ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟ ಮಾತು ಉಳಿಸಿಕೊಳ್ಳಬೇಕು...

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಚುನಾವಣಾ ಪೂರ್ವ ಹಾಗೂ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿಲ್ಲ. ಬಿಜೆಪಿ ಪ್ರಚಂಡ ವಿಜಯ ಗಳಿಸುತ್ತದೆ ಹಾಗೂ ಯುಪಿಎ ಇಷ್ಟೊಂದು ಅವಮಾನಕರ ರೀತಿಯಲ್ಲಿ ಸೋಲು ಕಾಣುತ್ತದೆ ಎಂದು ಯಾರೂ ಎಣಿಸಿರಲಿಲ್ಲ.

ಆದರೆ, ಒಬ್ಬ ರಾಜಕಾರಣಿ, ವಿವಿಧ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ, ‘ಈ ಬಾರಿ ಜನರು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸುತ್ತಾರೆ. ಅಚ್ಚರಿಯ ಫಲಿತಾಂಶ ಕಾದಿದೆ’ ಎಂದು ಭಾರಿ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದರು. ಅವರೇ ನರೇಂದ್ರ ಮೋದಿ.
ರಾಜಕಾರಣಿಗಳು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂಬ ಕಾರಣದಿಂದ ಸಾಮಾನ್ಯವಾಗಿ ಯಾವುದೇ ಪಕ್ಷ ಅಥವಾ ನಾಯಕನನ್ನು ಜನರು ಗಂಭೀರವಾಗಿ ತೆಗೆದು ಕೊಳ್ಳುವುದಿಲ್ಲ. ಅರವಿಂದ ಕೇಜ್ರಿವಾಲ್‌ ಹಾಗೂ ರಾಹುಲ್‌್ ಗಾಂಧಿ ಕೂಡ ಇಂಥದ್ದೇ ಹೇಳಿಕೆ ನೀಡಿದ್ದರು. ಆದರೆ ಮೋದಿ ಮಾತು ನಿಜವಾಗಿದೆ.

ಮೋದಿ ವಿಜಯವು ಹೊಸ ಚೈತನ್ಯ ಹಾಗೂ ಉತ್ಸಾಹಿ ಭಾರತದ ಕಥೆಯಾಗಿದೆ. ಹೊಸ ಸಾಧ್ಯತೆಗಳ, ವಿಪತ್ತಿನ ವಿರುದ್ಧದ ಗೆಲುವಿನ ಕಥೆ. ಭರವಸೆ ಕಳೆದುಕೊಂಡ ಸಂದರ್ಭದಲ್ಲಿ ಮೂಡಿದ ಆಶಾಕಿರಣದ ಕಥೆ.

ಕಡುಬಡತನ, ಮೀರಲಾಗದ ಅಡೆತಡೆಗಳು, ಜಾತಿ ಹಾಗೂ ಹಿಂದುಳಿದಿರುವಿಕೆಯಿಂದಾಗಿ ಆದ ಅವಮಾನ, ಶಿಕ್ಷಣದ ಕೊರತೆ... ಇವೆಲ್ಲದರ ಮಧ್ಯೆಯೂ ಛಲ, ಧೈರ್ಯ ಹಾಗೂ ಆಶಾವಾದದಿಂದ ಒಬ್ಬ ವ್ಯಕ್ತಿ ಯಶ ಗಳಿಸಬಹುದು ಎನ್ನುವುದಕ್ಕೆ ಮೋದಿ ಸಾಕ್ಷಿಯಾಗಿ ನಿಲ್ಲುತ್ತಾರೆ. ತಮ್ಮ ವಿಜಯ ಮಾತ್ರವಲ್ಲ, ಪಕ್ಷವನ್ನು ಸರಳ ಬಹುಮತಕ್ಕಿಂತ (272) ಹೆಚ್ಚಿನ ಮತಗಳಿಂದ ಗೆಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. 

ಮೋದಿ ಬಗ್ಗೆ ಆಕ್ಷೇಪವುಳ್ಳ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರದ ವೇಳೆ ಅವರನ್ನು ಕಡುವಾಗಿ ವಿರೋಧಿಸಿದ್ದರೂ ಅಥವಾ ಸಮಾಜದ ವಿವಿಧ ವರ್ಗದವರು, ಅದರಲ್ಲೂ ವಿಶೇಷವಾಗಿ ಎಡಪಂಥೀಯ ಒಲವುಳ್ಳ ಬುದ್ಧಿಜೀವಿಗಳು ಮೋದಿ ಟೀಕಾಕಾರರಾಗಿದ್ದರೂ, ನಗರ, ಗ್ರಾಮೀಣ ಸೇರಿದಂತೆ ಎಲ್ಲ ಸ್ತರದ ಜನರು ಮೋದಿಗೆ ಮತ ಹಾಕಿ ಅವರನ್ನು ಗೆಲ್ಲಿಸಿದ್ದಾರೆ. ಇದೊಂದು ರೀತಿಯಲ್ಲಿ ಅಧ್ಯಕ್ಷೀಯ ಮಾದರಿ ಚುನಾವಣೆಯಂತೆ ಕಂಡುಬಂತು. ಕಾಂಗ್ರೆಸ್‌ ದುರಾಡಳಿತದಿಂದ  ದೇಶವನ್ನು ಉದ್ಧಾರ ಮಾಡುವ ವ್ಯಕ್ತಿ ಎಂದೇ ಮೋದಿ ಅವರನ್ನು ಬಿಂಬಿಸಲಾಯಿತು.

ಈಗ ಮೋದಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಿಕ್ಕ ಜನಾದೇಶವನ್ನು ಎಲ್ಲರೂ ಗೌರವಿಸಬೇಕು.
‘ದೇಶದಲ್ಲಿ ಬದಲಾವಣೆ ತರುವುದಕ್ಕೆ ನಮ್ಮನ್ನು 300ಸ್ಥಾನಗಳಲ್ಲಿ ಗೆಲ್ಲಿಸಿ ಮತ್ತು 60 ತಿಂಗಳು ಆಡಳಿತ ನಡೆಸುವುದಕ್ಕೆ ಅವಕಾಶ ನೀಡಿ’ ಎಂಬ ಮೋದಿ ಮನವಿಯಲ್ಲಿ ಮೂರು ಪ್ರಮುಖ ಭರವಸೆಗಳು ವ್ಯಕ್ತವಾಗಿದ್ದವು.

ಮೊದಲನೆಯದು, ಕೋಮು ಸಾಮರಸ್ಯ. ಅವರು ಎಲ್ಲರನ್ನು ಸಮಾನವಾಗಿ ನೋಡುವರು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಸಂವಿಧಾನವೇ ನಮ್ಮ ಏಕೈಕ ಸಿದ್ಧಾಂತ. ಅಲ್ಪಸಂಖ್ಯಾತರ ಓಲೈಕೆಯೂ ಇರುವುದಿಲ್ಲ, ಬಹುಸಂಖ್ಯಾತವಾದದ ಹೇರಿಕೆಯೂ ಇರುವುದಿಲ್ಲ.

ಎರಡನೆಯದು, ದೇಶವನ್ನು ಭ್ರಷ್ಟಾಚಾರ, ಹಗರಣಗಳು ಹಾಗೂ ಬಂಡವಾಳಶಾಹಿ ವಿಪತ್ತುಗಳಿಂದ ಮೇಲೆತ್ತುವುದಕ್ಕೆ ಶ್ರಮಿಸುವುದು.
ಮೂರನೆಯದು ಅಭಿವೃದ್ಧಿ ವಿಷಯ. ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ (ಸಬ್‌್ ಕಿ ಸಾಥ್‌್ ಸಬ್‌ ಕಾ ವಿಕಾಸ್‌) ಎನ್ನುವುದು ಮೋದಿ ಅವರ ಅಚ್ಚುಮೆಚ್ಚಿನ ಘೋಷಣೆ.

‘ಮೋದಿ ತಮ್ಮ ಭಾಷಣದಲ್ಲಿ ಒಂದು ಬಾರಿ ಹಿಂದುತ್ವ ಪ್ರತಿಪಾದನೆ ಮಾಡಿದರೆ ಅದೇ ವೇಳೆಯಲ್ಲಿ 500 ಬಾರಿ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ್ದರು’ ಎಂದು ‘ದಿ ನ್ಯೂಯಾರ್ಕ್‌ ಟೈಮ್ಸ್’ ಪತ್ರಿಕೆಯ ವಿಶ್ಲೇಷಕರೊಬ್ಬರು ಇತರ ರಾಜಕೀಯ ಮುಖಂಡರ ಜತೆ ಮೋದಿ ಭಾಷಣವನ್ನೂ ಅಧ್ಯಯನ ಮಾಡಿ ಹೇಳಿದ್ದರು.

ಈಗ ಇತರರು ಏನು ಮಾಡಬೇಕು?: ವಿರೋಧಪಕ್ಷದ ಸ್ಥಾನದಲ್ಲಿ ಕೂರುವ ರಾಜಕೀಯ ಪಕ್ಷಗಳು ಹಾಗೂ ಮೋದಿಗೆ ಮತ ಹಾಕದಿದ್ದವರು ಈಗ ಏನು ಮಾಡಬೇಕು?

ರಾಜಕೀಯ ಪಕ್ಷಗಳು ಸಂಸತ್‌ನಲ್ಲಿ ಘನತೆಯಿಂದ ಹಾಗೂ ಜವಾಬ್ದಾರಿಯಿಂದ ವರ್ತಿಸಬೇಕು. ಎಲ್ಲರೂ ಒಟ್ಟಾಗಿ, ಮೋದಿ ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವಂತೆ ನೋಡಿಕೊಳ್ಳಬೇಕು ಮತ್ತು ಅದಕ್ಕೆ ಕಾಲಾವಕಾಶ ಕೊಡಬೇಕು.

ದೇಶವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲು ಕೆಟ್ಟಕೆಲಸ, ದುರಾಡಳಿತದ ವಿರುದ್ಧ ಅತ್ಯುತ್ತಮ ಕಣ್ಗಾವಲಾಗಿ ಕೆಲಸ ಮಾಡಬೇಕು. ಉತ್ತಮವಾಗಿ ಕಾರ್ಯನಿರ್ವಹಿಸುವ, ಸದಾ ಜಾಗೃತವಾಗಿರುವ ವಿರೋಧ ಪಕ್ಷವು ಪ್ರಜಾತಂತ್ರದ ಅಡಿಗಲ್ಲು.

ದೇಶದಲ್ಲಿ ಅಣ್ಣಾ ಹಜಾರೆ ಚಳವಳಿ ಬಳಿಕ ನಾಗರಿಕ ಸಮಾಜ ಜಾಗೃತಗೊಂಡಿದ್ದು, ಸರ್ಕಾರವನ್ನು ಉತ್ತರದಾಯಿಯನ್ನಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಹಂತಕ್ಕೆ ಬಂದಿದೆ.

ಮೋದಿ, ತಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಅವಕಾಶ ಕೊಡಬೇಕು. ಒಂದು ವೇಳೆ ಅವರು ತಪ್ಪು ಮಾಡಿದಲ್ಲಿ, ದಿಟ್ಟತನದಿಂದ, ನಿಷ್ಪಕ್ಷಪಾತವಾಗಿ, ವಸ್ತುನಿಷ್ಠವಾಗಿ ಅದನ್ನು ಬಯಲಿಗೆಳೆಯಬೇಕು. ಆಗ ಮಾತ್ರ ಭ್ರಷ್ಟಾಚಾರಮುಕ್ತ, ಸಮೃದ್ಧ ಹಾಗೂ ಹೆಮ್ಮೆಯ ಭಾರತ ಕಟ್ಟುವ ಮೋದಿ ಸಂಕಲ್ಪ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT