ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶಪಾಶದ ಪ್ರಪಂಚದೊಳಗೆ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನನಗೆ ತುಂಬಾ ಕೂದಲು ಉದುರುತ್ತಿದೆ. ಏನ್‌ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ. ಅವರಿವರು ಹೇಳಿದ ಔಷಧಿ ಪ್ರಯೋಗಿಸಿದ್ದಾಯಿತು. ಆದ್ರೂ, ಕೂದಲು ಉದುರೋದು ನಿಲ್ತಾ ಇಲ್ಲ. ಇದರಿಂದ ಜೀವನವೇ ಜುಗುಪ್ಸೆ ಬಂದಿದೆ, ಇದಕ್ಕೆ ಪರಿಹಾರವೇನು?’ ಬೆಂಗಳೂರಿನ ಅನೇಕರ ಪ್ರಶ್ನೆ ಇದು. ವೈದ್ಯರು, ಬ್ಯೂಟಿಷಿಯನ್‌ಗಳು, ಮನಃಶಾಸ್ತ್ರಜ್ಞರು, ಆಪ್ತಸಲಹೆ ನೀಡುವವರ ಮುಂದೆ ಇದೇ ಪ್ರಶ್ನೆ ಪ್ರಸ್ತಾಪವಾಗುತ್ತಿದೆ. ಕೂದಲು ಉದುರುವಿಕೆ ಸಮಸ್ಯೆ ಜನರನ್ನು ಎಷ್ಟು ಕಾಡುತ್ತಿದೆ ಎಂಬುದಕ್ಕೆ ಇದು ಕನ್ನಡಿ.

ನಗರದಲ್ಲಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುವವರು, ಅದರಲ್ಲೂ ಐಟಿ ಉದ್ಯಮದಲ್ಲಿ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು. ಹದಿಹರೆಯದವರಲ್ಲಂತೂ ಕೂದಲು ಉದುರುವ ಸಮಸ್ಯೆ ಅವರ ಆತ್ಮವಿಶ್ವಾಸವನ್ನೇ ಕಸಿಯುವಷ್ಟು  ತೀವ್ರವಾಗಿದ್ದರೆ, ಮಧ್ಯವಯಸ್ಕರಲ್ಲಿ ಜೀವನ ಪ್ರೀತಿಯನ್ನೇ ಇಂಗಿಸುವ ಮಟ್ಟಿಗೆ ಈ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಯಿಂದ ಜನರು ಮಾನಸಿಕ ಖಿನ್ನತೆಗೀಡಾದ ಉದಾಹರಣೆಗಳೂ ಬೇಕಾದಷ್ಟಿವೆ ಎನ್ನುತ್ತಾರೆ ಮನೋವೈದ್ಯರು.

ಏನು ಪರಿಹಾರ?
ಉತ್ತಮ ದಿನಚರಿ, ಪೌಷ್ಟಿಕ ಆಹಾರ ಸೇವನೆ, ಯೋಗ, ಧ್ಯಾನದ ಮೂಲಕ ಕೂದಲು ಉದುರುವಿಕೆ ಸಮಸ್ಯೆಯನ್ನು ತಡೆಯಬಹುದು ಎನ್ನುತ್ತಾರೆ  ಚರ್ಮರೋಗ ತಜ್ಞರು.
‘ಬೆಂಗಳೂರು ಧಾವಂತದ ಊರು. ಹಾಗಾಗಿ, ಇಲ್ಲಿ ಮಾನಸಿಕ ಒತ್ತಡ ಹೆಚ್ಚಿರುವುದು ಸಹಜ. ಕೂದಲು ಉದುರುವಿಕೆಗೆ ಮಾನಸಿಕ ಒತ್ತಡವೂ ಮುಖ್ಯ ಕಾರಣ’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ.ವಿನುತಾ ಸಿ. ಕೋರಿಶೆಟ್ಟರ್.

‘ಮಾನಸಿಕ ಒತ್ತಡ ನಿವಾರಣೆಗೆ ಯೋಗ ಮತ್ತು ಧ್ಯಾನ ಉತ್ತಮ ಮಾರ್ಗ.  ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡುವುದು ಒಳ್ಳೆಯದು. ಧ್ಯಾನ ಮತ್ತು ಉಸಿರಾಟ ಸಂಬಂಧಿ ವ್ಯಾಯಾಮ  ಮಾಡುವುದರಿಂಂದ ಮಿದುಳು ಮತ್ತು ನೆತ್ತಿಯ ನರಗಳು ಶಾಂತವಾಗುತ್ತವೆ. ರಕ್ತ ಸಂಚಾರ ಸುಗಮವಾಗುತ್ತದೆ. ಆಗ ಕೂದಲಿನ ಬೇರುಗಳಿಗೆ ಶಕ್ತಿ ದೊರೆತು, ಕೂದುಲುದುರುವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅವರು.

ಮೂಗಿನ ಕೆಲ ನರಗಳು ಮಿದುಳಿನೊಂದಿಗೆ ಸಂಬಂಧ ಹೊಂದಿರುತ್ತವೆ. ಹಾಗಾಗಿ, ಉಸಿರಾಟ  ಪ್ರಕ್ರಿಯೆ ಸರಾಗವಾಗಿರಬೇಕು. ನೆಗಡಿ ಆಗದಂತೆ ಎಚ್ಚರ ವಹಿಸಬೇಕು. ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಲ್ಲಿ ನಸ್ಯ ಮತ್ತು ಶಿರೋಧಾರಾ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಶ್ಯಾಂಪೂ ಬಳಕೆ; ಇರಲಿ ಎಚ್ಚರ
ಕೂದಲಿನ ಆರೋಗ್ಯಕ್ಕೆ ರಾಸಾಯನಿಕಯುಕ್ತ ಶ್ಯಾಂಪೂಗಳ ಬಳಕೆ ಒಳಿತಲ್ಲ. ಹರ್ಬಲ್‌ ಶ್ಯಾಂಪೂಗಳು ಕೂದಲಿನ ಬುಡಕ್ಕೆ ಶಕ್ತಿ ನೀಡುತ್ತವೆ. ತುಂಬಾ ಬಿಸಿ ಇರುವ ನೀರಿನಿಂದ ತಲೆ ಸ್ನಾನ ಮಾಡುವುದು ಒಳಿತಲ್ಲ. ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನೇ ಬಳಸಿ. ಶೀತ ಪ್ರಕೃತಿಯವರು ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಚೆನ್ನಾಗಿ ಒರೆಸಿಕೊಳ್ಳಬೇಕು. ಗಡಸು ನೀರಿನಿಂದ (ಬೋರ್‌ವೆಲ್‌ ನೀರು– ಹಾರ್ಡ್‌ ವಾಟರ್) ತಲೆಸ್ನಾನ ಮಾಡಬಾರದು. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ.

ಎಣ್ಣೆಯ ಬಳಕೆ ಹೇಗೆ?
ವಾರಕ್ಕೆ ಒಂದು  ಬಾರಿಯಾದರೂ ತಲೆಗೆ  ಕಡ್ಡಾಯವಾಗಿ ಎಣ್ಣೆ ಹಚ್ಚಬೇಕು. ತಲೆಸ್ನಾನ ಮಾಡುವ ಒಂದು ತಾಸು ಮೊದಲು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಒಳಿತು.

ಕೆಲವರಿಗೆ ಹಸಿ ಕೂದಲಿಗೆ ಎಣ್ಣೆ ಹಚ್ಚುವ ಅಭ್ಯಾಸವಿರುತ್ತದೆ. ಇಂಥ ಅಭ್ಯಾಸ ತ್ಯಜಿಸುವುದು ಉತ್ತಮ. ಹಸಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಹೊರಗಿನ ದೂಳು ಸರಾಗವಾಗಿ ತಲೆಗೂದಲಿಗೆ ಸೇರುತ್ತದೆ. ಇದರಿಂದ ತಲೆಹೊಟ್ಟು ಉಂಟಾಗಿ, ಕೂದಲ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕೂದಲಿಗೆ ಎಣ್ಣೆ ಹಚ್ಚುವಾಗ ಕೂದಲಿನ ಬುಡಕ್ಕೂ ಎಣ್ಣೆ ತಲುಪುವಂತೆ ಎಚ್ಚರ ವಹಿಸಬೇಕು.

ಹೇರ್ ಕಲರಿಂಗ್ ಬೇಡ
ಕೂದಲಿಗೆ ಪದೇಪದೇ ಕಲರಿಂಗ್ ಮಾಡಿಸದಿರಿ. ಕಲರಿಂಗ್‌ ಮಾಡಲು ರಾಸಾಯನಿಕ ಪದಾರ್ಥಗಳ ಬಳಕೆ ಅನಿವಾರ್ಯ, ಇದರಿಂದ ಕೂದಲ ನೈಸರ್ಗಿಕ ಬಣ್ಣ, ಹೊಳಪಿಗೆ ಧಕ್ಕೆಯಾಗುತ್ತದೆ. ಕಲರಿಂಗ್ ಬೇಕೇಬೇಕು ಎಂದಾದಲ್ಲಿ ಮೆಹಂದಿ ಹಚ್ಚುವುದು ಒಳ್ಳೆಯದು. ಉತ್ತಮ ಗುಣಮಟ್ಟದ ಮೆಹಂದಿ ಪುಡಿಯನ್ನು ಬಳಸಬೇಕು. ಉಳಿದಂತೆ ಕೂದಲ ಆರೋಗ್ಯಕ್ಕೆ ಮೆಂತ್ಯೆ, ಕರಿಬೇವಿನ ಪೇಸ್ಟ್‌ ಬಳಸಬಹುದು ಎನ್ನುತ್ತಾರೆ ಡಾ.ವಿನುತಾ.

ವಂಶಪಾರಂಪರ್ಯವಾಗಿ ಕೆಲ ಗಂಡಸರಿಗೆ ಬೊಕ್ಕತಲೆ ಆಗುತ್ತದೆ. (ಈ ಸಮಸ್ಯೆ ಹೆಂಗಸರಲ್ಲಿ ವಿರಳ) ಅಂಥವರು ವಾಸ್ತವವನ್ನು ಒಪ್ಪಿಕೊಳ್ಳವುದು ಒಳ್ಳೆಯದು. ಇಲ್ಲದಿದ್ದರೆ ಕೂದಲ ಕಸಿ ಮಾಡಿಸಬಹುದು. ವಿಗ್ ಬಳಸಿ ಬೊಕ್ಕತಲೆ ಮರೆಮಾಚಬಹುದು.

ಒಟ್ಟಿನಲ್ಲಿ ಒತ್ತಡಮುಕ್ತ, ಆರೋಗ್ಯಕರ ಜೀವನಶೈಲಿ, ಪ್ರೋಟಿನ್‌ಯುಕ್ತ ಆಹಾರ ಸೇವನೆಯಿಂದ ಖಂಡಿತವಾಗಿಯೂ ಕೂದಲು ಉದುರುವಿಕೆಯ ಸಮಸ್ಯೆಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಡಾ.ವಿನುತಾ.

ಸಮಸ್ಯೆ ಗುರುತಿಸಿ
‘ಖಿನ್ನತೆ ಮತ್ತು ಒತ್ತಡದ ಕಾರಣಕ್ಕಾಗಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಚಿಕಿತ್ಸೆಯಿಂದ ಈ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಕೂದಲು ಉದುರುವಿಕೆಯಿಂದಲೇ ಖಿನ್ನತೆ, ಒತ್ತಡ ಉಂಟಾಗುವುದು ಮತ್ತೊಂದು ಸಮಸ್ಯೆ. ಹಾಗಾಗಿ, ಬೇರುಮಟ್ಟದ ಸಮಸ್ಯೆ ಗುರುತಿಸಿ, ಚಿಕಿತ್ಸೆ ನೀಡಬೇಕು. ಚರ್ಮರೋಗ ತಜ್ಞರ ಬಳಿ ಚಿಕಿತ್ಸೆ ಪಡೆಯುವುದು ಒಳ್ಳೆಯದು’ ಎನ್ನುತ್ತಾರೆ ಮಾನಸಿಕ ರೋಗ ತಜ್ಞ ಡಾ.ಬಿ.ಎನ್‌. ಅನಿಲ್‌ಕುಮಾರ್.

ಹೆಲ್ಮೆಟ್‌ ಕಾರಣವಲ್ಲ
‘ಹಾರ್ಮೋನ್‌ಗಳ ಏರುಪೇರು, ಥೈರಾಯ್ಡ್‌ ಸಮಸ್ಯೆಯಿಂದಾಗಿ ಕೂದಲು ಉದುರುತ್ತದೆ. ಹೆಣ್ಣುಮಕ್ಕಳಲ್ಲಿ ಹೆರಿಗೆ, ಅನಿಯಮಿತ ಋತುಸ್ರಾವ, ತೂಕ ಹೆಚ್ಚಳ ಮೊದಲಾದ ಕಾರಣಗಳಿಂದ ಕೂದಲು ಉದುರುತ್ತದೆ. ಹೆಲ್ಮೆಟ್‌ ಧರಿಸುವುದರಿಂದ, ಪ್ರತಿದಿನ ತಲೆಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ’
–ಡಾ.ವತ್ಸಲಾ ಎಸ್‌., ಚರ್ಮರೋಗ ತಜ್ಞೆ

ಏನಂತಾರೆ ಮಾನಸಿಕ ವೈದ್ಯರು?
‘ಹದಿಹರೆಯದವರಲ್ಲಿ ಕೂದಲು ಉದುರುವ ಸಮಸ್ಯೆ ಕೀಳರಿಮೆಗೆ ಕಾರಣವಾಗುತ್ತದೆ. ಸ್ನೇಹಿತರು, ಸಂಬಂಧಿಕರ ಲೇವಡಿ ಮಾತಿನಿಂದ ಮನಸಿಗೆ ನೋವಾಗುತ್ತದೆ. ಮದುವೆಯಾದವರು ಈ ಸಮಸ್ಯೆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಸಂಗಾತಿಯಲ್ಲಿ ಹೊಂದಾಣಿಕೆಯ ಸ್ವಭಾವ ಇದ್ದಲ್ಲಿ ಇದು ಸಮಸ್ಯೆಯೇ ಅನಿಸುವುದಿಲ್ಲ’                -ಡಾ.ಬಿ.ಎನ್‌. ಅನಿಲ್ ಕುಮಾರ್, ಮಾನಸಿಕರೋಗ ತಜ್ಞ


ಕೂದಲ ಪೋಷಣೆಗೆ ಆಹಾರ
* ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಮತ್ತಿತರರ ಹಾಲಿನ ಉತ್ಪನ್ನಗಳು
* ಹಸಿರು ಸೊಪ್ಪು ತರಕಾರಿಗಳು
* ಸೋಯಾಬೀನ್‌
* ಮೊಳಕೆ ಕಾಳುಗಳು
* ವಿಟಮಿನ್,  ಪ್ರೋಟಿನ್‌ಯುಕ್ತ ಆಹಾರ

ಏನು ಕಾರಣ?
* ಮಾನಸಿಕ ಒತ್ತಡ
* ಅನಾರೋಗ್ಯಕರ ಜೀವನಶೈಲಿ
* ವಂಶಪಾರಂಪರ್ಯ
* ಹಾರ್ಮೋನ್‌ ಅಸಮತೋಲನ
* ವಿಟಮಿನ್‌, ಪ್ರೋಟಿನ್‌ಯುಕ್ತ ಆಹಾರದ ಕೊರತೆ
* ಪರಿಸರ ಮಾಲಿನ್ಯ
* ಗಡಸು ನೀರು
* ಹೇರ್ ಕಲರಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT