ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಅಭಿವೃದ್ಧಿಯ ಕನಸುಗಣ್ಣು

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವನ್ನು ಮುಂಚೂಣೆಗೆ ತರುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಬಾರಿ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹೇಳಿಕೊಳ್ಳುವಂತಹ ಫಲವನ್ನೇನೂ ನೀಡಿಲ್ಲ. ಕೈಗಾರಿಕಾ ಬೆಳವಣಿಗೆ ಮಂದಗತಿಯಲ್ಲಿ ಸಾಗಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೈಗಾರಿಕೆಗಳು ಬಾಗಿಲು ಮುಚ್ಚಲಿವೆ ಎಂಬ ಆತಂಕ ಉದ್ಯಮ ವಲಯದ್ದು. ನಿರೀಕ್ಷೆಗೆ ತಕ್ಕಂತೆ ಯೋಜನೆಗಳು ಅನುಷ್ಠಾನವಾಗಿಲ್ಲ ಎಂಬುದೇನೋ ನಿಜ. ಆದರೆ, ಮೊದಲಿನಿಂದಲೂ ಇರುವ ಹಾಗೆಯೇ ಸಾಧಾರಣ ಮಟ್ಟದಲ್ಲಿಯಾದರೂ ಕೈಗಾರಿಕಾ ವಲಯದ ಪ್ರಗತಿ ನಡೆದಿದೆ ಎಂಬುದು ಅಧಿಕಾರಿಗಳ ಸಮರ್ಥನೆ. ವಾರದ ಹಿಂದೆಯಷ್ಟೇ ಹೊಸ ಕೈಗಾರಿಕಾ ನೀತಿ ಪ್ರಕಟವಾಗಿದೆ. ಅದರ ಬೆನ್ನಲ್ಲೇ ನಿರೀಕ್ಷೆಗಳೂ ಹೆಚ್ಚಿವೆ...

ನೆರೆಹೊರೆಯವರು ಮನೆಗೆ ಹೊಸತೇನನ್ನಾದರೂ ತಂದಾಗ, ಮನೆ ಮೇಲೆ ಮನೆ ಕಟ್ಟಿ ಸಂಭ್ರಮಿಸುತ್ತಿದಾಗ ಈ ಮನೆಯವರಿಗೆ ಮನಸ್ಸು ಮುದುಡಿ ಹೋಗುತ್ತದೆ. ಅಂತಹುದೇ ಪರಿಸ್ಥಿತಿ ಕರ್ನಾಟಕದ ಕೈಗಾರಿಕಾ ವಲಯದ್ದೂ ಆಗಿದೆ.

ನೆರೆಯ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೊಸ ಹೊಸ ಉದ್ಯಮಗಳು ತಲೆಎತ್ತುತ್ತಿವೆ. ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಆಗುತ್ತಿದೆ. ಆ ರಾಜ್ಯಗಳ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಅಷ್ಟೇ ಅಲ್ಲ, ಕರ್ನಾಟಕಕ್ಕೆ ಬಂದೇಬಿಟ್ಟಿತು ಎಂಬಂತಿದ್ದ ದೊಡ್ಡ ಉದ್ಯಮವೂ ನೆರೆಯ ರಾಜ್ಯದ ಪಾಲಾಗಿದೆ. ಕರ್ನಾಟಕದ ಜನರ, ಉದ್ಯಮಿಗಳ, ಉದ್ಯೋಗಾಕಾಂಕ್ಷಿಗಳ ಚಿಂತೆ ಹೆಚ್ಚಲು ಇಷ್ಟು ಸಾಕಲ್ಲವೇ?

ಇನ್ನೊಂದೆಡೆ, ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವನ್ನು ಮುಂಚೂಣೆಗೆ ತರುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಬಾರಿ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹೇಳಿಕೊಳ್ಳುವಂತಹ ಫಲವನ್ನೇನೂ ನೀಡಿಲ್ಲ. ಕೈಗಾರಿಕಾ ಬೆಳವಣಿಗೆ ಮಂದಗತಿಯಲ್ಲಿ ಸಾಗಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೈಗಾರಿಕೆಗಳು ಬಾಗಿಲು ಮುಚ್ಚಲಿವೆ ಎಂಬ ಆತಂಕ ಉದ್ಯಮ ವಲಯದ್ದಾಗಿದೆ.

2010 ಮತ್ತು 2012ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ (ಗ್ಲೋಬಲ್‌ ಇನ್ವೆಸ್ಟರ್‌ ಮೀಟ್‌ ಅರ್ಥಾತ್‌ ಜಿಐಎಂ: ಜಿಮ್‌) ಯಶಸ್ವಿಯಾಗಿದ್ದು, ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದ್ದು, ಒಂದು ರೀತಿಯಲ್ಲಿ ಕೈಗಾರಿಕಾ ವಲಯಕ್ಕೆ ಗ್ರಹಣ ಹಿಡಿದಂತಾಗಿದೆ. ಹೂಡಿಕೆದಾರರು ಕರ್ನಾಟಕದ ಬದಲು ತಮಿಳುನಾಡು, ಆಂಧ್ರಪ್ರದೇಶದತ್ತ ಒಲವು ತೋರಿದ್ದಾರೆ. ನೆರೆಯ ರಾಜ್ಯಗಳು ಕರ್ನಾಟಕಕ್ಕಿಂತ ಹೆಚ್ಚಿನ ವಿನಾಯಿತಿಗಳನ್ನು ನೀಡುತ್ತಿರುವುದರಿಂದ ಹೂಡಕೆದಾರರು ಈಚೆಗೆ ಅತ್ತ ಮುಖ ಮಾಡುತ್ತಿದ್ದಾರೆ.

ಹಾಲು ಕೊಡುವ ಹಸುವಿಗೆ ಮೇವು ಹಾಕದಿದ್ದರೆ ಹೇಗೆ?

ಕೈಗಾರಿಕೆಗಳು ಹಾಲು ಕೊಡುವ ಹಸು ಇದ್ದಂತೆ. ಅವುಗಳಿಂದ 6800 ಕೋಟಿ ಆದಾಯ ಸರ್ಕಾರಕ್ಕೆ ಬರುತ್ತದೆ. ಅವುಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡದಿದ್ದರೆ ಹಾಲು (ತೆರಿಗೆ) ಎಲ್ಲಿಂದ ಬರುತ್ತದೆ ಎಂಬುದು ಅಸೋಚಾಂ ದಕ್ಷಿಣ ಭಾರತ ಸಮಿತಿ ಉಪಾಧ್ಯಕ್ಷ ಜೆ.ಕ್ರಾಸ್ತಾ ಅವರ ಪ್ರಶ್ನೆ.
ಸರಿಯಾದ ಸೌಲಭ್ಯ ಕೊಡದಿದ್ದರೆ ಹೂಡಿಕೆದಾರರು ಮುಂದೆ ಬರುವುದಿಲ್ಲ. ಇರುವ ಕೈಗಾರಿಕೆಗಳು ವಲಸೆ ಹೋಗುತ್ತವೆ. ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳೊಣ ಎಂದರೆ ಕೈಗಾರಿಕಾ ಸಚಿವರು ಇಲ್ಲ. ಮುಖ್ಯಮಂತ್ರಿಗಳ ಬಳಿ ಆ ಖಾತೆ ಇದೆ. ಅವರನ್ನು ಭೇಟಿ ಮಾಡಿ ಮನವಿ ಕೊಡೋಣ ಅಂದರೆ ಆಗುವುದಿಲ್ಲ. ಐಎಎಸ್ ಅಧಿಕಾರಿಗಳ ಕಡೆ ಹೋದರೆ ಕೆಲಸ ಆಗುವುದಿಲ್ಲ. ಈ ರೀತಿ ಆದರೆ ಕೈಗಾರಿಕಾ ಬೆಳವಣಿಗೆ ಕುಸಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೂಡಿಕೆದಾರರನ್ನು ಆಕರ್ಷಿಸಲು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಪೈಪೋಟಿ ನಡೆಸುತ್ತಿವೆ. ಜೈವಿಕ ತಂತ್ರಜ್ಞಾನ ಸಂಸ್ಥೆಗಳು ತೆಲಂಗಾಣದತ್ತ ವಲಸೆ ಹೋಗುತ್ತಿವೆ. ಅಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಿರುವುದೇ ಇದಕ್ಕೆ ಕಾರಣ ಎಂಬುದು ಅವರ ಅಭಿಪ್ರಾಯ.

ಕೈಗಾರಿಕಾ ಎಸ್ಟೇಟ್‌ಗಳು ಈಗಂತೂ ಸ್ಲಂಗಳಂತಾಗಿವೆ. ಅಲ್ಲಿ ಯಾವುದೇ ಸೌಲಭ್ಯಗಳು ಇಲ್ಲ. ಕಳೆದ 10 ವರ್ಷಗಳಿಂದ ಕೈಗಾರಿಕಾ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಪಾರ್ಲೆ ಸೇರಿದಂತೆ 8  ಕೈಗಾರಿಕೆಗಳು ಮುಚ್ಚಿವೆ. ಇದರಿಂದ 25 ಸಾವಿರ ಜನರು ಕೆಲಸ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ 15 ಲಕ್ಷ ಉದ್ಯೋಗ ಸೃಷ್ಟಿಸಲು ಸಾಧ್ಯವೇ ಎಂಬುದು ಅವರ ಪ್ರಶ್ನೆ.

ಕೈಗಾರಿಕಾ ಕಟ್ಟಡಗಳಿಗೆ ವಾಣಿಜ್ಯ ತೆರಿಗೆ ಹಾಕುವುದು ಸರಿಯಲ್ಲ. ಬಿಬಿಎಂಪಿಯವರು ಕಂಪೆನಿಗಳ ಮುಂದೆ ತಮಟೆ ಬಾರಿಸುವ ಮೂಲಕ ಅವಮಾನ ಮಾಡಿದ್ದಾರೆ. ಇದರಿಂದ ಬೇಸತ್ತ ಕಂಪೆನಿಗಳು ಒಂದೊಂದೇ ಘಟಕಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುತ್ತಿವೆ. ಇಷ್ಟಾದರೂ ಸರ್ಕಾರ ಗಮನಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕ್ರಾಸ್ತಾ.

ರಾಜ್ಯದಲ್ಲಿನ ಕೈಗಾರಿಕಾ ಚಿತ್ರಣವನ್ನು ಗಮನಿಸಿದರೆ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯೇನೂ ಆಗಿಲ್ಲ. ಆರ್ಥಿಕ ಹಿಂಜರಿತ, ಮೂಲಸೌಕರ್ಯಗಳ ಕೊರತೆ, ಕೌಶಲವುಳ್ಳ ಕಾರ್ಮಿಕರ ಅಭಾವ ಇತ್ಯಾದಿ ಕಾರಣಗಳಿಂದಾಗಿ ಈ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿಲ್ಲ. ಈ ಮಧ್ಯೆ ಕೈಗಾರಿಕಾ ಕ್ಷೇತ್ರಕ್ಕೆ ಟಾನಿಕ್ ಎಂಬಂತೆ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಿದೆ. ಅಲ್ಲದೆ ಮತ್ತೊಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವುದಕ್ಕೂ ಈಗಾಗಲೇ ಸಿದ್ಧತೆ ಆರಂಭವಾಗಿದೆ.

2010ರಲ್ಲಿ ನಡೆದ ಜಾಗತಿಕ ಮಟ್ಟದ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 389 ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಿಂದ ರೂ3.92 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 7.35 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿತ್ತು.

ಆಗ ಪ್ರಸ್ತಾಪವಾಗಿದ್ದ ಎಲ್ಲ 389 ಯೋಜನೆಗಳಿಗೂ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಈಗಾಗಲೇ ಹಸಿರು ನಿಶಾನೆ ತೋರಿದೆ. ಆದರೆ, ಯೋಜನೆಗಳ ಅನುಷ್ಠಾನ ಮಾತ್ರ ನಿರೀಕ್ಷೆಗೆ ತಕ್ಕಂತೆ ಆಗುತ್ತಿಲ್ಲ.

389 ಯೋಜನೆಗಳ ಪೈಕಿ 73 ಯೋಜನೆಗಳು ಮಾತ್ರ ಈವರೆಗೆ ಅನುಷ್ಠಾನಗೊಂಡಿದ್ದು, ಒಟ್ಟು ರೂ32738.20 ಕೋಟಿ ಬಂಡವಾಳ ಹೂಡಿಕೆಯಾಗಿದೆ. 89,966 ಜನರಿಗೆ ಉದ್ಯೋಗ ದೊರೆತಿದೆ ಎನ್ನುತ್ತಾರೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು.
28 ಯೋಜನೆಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. 203 ಯೋಜನೆಗಳು ಅನುಷ್ಠಾನ ಹಂತದಲ್ಲಿದ್ದರೆ, 85 ಯೋಜನೆಗಳು ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಪ್ಪಂದ ಮಾಡಿಕೊಂಡಿರುವ ಕಂಪೆನಿಗಳ ಕಡೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅವು ಆರಂಭವಾಗುವ ಸಾಧ್ಯತೆ ಕಡಿಮೆ.

2012ರಲ್ಲಿ ನಡೆದ ಜಾಗತಿಕ ಮಟ್ಟದ ಹೂಡಿಕೆದಾರರ ಸಮಾವೇಶದಲ್ಲಿ 751 ಯೋಜನೆಗಳನ್ನು ಆರಂಭಿಸುವ ಭರವಸೆ ಸಿಕ್ಕಿತ್ತು. ಇದರಿಂದ ರೂ6.70 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 17 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದುವರೆಗೆ ಕೇವಲ 58 ಯೋಜನೆಗಳು ಆರಂಭವಾಗಿದ್ದು, ರೂ17308.44 ಕೋಟಿ ಬಂಡವಾಳ ಹೂಡಿಕೆಯಾಗಿದೆ. 24,696 ಜನರಿಗೆ ಮಾತ್ರವೇ ಉದ್ಯೋಗ ದೊರಕಿದೆ.

ಅಬ್ಬರದ ಪ್ರಚಾರ
ಹೂಡಿಕೆದಾರರ ಸಮಾವೇಶ ಆಯೋಜಿಸಿದಾಗ ಅಬ್ಬರದ ಪ್ರಚಾರವನ್ನೇನೋ ಮಾಡಲಾಯಿತು. ಲಕ್ಷಾಂತರ ಕೋಟಿ ಬಂಡವಾಳ ಹರಿದು ಬರಲಿದೆ ಎಂದು ಹೇಳಿದ್ದರಿಂದ ರಾಜ್ಯದ ಜನರು, ಉದ್ಯಮ ಕ್ಷೇತ್ರದವರು, ಉದ್ಯೋಗ ಆಕಾಂಕ್ಷಿಗಳು ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡರು.

ಆಗಿನ ನಿರೀಕ್ಷೆಗೆ ತಕ್ಕಂತೆ ಯೋಜನೆಗಳು ಅನುಷ್ಠಾನವಾಗಿಲ್ಲ ಎಂಬುದೇನೋ ನಿಜ. ಆದರೆ, ಮೊದಲಿನಿಂದಲೂ ಇರುವ ಹಾಗೆಯೇ ಸಾಧಾರಣ ಮಟ್ಟದಲ್ಲಿ ಕೈಗಾರಿಕಾ ವಲಯದ ಪ್ರಗತಿಯಂತೂ ನಡೆದಿದೆ ಎಂಬುದು ಅಧಿಕಾರಿಗಳ ಸಮರ್ಥನೆ.

ಜಿಮ್‌ನಲ್ಲಿ ಹೆಚ್ಚಾಗಿ ಕಬ್ಬಿಣ ಮತ್ತು ಉಕ್ಕು ಘಟಕದ ಕಂಪೆನಿಗಳು ಯೋಜನೆ ಆರಂಭಕ್ಕೆ ಮುಂದೆ ಬಂದಿದ್ದವು. ಆದರೆ, ಅಕ್ರಮ ಗಣಿಗಾರಿಕೆ ಕಡಿವಾಣ ಬಿದ್ದಿದ್ದರಿಂದ ಹಾಗೂ ಸುಪ್ರೀಂ ಕೋರ್ಟ್ ಹಲವು ನಿರ್ಬಂಧಗಳನ್ನು ಹೇರಿದ ಕಾರಣ ಈ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಆರಂಭಿಸಲು ಕಂಪೆನಿಗಳು ಹೆಚ್ಚು ಉತ್ಸಾಹ ತೋರಲಿಲ್ಲ. ನಿರೀಕ್ಷೆಯಂತೆ ಯೋಜನೆಗಳು ಆರಂಭವಾಗದೇ ಇರುವುದಕ್ಕೆ ಈ ಅಂಶವೂ ಕಾರಣ ಎಂಬುದು ಅಧಿಕಾರಿಗಳ ವಿಶ್ಲೇಷಣೆ.

2008ರ ಆರ್ಥಿಕ ಹಿಂಜರಿತ, ಮೂಲ ಸೌಕರ್ಯಗಳ ಕೊರತೆ, ಭೂಸ್ವಾಧೀನ ಸಮಸ್ಯೆ, ಬಂಡವಾಳದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಕೈಗಾರಿಕೆಗಳು ಎದುರಿಸುತ್ತಿವೆ. ಬೆಂಗಳೂರು ಹೊರತುಪಡಿಸಿದರೆ ಉಳಿದ ಕಡೆ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ರಸ್ತೆ, ನೀರು, ವಿದ್ಯುತ್, ಸಂಚಾರ ಸೌಲಭ್ಯ ಇತ್ಯಾದಿ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲ. ಹೀಗಾಗಿ ಉದ್ಯಮಿಗಳು ಬಂಡವಾಳ ಹೂಡಲು ಹಿಂಜರಿಯುತ್ತಾರೆ.

ಆರ್ಥಿಕ ಹಿಂಜರಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬಹಳಷ್ಟು ಉದ್ದಿಮೆದಾರರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಬಂಡವಾಳದ ಕೊರತೆಯೂ ಇದೆ ಎನ್ನುತ್ತಾರೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಸಂಪತ್‌ರಾಮನ್‌. ರಾಜ್ಯದಲ್ಲಿ ಸುಮಾರು ಐದು ಲಕ್ಷ ಸಣ್ಣ ಕೈಗಾರಿಕೆಗಳಿದ್ದು, ಅವುಗಳಲ್ಲಿ ಬಹಳಷ್ಟು ಕೈಗಾರಿಕೆಗಳ ಸ್ಥಿತಿ ಸದ್ಯ ಬಹಳ ಶೋಚನೀಯವಾಗಿದೆ. ಹೆಚ್ಚಿದ ಉತ್ಪಾದನಾ ವೆಚ್ಚ, ಉತ್ಪನ್ನಗಳಿಗೆ ಬೇಡಿಕೆ ಇಲ್ಲದೇ ಇರುವುದು, ಸಂಪನ್ಮೂಲಗಳ ಕೊರತೆ, ವಿದ್ಯುತ್ ಅಭಾವ, ಅಧಿಕ ಬಡ್ಡಿದರ ಇತ್ಯಾದಿ ಕಾರಣಗಳಿಂದಾಗಿ ಸಂಕಷ್ಟದಲ್ಲಿವೆ.

ಶೋಷಣೆ
ಬೇಡಿಕೆ ಇದ್ದಾಗ ದೊಡ್ಡ ಕೈಗಾರಿಕೆಗಳವರು ತಮಗೆ ಬೇಕಾದ ಉತ್ಪನ್ನಗಳನ್ನು ಸಣ್ಣ ಕೈಗಾರಿಕೆಗಳಿಂದ ಖರೀದಿಸು ತ್ತಾರೆ. ಬೇಡಿಕೆ ಕಡಿಮೆಯಾದಾಗ ಅವರೇ ತಯಾರಿಸಿಕೊಳ್ಳುತ್ತಾರೆ. ಸಣ್ಣ ಕೈಗಾರಿಕೆಗಳಿಂದ ಖರೀದಿಸಿದ ಉತ್ಪನ್ನಗಳ ಹಣವನ್ನು ದೊಡ್ಡ ಕೈಗಾರಿಕೆಯವರು ಸಕಾಲಕ್ಕೆ ಪಾವತಿ ಮಾಡುವುದಿಲ್ಲ. ಅಲ್ಲದೆ ಹಲವರು ಒಂದೇ ಉತ್ಪನ್ನಗಳನ್ನು ತಯಾರು ಮಾಡುತ್ತಾರೆ. ಹೀಗಾಗಿ ಸಣ್ಣ ಕೈಗಾರಿಕೆಗಳು ನಾಶವಾಗುತ್ತಿವೆ. ಈ ಸಮಸ್ಯೆ ಬಗೆಹರಿಸಲು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಂಪತ್‌ ರಾಮನ್‌ ಅವರ ಸಲಹೆ.

ದೊಡ್ಡ ಕೈಗಾರಿಕೆಗಳ ಮಾಲೀಕರನ್ನು ಎದುರು ಹಾಕಿಕೊಂಡರೆ ಮುಂದೆ ಅವರಿಂದ ಉತ್ಪನ್ನಗಳಿಗೆ ಬೇಡಿಕೆ ಬರುವುದಿಲ್ಲ. ನ್ಯಾಯಾಲಯಕ್ಕೆ ಹೋದರೂ ಸಮಸ್ಯೆ ಶೀಘ್ರ ಬಗೆಹರಿಯುವುದಿಲ್ಲ. ಕಠಿಣ ಕಾನೂನು ಕ್ರಮದ ಮೂಲಕವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಅವರ ಆಗ್ರಹ. 

ಹೆಚ್ಚಿದ ಸ್ಪರ್ಧೆ
ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗುತ್ತಿದೆ. ಧಾರವಾಡದಲ್ಲಿ ರೂ2500 ಕೋಟಿ ವೆಚ್ಚದಲ್ಲಿ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿದ್ದ ಹೀರೊ ಮೋಟೊಕಾರ್ಪ್ ಕಂಪೆನಿಗೆ ರಾಜ್ಯ ಸರ್ಕಾರ ವಿನಾಯಿತಿ ದರದಲ್ಲಿ ಭೂಮಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿತ್ತು. ಆದರೆ, ಆಂಧ್ರಪ್ರದೇಶ ಉಚಿತವಾಗಿ ಭೂಮಿ ನೀಡುವುದಾಗಿ ಘೋಷಿಸಿದ ಪರಿಣಾಮ ಆ ರಾಜ್ಯಕ್ಕೆ ಹಾರಿದೆ. ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕೊಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಬೇಕು ಎಂಬುದು ಎಫ್‌ಕೆಸಿಸಿಐ ಅಧ್ಯಕ್ಷರ ಸಲಹೆ.

ಹೊಸ ಭೂಸ್ವಾಧೀನ ಕಾಯ್ದೆಯಿಂದಾಗಿ ಭೂಮಿ ಖರೀದಿಸುವುದು ತುಂಬಾ ಕಷ್ಟವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯುವಲ್ಲಿ ಆಗುವ ಕಿರುಕುಳ, ವಿಳಂಬವನ್ನು ತಪ್ಪಿಸಬೇಕು. ಬ್ರಿಟನ್ ಮತ್ತು ಜಪಾನ್ ರಾಷ್ಟ್ರಗಳು, ಬೆಂಗಳೂರು - ಚೆನ್ನೈ ಹಾಗೂ ಬೆಂಗಳೂರು - ಮುಂಬೈ ನಡುವೆ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಆಸಕ್ತಿ ತೋರಿವೆ. ಇದಕ್ಕೆ ಸಹಕಾರ ನೀಡಿದರೆ ಆ ದೇಸಗಳು ಖಂಡಿತಾ ಸ್ಪಂದಿಸುತ್ತಾರೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಸಂಪತ್‌ ಕುಮಾರ್.

ಹೊಸ ಕೈಗಾರಿಕಾ ನೀತಿ
ಉದ್ಯಮ ವಲಯಕ್ಕೆ ಪೂರಕವಾದ ಹೊಸ ಕೈಗಾರಿಕಾ ನೀತಿಯನ್ನು 2014-19 ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ನೀತಿಯ ಅವಧಿಯಲ್ಲಿ ರೂ5 ಲಕ್ಷ ಕೋಟಿ ಬಂಡವಾಳ ಹೂಡಿಕೆ, 15 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಸದ್ಯ ಕರ್ನಾಟಕವು ದೇಶದ ಕೈಗಾರಿಕಾ ಬೆಳವಣಿಗೆಯ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಈಗ ಹೊಸ ಕೈಗಾರಿಕಾ ನೀತಿ ಪ್ರಕಟಿಸಿರುವುದರಿಂದ ನೂತನ ನೀತಿಯ ಅವಧಿಯಲ್ಲಿ ಖಂಡಿತಾ 4ನೇ ಸ್ಥಾನಕ್ಕೇರಲಿದ್ದೇವೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸದ ನುಡಿ.

ಹೊಸ ಕೈಗಾರಿಕಾ ನೀತಿ
ಕೈಗಾರಿಕೆಗಳ ಸ್ಥಾಪನೆಗೆ ಪ್ರತಿ ವರ್ಷ 5ರಿಂದ 8 ಸಾವಿರ ಎಕರೆ ಭೂಮಿ ಸ್ವಾಧೀನ, ಕನಿಷ್ಠ 5 ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಏಳು ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆ, ಹೊಸದಾಗಿ ಸ್ಥಾಪಿಸುವ ಪ್ರತಿಯೊಂದು ಕೈಗಾರಿಕಾ ವಸಾಹತಿನಲ್ಲಿ ಶೇ 25ರಷ್ಟು ಜಾಗ ಪರಿಶಿಷ್ಟ ಜಾತಿ/ಪಂಗಡದ ಉದ್ಯಮಿಗಳಿಗೆ ಮೀಸಲು, ಎಲ್ಲ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳೆಯರಿಗೆ ಶೇ 5ರಷ್ಟು ಮೀಸಲಾತಿ, ಮಹಿಳಾ ಉದ್ಯಮಿಗಳಿಗಾಗಿ ಎರಡು ಕೈಗಾರಿಕಾ ಪ್ರದೇಶಗಳ ಸ್ಥಾಪನೆ ಸೇರಿದಂತೆ ಹಲವು ಅಂಶಗಳನ್ನು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

49 ಯೋಜನೆಗಳಿಗೆ ಒಪ್ಪಿಗೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ರೂ39,492 ಕೋಟಿ ಬಂಡವಾಳ ಹೂಡಿಕೆಯ ಒಟ್ಟು 49 ಯೋಜನೆಗಳಿಗೆ ರಾಜ್ಯಮಟ್ಟದ ಉನ್ನತ ಸಮಿತಿ ಒಪ್ಪಿಗೆ ನೀಡಿದೆ. ಇದಲ್ಲದೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ರೂ3,463 ಕೋಟಿ ಬಂಡವಾಳ ಹೂಡಿಕೆಯ 205 ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ಎಷ್ಟು ಯೋಜನೆಗಳು ಆರಂಭವಾಗುತ್ತವೆ ಎಂಬುದು ಇನ್ನೂ ನಿಖರವಾಗಿಲ್ಲ.

ಕೇವಲ ಯೋಜನೆಗಳಿಗೆ ಒಪ್ಪಿಗೆ ನೀಡಿದ ಮಾತ್ರಕ್ಕೆ ಕೈಗಾರಿಕಾ ಬೆಳವಣಿಗೆ ಆಗುವುದಿಲ್ಲ. ಅವು ಜಾರಿ ಆಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ರಸ್ತೆ, ನೀರು, ಶಾಲೆ, ಆಸ್ಪತ್ರೆ ಇತ್ಯಾದಿ ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಸದ್ಯ ಕರ್ನಾಟಕದವರೇ ರೈಲ್ವೆ ಸಚಿವರಾಗಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರು - ಬೀದರ್, ಬೆಂಗಳೂರು - ಬೆಳಗಾವಿ, ಬೆಂಗಳೂರು - ಮುಂಬೈ ಹಾಗೂ ಬೆಂಗಳೂರು - ಮಂಗಳೂರು ನಡುವೆ ರೈಲ್ವೆ ಡಬಲಿಂಗ್ ಮಾಡಬೇಕು. ಇದರಿಂದ ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ರಾಜಧಾನಿ ಬೆಂಗಳೂರು ಮೇಲಿನ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲ ಭಾಗಗಳಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ಕಡೆ ಮೂಲಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಹೂಡಿಕೆದಾರರನ್ನು ಆಕರ್ಷಿಸಲು ರಾಜಧಾನಿ ಹೊರಗೆ ಆರಂಭವಾಗುವ ಕೈಗಾರಿಕೆಗಳಿಗೆ ಹೆಚ್ಚಿನ ವಿನಾಯಿತಿಗಳನ್ನು ನೀಡಬೇಕು. ಈ ರೀತಿ ಮಾಡಿದಾಗ ಮಾತ್ರ ಎಲ್ಲ ಕಡೆ ಕೈಗಾರಿಕೆಗಳನ್ನು ಆರಂಭಿಸಲು ಸಾಧ್ಯವಾಗುತ್ತದೆ. ಅಲ್ಲದೆ ಪ್ರಾದೇಶಿಕ ಅಸಮತೋಲನದ ಕೂಗು ಕಡಿಮೆಯಾಗಲಿದೆ.





 

















 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT