ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ: ಫಲ ಕೊಡದ ಮುಂಗಾರು ಬಿತ್ತನೆ

Last Updated 25 ಮೇ 2016, 11:02 IST
ಅಕ್ಷರ ಗಾತ್ರ

ಹೊಸದುರ್ಗ: ಮಳೆರಾಯನ ಮುನಿಸಿನಿಂದ ಈ ಬಾರಿ ತಾಲ್ಲೂಕಿನ ಸಾವಿರಾರು ಹೆಕ್ಟೇರ್‌ ಮುಂಗಾರು ಬಿತ್ತನೆ ಕಾರ್ಯ ವಿಫಲವಾಗುವ ಆತಂಕ ರೈತರನ್ನು ಕಾಡುತ್ತಿದೆ!
ಕಳೆದ ವರ್ಷ ಏಪ್ರಿಲ್‌ ಆರಂಭದಲ್ಲಿ  ವರುಣನ ಆರ್ಭಟ ಶುರುವಾಗಿತ್ತು. ಆದರೆ, ಈ ಬಾರಿ ಬೇರೆ ಕಡೆಗಳಲ್ಲಿ ಒಂದಷ್ಟು ಮಳೆಯಾಗಿದ್ದರೂ  ಹದವಾದ ಮಳೆ ಬಂದಿಲ್ಲ. ಮುಂಗಾರು ಹಂಗಾಮಿನ ರೇವತಿ, ಅಶ್ವಿನಿ, ಭರಣಿ ಮಳೆ ಮುಗಿದಿದೆ.

ಬಿತ್ತನೆಗಾಗಿ ಮೇ 25ಕ್ಕೆ ಆರಂಭಗೊಳ್ಳಲಿರುವ ರೋಹಿಣಿ ಮಳೆಯಾದರೂ ಬರುತ್ತದೆಯೋ, ಇಲ್ಲವೋ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಒಂದು ವಾರದಿಂದ ತಾಲ್ಲೂಕಿನಲ್ಲಿ ಮುಂಜಾನೆ ಹಾಗೂ ಸಂಜೆ ಬೀಸುತ್ತಿರುವ ತಣ್ಣನೆಯ ಗಾಳಿ ನೋಡಿದರೆ, ಮಳೆ ಬಾರದೇ, ಬರ ಉಳಿಯಬಹುದೇನೋ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತರಾದ ಬಾಗೂರು ವೆಂಕಟೇಶ್‌, ತಿಮ್ಮಣ್ಣ, ಕರಿಯಪ್ಪ.

ಮುಂಗಾರು ಹಂಗಾಮಿನ ಹೆಸರು ಹಾಗೂ ಎಳ್ಳು ಬೆಳೆಗಳ ಬಿತ್ತನೆಯ ಸಮಯ ಮುಗಿಯುತ್ತಿದೆ. ಮೆಕ್ಕೆಜೋಳ, ಈರುಳ್ಳಿ ಹಾಗೂ ಸೂರ್ಯಕಾಂತಿ ಸೇರಿದಂತೆ ಇನ್ನಿತರ ಬೆಳೆ ಬಿತ್ತನೆ ಮಾಡಲು ಮಳೆ ಬರುವಿಕೆಗಾಗಿ ಕಾಯಲಾಗುತ್ತಿದೆ.  ಕೆಲವೆಡೆ ಬಿದ್ದ ಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ದ ಕೆಲವು ಬೆಳೆಗಳಿಗೆ ಮಳೆ ಬೇಕಿದೆ.

ತಾಲ್ಲೂಕಿನಾದ್ಯಂತ ಸುಮಾರು 860 ಹೆಕ್ಟೇರ್‌ ಎಳ್ಳು, 3 ಸಾವಿರ ಹೆಕ್ಟೇರ್‌ ಹೆಸರು, 2 ಸಾವಿರ ಹತ್ತಿ, 8 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, 3 ಸಾವಿರ ಹೆಕ್ಟೇರ್‌ ಶೇಂಗಾ, 4 ಸಾವಿರ ಹೆಕ್ಟೇರ್‌ ಈರುಳ್ಳಿ, 1.4 ಸಾವಿರ ಹೆಕ್ಟೇರ್‌ ಸಾವೆ, 1.8 ಹೆಕ್ಟೇರ್‌ ಸೂರ್ಯಕಾಂತಿ ಸೇರಿದಂತೆ ಸುಮಾರು 60 ಸಾವಿರ ಹೆಕ್ಟೇರ್‌ಗೂ ಅಧಿಕ ಮುಂಗಾರು ಬಿತ್ತನೆ ಆಗಬೇಕಿದೆ. ಶ್ರೀರಾಂಪುರ ಹೋಬಳಿಯ ಕೆಲವೆಡೆ ಸುಮಾರು 30 ಹೆಕ್ಟೇರ್‌ನಷ್ಟು ಹೆಸರು ಬೆಳೆ ಬಿತ್ತನೆಯಾಗಿದೆ.

‘ತಾಲ್ಲೂಕಿನಲ್ಲಿ ವಾಡಿಕೆಯಂತೆ ಜನವರಿ ಆರಂಭದಿಂದ ಮೇ 23ರ ವರೆಗೆ ಶೇ 90.3 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 39.4 ಮಿ.ಮೀ ಮಳೆಯಾಗಿದೆ. ಶೇ 56 ಮಿ.ಮೀ ಮಳೆ ಕುಂಠಿತವಾಗಿದೆ’ ಎಂದು ಪಟ್ಟಣದ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಉಮೇಶ್‌ ಮಾಹಿತಿ ನೀಡಿದ್ದಾರೆ.

ಅಂತರ್ಜಲ ಮಟ್ಟ ಕುಸಿತ: ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ಇಲ್ಲಿನ ವೇದಾವತಿ ನದಿ ಪಾತ್ರದಲ್ಲಿ ನಡೆ ಯುತ್ತಿರುವ ಅಕ್ರಮ ಮರಳು ಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಬೋರ್‌ವೆಲ್‌ಗಳು ಬರಿದಾಗುವ ಭೀತಿ ರೈತರನ್ನು ಕಾಡುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬುದು ತಾಲ್ಲೂಕಿನ ಹಿರಿಯ ನಾಗರಿಕರು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT