ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ತುಂಬುವ ಕಿರು ಧಾನ್ಯ

ಕೊನರು–10
Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಿರು ಧಾನ್ಯಗಳ ಉಲ್ಲೇಖ ನಮ್ಮ ಪೌರಾಣಿಕ ಕಥೆಗಳಲ್ಲಿ ಕಂಡು ಬರುವವು. ಕಿರು ಧಾನ್ಯಗಳಿಗೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಪೋರ್ಚುಗೀಸ್ ನಾವಿಕರು ತಮ್ಮೊಡನೆ ಕಿರು ಧಾನ್ಯಗಳನ್ನು ಕೊಂಡೊಯ್ಯುತ್ತಿದ್ದು, ಅದರಿಂದ ತಯಾರಿಸಿದ ವಿವಿಧ ಪದಾರ್ಥಗಳನ್ನು ತಂದು ಜೀವಿಸುತ್ತಿದ್ದ ಇತಿಹಾಸವಿದೆ. ಆದರೆ ಕಾಲಘಟ್ಟದಲ್ಲಿ ಈ ಧಾನ್ಯ ನೇಪಥ್ಯದ ಹಾದಿ ಹಿಡಿಯುತ್ತಿದೆ.

ಇಂಥ ಕಿರುಧಾನ್ಯವನ್ನು ಬೆಳೆದು ಅದರ ಉಳಿವಿಗೆ ಸಹಕರಿಸುತ್ತಿದ್ದಾರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಜೋಯಿಸರಹರಳ್ಳಿಯ ರೈತ ಸಂಗಪ್ಪ ಬಣಕಾರ. ಅವರ ತೋಟ ಕಿರುಧಾನ್ಯಗಳ ಕಣಜದಂತೆಯೇ ಕಾಣುತ್ತದೆ. ಒಂದೆಡೆ ಬಾರ್ಸಿ ಜೋಳ, ನವಣೆ, ಸಜ್ಜೆ, ಬರಗ, ಊದಲು ತೆನೆಯಾಡುತ್ತಿದ್ದರೆ, ಅದರ ಪಕ್ಕದಲ್ಲಿಯೇ ತೊಗರಿ, ರಾಗಿ, ಸಾಸಿವೆ, ಕಡಲೆ, ಮಡಿಕಿ ಧಾನ್ಯಗಳು ಮೈದುಂಬಿ ನಿಂತಿವೆ.

ಪೌಷ್ಟಿಕಾಂಶಗಳ ಆಗರವಾಗಿರುವ ಈ ಕಿರುಧಾನ್ಯಗಳೇ ಸಂಗಪ್ಪನವರ ಬದುಕಿನ ಸಿರಿ ಕೂಡ. ಕಿರು ಧಾನ್ಯಗಳಿಗೆ ಹುಳುಗಳ ಕಾಟವಿಲ್ಲ. ಏಕೆಂದರೆ ಅವುಗಳ ಸಿಪ್ಪೆ ದಪ್ಪದಾಗಿರುತ್ತದೆ. ಇದರಿಂದ ಹುಳುಗಳಿಗೆ ಕಾಳು ತಿನ್ನುವುದು ಕಷ್ಟ. ಹೀಗೆ ಕೀಟ ಮತ್ತು ರೋಗ ಬಾಧೆಯಿಂದ ಮುಕ್ತವಾಗಿ, ರಾಸಾಯನಿಕಗಳ ಸೋಂಕಿಲ್ಲದೇ, ನಿಸರ್ಗಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡದ ಈ ಧಾನ್ಯಗಳು ಇಲ್ಲಿ ಸಮೃದ್ಧವಾಗಿವೆ.

‘ಬರಗಾಲವನ್ನು ಎದುರಿಸುತ್ತಲೇ ಅರಳುವುದು ಕಿರು ಧಾನ್ಯಗಳ ವಿಶೇಷ ಗುಣ. ಪ್ರತಿ ಕಿರು ಧಾನ್ಯದ ಒಡಲಲ್ಲಿ ಹತ್ತಾರು ಪೋಷಕಾಂಶಗಳಿವೆ. ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ ಹಾಗೂ ಖನಿಜಗಳನ್ನು ಇವು ಹೊಂದಿವೆ. ಇಂಥ ಸಿರಿ ಸಂಪತ್ತು ನಮ್ಮ ಪೂರ್ವಜರ ಬಳುವಳಿ. ಅದನ್ನೇ ನಾನೂ ಮುಂದುವರಿಸಿಕೊಂಡು ಬಂದಿದ್ದೇನೆ’ ಎಂದು ಹೇಳುತ್ತಾರೆ ಸಂಗಪ್ಪ.

‘ಇಂದು ಕೃಷಿ ಅವಲಂಬಿತ ಕುಟುಂಬಗಳು ಅಭಿವೃದ್ಧಿ ಕಾಣಲು ಹೆಣಗಾಡುತ್ತಿವೆ. ಮುಖ್ಯ ಬೆಳೆಯೊಂದೇ ಜೀವನಾಧಾರವಾಗಿ ಉಳಿಯುವುದು ಸಾಧ್ಯವಾಗಲಾರದು, ಸಾವಯವ ಕೃಷಿ ಕೈಗೊಂಡು ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಆಗ ಕೃಷಿ ಹೆಚ್ಚು ಅರ್ಥಪೂರ್ಣವಾಗುತ್ತದೆ’ ಎಂಬುದು ಅವರ ಅನುಭವದ ನುಡಿ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ರೈತರು ಏನೆಲ್ಲ ಏಳು ಬೀಳುಗಳನ್ನು ಕಂಡಿದ್ದಾರೆ.

ಹೆಚ್ಚಿನ ಲಾಭದಾಸೆಗೆ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಬಿಟಿ ಹತ್ತಿ ಮತ್ತು ಸೀಡ್ಸ್‌ ಉತ್ಪಾದನೆಗೆ ಮುಂದಾಗಿ ಭೂಮಿಗೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸಿ ಭೂಮಿಯನ್ನು ಬಂಜರಾಗಿಸಿದ್ದಾರೆ. ಆದರೆ ಸಂಗಪ್ಪನವರು ರಾಸಾಯನಿಕ ಮತ್ತು ಕ್ರಿಮಿನಾಶಕಗಳನ್ನು ಬಳಸದೇ ನಿರಂತರವಾಗಿ ಸಾವಯವ ಕೃಷಿಯಿಂದಲೇ ಬರದಲ್ಲಿಯೂ ಎಕರೆಗೆ 8 ರಿಂದ 10 ಕ್ವಿಂಟಾಲ್‌ ಬಾರ್ಸಿ ಜೋಳವನ್ನು ಬೆಳೆದಿದ್ದಾರೆ. ಸಾಂಪ್ರದಾಯಿಕ ಕೃಷಿಯನ್ನೇ ಮುಂದುವರೆಸಿಕೊಂಡು ಹೋಗ ಬೇಕೆಂದು ಇತರ ರೈತರಿಗೂ ತರಬೇತಿ ನೀಡುತ್ತಾ ರೈತರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುತ್ತಿದ್ದಾರೆ.

ಬಿಎಸ್‌ಎಂಆರ್‌ 736 ತೊಗರಿ
ಸಂಗಪ್ಪನವರು ಅಧಿಕ ಇಳುವರಿ ನೀಡುವ ಬಿಎಸ್‌ಎಂಆರ್‌ 736 ತಳಿಯ ತೊಗರಿ ಬೆಳೆಯುತ್ತಿ ದ್ದಾರೆ. ಇದನ್ನು ನಾಟಿ ಮಾಡಿ ಬೆಳೆಯುವುದರಿಂದ ಹೆಚ್ಚು ಇಳುವರಿಯನ್ನು ಪಡೆಯುತ್ತಿದ್ದಾರೆ. ಒಂದು ಗಿಡದಿಂದ 800 ಗ್ರಾಂ ತೊಗರಿ ಬರುತ್ತದೆ. ಕಾಯಿ ಬಿಡುವ ಮೊದಲು ಎರಡು ಮೂರು ಬಾರಿ ಗಿಡ ಚಿವುಟಿ ಕಸಿ ಮಾಡಬೇಕು. ಇವರ ತೋಟ ಮಾತ್ರವಲ್ಲದೇ ಮನೆ ಕೂಡ ಕಿರುಧಾನ್ಯಗಳ ಸಂಗ್ರಹಾಲಯ.

ಏಕೆಂದರೆ ಸಂಗಪ್ಪ ಬಣಕಾರ ಸೊಸೆ ಸುನೀತಾ ಬಣಕಾರ ಮನೆಯಲ್ಲಿಯೇ ‘ಮಿಲೆಟ್ಸ್‌ (ಕಿರುಧಾನ್ಯ) ಸಂಸ್ಕರಣ ಘಟಕ’ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದ ‘ಇನ್ಸಿಂಪ್‌’ ಯೋಜನೆಯಡಿ ಈ ಕೇಂದ್ರ ಆರಂಭವಾಗಿದೆ. ಅವರು ಮನೆಯಲ್ಲಿಯೇ ಹಿಟ್ಟು, ನುಚ್ಚು, ಖಾರ ಹಾಕುವ ಮತ್ತು ಪ್ಯಾಕಿಂಗ್‌ ಮಾಡುವ, ಕಾಳುಗಳನ್ನು ಬೇರ್ಪಡಿಸುವ ಯಂತ್ರ ಇಟ್ಟುಕೊಂಡಿದ್ದಾರೆ. ಈ ಮೂಲಕ ಕಿರುಧಾನ್ಯಗಳ ವಿವಿಧ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಧಾರವಾಡ ಕೃಷಿ ಮೇಳದಲ್ಲಿ ಭಾಗವಹಿಸಿ ಮಹಿಳಾ ಕೃಷಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಸಂಪರ್ಕಕ್ಕೆ 9742564764.

ಆರೋಗ್ಯ ಗಟ್ಟಿಮುಟ್ಟು
71 ವರ್ಷದ ಸಂಗಪ್ಪನವರು ತೋಟಕ್ಕಿಳಿದರೆ ಹರೆಯದ ಹುಡುಗನಂತೆ ಕೆಲಸ ನಿರ್ವಹಿಸುತ್ತಾರೆ. ಇವರಲ್ಲಿನ ಈ ಶಕ್ತಿಗೆ ಕಾರಣ ಇದೇ ಸಿರಿಧಾನ್ಯಗಳು. ಏಕೆಂದರೆ ತಮ್ಮ ತೋಟದಲ್ಲಿ ಬೆಳೆದ ಜೋಳ ಮತ್ತು ಸಜ್ಜೆಯಿಂದ ಮಾಡಿದ ರೊಟ್ಟಿ, ರಾಗಿ, ಜೋಳದ ಅಂಬಲಿ, ರಾಗಿ ಮುದ್ದೆ ಇವಿಷ್ಟು ಇವರ ನಿತ್ಯದ ಆಹಾರ.

ಇದನ್ನು ಬಿಟ್ಟು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕಾಳು– ಕಡಿ, ಆಹಾರ ಪದಾರ್ಥ ಖರೀದಿ ಮಾಡುವುದಿಲ್ಲ. ಇದರಿಂದಾಗಿಯೇ ಗಟ್ಟಿಮುಟ್ಟಾಗಿರುವ ಇವರು ಸದಾ ಉತ್ಸಾಹದಲ್ಲಿಯೇ ಕೆಲಸ ನಿರ್ವಹಿಸುತ್ತಾರೆ. ‘ಬೀದರ್‌, ಗುಲ್ಬರ್ಗ, ವಿಜಾಪುರ, ಬೆಳಗಾವಿ ಸೇರಿದಂತೆ ಆಸುಪಾಸಿನ ಜಿಲ್ಲೆಗಳಲ್ಲಿ ಬಾರ್ಸಿ ಜೋಳಕ್ಕೆ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ ಇತರೆ ಜೋಳಕ್ಕಿಂತ ಇವುಗಳಿಗೇ ಹೆಚ್ಚು ಧಾರಣೆಯಿದೆ.

ಇತ್ತೀಚಿನ ದಿನಗಳಲ್ಲಿ ಕಿರುಧಾನ್ಯಗಳ ಬಗ್ಗೆ ಜಾಗೃತಿ ಹೆಚ್ಚಾಗಿರುವ ಕಾರಣ, ಇದರ ಬೇಡಿಕೆಯೂ ಹೆಚ್ಚಿದೆ’ ಎನ್ನುತ್ತಾರೆ ಅವರು. ಬಾರ್ಸಿ ಜೋಳದ ರೊಟ್ಟಿ, ಅಂಬಲಿ, ಮುದ್ದೆ ಹಲವು ರೋಗಳಿಗೆ ರಾಮಬಾಣ. ಸಕ್ಕರೆ ಕಾಯಿಲೆ, ಹೃದಯಾಘಾತಕ್ಕೆ ಒಳಗಾದವರಿಗೆ ಬಾರ್ಸಿ ಜೋಳದ ಬಿಸ್ಕೆಟ್‌ಗಳನ್ನಾಗಿ ಮಾಡಿ ಕೊಡುತ್ತಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾರ್ಸಿ ಜೋಳ ಬೆಳೆದು ಆದಾಯ ಹೆಚ್ಚಿಸಿಕೊಳ್ಳಬಹುದು. ಎಕರೆಗೆ 8 ರಿಂದ 10 ಕ್ವಿಂಟಾಲ್‌ ಜೋಳ ಬರುತ್ತದೆ, ಇತರೆ ಜೋಳಕ್ಕಿಂತ ಹೆಚ್ಚಿನ ಬೇಡಿಕೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT