ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಬೆಂಚಿನ ಹುಡುಗರು...

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಶಶಾಂಕ್‌
ಅಪ್ಪನ ಆರೋಗ್ಯ ವೈದ್ಯರ ಕೈಯಲ್ಲಿತ್ತು. ಪದೇ ಪದೇ ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್‌,  ಸ್ಕ್ಯಾನಿಂಗ್‌ ರಿಪೋರ್ಟ್‌ಗಳನ್ನು ವಿದೇಶಿ ವೈದ್ಯರುಗಳಿಗೆ ಕಳುಹಿಸಿಕೊಡಬೇಕಾಗಿತ್ತು. ಅಲ್ಲಿಂದ ವರದಿ ಬರಲು ಸಾಕಷ್ಟು ತಡವಾಗುತ್ತಿತ್ತು. ಈ ನಡುವೆ ಅಪ್ಪ ಸೂಕ್ತ ಚಿಕಿತ್ಸೆ ಇಲ್ಲದೇ ಮತ್ತಷ್ಟು ಹೈರಾಣಾಗುತ್ತಿದ್ದರು.
ವಿದೇಶಿ ವೈದ್ಯರಿಂದ ವರದಿ ಬಂದ ನಂತರವೇ ಇಲ್ಲಿನ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆ ವರದಿ ಬರಲು ಒಂದೊಂದು ಸಲ ವಾರವೇ ಆಗುತ್ತಿತ್ತು. ಅಪ್ಪ ಅನುಭವಿಸುತ್ತಿದ್ದ ಯಾತನೆ ನನ್ನ ಕರುಳು ಹಿಂಡುತ್ತಿತ್ತು ಎನ್ನುತ್ತಾರೆ ಹೈದರಾಬಾದ್‌ ಮೂಲದ ಶಶಾಂಕ್‌.

‘2008ರಲ್ಲಿ ನಡೆದ ಈ ಘಟನೆ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಬಹುಶಃ ಇದು ಸಂಭವಿಸದಿದ್ದರೆ ನಾನು ಯಾವುದೋ ಒಂದು ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ದುಡಿಯುತ್ತಿದ್ದೆ’ ಎಂದು ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾರೆ ಶಶಾಂಕ್. ಈ ಘಟನೆ ನಡೆದಾಗ ಶಶಾಂಕ್‌ ಅಂತಿಮ ವರ್ಷದ ಎಂಜಿನಿಯರಿಂಗ್‌ ಪದವಿ ಓದುತ್ತಿದ್ದರು. ಶಶಾಂಕ್‌  ಯಾವಾಗಲೂ ಕೂರುತ್ತಿದ್ದದ್ದು ಕೊನೆಯ ಬೆಂಚಿನಲ್ಲಿ. ಪ್ರತಿಭಾವಂತನಲ್ಲದಿದ್ದರೂ ಎಂಜಿನಿಯರಿಂಗ್‌ ಪಾಸು ಮಾಡುವ ಸಾಮರ್ಥ್ಯವಿತ್ತು. ಅಮೆರಿಕ ವೈದ್ಯರಿಂದ ಚಿಕಿತ್ಸಾ ವರದಿಗಳನ್ನು ಆನ್‌ಲೈನ್‌ನಲ್ಲಿ ತರಿಸಿಕೊಳ್ಳಬೇಕಾದರೆ ಹರಸಾಹಸ ಪಡಬೇಕಾಗಿತ್ತು. ತ್ವರಿತವಾಗಿ ವರದಿಗಳನ್ನು ತರಿಸಿಕೊಳ್ಳುವಂಥ ತಂತ್ರಾಂಶವಿರಲಿಲ್ಲ. ಆಗ ಶಶಾಂಕ್‌ಗೆ ಹೊಳೆದದ್ದು ತಂತ್ರಾಂಶ ರೂಪಿಸುವ ಯೋಜನೆ. ಗೆಳೆಯ ಅಭಿನವ್‌ ಜೊತೆ ಸೇರಿ ಅಂತಹ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿದರು. ಮುಂದೆ ‘ಪ್ರಾಕ್ಟೊ ರೇ’ ಎಂಬ ಕಂಪೆನಿ ಆರಂಭಿಸಿದರು.

‘ಪ್ರಾಕ್ಟೊ’ ಒಂದು ರೀತಿಯ ಆನ್‌ಲೈನ್‌ ಕ್ಲಿನಿಕ್‌. ಒಂದು ಲಕ್ಷಕ್ಕೂ ಹೆಚ್ಚಿನ ವೈದ್ಯರ ಮಾಹಿತಿ ಇದರಲ್ಲಿದೆ. ರೋಗಿಗಳು ಪ್ರಾಕ್ಟೊ ವೆಬ್‌ಗೆ ಲಾಗಿನ್‌ ಆಗಿ ವೈದ್ಯರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬಹುದು. ಕಳೆದ ಜೂನ್‌ ತಿಂಗಳಲ್ಲಿ 28 ಸಾವಿರ ರೋಗಿಗಳು ಪ್ರಾಕ್ಟೊನ ಸೌಲಭ್ಯ ಪಡೆದಿರುವುದು ವಿಶೇಷ.
https://www.practo.com

ಯೋಗೇಂದ್ರ
ಅದ್ಯಾಕೋ ಯೋಗೇಂದ್ರ ಅವರಿಗೆ ಮೊದಲ ಸಾಲು ಅಂದರೆ ಭಾರಿ ಭಯ!  ‘ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಮೊದಲ ಬೆಂಚಿನಲ್ಲಿ ಕುಳಿತಿದ್ದ ನೆನಪೇ ಇಲ್ಲ’ ಎನ್ನುವ ಇವರು ‘ಸ್ಟೇಝಿಲ್ಲಾ’ ಆನ್‌ಲೈನ್‌ ಮಾರ್ಕೆಟಿಂಗ್‌ ಕಂಪೆನಿ ಮಾಲೀಕ.

ಇದು ತಮಿಳುನಾಡು ಮೂಲದ ಯೋಗೇಂದ್ರ ಅವರ ಕಥೆ. ಎಂಜಿನಿಯರಿಂಗ್‌ ವಿದ್ಯಾಭ್ಯಾಸವನ್ನು ಕಾರಣಾಂತರಗಳಿಂದ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಒಂದೆರಡು ವರ್ಷ ಕಚೇರಿ ಸಹಾಯಕನಾಗಿ ಕೆಲಸ ಮಾಡಿ ಅದನ್ನೂ ಅರ್ಧಕ್ಕೆ ಬಿಟ್ಟರು. ಮುಂದೆ    ಆನ್‌ಲೈನ್‌ ಪ್ರವಾಸೋದ್ಯಮ ವ್ಯವಹಾರಕ್ಕೆ ಕೈ ಹಾಕಿದರು. ಆನ್‌ಲೈನ್‌ ಮುಖಾಂತರ ಪ್ರವಾಸಿಗರಿಗೆ ದೇಶದ ಪ್ರವಾಸಿ ತಾಣಗಳು, ಹೋಟೆಲ್‌, ಲಾಡ್ಜ್‌ಗಳು, ವಾಹನ ಸೌಕರ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದು ಕೂಡ ಲಾಭ ತಂದು ಕೊಡಲಿಲ್ಲ.  ಈ ಹಂತದಲ್ಲಿ ಪರ್ಯಾಯ ವ್ಯವಹಾರದ ಬಗ್ಗೆ ಗೆಳೆಯರೊಂದಿಗೆ ಚರ್ಚಿಸಿದರು. ಆಗ ಹೊಳೆದದ್ದು ರಿಯಲ್‌ ಎಸ್ಟೇಟ್‌ ಬಿಸಿನೆಸ್‌. ಇದನ್ನು ಕೂಡ ಆನ್‌ಲೈನ್‌ನಲ್ಲಿ ಆರಂಭಿಸಿ ‘ಸ್ಟೇಝಿಲ್ಲಾ’ ಎಂದು ನಾಮಕರಣ ಮಾಡಿದರು.

ಕೇವಲ ನಾಲ್ಕು ವರ್ಷಗಳಲ್ಲಿ ಈ ಕಂಪೆನಿ ಬೃಹತ್‌ ಆಗಿ ಬೆಳೆದಿದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಪೈಪೋಟಿ ನೀಡುತ್ತಿದೆ.  ಇದರಲ್ಲಿ 300ಕ್ಕೂ ಹೆಚ್ಚಿನ  ನಗರಗಳಲ್ಲಿರುವ ರಿಯಲ್‌ ಎಸ್ಟೇಟ್‌ ಮಾಹಿತಿ ಲಭ್ಯ. ಸ್ಟೇಝಿಲ್ಲಾ ಮುಖಾಂತರ ದಿನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ವ್ಯವಹಾರ ನಡೆಸುತ್ತಿದ್ದಾರೆ ಎನ್ನುತ್ತಾರೆ ಯೋಗೇಂದ್ರ. 
http://www.stayzilla.com

ಜಿತೇಶ್‌ ಹರಿಯಾ

ಮುಂಬೈನ ಜಿತೇಶ್‌ ಹರಿಯಾಗೆ ಕಾಲೇಜಿಗೆ ಹೋಗಬೇಕೆಂದರೆ ಅಲರ್ಜಿ. ಕಾಲೇಜಿನ ಪಾಠಗಳಂತೂ ಕಬ್ಬಿಣದ ಕಡಲೆ. ಜಿತೇಶ್‌ಗೆ ಚಾರಣ ಮತ್ತು ಪ್ರವಾಸೋದ್ಯಮ ಅಂದರೆ ಅಚ್ಚುಮೆಚ್ಚು. ಕಾಲೇಜಿಗೆ ಬಂಕ್‌ ಹೊಡೆದು ಇಡೀ ಮುಂಬೈ ನಗರವನ್ನು ಹತ್ತಾರು ಬಾರಿ ಸುತ್ತಿದ್ದ ಖ್ಯಾತಿ ಅವರದ್ದು!

ಜಿತೇಶ್‌ ಅವರ ಮನೆಯನ್ನು ಮುಂಬೈ ನಗರ ಪಾಲಿಕೆಯವರು ಸ್ಥಳೀಯ ರೈಲು ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡರು. ಇದರಿಂದ ಹತ್ತು ಕೋಟಿ ರೂಪಾಯಿ ಜಿತೇಶ್‌ ಕೈಸೇರಿತು.ಹಣ ಬಂದಿದ್ದೇ ತಡ ಕಾಲೇಜನ್ನು ಅರ್ಧಕ್ಕೆ ನಿಲ್ಲಿಸಿ ಕೆನಡಾಗೆ ಚಾರಣ ಮತ್ತು ಪ್ರವಾಸೋದ್ಯಮ ಅಧ್ಯಯನ ಮಾಡಲು ತೆರಳಿದರು. ಅಲ್ಲಿನ ಲೇಕ್‌ಲ್ಯಾಂಡ್‌ ಕಾಲೇಜಿನಲ್ಲಿ ಡಿಪ್ಲೊಮಾ ಪ್ರಮಾಣ ಪತ್ರ ಪಡೆದು  ಭಾರತಕ್ಕೆ ಮರಳಿದರು.

ಮತ್ತೆ ಎರಡು ವರ್ಷ ಭಾರತದ ಗುಡ್ಡಗಾಡು, ಅರಣ್ಯ, ಹಿಮಾಲಯದ ತಪ್ಪಲು ಪ್ರದೇಶಗಳನ್ನು ಸುತ್ತುವುದರಲ್ಲೇ ಕಳೆದರು. ಈ ವೇಳೆ ಚಾರಣ ಸಂಸ್ಥೆ ಹುಟ್ಟುಹಾಕುವ ಯೋಚನೆ ಹೊಳೆಯಿತು. ಆದರೆ ಅದಕ್ಕೆ ಬೇಕಾಗಿದ್ದ ಅಗತ್ಯ ವಸ್ತುಗಳು ಭಾರತದಲ್ಲಿ ಲಭ್ಯವಿರಲಿಲ್ಲ. ಎಲ್ಲಾ ಸರಕುಗಳನ್ನು ವಿದೇಶಗಳಿಂದಲೇ ತರಿಸಿಕೊಳ್ಳಬೇಕಾಗಿತ್ತು.

ಸರಕುಗಳನ್ನು ಆಮದು ಮಾಡಿಕೊಳ್ಳುವುದರಲ್ಲೇ ಒಂದು ವರ್ಷ ಕಳೆದು ಹೋಯಿತು. ಹಾಗಾಗಿ ಸಂಸ್ಥೆ ಕಟ್ಟುವ ಬಿಸಿ ತಣ್ಣಗಾಯಿತು. ಮುಂದೆ ಚಾರಣ ಮತ್ತು ಪ್ರವಾಸಕ್ಕೆ ಅಗತ್ಯವಿರುವ ಸಾಮಾನುಗಳ ಆನ್‌ಲೈನ್‌ ಶಾಪಿಂಗ್‌ ಕಂಪೆನಿ (ಔಟ್‌ಡೋರ್‌ ಟ್ರಾವೆಲ್‌ ಗೇಯರ್‌) ಆರಂಭಿಸಿದರು. ಇದು ನಿರೀಕ್ಷೆಗೂ ಮಿರಿ ಯಶಸ್ವಿಯಾಯಿತು. ಬ್ರಾಂಡೆಡ್‌ ಸರಕುಗಳ ಮಾರಾಟ ಗ್ರಾಹಕರಿಗೆ ಇಷ್ಟವಾಯಿತು. ಬೆಂಗಳೂರು, ದೆಹಲಿ, ಪುಣೆ, ಮುಂಬೈ, ಥಾಣೆ, ಗುವಾಹಟಿ, ಲೇ, ಶ್ರೀನಗರಗಳಲ್ಲಿ ಈ ಕಂಪೆನಿಯ ಶಾಪಿಂಗ್‌ ಮಾಲ್‌ಗಳಿವೆ. ಇಲ್ಲಿ ಗ್ರಾಹಕರು ನೇರವಾಗಿ ಅಥವಾ ಆನ್‌ಲೈನ್‌ ಮುಖಾಂತರ ಸಾಮಾನುಗಳನ್ನು ಖರೀದಿಸಬಹುದು.
http://www.outdoortravelgear.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT