ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೂಡದ ಕಾಮಧೇನು: ಆರಂಭವಾಗದ ಹೈನೋದ್ಯಮ

Last Updated 29 ಜನವರಿ 2015, 10:57 IST
ಅಕ್ಷರ ಗಾತ್ರ

ಯಾದಗಿರಿ: ಸಂಪನ್ಮೂಲಗಳು ಹೇರಳವಾಗಿದ್ದರೂ, ಅವುಗಳ ಬಳಕೆ ಮಾಡಿಕೊಳ್ಳದೇ ಇರುವುದಕ್ಕೆ ಉತ್ತಮ ನಿದರ್ಶನ ಎನ್ನುವಂತಿದೆ ಯಾದಗಿರಿ ಜಿಲ್ಲೆ. ಕೈಗಾರಿಕೆ ಹಾಗೂ ಹೈನುಗಾರಿಕೆ ಆರಂಭಿಸಲು ಉತ್ತಮ ಅವಕಾಶಗ ಳಿದ್ದರೂ, ಇದುವರೆಗೆ ಕೈಗೂಡುತ್ತಿಲ್ಲ ಎನ್ನುವ ಬೇಸರ ಜಿಲ್ಲೆಯ ಜನರದ್ದಾಗಿದೆ.

ಜಿಲ್ಲೆಯಲ್ಲಿ ಎರಡು ನದಿಗಳು ಹರಿದಿವೆ. ಉತ್ತಮ ನೀರಾವರಿ ಸೌಲಭ್ಯವಿದೆ. ಆದರೂ, ಜಿಲ್ಲೆಯಲ್ಲಿ ಮಾತ್ರ ಇದುವರೆಗೆ ಹೈನುಗಾರಿಕೆ ಆರಂಭವಾಗಿಯೇ ಇಲ್ಲ! ಕೃಷಿಯನ್ನೇ ಅವಲಂಬಿಸಿರುವ ಜಿಲ್ಲೆಯ ರೈತರು ಬಹುತೇಕ ಭತ್ತ ಹಾಗೂ ಹತ್ತಿಯನ್ನು ಬೆಳೆಯುತ್ತಿದ್ದಾರೆ. ಆದರೆ ಬೆಲೆ ಕುಸಿತದಿಂದ ಕಂಗಾಲಾ­ಗಿರುವ ರೈತರಿಗೆ ಆಸರೆ ಆಗಬೇಕಿದ್ದ ಹೈನುಗಾರಿಕೆಗೂ ಉತ್ತೇಜನ ಸಿಗುತ್ತಿಲ್ಲ ಎನ್ನುವ ಕೊರಗು ಕಾಡುತ್ತಿದೆ.

ಸುರಪುರ, ಶಹಾಪುರ ತಾಲ್ಲೂಕಿನ ಬಹುತೇಕ ಪ್ರದೇಶಗಳು ನೀರಾವರಿ ಸೌಲಭ್ಯ ಪಡೆದಿವೆ. ಇನ್ನು ಯಾದಗಿರಿ ತಾಲ್ಲೂಕಿನ ಕೆಲ ಹಳ್ಳಿಗಳು ಭೀಮಾ ನದಿ ದಡದಲ್ಲಿದ್ದು, ನೀರಿನ ಕೊರತೆ ಇಲ್ಲ. ಅಲ್ಲದೇ ಹೈನುಗಾರಿಕೆಗೆ ಅವಶ್ಯಕವಾ­ಗಿರುವ ಮೇವಿಗೂ ಕೊರತೆ ಇಲ್ಲ. ಆದರೂ, ಹೈನುಗಾರಿಕೆ ಆರಂಭಿಸು ವುದಕ್ಕೆ ಮೀನಮೇಷ ಎಣಿಸಲಾ­ಗುತ್ತಿದೆ ಎನ್ನುವ ದೂರು ರೈತರದ್ದಾಗಿದೆ.

ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಆರಂಭವಾ ಗದೇ ಇದ್ದರೂ, ನಿತ್ಯ ಸುಮಾರು 30 ಸಾವಿರ ಲೀಟರ್‌ ಹಾಲಿನ ಬಳಕೆ ಆಗುತ್ತಿದೆ. ಹಾಲು ಒಕ್ಕೂಟದಿಂದ ನಿತ್ಯ 20 ಸಾವಿರ ಲೀಟರ್‌ನಷ್ಟು ನಂದಿನಿ ಹಾಲನ್ನು ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಉಳಿದ ಸುಮಾರು 10 ಸಾವಿರ ಲೀಟರ್‌ನಷ್ಟು ಹಾಲಿಗಾಗಿ ಪಕ್ಕದ ರಾಜ್ಯಗಳ ಖಾಸಗಿ ಕಂಪೆನಿಗಳನ್ನು ಅವಲಂಬಿಸು ವಂತಾಗಿದೆ ಎಂದು ಹಾಲು ಒಕ್ಕೂಟದ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.  

ಕೈಗೂಡದ ಕಾಮಧೇನು: ಬೀದರ್‌–ಗುಲ್ಬರ್ಗ ಹಾಲು ಒಕ್ಕೂಟದಿಂದ ಯಾದಗಿರಿ ಜಿಲ್ಲೆಯಲ್ಲಿ ಹೈನುಗಾರಿಕೆ ಉತ್ತೇಜಿಸಲು ಕಾಮಧೇನು ಯೋಜನೆಯನ್ನು ರೂಪಿಸಿತ್ತು. ಇದರ ಅಡಿ­ಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ­ಗಳನ್ನು ರಚಿಸುವ ಉದ್ದೇಶ ಹೊಂದಲಾಗಿತ್ತು.
ಒಕ್ಕೂಟದಿಂದ ಈಗಾಗಲೇ ಸುಮಾರು 40 ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿದ್ದು, ಅವುಗಳ ಸದಸ್ಯರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ಈ ಸಂಘಗಳ ಸದಸ್ಯರಿಗೆ ಹಸುಗಳನ್ನು ಖರೀದಿಸಲು ಸಾಲ ಸೌಲಭ್ಯ ಒದಗಿಸುವ ಕುರಿತು ಡಿಸಿಸಿ ಬ್ಯಾಂಕ್‌ ಅಧಿಕಾರಿಗಳ ಜೊತೆಗೂ ಚರ್ಚಿಸಲಾಗಿದೆ. ಆರಂಭದಲ್ಲಿ ವೇಗವಾಗಿ ನಡೆದ ಕಾಮಧೇನು ಯೋಜನೆಯ ಕಾರ್ಯಕ್ರಮಗಳು ಇದೀಗ ತಣ್ಣಗಾಗಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ರಚನೆಯಾಗಿದ್ದರೂ, ಹಸು ಖರೀದಿಗೆ ಸಾಲ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಕಳೆದ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಹೈನುಗಾರಿಕೆ ಆರಂಭ ವಾಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಹಾಲು ಶಿತಲೀಕರಣ ಘಟಕ ಪುನಶ್ಚೇತನ: ಜಿಲ್ಲೆಯಲ್ಲಿ ಉತ್ಪಾದನೆ ಆಗುವ ಹಾಲು ಸಂಗ್ರಹಿಸಲು ಜಿಲ್ಲೆಯ ವಿವಿಧೆಡೆ ಶಿತಲೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕಾಮಧೇನು ಯೋಜನೆಯಡಿ ಶಹಾಪುರ ತಾಲ್ಲೂಕಿನ ದೋರನಳ್ಳಿ ಬಳಿ ಇರುವ ಹಾಲು ಶಿಥಿಲೀಕರಣ ಘಟಕದ ಪುನಶ್ಚೇತನ ಮಾಡ ಲಾಗಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳನ್ನೂ ಅಳವಡಿಸ ಲಾಗಿದೆ.

ಇದರ ಜೊತೆಗೆ ಸುರಪುರ ತಾಲ್ಲೂಕಿನ ಹುಣಸಗಿಯಲ್ಲೂ ಹಾಲು ಶಿಥಿಲೀಕರಣ ಘಟಕದ ಕಾಮಗಾರಿ ನಡೆದಿದೆ. ಗುರುಮಠ ಕಲ್‌ನಲ್ಲಿಯೂ ಘಟಕ ಸ್ಥಾಪಿಸಲು ಉದ್ದೇಶಿಸ ಲಾಗಿದ್ದು, ನಿವೇಶನದ ಸಮಸ್ಯೆ ಕಾಡುತ್ತಿದೆ. ನಿತ್ಯ ಸಂಗ್ರಹವಾಗುವ ಹಾಲನ್ನು ಈ ಘಟಕಗಳನ್ನು ಸಂಗ್ರಹಣೆ ಮಾಡಲಾಗುವುದು. ದೋರನಳ್ಳಿ ಘಟಕದಲ್ಲಿಯೇ ಪ್ಯಾಕಿಂಗ್‌ ವ್ಯವಸ್ಥೆ ಕೂಡ ಲಭ್ಯವಾಗಿದ್ದು, ಜಿಲ್ಲೆಯಲ್ಲಿ ಉತ್ಪಾದನೆ ಯಾಗುವ ಹಾಲನ್ನು ಜಿಲ್ಲೆಯಲ್ಲಿಯೇ ಮಾ ರಾಟ ಮಾಡುವ ವ್ಯವಸ್ಥಿತ ಯೋಜನೆಯನ್ನು ಹೊಂದಲಾಗಿದೆ.

ಇಷ್ಟೆಲ್ಲ ಸಿದ್ಧತೆಗಳು ನಡೆದಿದ್ದರೂ, ಹೈನು ಗಾರಿಕೆಗೆ ಸಾಲ ಮಾತ್ರ ಇನ್ನೂ ಸಿಗುತ್ತಿಲ್ಲ. ಹೀಗಾಗಿ ಹಾಲು ಉತ್ಪಾದನೆ ಇದುವರೆಗೆ ಆರಂಭವಾಗಿಲ್ಲ. ಬ್ಯಾಂಕ್‌ಗಳು ಕೂಡಲೇ ಹೈನು ಗಾರಿಕೆ ಸಾಲ ಸೌಲಭ್ಯ ನೀಡಬೇಕು. ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭಿಸಲು ಅವಕಾಶ ಮಾಡಿ ಕೊಡಬೇಕು ಎಂದು ವಾಲ್ಮೀಕಿ ಸಮಾಜ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ವೆಂಕೋಬ ದೊರೆ ಆಗ್ರಹಿಸುತ್ತಾರೆ.  

ಜಿಲ್ಲೆ ನೈಸರ್ಗಿಕವಾಗಿ ಸಂಪದ್ಭರಿತವಾಗಿದೆ. ನೀರಾವರಿ, ಉತ್ತಮ ಬೇಸಾಯ ಇದ್ದರೂ, ಹೈನುಗಾರಿಕೆ ಮಾತ್ರ ಶುರುವಾಗುತ್ತಿಲ್ಲ. ಬೆಲೆ ಕುಸಿತದಿಂದ ಕಂಗಾಲಾದ ರೈತಾಪಿ ವರ್ಗಕ್ಕೆ ಆಸರೆ ಆಗಬೇಕಾಗಿರುವ ಹೈನುಗಾರಿಕೆಯ ಆರಂಭಕ್ಕೆ ಸರ್ಕಾರ ಹಾಗೂ ಜಿಲ್ಲೆಯ ಆಡಳಿತ ವ್ಯವಸ್ಥೆ ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವುದು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ್‌ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT