಾನ್ಯರು ಮಾತು ನಿಲ್ಲಿಸಿ ಸನ್ನೆ ಮಾಡಲು ಶುರು ಮಾಡುತ್ತಾರೆ. ಆದರೆ ಇಂಥ ಮಕ್ಕಳಿಗೂ ಮಾತು ಕಲಿಸುವ ಅದ್ಭುತ ಶಕ್ತಿ ಅಮ್ಮಂದಿರಿಗೆ ಮಾತ್ರ ಇದೆ. ಇದನ್ನು ಸಾಬೀತುಪಡಿಸಿದ ಅನೇಕ ಅಮ್ಮಂದಿರಿದ್ದಾರೆ.

ಮೈಸೂರಿನ ‘ಪೇರೆಂಟ್ಸ್‌ ಅಸೋಸಿಯೇಷನ್‌ ಆಫ್‌ ಡೆಫ್‌ ಚಿಲ್ಡ್ರನ್ಸ್‌’ ಕಳೆದ ಮೂರು ದಶಕಗಳಿಂದ ಶ್ರವಣದೋಷವಿರುವ ಮಕ್ಕಳ ಅಮ್ಮಂದಿರಿಗೆ ಮಕ್ಕಳಿಗೆ ಮಾತು ಕಲಿಸುವ ಬಗ್ಗೆ ತರಬೇತಿ ನೀಡುತ್ತಿದೆ. ಅಂಥ ಮಕ್ಕಳು ವಿಶೇಷ ಶಾಲೆಗಳಿಗೆ ಹೋಗದೇ ಸಾಮಾನ್ಯ ಮಕ್ಕಳ ಜೊತೆಗೆ ಕಲಿಯುತ್ತಿದ್ದಾರೆ.

ಮೈಸೂರಿನ ‘ಪೇರೆಂಟ್ಸ್‌ ಅಸೋಸಿಯೇಷನ್‌ ಆಫ್‌ ಡೆಫ್‌ ಚಿಲ್ಡ್ರನ್ಸ್‌’ ನ ಕಾರ್ಯದರ್ಶಿಯಾಗಿರುವ ರತ್ನಾ ಬಿ.ಶೆಟ್ಟಿ ನೂರಾರು ಮಕ್ಕಳಿಗೆ ಮಾತು ಕಲಿಸಿದ್ದಾರೆ. ಬೆಂಗಳೂರಿನ ‘ಡಾ.ಚಂದ್ರ­ಶೇಖರ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌’ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ. ಇಂಥ ಮಕ್ಕಳಿಗೆ ಮಾತು ಕಲಿಸುವ ಬಗ್ಗೆ ಅವರು ರೂಢಿಸಿಕೊಂಡ ಸೂತ್ರಗಳು ವೈದ್ಯಕೀಯ ಜಗತ್ತಿಗೆ ಸೆಡ್ಡು ಹೊಡೆಯುವಂತಿದೆ. ತಮ್ಮ ಮೂರು ದಶಕದ ಅನುಭವವನ್ನು ಎರಕ ಹೊಯ್ದು ‘ಕಿವುಡು ಮಕ್ಕಳಿಗೆ ಕಲಿಸುವ ವಿಧಾನ’ ಎಂಬ ಪುಸ್ತಕವನ್ನೂ ಅವರು ಪ್ರಕಟಿಸಿದ್ದಾರೆ.

ಮಗುವಿನ ಶ್ರವಣದೋಷವನ್ನು ಗುರುತಿಸುವಲ್ಲಿಂದ ಹಿಡಿದು ಸಾಮಾನ್ಯ ಶಾಲೆಗೆ ಕಳುಹಿಸುವವರೆಗೂ  ಮಗುವಿನ ಜೊತೆ ಹೆತ್ತವರು ಕಳೆಯುವ ಪ್ರತಿಕ್ಷಣವೂ ಮಗುವಿನ ಗ್ರಹಿಕೆಗೆ ಪೂರಕವಾಗಿರಬೇಕು. ಮನೆಯಲ್ಲಿ ನಾವು ಮಾಡುವ ಪ್ರತಿ ಕೆಲಸದಲ್ಲೂ ಮಗುವನ್ನು  ಜೊತೆಗೇ ಕೂಡಿಸಿಕೊಂಡು ಅಮ್ಮ ಸಂವಹನ ಕಲಿಸಬೇಕು. ಜೊತೆಗೆ ಮಗು ಹೊರ ಪ್ರಪಂಚದಿಂದ ಒಂದಷ್ಟು ಶಿಸ್ತು ಕಲಿಯಬೇಕಾಗಿದೆ.

ತಮ್ಮಂಥ ಮಕ್ಕಳ ಜೊತೆಗೆ ಬೆರೆಯಬೇಕು. ಅದಕ್ಕಾಗಿ ಅಮ್ಮ ಮತ್ತು ಮಗು ಇಡೀ ದಿನ ಕಲಿಕಾ ಕೇಂದ್ರದಲ್ಲಿ ಇದ್ದು ತರಬೇತಿ ಪಡೆಯಬೇಕಾಗುತ್ತದೆ. ಅಕ್ಷರಾಭ್ಯಾಸ, ಉಚ್ಛಾರಣೆಯ  ಅಭ್ಯಾಸಗಳನ್ನು ಪ್ರತಿದಿನ ಮಾಡಿಸಬೇಕು. ಅದಕ್ಕೆಂದೇ ಪಠ್ಯಗಳನ್ನೂ ಸಿದ್ಧಪಡಿಸಿದ್ದೇವೆ ಎನ್ನುತ್ತಾರೆ ರತ್ನಾ ಬಿ.ಶೆಟ್ಟಿ.

ಕಿವುಡರು ದಡ್ಡರಲ್ಲ
ಶ್ರವಣದೋಷವಿರುವ ಮಕ್ಕಳ ಪೋಷಕರು ಮತ್ತು ಇಡೀ ಸಮಾಜ ಮೊದಲು ತಿಳಿಯಬೇಕಿರುವ ವಿಚಾರವೆಂದರೆ, ಕಿವುಡರಿಗೆ ಶ್ರವಣಶಕ್ತಿ ಮಾತ್ರ ಇರುವುದಿಲ್ಲ. ಆದರೆ ಅವರ ಬುದ್ಧಿವಂತಿಕೆ ಸಾಮಾನ್ಯರಂತೆಯೇ ಇರುತ್ತದೆ. ಮಾತಿನ ಅವಯವಗಳು ಸರಿಯಾಗಿಯೇ ಇರುತ್ತವೆ. ಮಾತು ಕಲಿಯುವ ಸಾಮಾರ್ಥ್ಯವಿಲ್ಲದ ಕಾರಣ ಭಾಷೆ ಸುಲಭವಾಗಿ ಅರ್ಥವಾಗು­ವುದಿಲ್ಲ.

ಸಾಮಾನ್ಯ ಮಕ್ಕಳು ಸಂಭಾಷಣೆ ಕೇಳುತ್ತಾ ಮಾತು ಕಲಿಯುತ್ತಾರೆ. ಆದರೆ ಕೇಳುವ ಅವಕಾಶವೇ ಇಲ್ಲದಿದ್ದಾಗ ಭಾಷೆಯನ್ನು ಕಲಿಸುವುದು ನಿರಂತರ ಶ್ರಮದಿಂದ ಮಾತ್ರ ಸಾಧ್ಯ. ಭಾಷೆಯನ್ನು ಮಕ್ಕಳಿಗೆ ಕೇಳಿಸುವ ಮೂಲಕ ಮಾತು ಕಲಿಸಬೇಕಾಗಿದೆ. ಈ ಎಲ್ಲ ಪ್ರಯತ್ನಗಳು ಸ್ವಲ್ಪವಾದರೂ ಕೇಳುವ ಸಾಮರ್ಥ್ಯ ಇರುವ ಮಕ್ಕಳಿಗೆ ಮಾತ್ರ.

ಶ್ರವಣದೋಷ ಗುರುತಿಸುವ ಕೆಲಸ ಎಷ್ಟು ಬೇಗ ಆಗುತ್ತೋ ಅಷ್ಟು ಒಳ್ಳೆಯದು. ಆರು ತಿಂಗಳಲ್ಲಿ ಅಥವಾ ಒಂದು ವರ್ಷದೊಳಗೆ ಮಗುವಿನ ಶ್ರವಣದೋಷವನ್ನು ಗುರುತಿಸಿದರೆ ಚಿಕಿತ್ಸೆ ಕೊಡಿಸುವುದರ ಜೊತೆಗೆ ಮಾತು ಕಲಿಸುವ ಕೆಲಸವನ್ನೂ ಆರಂಭಿಸಬೇಕು. ತಡ ಮಾಡಿದಷ್ಟು ಮಾತು ಕಲಿಯುವ ಕ್ರಿಯೆಯೂ ನಿಧಾನವಾಗುತ್ತದೆ.

ಅಮ್ಮಂದಿರೇ ಯಾಕೆ?
ಮಗುವಿನ ಜೊತೆಗೆ ಇಪ್ಪತ್ತನಾಲ್ಕು ಗಂಟೆಯೂ ಕಳೆಯುವ ಅಮ್ಮನಿಗೆ ದೋಷವನ್ನು ಗುರುತಿಸುವುದು ಸಾಧ್ಯ. ಇಂಥ ಮಗುವಿಗೆ ಕೆಲ ಗಂಟೆಗಳ ತರಬೇತಿ ಸಾಲದು. ಎಚ್ಚರವಿರುವಷ್ಟು ಹೊತ್ತು ಮಗುವಿಗೆ ಭಾಷೆಯ ಕಲಿಕೆ ನಡೆಯುತ್ತಲೇ ಇರಬೇಕು. ಇದು ತಾಯಿಯಿಂದ ಮಾತ್ರ ಸಾಧ್ಯ. ತಾಯಿ ಮಾಡುವ ಪ್ರತಿ ಕೆಲಸ, ಬಳಸುವ ವಸ್ತು, ಕಾಣುವ ದೃಶ್ಯದ ಬಗ್ಗೆ ಮಗುವಿಗೆ ಹೇಳುತ್ತಲೇ ವಿಷಯದ ಪರಿಚಯ ಮಾಡಬೇಕು. ವಸ್ತುವಿನ ಹೆಸರನ್ನು ಜೋರಾಗಿ ಉಚ್ಚರಿಸಿ ನಾಲ್ಕಾರು ಬಾರಿ ಹೇಳಿ ಮನಸಿನಲ್ಲಿ ದಾಖಲಾಗುವಂತೆ ಮಾಡಬೇಕು.

ರತ್ನಾ ಅವರು ನಡೆಸುವ ತರಬೇತಿ ಕೇಂದ್ರಕ್ಕೆ ಬರುವ ಅಮ್ಮಂದಿರೇ ಶಿಕ್ಷಕರು. ಮಕ್ಕಳ ಜೊತೆಗೆ ತರಬೇತಿ ಕೇಂದ್ರಕ್ಕೆ ಬರುವ ಅಮ್ಮಂದಿರು ಇಡೀ ದಿನ ಮಕ್ಕಳ ಜೊತೆಗೆ ಮಾತನಾಡುತ್ತಲೇ ಇರುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ರತ್ನಾ.
ಸಾಮಾನ್ಯ ಶಾಲೆಗೆ ಹೋಗಿ ಶಿಕ್ಷಣ ಪಡೆಯಲು ಸಮರ್ಥರಾಗುವಂತೆ ಓದು ಬರಹ, ಉಚ್ಚಾರಣೆಯನ್ನು ಅಮ್ಮಂದಿರ ಮೂಲಕವೇ ಕಲಿಸಲಾಗುತ್ತದೆ. ಜೊತೆಗೆ ಚಿತ್ರಗಳನ್ನು ಗುರುತಿಸುವುದು. 

ಒಂದು ವಸ್ತುವಿನ ಹೆಸರಿನ ಜೊತೆಗೆ ಅದರ ವಿವರಣೆ, ಬಳಕೆ, ಎಲ್ಲಿ ಸಿಗುತ್ತದೆ, ಏನು ಉಪಯೋಗ ಹೀಗೆ ಅನೇಕ ವಿವರಗಳನ್ನು ನೀಡಬೇಕಾಗುತ್ತದೆ. ಸಾಮಾನ್ಯ ಮಕ್ಕಳಿಗೆ ತಿಳಿದಿರುವ ಎಲ್ಲ ವಿಚಾರಗಳ ಪ್ರತಿ ಸಣ್ಣ ವಿವರಣೆಯನ್ನೂ ಈ ಮಕ್ಕಳಿಗೆ ತಿಳಿಸಿಕೊಟ್ಟು ಸಾಮಾನ್ಯ ಶಾಲೆಗೆ ಕಳುಹಿಸಬೇಕಾಗಿದೆ.

ವಿಶೇಷ ಶಾಲೆ ಅಗತ್ಯವಿಲ್ಲ
ಸಾಮಾನ್ಯವಾಗಿ ಇಂಥ ಮಕ್ಕಳಿಗಾಗಿ ವಿಶೇಷ ಶಾಲೆಗಳಿವೆ. ಅನೇಕ ಪೋಷಕರು ವಿಶೇಷ ಶಾಲೆಗೆ ಕಳುಹಿಸುತ್ತಾರೆ. ಆದರೆ ವಿಶೇಷ ಶಾಲೆಯಲ್ಲಿ ಕಲಿತ ಮಕ್ಕಳು ಸಾಮಾನ್ಯ ಮಕ್ಕಳಂತೆ ಬೆಳವಣಿಗೆ ಸಾಧ್ಯವಿಲ್ಲ. ಯಾಕೆಂದರೆ ಈ ಮಕ್ಕಳಿಗೆ ಕೆಲ ಗಂಟೆಗಳ ತರಬೇತಿ ಸಾಲದು. ಪ್ರತಿ ಮಗುವಿಗೂ ಪ್ರತ್ಯೇಕ ತರಬೇತಿ ಇದ್ದರೆ ಮಾತ್ರ ಸಾಮಾನ್ಯ ಶಿಕ್ಷಣ ಪಡೆಯುವ ಸಾಮರ್ಥ್ಯ ಪಡೆಯುತ್ತದೆ. 

ಅಮ್ಮಂದಿರಿಂದ ತರಬೇತಿ ಪಡೆದು, ಸಾಮಾನ್ಯ ಶಾಲೆಯಲ್ಲಿ ಕಲಿತ ಮಕ್ಕಳು ಎಂಜಿನಿಯರ್‌ಗಳಾಗಿದ್ದಾರೆ. ರತ್ನಾ ಅವರ ಮಗ ಭರತನಿಗೆ ಶೇ.95ರಷ್ಟು ಶ್ರವಣದೋಷವಿರುವ ಕಾರಣ ಮಾತ­ನಾಡಲು ಅಸಮರ್ಥನಾಗಿದ್ದರೂ ಪ್ರತಿಷ್ಠಿತ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿದ್ದಾರೆ. ಅನೇಕರು ಎಂಬಿಎ, ಸಿ.ಎ, ಎಂಜಿನಿ­ಯರಿಂಗ್‌ ಪದವೀಧರರಿದ್ದಾರೆ. ಇವರ ಬಳಿ ಇಂಥ ನೂರಾರು ಉದಾಹರಣೆಗಳಿವೆ.

ಇಲ್ಲಿ ತರಬೇತಿ ಪಡೆದ ಅಮ್ಮಂದಿರೇ ಇಲ್ಲಿ ಶಿಕ್ಷಕರು. ತಮ್ಮ ಮಕ್ಕಳು ಸಾಮಾನ್ಯ ಶಾಲೆಗೆ ಹೋಗುವಂತಾದ ನಂತರ ಅನೇಕರು ಬೇರೆ ಕಡೆ ತರಬೇತಿ ನೀಡುತ್ತಿದ್ದಾರೆ. ಹೀಗೆ ಮೈಸೂರಿನ ಕೇಂದ್ರದಲ್ಲಿ ತಮ್ಮ ಮಕ್ಕಳಿಗೆಂದು ತರಬೇತಿ ಪಡೆದವರು ತಮ್ಮ ಊರುಗಳಲ್ಲಿ ಕಲಿಕಾ ಕೇಂದ್ರ ನಡೆಸುತ್ತಿದ್ದಾರೆ.

ಚಿತ್ರದ ಜೊತೆಗೆ ಕಲಿಕೆ
ಶ್ರವಣದೋಷವಿರುವ ಮಕ್ಕಳಿಗೆ ಚಿತ್ರಗಳನ್ನು ತೋರಿಸಿ ವಿಷಯವನ್ನು ಪರಿಚಯಿಸುವುದು ಒಂದು ವಿಧಾನ. ಹಾಗೆಯೇ ವಸ್ತುವಿನ ಮಾದರಿಗಳನ್ನು ತೋರಿಸಿ ವಿವರಿಸಬಹುದು. ಉದಾಹರಣೆಗೆ ಒಂದು ಎಲೆಯನ್ನು ತೋರಿಸಿ ಎಲೆ ಎಲ್ಲಿರುತ್ತದೆ ಎಂದು ವಿವರಿಸಬೇಕು. ಎಲೆ ಗಿಡ, ಮರ ಬಳ್ಳಿಯಲ್ಲಿರುತ್ತದೆ. ಹಸಿರು ಬಣ್ಣದಲ್ಲಿರುತ್ತದೆ ಎಂದು ಹೇಳುವುದು.

ಹೀಗೆ ಮಾಡುವುದರಿಂದ ಆ ವಸ್ತುವಿನ ಬಗ್ಗೆ ಹಲವು ವಿವರಗಳು ಮನಸಿನಲ್ಲಿ ದಾಖಲಾಗುತ್ತದೆ. ಹೀಗೆ ಶ್ರವಣದೋಷವಿರುವ ಮಕ್ಕಳಿಗೆ ಪ್ರತಿಯೊಂದು ವಿವರವನ್ನೂ ತುಂಬಬೇಕಾಗಿದೆ. ಅಕ್ಕಿಯನ್ನು ತೋರಿಸಿ ಅಕ್ಕಿಯ ಬಣ್ಣ, ಅದರಿಂದ ತಯಾರಿಸುವ ತಿಂಡಿಗಳು, ರುಚಿ, ಅದು ಬೆಳೆಯುವ ಜಾಗದ ವಿವರ ನೀಡಬೇಕು. ಇದರಿಂದ ಅನೇಕ ತಿಂಡಿಯ ಹೆಸರೂ ಮಗುವಿಗೆ ಪರಿಚಯವಾಗುತ್ತದೆ.  ಇಂಥ ಅನೇಕ ಕಲಿಕಾ ಮಾದರಿಗಳು ಇವೆ.

ಅಮ್ಮಂದಿರಿಗೆ ತರಬೇತಿ
ಶ್ರವಣದೋಷವಿರುವ ಮಕ್ಕಳಿಗೆ ಎಚ್ಚರವಿದ್ದಷ್ಟು ಹೊತ್ತು ತರಬೇ­ತಿಯ ಅಗತ್ಯವಿದೆ. ಇದಕ್ಕಾಗಿ ಅಮ್ಮಂದಿರು ತರಬೇತಿ ಪಡೆದರೆ ಮಾತು ಕಲಿಸುವುದು ಸುಲಭ. ಮಗುವಿನ ನ್ಯೂನತೆಯನ್ನು ಗುರುತಿ­ಸುವುದೂ ಅಮ್ಮನಿಂದ ಸಾಧ್ಯ. ದೋಷವಿದೆ ಎಂದು ಗೊತ್ತಾದ ತಕ್ಷಣ ವೈದ್ಯರ ತಪಾಸಣೆ, ಚಿಕಿತ್ಸೆ ಕೊಡಿಸುವಷ್ಟೇ ಮುಖ್ಯ ಮಾತು ಕಲಿಸುವುದು. ಆಯಾ ವಯಸ್ಸಿನಲ್ಲಿ ಕಲಿಯಬೇಕಾದ ವಿಷಯವನ್ನು ಆಗಲೇ ಕಲಿಸಬೇಕು. ಹಾಗಾಗಿ ಎಷ್ಟು ಬೇಗ ಮಾತು ಕಲಿಸಲು ಶುರು ಮಾಡುತ್ತೇವೆಯೋ ಅಷ್ಟು ಬೇಗ ಮಗು ಮಾತು ಕಲಿಯುತ್ತದೆ.

ಅನೇಕರು ಕೆಲಸಬಿಟ್ಟು, ಊರು ಬಿಟ್ಟು ಮೈಸೂರಿನ ಕೇಂದ್ರಕ್ಕೆ ಬಂದು ತರಬೇತಿ ಪಡೆದು ತಮ್ಮ ಮಕ್ಕಳನ್ನು ಮುಂದೆ ತಂದವರಿದ್ದಾರೆ. ಹಾಗೆಯೇ ಹೇಳಲು ಹಿಂಜ­ರಿದು, ಇಡೀ ದಿನ ಅಲ್ಲಿ ಬಂದಿರಲು ಸಾಧ್ಯವಿಲ್ಲ ಎಂದು ಹೇಳುವ ಪೋಷಕರೂ ಇದ್ದಾರೆ. ವಿಶೇಷ ಶಾಲೆಗೆ ಸೇರಿಸಿ ನಿರಾಳರಾದವರೂ ಇದ್ದಾರೆ. ಆದರೆ ಈ ದೋಷ ನಿವಾರ­ಣೆಗೆ ಅಮ್ಮನ ಸಹನೆ ಮತ್ತು ಸಮರ್ಪಣೆಗಿಂತ ಉತ್ತಮ ಮದ್ದು ಬೇರಿಲ್ಲ. ಹಾಗಾಗಿ ಇಂಥ ದೋಷವಿರುವ ಮಕ್ಕಳ ಅಮ್ಮಂದಿರು ಮೊದಲು ಧೈರ್ಯ ತಾಳಬೇಕು. ಇಡೀ ಮನೆ ಮಂದಿಗೆ ಜವಾಬ್ದಾರಿ ಇದೆ. ಆದರೆ ಅಪ್ಪಂದಿರು ಈ ದೋಷವನ್ನು ಒಪ್ಪಿಕೊಳ್ಳಲೇ ಸಿದ್ಧರಿಲ್ಲ. ಇದು ಬದಲಾಗಬೇಕು. 
–ರತ್ನಾ ಬಿ.ಶೆಟ್ಟಿ
9480344297


ತಡವಾದರೂ ಮಾತು ಕಲಿತ
ನನ್ನ ಮಗ ಬಸವರಾಜ್‌ ಒಂಬತ್ತು ತಿಂಗಳ ಮಗುವಾಗಿದ್ದಾಗ ಶ್ರವಣದೋಷವಿರುವುದನ್ನು ಗುರುತಿಸಿದ್ದೆವು. ಮೂರು ವರ್ಷ ತುಂಬುವವರೆಗೂ ಅನೇಕ ಕಡೆ ಮಗುವನ್ನು ತೋರಿಸಿದೆವು. ನಂತರ ಮೈಸೂರಿನ ಪೇರೆಂಟ್ಸ್‌ ಅಸೋಸಿಯೇಷನ್‌ ಆಫ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌ ಬಗ್ಗೆ ತಿಳಿದಾಗ ಬಿಜಾಪುರದಿಂದ ಮೈಸೂರಿಗೆ ಹೋಗಿ ಹಾಸ್ಟೆಲ್‌ನಲ್ಲಿ ಇದ್ದು ಅಲ್ಲಿ ತರಬೇತಿ ಪಡೆದೆ. ಮಗನಿಗೆ 6 ವರ್ಷ ತುಂಬುತ್ತಿದ್ದಂತೆ ಬಿಜಾಪುರದ ಸಾಮಾನ್ಯ ಶಾಲೆಗೆ ಸೇರಿಸಿದೆವು. ತಡವಾದರೂ ಮಾತು ಕಲಿತಿದ್ದಾನೆ. ಈಗ 17ವರ್ಷದ ಬಸವರಾಜ ಡಿಪ್ಲೊಮಾ ಓದುತ್ತಿದ್ದಾನೆ.

ಇಲ್ಲಿನ ಕಿವುಡಮಕ್ಕಳಿಗೆ ನನ್ನ ಮನೆಯಲ್ಲಿಯೇ ಮಾತು ಕಲಿಸುತ್ತಿದ್ದೇನೆ. ಹತ್ತು ವರ್ಷದಲ್ಲಿ 30 ಮಕ್ಕಳು ಮಾತು ಕಲಿತು ಸಾಮಾನ್ಯ ಶಾಲೆಗೆ ಸೇರಿದ್ದಾರೆ. ಇಲ್ಲಿ ವಸ್ತುವನ್ನು ಪರಿಚಯಿಸುವುದು, ಓದುವುದು, ಬರೆಯುವುದು ಎಲ್ಲವನ್ನು ಕಲಿಸಿಕೊಡಬೇಕಾಗಿದೆ. ಅನೇಕ ಮಹಿಳೆಯರು ಇಲ್ಲಿ ಬಂದು ಇದ್ದು ಮಕ್ಕಳಿಗೆ ತರಬೇತಿ ನೀಡಲು ಹಿಂಜರಿಯುತ್ತಿದ್ದಾರೆ. ಆದರೆ ಅಮ್ಮಂದಿರ ಪರಿಶ್ರಮದಿಂದ ಮಾತ್ರ ಇದು ಸಾಧ್ಯ.
–ಸಂಗೀತ, ಬಿಜಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT