ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳಿಗೆ ಚಿತ್ರಹಿಂಸೆ: ಮನಃಶಾಸ್ತ್ರಜ್ಞರೂ ಶಾಮೀಲು!

Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ನಡೆದ 9/11ರ ದಾಳಿಯ ಬಳಿಕ ಆರಂಭವಾದ ‘ಭಯೋತ್ಪಾದನಾ ವಿರೋಧಿ ಯುದ್ಧ’ದಲ್ಲಿ ಸೆರೆಸಿಕ್ಕ ಕೈದಿಗಳಿಗೆ ಚಿತ್ರಹಿಂಸೆ ನೀಡಿದ ವಿಚಾರ ಇದೀಗ ಭಾರಿ ವಿವಾದ ಸೃಷ್ಟಿಸಿದೆ. ಅಮೆರಿಕ ಮನಃಶಾಸ್ತ್ರೀಯ ಸಂಘ (ಎಪಿಎ) ಆಗಿನ ಅಧ್ಯಕ್ಷ ಜಾರ್ಜ್‌ ಡಬ್ಲ್ಯು. ಬುಷ್‌ ಆಡಳಿತದೊಂದಿಗೆ ಗೋಪ್ಯವಾಗಿ ಸೇರಿಕೊಂಡು ಕೈದಿಗಳಿಗೆ ಚಿತ್ರಹಿಂಸೆ ನೀಡುವಲ್ಲಿ ಸಹಕರಿಸಿತ್ತು, ನೈತಿಕ ಮತ್ತು ಕಾನೂನಿನ ಪರಿಧಿಯನ್ನು ಮೀರಿ ಅದು ವರ್ತಿಸಿತ್ತು ಎಂದು ಭಿನ್ನಮತೀಯ ಆರೋಗ್ಯ ವೃತ್ತಿಪರರು ಮತ್ತು ಮಾನವ ಹಕ್ಕು ಕಾರ್ಯಕರ್ತರು ಸಿದ್ಧಪಡಿಸಿದ ಹೊಸ ವರದಿ ತಿಳಿಸಿದೆ.

ತನಿಖಾ ಕಾರ್ಯಕ್ರಮದಲ್ಲಿ ಸಂಘದ ಪಾತ್ರದ ಬಗ್ಗೆ ಈ ವರದಿ ಬೆಳಕು ಚೆಲ್ಲುತ್ತದೆ. ಇರಾಕ್‌ನ ಅಬು ಗ್ರೈಬ್ ಜೈಲಿನಲ್ಲಿ ಅಮೆರಿಕದ ಸೇನಾ ಸಿಬ್ಬಂದಿ ಕೈದಿಗಳ ಮೇಲೆ ದೌರ್ಜನ್ಯ ನಡೆಸಿದ ಗ್ರಾಫಿಕ್ ಚಿತ್ರಗಳು 2004ರಲ್ಲಿ ಬಯಲಾಗಿದ್ದವು; ಬಳಿಕ ತನಿಖಾ ಪ್ರಕ್ರಿಯೆ ಮುಂದುವರಿಸಲು ಈ ಅಕ್ರಮವನ್ನು ಕಂಡುಕೊಳ್ಳಲಾಯಿತು ಎಂದು ಹಲವಾರು ಇ–ಮೇಲ್ ಸಂದೇಶಗಳನ್ನು ಆಧರಿಸಿ ಸಿದ್ಧಪಡಿಸಿರುವ ಈ ವರದಿ ಹೇಳಿದೆ.

‘ರಾಷ್ಟ್ರೀಯ ಭದ್ರತಾ ತನಿಖೆಯಲ್ಲಿ ಅಮೆರಿಕ ಮನಃಶಾಸ್ತ್ರೀಯ ಸಂಘದ ನೈತಿಕ ನೀತಿ ರೂಪಿಸುವುದಕ್ಕಾಗಿ ಸಿಐಎ, ಶ್ವೇತಭವನ ಮತ್ತು ರಕ್ಷಣಾ ಇಲಾಖೆಯ ಜತೆಗೆ ಎಪಿಎ ಗೋಪ್ಯವಾಗಿಸೇರಿಕೊಂಡಿತ್ತು, ಅದು ಅಂದಿನ ಸಿಐಎ ಚಿತ್ರಹಿಂಸೆ ಕಾರ್ಯಕ್ರಮದ ಕಾನೂನು ಮಾರ್ಗದರ್ಶಿಗೆ ಹೊಂದಿಕೊಳ್ಳುವಂತಿತ್ತು’ ಎಂದು ಈ ವರದಿಯ ಲೇಖಕರು ಕೊನೆಯಲ್ಲಿ ಬರೆದಿದ್ದಾರೆ.

ಬುಷ್ ಆಡಳಿತ ಅವಧಿಯಲ್ಲಿನ ತನಿಖಾ ಕಾರ್ಯಕ್ರಮಗಳಲ್ಲಿ ಆರೋಗ್ಯ ಕ್ಷೇತ್ರದ ವೃತ್ತಿಪರರ ಶಾಮೀಲಾತಿ ಮಹತ್ವ ಪಡೆದಿತ್ತು, ಯಾಕೆಂದರೆ ತನಿಖೆಯ ಹಂತದಲ್ಲಿ ಯಾವುದೇ ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತಿಲ್ಲ ಎಂದು ಕಾನೂನು ಇಲಾಖೆ ವಾದಿಸಲು ಈ ವೈದ್ಯರ ಸಹಕಾರ ಅಗತ್ಯವಾಗಿತ್ತು.

ಕೈದಿಗಳಿಗೆ ಚಿತ್ರಹಿಂಸೆ ಕೊಟ್ಟು ತನಿಖೆಗೆ ಒಳಪಡಿಸುವ ಅಮೆರಿಕದ ಗೋಪ್ಯ ವಿಧಾನ ಬಹಿರಂಗಗೊಂಡ ಬಳಿಕ ಅಂತಹ ತನಿಖೆಯನ್ನು ಸ್ಥಗಿತಗೊಳಿಸಲಾಯಿತು. ಆ ಬಗೆಯ  ತನಿಖೆ ಪರಿಣಾಮಕಾರಿಯಲ್ಲ ಮತ್ತು ದೌರ್ಜನ್ಯಕಾರಿಯಾದುದು ಎಂದು ಸೆನೆಟ್ ಇಂಟೆಲಿಜೆನ್ಸ್ ಕಮಿಟಿ ಕಳೆದ ವರ್ಷ ತನ್ನ ಸುದೀರ್ಘ ವರದಿಯಲ್ಲಿ ತಿಳಿಸಿತ್ತು.

ಸರ್ಕಾರದ ಕೃತ್ಯದೊಂದಿಗೆ ಎಪಿಎ ಶಾಮೀಲಾಗಿತ್ತು ಎಂಬ ಆರೋಪವನ್ನು ಅದರ ವಕ್ತಾರೆ ರೆಯಾ ಫಾರ್ಬೆರ್‌ಮನ್ ಅಲ್ಲಗಳೆಯುತ್ತಾರೆ. ಎಪಿಎ ಮತ್ತು ಬುಷ್ ಆಡಳಿತದ ನಡುವೆ ಯಾವುದೇ ಸಮನ್ವಯ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಹಲವಾರು ತನಿಖೆಗಳಿಗೆ ಸಂಬಂಧಿಸಿದಂತೆ ಬುಷ್ ಆಡಳಿತ ಮನೋವೈದ್ಯರ ಬದಲಿಗೆ ಮನಃಶಾಸ್ತ್ರಜ್ಞರನ್ನು ಹೆಚ್ಚಾಗಿ ಅವಲಂಬಿಸಿತ್ತು. ಮನಃಶಾಸ್ತ್ರಜ್ಞರ ಪಾಲ್ಗೊಳ್ಳುವಿಕೆ ತನಿಖೆಗೆ ಪೂರಕ ಎಂದು 2006ರಲ್ಲಿ ಪೆಂಟಗನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದರು. ಮನುಷ್ಯರ ಗುಣಸ್ವಭಾವ ಅರಿತುಕೊಳ್ಳುವ ಪ್ರಯತ್ನದಲ್ಲಿ ಮನಃಶಾಸ್ತ್ರಜ್ಞರ ಪಾತ್ರ ತನಿಖೆಗೆ ಪೂರಕವಾಗಿತ್ತು ಎಂದು ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ರಕ್ಷಣಾ ಇಲಾಖೆಯ ಸಹಾಯಕ ಕಾರ್ಯದರ್ಶಿ ಡಾ. ವಿಲಿಯಂ ವಿಂಕೆನ್‌ವೆರ್ಡರ್ ಹೇಳಿದ್ದರು. ಕ್ಯೂಬಾದ ಗ್ವಾಂಟನಾಮೊ ಬೇ ಜೈಲಿನಲ್ಲಿ ಪೆಂಟಗನ್, ಮನೋವೈದ್ಯರ ಬದಲಿಗೆ ಮನಃಶಾಸ್ತ್ರಜ್ಞರನ್ನು ಏಕೆ ಹೆಚ್ಚು ಅವಲಂಬಿಸಿತ್ತು ಎಂಬುದಕ್ಕೆ ಅವರು ಈ ವಿವರಣೆ ನೀಡಿದ್ದರು.

2004ರ ಜೂನ್ ವೇಳೆಗೆ ಬುಷ್ ಆಡಳಿತದ ಚಿತ್ರಹಿಂಸೆ ಕಾರ್ಯಕ್ರಮ ಕಷ್ಟಕ್ಕೆ ಸಿಲುಕಿಕೊಂಡಿತ್ತು. ಅಬುಗ್ರೈಬ್ ಕಾರಾಗೃಹದಲ್ಲಿ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಸೆರೆಸಿಕ್ಕ ಕೈದಿಗಳನ್ನು ಅಮೆರಿಕ ನಡೆಸಿಕೊಳ್ಳುವ ಬಗೆ ಬಹಿರಂಗಗೊಂಡ ಬಳಿಕ ಭಾರಿ ದೊಡ್ಡ ಪ್ರಮಾಣದ ಚರ್ಚೆ ಆರಂಭವಾಗಿತ್ತು. ಸಿಐಎ ನಂತರ ಸ್ಲೀಪ್ ಡಿಪ್ರಿವೇಷನ್ ಅಂಡ್ ವಾಟರ್ ಬೋರ್ಡಿಂಗ್ ಅಥವಾ ಸಿಮ್ಯುಲೇಟೆಡ್‌್ ಡ್ರೌನಿಂಗ್ ಎಂಬ ಸುಧಾರಿತ ತನಿಖಾ ಕಾರ್ಯಕ್ರಮ ಆರಂಭಿಸಿತ್ತು. ಈ ಕಾರ್ಯಕ್ರಮಗಳು ನ್ಯಾಯ ಸಮ್ಮತವೇ ಎಂಬ ಬಗ್ಗೆ ಶಂಕೆ ವ್ಯಕ್ತವಾದುದು ಮಾತ್ರವಲ್ಲದೆ, ಕಾಂಗ್ರೆಸ್ ಮತ್ತು ಮಾಧ್ಯಮಗಳಲ್ಲಿ ಇದರ ಬಗ್ಗೆ ಚರ್ಚೆಗಳು ನಡೆದಿದ್ದವು.

ಇದರಿಂದ ವಿಚಲಿತರಾದ ಸಿಐಎ ನಿರ್ದೇಶಕ ಜಾರ್ಜ್‌ ಜೆ. ಟೆನೆಟ್ ಅವರು 2004ರ ಜೂನ್ 4ರಂದು ಏಜೆನ್ಸಿಯ ನೂತನ ತನಿಖಾ ಕ್ರಮಗಳನ್ನು ರದ್ದುಪಡಿಸುವ ಗೋಪ್ಯ ಆದೇಶಕ್ಕೆ ಸಹಿ ಹಾಕಿದ್ದರು, ಜತೆಗೆ ಬುಷ್ ಆಡಳಿತದ ಬೆಂಬಲ ಇರುವ ನೀತಿ ಮರುಪರಿಶೀಲನೆ ನಡೆಯಬೇಕು ಎಂದು ಕೋರಿದ್ದರು. ಅವರು ಅಂದು ಈ ನಿಟ್ಟಿನಲ್ಲಿ ಬರೆದ ಗೋಪ್ಯ ಸಂದೇಶ ಇದೀಗ ಬಯಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕ ಮನಃಶಾಸ್ತ್ರೀಯ ಸಂಘ ಪ್ರಮುಖ ಪಾತ್ರ ವಹಿಸಿದ್ದರಿಂದ ವಿವಾದಿತ ತನಿಖಾ ಕಾರ್ಯಕ್ರಮ ಮುಂದುವರಿಯುವುದು ಸಾಧ್ಯವಾಯಿತು ಎಂದು ಇದೀಗ ಟೀಕಾಕಾರರು ವ್ಯಾಖ್ಯಾನಿಸುತ್ತಿದ್ದಾರೆ.

2004ರ ಜೂನ್‌ ಆರಂಭದಲ್ಲಿ ಸಂಘದ ಹಿರಿಯ ಅಧಿಕಾರಿಯೊಬ್ಬರು ಆಯ್ದ ಮನಃಶಾಸ್ತ್ರಜ್ಞರು ಮತ್ತು ಗುಣಸ್ವಭಾವಗಳ ಅಧ್ಯಯನ  ನಡೆಸಿದ ವಿಜ್ಞಾನಿಗಳಿಗೆ ಆಹ್ವಾನವೊಂದನ್ನು ಕಳುಹಿಸಿದರು. ತನಿಖೆಯಲ್ಲಿ ಮನಃಶಾಸ್ತ್ರಜ್ಞರ ಪಾತ್ರದ ಬಗ್ಗೆ ಚರ್ಚಿಸುವುದೇ ಈ ಆಹ್ವಾನಕ್ಕೆ ಮುಖ್ಯ ಕಾರಣವಾಗಿತ್ತು. ಜುಲೈನಲ್ಲಿ ಸಿಐಎನಲ್ಲಿನ ಮನಃಶಾಸ್ತ್ರಜ್ಞರು ಸಂಘದ ಅಧಿಕಾರಿಗಳನ್ನು ಭೇಟಿ ಮಾಡಿದರು. ಸಂಘದ ಸದಸ್ಯರು ತನಿಖಾ ಕಾರ್ಯಕ್ರಮದಲ್ಲಿ ಶಾಮೀಲಾಗುವುದು ಒಪ್ಪತಕ್ಕ ವಿಷಯ ಎಂದು ಮರು ವರ್ಷ ಸಂಘ ಮಾರ್ಗಸೂಚಿ ಹೊರಡಿಸಿತು.

2003ರಲ್ಲಿ ರವಾನೆಯಾದ ಇ– ಮೇಲ್‌ ಒಂದು ಸಿಐಎಯ ಹಿರಿಯ ಅಧಿಕಾರಿಯೊಬ್ಬರು ಎಪಿಎದ ಹಿರಿಯ ಅಧಿಕಾರಿಯೊಬ್ಬರಿಗೆ ರವಾನಿಸಿದ ಮಹತ್ವದ ಸಂದೇಶದ ಬಗ್ಗೆ ಬೆಳಕು ಚೆಲ್ಲುತ್ತದೆ. ಜಗತ್ತಿನೆಲ್ಲೆಡೆ ಇರುವ ಸಿಐಎ ಗೋಪ್ಯ ಜೈಲುಗಳಲ್ಲಿ ಸುಧಾರಿತ ತನಿಖಾ ವಿಧಾನಗಳನ್ನು ಅಭಿವೃದ್ಧಿಪಡಿಸಿದ ಇಬ್ಬರು ಖಾಸಗಿ ಗುತ್ತಿಗೆದಾರರಾದ ಜೇಮ್ಸ್‌ ಮೈಕೆಲ್‌ ಮತ್ತು ಬ್ರೂಸ್‌ ಜೆಸ್ಸೆನ್‌ ಅವರ ಕೆಲಸದ ಬಗ್ಗೆ ಇ–ಮೇಲ್‌ನಲ್ಲಿ ತಿಳಿಸಲಾಗಿತ್ತು. ‘ಈ ಗುತ್ತಿಗೆದಾರರು ಕೆಲವು ವಿಶೇಷ ಕೆಲಸಗಳನ್ನು ವಿಶೇಷ ವ್ಯಕ್ತಿಗಳಿಗಾಗಿ, ವಿಶೇಷ ಸ್ಥಳಗಳಲ್ಲಿ ಮಾಡುತ್ತಿದ್ದಾರೆ’ ಎಂದು ವಿವರಿಸಲಾಗಿತ್ತು.

ಇದಾಗಿ ದಶಕದ ಬಳಿಕ ಸಂಘದ ಪಾತ್ರದ ಬಗ್ಗೆ ಶಂಕೆ ಆರಂಭವಾಗಿದೆ. ತನಿಖಾ ಕಾರ್ಯಕ್ರಮದಲ್ಲಿ ಇಂತಹ ಪಾತ್ರದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಸಂಘದ ಆಡಳಿತ ಮಂಡಳಿ ಕಳೆದ ನವೆಂಬರ್‌ನಲ್ಲಿ ಆದೇಶ ನೀಡಿದೆ. ಶಿಕಾಗೊದ ವಕೀಲ ಡೇವಿಡ್‌ ಹಾಫ್‌ಮನ್‌ ಅವರ ನೇತೃತ್ವದಲ್ಲಿ ಇದೀಗ ತನಿಖೆ ನಡೆಯುತ್ತಿದೆ. ಈ ವರ್ಷದ ಬೇಸಿಗೆಯ ಅಂತ್ಯದ ವೇಳೆಗೆ ತನಿಖಾ ವರದಿ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಈಗ ವರದಿ ಸಿದ್ಧಪಡಿಸಿದ ಮೂವರು ಲೇಖಕರು ಅಮೆರಿಕ ಮನಃಶಾಸ್ತ್ರೀಯ ಸಂಘದ ಕಾರ್ಯಚಟುವಟಿಕೆಗಳನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದವರು. ಅವರೆಂದರೆ ಸ್ಟೀಫನ್‌ ಸೋಲ್ಡ್‌್ಜ, ಸ್ಟೀವನ್‌ ರೈಸ್ನೆರ್‌ ಮತ್ತು ನಥೇನಿಯಲ್‌ ರೇಮಂಡ್‌. ಇವರು ಪ್ರಸಿದ್ಧ ಮನಃಶಾಸ್ತ್ರಜ್ಞರಾಗಿರುವುದು ಮಾತ್ರವಲ್ಲದೆ, ಚಿತ್ರಹಿಂಸೆ ನೀಡಿ ಮಾನವ ಹಕ್ಕನ್ನು ಉಲ್ಲಂಘಿಸುವವರ ವಿರುದ್ಧ ಆಂದೋಲನ ಕೈಗೊಂಡವರು.

‘2004 ಮತ್ತು 2005ರಲ್ಲಿ ಸಿಐಎಯ ಚಿತ್ರಹಿಂಸೆ ಕಾರ್ಯಕ್ರಮಕ್ಕೆ ಬುಷ್ ಆಡಳಿತದ ಒಳಗೆ ಮತ್ತು ಹೊರಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಎದುರಾಗುತ್ತಿದ್ದ ಕಾನೂನು ಬೆದರಿಕೆಗಳನ್ನು ಎಪಿಎ ನೇರವಾಗಿ ನಿಭಾಯಿಸುತ್ತಿತ್ತು. ಕೆಲವು ಪ್ರಸಂಗಗಳಲ್ಲಿ ಸಂಘದ ನೀತಿ ನಿರೂಪಣೆಯನ್ನೇ ರೂಪಿಸಿಬಿಡಲು ಬುಷ್‌ ಆಡಳಿತದ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು’ ಎಂದು ಸ್ಟೀಫನ್‌ ಸೋಲ್ಡ್ಜ್ ಬರೆದಿದ್ದಾರೆ.

ಆದರೆ ಈ ಎಲ್ಲ ಟೀಕೆಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವ ಸಂಘದ ವಕ್ತಾರೆ ಫಾರ್ಬೆರ್‌ಮನ್‌ ‘ಹಾಫ್‌ಮನ್‌ ಅವರ ತನಿಖೆ ಪೂರ್ಣಗೊಳ್ಳಲಿ. ಸ್ವತಂತ್ರ ಪರಿಶೀಲನೆ ಹಾಗೂ ತನಿಖೆಯಿಂದ ಹೊರಬರುವ ಅಂಶ ಗಳನ್ನು ನಾವು ಕಾತರದಿಂದ ಕಾಯುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಬೆಳಕಿಗೆ ಬಂದುದು ಹೀಗೆ
ರಾಂಡ್‌ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡಿ, ಬಳಿಕ ಅಮೆರಿಕದ ರಕ್ಷಣಾ ಗುತ್ತಿಗೆದಾರರ ಬಳಿ ಕಾರ್ಯ ನಿರ್ವಹಿಸಿದ ‘ಗುಣಸ್ವಭಾವ ವಿಜ್ಞಾನ ಸಂಶೋಧಕ’ ಸ್ಕಾಟ್‌ ಗೆರ್‌ವೆರ್‌ 2008ರಲ್ಲಿ ನಿಧನರಾದರು. ಅವರು ರವಾನಿಸಿದ ಹಲವಾರು ಇ –ಮೇಲ್‌ಗಳನ್ನು ಪರಿಶೀಲಿಸಿದಾಗ, ಬುಷ್‌ ಆಡಳಿತ ಮತ್ತು ಎಪಿಎ ನಡುವಿನ ಸಖ್ಯದ ಮಾಹಿತಿ ಬಹಿರಂಗವಾಯಿತು.

ಸೈಕಲಾಜಿಕಲ್‌ ಎಥಿಕ್ಸ್‌ ಅಂಡ್ ನ್ಯಾಷನಲ್‌ ಸೆಕ್ಯುರಿಟಿ (ಪೆನ್ಸ್‌) ಕಾರ್ಯಪಡೆಯ ವರದಿಗಳ ಮರ್ಮವೇನು ಎಂಬುದು ಅದುವರೆಗೆ ಕಗ್ಗಂಟಾಗಿಯೇ ಇತ್ತು. ಗೆರ್‌ವೆರ್‌ ಅವರ ಇ –ಮೇಲ್‌ ಸಂದೇಶಗಳ ಅಧ್ಯಯನ ನಡೆಸಿದ ಬಳಿಕ, ಕೈದಿಗಳಿಗೆ ನೀಡಿದ ಚಿತ್ರಹಿಂಸೆಯಲ್ಲಿ ಅಮೆರಿಕ ಮನಃಶಾಸ್ತ್ರೀಯ ಸಂಘದ ಸದಸ್ಯರು ವಹಿಸಿದ ಪಾತ್ರ ತಿಳಿಯಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT