ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಹಿಡಿದು ನಡೆಸಿದ ಸಖಿ...

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಎಲ್ಲಿಂದ ಶುರು ಮಾಡಲಿ?
ಗಣಿ ನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಅಂಟಿಕೊಂಡಿರುವ ನಾಗೇನಹಳ್ಳಿಯ ಅಂಬೇಡ್ಕರ್‌ ಕಾಲೊನಿ ಮೂಲೆಯ ಪುಟ್ಟ ಮನೆಯಲ್ಲಿ ಬೆಳೆದ ಮೂವರು ಹೆಣ್ಣು ಮಕ್ಕಳ ನಡುವೆ ಕುಳಿತ ಹುಲಿಗಮ್ಮನಿಗೆ ಗೊಂದಲ ಕಾಡಿತು. ಆಕೆಗೂ ಮುಂಚೆ ದೇವದಾಸಿಯಾಗಿದ್ದ ತಾಯಿ ರಂಗಮ್ಮ ಅಲ್ಲೇ ಮುದುಡಿ ಕುಳಿತಿದ್ದರು. ಆಕೆಯ ಐವರು ಹೆಣ್ಣು ಮಕ್ಕಳ ಪೈಕಿ ಮೂವರು ದೇವದಾಸಿಯರು. ಆ ಮೂವರಲ್ಲಿ ಹುಲಿಗೆಮ್ಮ ಒಬ್ಬರು.

ಅವರದು ನೋವಿನ ಜೀವನ. ದೇವದಾಸಿ ಮಹಿಳೆಯೊಬ್ಬರು ನೆನಪು ಬಗೆಯುವುದು ಸುಲಭವಲ್ಲ. ‘ನಾನು ಹೇಳ್ತೀನಿ’ ಎಂದು ಹುಲಿಗೆಮ್ಮನ ದೊಡ್ಡ ಮಗಳು, ಇಪ್ಪತ್ತನಾಲ್ಕರ ಹರೆಯದ  ಆ ಯುವತಿ ಕತೆ ಆರಂಭಿಸಿದಳು. ಗಂಗಾವತಿಯ ಮಾದಿಗರ ಓಣಿಯಲ್ಲಿದ್ದ ಹುಲಿಗೆಮ್ಮ ಟೈಲರಿಂಗ್, ಕೃಷಿ ಕೂಲಿ ಮಾಡಿದರೆ, ಗಂಡ ಸಗರಪ್ಪ ಸೆಕ್ಯುರಿಟಿ ಗಾರ್ಡ್‌ ಆಗಿದ್ದರು. ದುಡಿಮೆ ಸಾಲದ ಮನೆಯ ಐವರು ಚಿಕ್ಕ ಮಕ್ಕಳು ಸೇರಿ ಏಳು ಮಂದಿ. ಚಿಣ್ಣರು ಬೆಳಿಗ್ಗೆಯೇ ಎದ್ದು ಸವೆದ ಟೈರುಗಳನ್ನು ಹುಡುಕುತ್ತಿದ್ದರು. ಅದನ್ನು ಕೊಟ್ಟರೆ ಭಟ್ಟಿಯವರು ಮಂಡಾಳು ಕೊಡುತ್ತಿದ್ದರು. ಅದನ್ನು ತಂದು ಎಲ್ಲರೂ ತಿನ್ನುತ್ತಿದ್ದರು.

ಗಂಗಾವತಿಯಲ್ಲಿ ಕಷ್ಟವಾಯಿತು ಜೀವನ. ಮಕ್ಕಳು ಶಾಲೆ ಬಿಟ್ಟರು. ಬಳ್ಳಾರಿಯಲ್ಲಿ ಗಣಿಗಳಲ್ಲಿ ಕೆಲಸ ಸಿಗುತ್ತದೆ ಎಂದು ಎಲ್ಲರೂ ವಲಸೆ ಬಂದರು. ಕಬ್ಬಿಣದ ಕಲ್ಲನ್ನು ಆರಿಸಿ ಕುಟ್ಟುವ ಕೆಲಸ. ನೀರಿಲ್ಲ. ಬರೀ ದೂಳು. ಅವಮಾನ. ಮದ್ಯವ್ಯಸನಿ ತಂದೆ ಮನೆ ತೊರೆದ ಬಳಿಕ ಪುಂಡ–ಪೋಕರಿಗಳ ಕೆಟ್ಟ ಕಣ್ಣು.

ಕುಟುಂಬ ಗಂಗಾವತಿಗೆ ವಾಪಸಾದರೂ, ರೂಪ ಹೊಸಪೇಟೆಯಲ್ಲೇ ಪ್ರಥಮ ಪಿಯುಸಿ ಓದುತ್ತಿದ್ದಾಗ ಕಾಳಮ್ಮಕ್ಕ ಅಲ್ಲೇ ‘ಸಖಿ’ ಸಂಸ್ಥೆಯನ್ನು ಪರಿಚಯಿಸಿದರು. ಅಲ್ಲಿಂದ ಬದಲಾಯಿತು ಜೀವನ. ತಂಗಿಯರನ್ನು ಶಾಲೆ ಬಿಡಿಸದೆ ಓದಿಸುವ ಮೊದಲ ಕೆಲಸ. ಶಿಕ್ಷಣವೇ ಸಂಘಟನೆ, ಹೋರಾಟಕ್ಕೆ ದಾರಿ ಎಂದು ಅಂಬೇಡ್ಕರ್‌ ಹೇಳಿಲ್ಲವೇ.

ಸಖಿಯ ಜೊತೆ ಪಯಣ...
‘ಸಖಿ’ಯೇ ರೂಪ ಮತ್ತು ಅವರ ತಂಗಿ ಶಿಲ್ಪಗೆ ಆಶ್ರಯ ನೀಡಿ ಅವರನ್ನು ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿದ್ದ ‘ಮಲೆಗಳಲ್ಲಿ ಮದುಮಗಳು’ ನಾಟಕದ ತರಬೇತಿಗೆ ಸೇರಿಸಿತು. ಕಂಪ್ಯೂಟರ್‌, ಇಂಗ್ಲಿಷ್‌ ತರಗತಿ, ವ್ಯಕ್ತಿತ್ವ ವಿಕಸನ ತರಬೇತಿಗಳು ದೊರಕಿದವು. ಕೊನೆ ಮಗಳು ಅರ್ಪಿತಾಗೂ ‘ಸಖಿ’ಯ ಸಖ್ಯ ದೊರೆಯಿತು. ಎಲ್ಲರ ಶಿಕ್ಷಣವೂ ಮುಂದುವರಿಯಿತು. ತಾಯಿ ಹುಲಿಗೆಮ್ಮನಿಗೂ ‘ಸಖಿ’ ಆಯಾ ಕೆಲಸವನ್ನು ಕೊಡಿಸಿತು.  ಅರ್ಪಿತಾ ಮತ್ತು ಶಿಲ್ಪಾ ಈಗ ಹೊಸಪೇಟೆಯಲ್ಲಿ ಕ್ರಮವಾಗಿ ದ್ವಿತೀಯ ಪಿಯುಸಿ ಮತ್ತು ಬಿ.ಎ ಓದುತ್ತಿದ್ದಾರೆ.

ಬಿ.ಎ. ಓದಿರುವ ರೂಪಾ ಹೈದರಾಬಾದ್‌ನ ಟಾಟಾ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸ್‌ನಲ್ಲಿ ಎಂಎಸ್‌ಡಬ್ಲ್ಯು ಓದುವ ಆಸೆಯಲ್ಲಿದ್ದಾರೆ! ಅವರೀಗ ‘ಸಖಿ’ಯಲ್ಲಿ ಯುತ್‌ ಕೋ ಆರ್ಡಿನೇಟರ್‌. ಸಖಿಯ ನೇತೃತ್ವದಲ್ಲಿ ಹಳ್ಳಿಗಳಲ್ಲಿ ಯುವ ಗುಂಪುಗಳನ್ನು ರಚಿಸುವುದು, ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮಹತ್ವದ ಕೆಲಸ.

ಹೊಸಪೇಟೆ ತಾಲ್ಲೂಕಿನ ಅನಂತಶಯನಗುಡಿ, ನಾಗೇನಹಳ್ಳಿ, ಬೈಲುವದ್ದಿಗೇರಿ, ಪಾಪಿನಾಯಕನಹಳ್ಳಿ, ಮರಿಯಮ್ಮನಹಳ್ಳಿ, ಸಿರಿಸಿನಕಲ್ಲು, ಚಿತ್ತವಾಡ್ಗಿ, ಕಂಪ್ಲಿ, ಕೊಂಡ ನಾಯಕನಹಳ್ಳಿ, ಡಣಾಪುರ, ಕಮಲಾಪುರ, ಕಾರಿಗನೂರು, ನಾಗೇನಹಳ್ಳಿಯ ವ್ಯಾಪ್ತಿಯ 12 ಯುವ ಗುಂಪುಗಳ ಚಟುವಟಿಕೆಗಳು ರೂಪಾ ನೇತೃತ್ವದಲ್ಲೇ ನಡೆಯುತ್ತಿವೆ. ರೂಪಾ ಈಗ ನೂರಾರು ಹೆಣ್ಣುಮಕ್ಕಳ ನಾಯಕಿ. ಈ ಗುಂಪುಗಳಲ್ಲಿ ದೇವದಾಸಿ ತಾಯಂದಿರ ಹೆಣ್ಣುಮಕ್ಕಳೇ ಹೆಚ್ಚು. ದೇವದಾಸಿಯರ ಮಕ್ಕಳು ಮತ್ತು ಕುಟುಂಬಗಳ ಏಳ್ಗೆಯ ವಿಷಯದಲ್ಲಿ ಯುವತಿ ರೂಪಾ ಒಂದು ಪ್ರಾತಿನಿಧಿಕ ಉದಾಹರಣೆ ಅಷ್ಟೆ.
***
ಹೈದರಾಬಾದ್‌ ಕರ್ನಾಟಕಕ್ಕೆ ಸೇರಿದ ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಯಾದಗಿರಿ ಮತ್ತು ಬೀದರ್‌ನ ಮೂಲದ ನೂರಾರು ಹೆಣ್ಣು ಮಕ್ಕಳಲ್ಲಿದ್ದ ಕುಟುಂಬ, ಜಾತಿ, ನಗರ, ಭಾಷೆ, ಶಿಕ್ಷಣ ಮತ್ತು ಸಮುದಾಯದ ಕುರಿತ ಭಯಗಳನ್ನು ‘ಸಖಿ’ಯ ಸಾಂಗತ್ಯ ಬಿಡಿಸಿದೆ. ತಂದೆ, ತಾಯಿ, ಶಿಕ್ಷಕರು, ಕೊನೆಗೆ ಠಾಣೆಯ ಪೊಲೀಸರೊಡನೆಯೂ ಧೈರ್ಯವಾಗಿ ಮಾತನಾಡುವುದನ್ನು ಹೇಳಿಕೊಟ್ಟಿದೆ. ಈ ಸ್ವಾವಲಂಬನೆಯ ದಾರಿಯಲ್ಲಿ ನಡೆದಿರುವ ಹೆಣ್ಣು ಮಕ್ಕಳು ಸಮುದಾಯ ಕಾರ್ಯಕರ್ತರಾಗಿ ತಮ್ಮನ್ನು ವಿಸ್ತರಿಸಿಕೊಂಡಿರುವುದು ವಿಶೇಷ.

ನರೇಗಾ, ಸ್ವಚ್ಛತೆ, ಮಾಹಿತಿ ಹಕ್ಕು ಕಾರ್ಯಕರ್ತೆಯಾಗಿರುವ ಮರಿಯಮ್ಮನಹಳ್ಳಿಯ ಮಂಜುಳಾ ಮಾಳಗಿ, ದೇವದಾಸಿಯರ ಕೌಟುಂಬಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಣಾಪುರದ ಲಕ್ಷ್ಮಿದೇವಿ, ನಾಗೇನಹಳ್ಳಿಯಲ್ಲಿ ಸದ್ದಿಲ್ಲದೆ ಶೌಚಾಲಯ ನಿರ್ಮಾಣದ ಆಂದೋಲನ ಮಾಡುತ್ತಿರುವ ರೂಪಾ ಅವರ ತಂಗಿ ಶಿಲ್ಪಾ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಎಂ.ಎ ಓದುತ್ತಿರುವ ಡಣಾಪುರದ ಹನುಮಕ್ಕ, ದೇವದಾಸಿ ಕುಟುಂಬದ ನೆಲೆಯಿಂದ ಉನ್ನತ ನೆಲೆಗೆ ಸಂದವರು.

ಅವರೊಂದಿಗೆ ಇತರೆ ಸಮುದಾಯಗಳ ಹೆಣ್ಣು ಮಕ್ಕಳೂ ಇದ್ದಾರೆ. ಮುಸ್ಲಿಂ ಮಹಿಳೆಯರ ಸಮಸ್ಯೆಗಳತ್ತ ಗಮನ ಹರಿಸಿರುವ ಚಪ್ಪರದಳ್ಳಿಯ ನಸ್ರೀನ್‌, ಆಪ್ತಸಮಾಲೋಚಕಿಯಾಗಿರುವ ಕೊಪ್ಪಳದ ಬನ್ನಿಕೊಪ್ಪದ ಕನಕಮ್ಮ ಮುತ್ಯಾಳು, ಕೌಶಲ ತರಬೇತಿ ನೀಡುವ ಕಂಪ್ಲಿಯ ಫಾತಿಮಾ, ಅಲ್ಪಾವಧಿ ವಸತಿ ಸಹಾಯದ ಮೇಲ್ವಿಚಾರಕಿಯಾದ ಹಗರಿಬೊಮ್ಮನಹಳ್ಳಿಯ ರಾಧಮ್ಮ, ವಿಜಯವಾಡದ ಧಾತ್ರಿ ಸಂಸ್ಥೆಯಲ್ಲಿರುವ ಕಡ್ಡಿರಾಂಪುರದ ಗಾಯತ್ರಿ, ಅಜೀಂ ಪ್ರೇಂಜೀ ಫೌಂಡೇಶನ್‌ನ ಉದ್ಯೋಗಿಯಾಗಿರುವ ಕೂಡ್ಲಿಗಿ ತಾಲ್ಲೂಕಿನ ಪೂಜಾರಳ್ಳಿ ತಾಂಡಾದ ಆಶಾರಾಣಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿಗಾಗಿ ಸಂಶೋಧನೆ ನಡೆಸುತ್ತಿರುವ ಕಾಳಮ್ಮ,...ಹೀಗೆ ‘ಸಖಿ’ಯ ಸಖ್ಯದಲ್ಲಿ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುತ್ತಿರುವ ನೂರಾರು ಯುವತಿಯರಿದ್ದಾರೆ.

ಇವರೆಲ್ಲರೂ ಶಾಲಾ ಹಂತದಲ್ಲಿ ‘ಸಖಿ’ಯ ಸಂಪರ್ಕಕ್ಕೆ ಬಂದವರು. ಈಗ ‘ಯುವ ಜಮಾನಾ’ದ ಹೊಸ ಕುಡಿಗಳು. ಹೊಸ ಕನಸು, ಭರವಸೆಗಳ ನಾಳೆಗಳತ್ತ ನಡೆದವರು. ಸಖಿಯ ಸಖ್ಯದ ಆಖ್ಯಾನವನ್ನು ಕೊಂಡಿಯಾಗಿ ಸಾವಿರಾರು ಹೆಣ್ಣುಮಕ್ಕಳಲ್ಲಿ ಹಾಗೂ ನೂರಾರು ಕುಟುಂಬಗಳಲ್ಲಿ ಬೆಳಕಿನಂತೆ ಬಿತ್ತುತ್ತಿರುವವರು.

ಇವರಿಗೆ, ರೂಪಾ ತಾಯಿ ಹುಲಿಗೆಮ್ಮ ಅವರಂತೆ, ‘ಎಲ್ಲಿಂದ ಶುರು ಮಾಡುವುದು’ ಎಂಬ ಗೊಂದಲವಿಲ್ಲ. ‘ನಿಂತ ನೆಲೆಯಿಂದಲೇ ಶುರು ಮಾಡೋಣ. ಏನಾಗುತ್ತೋ ನೋಡೋಣ’ ಎಂಬ ಖಚಿತ ನಿಲುವು, ಧೈರ್ಯವಿದೆ. ಅವರಿಗೆಲ್ಲ ‘ಸಖಿ’ ಎಂಬ ಕೈಮರವಿದೆ.
***
ರೂಪ ತಮ್ಮ ಮನೆಯ ಕತೆಯನ್ನು ಹೇಳುತ್ತಿರುವಂತೆಯೇ, ನಾಗೇನಹಳ್ಳಿಯ ಯುವತಿಯರಾದ ಕಾಮಾಕ್ಷಿ, ಕಮಲ, ಪ್ರಿಯಾಂಕ, ಹನುಮಂತಿ, ಜ್ಯೋತಿ, ಚೈತ್ರ, ಸುಧಾ, ಅಂಬಿಕಾ ಬಂದು ಕುಳಿತರು. ‘ಸಖಿ’ಯ ಜೊತೆಗಿನ ನಮ್ಮ ‘ಸಖ್ಯ’ದ ಆಖ್ಯಾನವನ್ನೂ ಕೇಳಿ ಎಂದು ಶುರು ಮಾಡಿದರು....
***
ಸಖಿ ಎಂಬ ‘ದೀಪ ಮತ್ತು ಕನ್ನಡಿ’
ದೇವದಾಸಿ ಹೆಣ್ಣುಮಕ್ಕಳ ಅಭಿವೃದ್ಧಿಯೇ ಮುಖ್ಯ ಉದ್ದೇಶವಾದ ‘ಸಖಿ’ ಸಂಸ್ಥೆಯು 13 ವರ್ಷದಿಂದ ಹೊಸಪೇಟೆಯಲ್ಲಿದೆ. ಬೆಂಗಳೂರಿನ ‘ಸಂವಾದ’ ಸಂಸ್ಥೆಯ ನೆರವು ಪಡೆದು ಆರಂಭವಾದ ನಂತರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ, ಎಲ್ಲ ತಳಸಮುದಾಯಗಳ ಹೆಣ್ಣುಮಕ್ಕಳ ಸಮಗ್ರ ಅಭಿವೃದ್ಧಿಯ ಸಲುವಾಗಿ ವಿಸ್ತರಣೆಗೊಂಡಿತು.

‘ಸಖಿ’ಯ ಮೂಲಕ ಎಲ್ಲ ಶೋಷಿತ ಹೆಣ್ಣುಮಕ್ಕಳಿಗೆ ದೀಪ ಮತ್ತು ಕನ್ನಡಿಯಂತೆ ಇರುವವರು ಸ್ಥಾಪಕಿ ಡಾ.ಎಂ.ಭಾಗ್ಯಲಕ್ಷ್ಮಿ. ಐವರು ಟ್ರಸ್ಟಿಗಳಿರುವ ಸಂಸ್ಥೆಯಲ್ಲಿ ಯುವತಿಯರಾದ ನಸ್ರೀನ್‌, ಅಲವೇಲು, ಮಂಜುಳಾ, ರೂಪಾ, ಗಾಯತ್ರಿ, ಮೇಘನಾ, ಶೈನಾಜ್, ಅರುಣಾ ಮತ್ತು ಜ್ಯೋತಿ ಅವರದ್ದೇ ನಾಯಕತ್ವ!

‘ಸಖಿ’ ಹೀಗೆ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ನಾಯಕತ್ವದ ವಿಕೇಂದ್ರೀಕರಣದ ಪ್ರಾಯೋಗಿಕ ಪಾಠಗಳನ್ನು ಹೇಳಿಕೊಡುತ್ತಾ ಸಾಂಗತ್ಯವನ್ನು ಸದ್ದಿಲ್ಲದೆ ಮುಂದುವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT