ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕಟ್ಟಿ ಕುಳಿತ ಪಾಲಿಕೆ: ಸಚಿವರ ಕೊರಳಿಗೆ ಕಸದ ಸಮಸ್ಯೆ

Last Updated 27 ಆಗಸ್ಟ್ 2014, 9:21 IST
ಅಕ್ಷರ ಗಾತ್ರ

ತುಮಕೂರು: ಕಸ ಸಾಗಿಸುವ ಲಾರಿ ಚಾಲಕರ ಮುಷ್ಕರದಿಂದಾಗಿ ಕಸ ತೆಗೆದು ನಾಲ್ಕು ದಿನ ಕಳೆದರೂ ಪರಿಹಾರ ಕಂಡು­ಕೊಳ್ಳಲು ಪಾಲಿಕೆ, ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.

ನಗರದ ತುಂಬೆಲ್ಲ ರಾಶಿರಾಶಿಯಾಗಿ ಬಿದ್ದಿರುವ ಕಸ ಮಳೆ ನೀರಿನ ಜತೆ ಸೇರಿ ಕೊಳೆತು ದುರ್ನಾತ ಬೀರತೊಡಗಿದೆ. ಸಾಂಕ್ರಾಮಿಕ ರೋಗ ಹರಡುವ ಭಯ ನಾಗರಿಕರಲ್ಲಿ ಕಾಡ ತೊಡಗಿದೆ.

ನಗರದ ಸಿದ್ದಗಂಗಾ ಬಡಾವಣೆ ಪಾರ್ಕ್ ಸಮೀಪದ ಕಸದ ರಾಶಿ ಸೇರಿ­ದಂತೆ ಬಹುತೇಕ ಕಡೆ ಕಸಕ್ಕೆ ಹುಳು ಬೀಳ­ತೊಡಗಿದೆ. ಕಸವನ್ನು ಹೆಚ್ಚು ದಿನ ಬಿಡು­ವು­ದರಿಂದ ವಿಷಪೂರಿತವಾಗಲಿದ್ದು, ನಂತರ ಇದನ್ನು ತೆಗೆಯುವ ಪೌರ­ಕಾರ್ಮಿಕರ ಆರೋಗ್ಯದ ಮೇಲೆ ಪರಿ­ಣಾಮ ಬೀರಲಿದೆ ಎಂದು ಪಾಲಿಕೆ ಅಧಿಕಾರಿ­ಯೊಬ್ಬರು ತಿಳಿಸಿದರು.

ಕಸದ ಸಮಸ್ಯೆಯನ್ನು ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್‌ ಸೊರಕೆ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯ­ಚಂದ್ರ ಹಾಗೂ ಶಾಸಕರ ಕೊರಳಿಗೆ ಹಾಕಲು ಪಾಲಿಕೆ ತೀರ್ಮಾನಿಸಿದೆ.

ಬುಧವಾರ ಪಾಲಿಕೆ ವತಿಯಿಂದ ಸಚಿವ ವಿನಯ್‌ಕುಮಾರ್‌ ಸೊರಕೆ ಅವರಿಗೆ ನಡೆಯುವ ಪೌರ ಸನ್ಮಾನದ ದಿನವೇ ಕಸದ ಸಮಸ್ಯೆಯನ್ನು ಅವರ ಮುಂದೆ ನಿವೇದಿಸಿಕೊಳ್ಳಲು ಸಿದ್ಧತೆ ನಡೆದಿದೆ. ಅಲ್ಲಿಯವರೆಗೂ ಕಸದ ವಿಚಾರದ ಚರ್ಚೆಯೇ ಬೇಡ ಎಂದು ತೀರ್ಮಾನಕ್ಕೆ ಬರಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಹೀಗಾಗಿ ಕಸ ತೆಗೆಯದೇ ನಾಲ್ಕು ದಿನವಾದರೂ ಸಭೆ ನಡೆಸುವ ಗೋಜಿಗೆ ಹೋಗಿಲ್ಲ. ಎಲ್ಲಿಗೆ ಕಸ ಹಾಕುವುದು ಎಂದು ತಿಳಿಯದೆ ಸಭೆ ನಡೆಸಿ ಪ್ರಯೋ­ಜನ ಏನು ಎಂಬ ತೀರ್ಮಾನಕ್ಕೆ ಬರ­ಲಾಗಿದೆ ಎಂದು ಪಾಲಿಕೆ ಸದಸ್ಯರು ಹೇಳುತ್ತಾರೆ. ಸ್ವಾತಂತ್ರ್ಯ ದಿನಚಾರಣೆ ದಿನ ಕಂಬ ಬಿದ್ದು ಗಾಯಗೊಂಡಿದ್ದ ಆಯುಕ್ತ ಅಶಾದ್‌ ಷರೀಫ್‌ ಸೋಮವಾರವಷ್ಟೇ ಕಚೇರಿಗೆ ಹಾಜರಾದರು. ಆದರೂ ಕಸದ ಸಮಸ್ಯೆ ಕುರಿತು ಅವರು ಚರ್ಚೆ ನಡೆಸಲಿಲ್ಲ.

‘ಬಹುತೇಕ ನಿರ್ಮಾಣ ಕೆಲಸ ಪೂರ್ಣ­ಗೊಂಡಿರುವ ಅಜ್ಜಗೊಂಡನ­ಹಳ್ಳಿ ತ್ಯಾಜ್ಯ ವಿಲೇವಾರಿ ಘಟಕ ನೆನೆ­ಗುದಿಗೆ ಬಿದ್ದಿದೆ. ಸೀಬಿ ಬಳಿ ಹೊಸದಾಗಿ ಭೂಮಿ ಕೊಡುವುದಾಗಿ ಹೇಳಿದ ಸರ್ಕಾರ ಇಲ್ಲಿಯವರೆಗೂ ಕೊಟ್ಟಿಲ್ಲ. ನಗರದ ಹೊರಭಾಗದಲ್ಲಿ ಕಸ ಹಾಕಲು ಹೋದರೆ ಚಾಲಕರ ಮೇಲೆ ಜನರು ಹಲ್ಲೆ ನಡೆಸುತ್ತಿದ್ದಾರೆ. ಕಸ ಹಾಕಲು ಜಾಗ ನೀಡದ ಹೊರತು ಸಮಸ್ಯೆ ಬಗೆಹರಿಸಲು ಸಭೆ ಕರೆದರೂ ಪ್ರಯೋಜನ ಇಲ್ಲ. ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರು ಬರಲಿದ್ದು, ಅವರೇ ಸಮಸ್ಯೆ ಬಗೆಹರಿಸಲಿ. ಅಜ್ಜಗೊಂಡ­ನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ್‌ ಅವರಿಗೂ ಮತ್ತೊಮ್ಮೆ ಮನವಿ ಮಾಡ­ಲಾಗುವುದು’ ಎಂದು ಮೇಯರ್‌ ಗೀತಾ ತಿಳಿಸಿದರು.

‘ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಪಾಲಿಕೆ ಹಾಗೂ ಶಾಸಕರಿಗೆ ಇಲ್ಲ. ಹಿಂದಿನ ಆಡಳಿತದಲ್ಲೂ ಸಮಸ್ಯೆಯನ್ನು ಮುಂದೂಡುತ್ತಾ ಬರಲಾಯಿತು. ಈಗ ಬದ್ಧತೆ ತೋರುತ್ತಿಲ್ಲ. ಶಾಸಕರ ಮೇಲಿದ್ದ ನಂಬಿಕೆ ಜನರಿಂದ ದೂರವಾಗುತ್ತಿದೆ. ಇದರಿಂದಲೂ ಸಮಸ್ಯೆ ಹೆಚ್ಚುತ್ತಾ ಸಾಗಿದೆ’ ಎಂದು ಸಿಪಿಎಂ ಮುಖಂಡ ಸಯ್ಯದ್‌ ಮುಜೀಬ್‌ ಪ್ರತಿಕ್ರಿಯಿಸಿದರು.

ಕಸ ವಿಲೇವಾರಿ: ಬಿಜೆಪಿ ಅಸಮಾಧಾನ
ಕಸ ವಿಲೇವಾರಿ, ಪಾಲಿಕೆ ಆಡಳಿತ ಕಾರ್ಯವೈಖರಿ ಕುರಿತು ಬಿಜೆಪಿ ನಗರ ಮಂಡಲ ಕಾರ್ಯಕಾರಿಣಿ ಅಸಮಾಧಾನ ವ್ಯಕ್ತಪಡಿಸಿದೆ.ಶನಿವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಶಿವಣ್ಣ, ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕಸ ವಿಲೇವಾರಿ ಸಮಸ್ಯೆ ಉಲ್ಬಣಗೊಂಡಿದ್ದು, ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಜನತೆ ಆತಂಕ­ಗೊಂ­ಡಿದ್ದಾರೆ. ಈ ಕೂಡಲೇ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪಾಲಿಕೆಯ ಭ್ರಷ್ಟಾಚಾರ, ನಿಧಾನಗತಿಯ ಆಡಳಿತದ ವಿರುದ್ಧ ಹೋರಾಟ ರೂಪಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಗರದ ಘಟಕದ ಅಧ್ಯಕ್ಷ ಕೆ.ಪಿ.ಮಹೇಶ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ.ನಂದೀಶ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪಂಚಾಕ್ಷರಿ, ಕಾರ್ಯದರ್ಶಿ ನಂದೀಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT