ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಇಲ್ಲದ ಚರ್ಚೆ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಸುಮಾರು ಎರಡೂವರೆ ದಶಕಗಳ ಕಾಲ ಶ್ರೀಲಂಕಾದ ಸೇನೆ ಮತ್ತು ಪ್ರತ್ಯೇ­ಕ­­ತಾವಾದಿ ಸಂಘಟನೆ ಎಲ್‌ಟಿಟಿಇ ಮಧ್ಯೆ ನಡೆದ ಅಂತ­ರ್ಯುದ್ಧ ಕೊನೆಗೊಂಡ ದಿನದಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈ ಕುರಿ­ತಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್ಎಚ್­ಆರ್‌ಸಿ) ಪದೇ ಪದೇ ಚರ್ಚೆಯಾಗಿದೆ.

ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿ­ಸಿದಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ಅವರು ಸಮಗ್ರ ತನಿಖೆ ನಡೆಸಬೇಕು ಎಂಬ ನಿರ್ಣಯವನ್ನು ಯುಎನ್ಎಚ್ಆರ್‌ಸಿ ಈ ಬಾರಿ ಅಂಗೀಕರಿಸಿದೆ. 47 ಸದಸ್ಯರಿರುವ ಮಂಡಳಿಯಲ್ಲಿ 23 ದೇಶಗಳು ನಿರ್ಣಯ­ವನ್ನು ಬೆಂಬಲಿಸಿವೆ. 12 ದೇಶಗಳು ವಿರೋಧಿಸಿದ್ದರೆ ಭಾರತವೂ ಸೇರಿ­ದಂತೆ 12 ದೇಶಗಳು ಮತದಾನದಿಂದ ದೂರ ಉಳಿದಿವೆ.

ಅಂತ­ರ್ಯು­ದ್ಧದ ಕೊನೆಯ ಹಂತದಲ್ಲಿ ಏನು ಸಂಭವಿಸಿತು ಎಂಬುದರ ಕುರಿತಂತೆ ಈ ತನಕ ಹೊರಬಂದಿರುವ ಮಾಹಿತಿಗಳೆಲ್ಲವೂ ಶ್ರೀಲಂಕಾ ಸೇನೆ, ಸಾಮಾನ್ಯ ನಾಗ­­­ರಿಕರ ಹತ್ಯೆ ನಡೆಸಿದೆ ಎಂದು ತಿಳಿಸಿವೆ. ಎಲ್‌ಟಿಟಿಇ ಕೂಡಾ ಹೀಗೆ ಸಾಮಾನ್ಯ ನಾಗರಿಕರ ಮೇಲೆ ನಡೆಸಿದ ದಾಳಿಗಳೇನೂ ಕಡಿಮೆಯಲ್ಲ. ಇದರ ಕುರಿ­­ತಂತೆ ಒಂದು ಬಾಹ್ಯ ಸಂಸ್ಥೆಯಿಂದ ತನಿಖೆ ನಡೆದರೆ ತಪ್ಪಿತಸ್ಥರಿಗೆ ಶಿಕ್ಷೆ­ಯಾ­­ಗುತ್ತದೆಯೇ ಎಂಬುದು ಇಲ್ಲಿರುವ ಮುಖ್ಯಪ್ರಶ್ನೆ. ಇಂಥದ್ದೊಂದು ತನಿಖೆ­­ಯನ್ನು ಒಪ್ಪಲು ಸಾಧ್ಯವಿಲ್ಲ ಎಂಬುದನ್ನು ಶ್ರೀಲಂಕಾ ಸ್ಪಷ್ಟ­ಪಡಿಸಿದೆ. ಅಮೆರಿಕ ಮತ್ತು ಯೂರೋಪಿನ ದೇಶಗಳು ಈ ತನಿಖೆಗೆ ಒತ್ತಡ ಹೇರುತ್ತಿವೆ.

ಈ ವಿಚಾರದಲ್ಲಿ ಭಾರತ ಮೊದಲಿನಿಂದಲೂ ಎಡಬಿಡಂಗಿ ನಿಲುವು ಪ್ರದ­ರ್ಶಿ­­ಸುತ್ತಾ ಬಂದಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಎಲ್‌ಟಿ­ಟಿಇಗೆ ಪರೋಕ್ಷ ಬೆಂಬಲ ನೀಡಲಾಯಿತು. ರಾಜೀವ್ ಗಾಂಧಿ ಪ್ರಧಾ­ನಿ­ಯಾ­ಗಿ­ದ್ದಾಗ ಶಾಂತಿ ಪಡೆ ಕಳುಹಿಸಿ ಶ್ರೀಲಂಕಾ ತಮಿಳರ ಪ್ರಶ್ನೆಯನ್ನು ಸಂಕೀರ್ಣ­­ಗೊ­ಳಿ­ಸಿತು. ಮೈತ್ರಿಕೂಟ ಸರ್ಕಾರಗಳ ಯುಗ ಆರಂಭವಾದ ನಂತರ ಆಡಳಿ­ತಾ­ರೂಢರಿಗೆ ಬೆಂಬಲ ನೀಡಿರುವ ತಮಿಳುನಾಡಿನ ರಾಜಕೀಯ ಪಕ್ಷ­ಗಳ ಒಲ­ವನ್ನು ಅರಿತು ಶ್ರೀಲಂಕಾಕ್ಕೆ ಸಂಬಂಧಿಸಿದ ನೀತಿಯನ್ನು ರೂಪಿಸುವ ಕಾರ್ಯ ಆರಂ­ಭ­­­­ವಾ­ಯಿತು. ಇವೆಲ್ಲವುಗಳ ಒಟ್ಟು ಪರಿಣಾಮವೆಂದರೆ ಭಾರತದ ಬಗ್ಗೆ ಶ್ರೀಲಂಕಾದ ಸಿಂಹಳೀಯ ಸಮುದಾಯಕ್ಕೆ ಒಳ್ಳೆಯ ಅಭಿಪ್ರಾಯ­ವಿಲ್ಲ.

ಭಾಷೆಯ ಮೂಲಕ ಕರುಳುಬಳ್ಳಿ ಸಂಬಂಧವನ್ನು ಹೊಂದಿರುವ ತಮಿಳು ಸಮುದಾಯವೂ ಭಾರತವನ್ನು ದ್ವೇಷಿಸಬಹುದಾದ ನಿಲುವು­ಗ­ಳನ್ನು ಸರ್ಕಾರಗಳು ಕೈಗೊಂಡಿವೆ. 2009ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕು­­ಗಳ ಮಂಡಳಿ ಸಭೆಯಲ್ಲಿ ಶ್ರೀಲಂಕಾವನ್ನೇ ಬೆಂಬಲಿಸಿದ್ದ ಭಾರತ, 2012 ಮತ್ತು 2013ರಲ್ಲಿ ಶ್ರೀಲಂಕಾ ವಿರೋಧಿ ನಿಲುವನ್ನು ತಳೆಯಿತು. 2014ರಲ್ಲಿ ಮತ­ದಾನ­ದಿಂದ ದೂರ ಉಳಿದು ತಟಸ್ಥ ನಿಲುವು ತಳೆದಿದೆ.

ಡಿಎಂಕೆ ಸದ್ಯ ಕಾಂಗ್ರೆಸ್‌­ನಿಂದ ದೂರವಾಗುತ್ತಿರುವುದು ಸದ್ಯದ ತಟಸ್ಥ ನಿಲು­ವಿನ ಹಿಂದೆ ಕೆಲಸ ಮಾಡಿರುವುದು ಸ್ಪಷ್ಟ. ಇಂಥ ನಿರ್ಧಾರಗಳು ರಾಜ­ತಾಂತ್ರಿಕ ಅಪ್ರ­ಬು­ದ್ಧ­ತೆ­ಯ ಉದಾಹರಣೆಗಳಾಗಿಬಿಡುತ್ತವೆ. ಇಷ್ಟರ ಮೇಲೆ ವಿಶ್ವ­ಸಂಸ್ಥೆ ನಡೆ­ಸಿದ ಬಾಹ್ಯ ತನಿಖೆಯಿಂದ ಈ ತನಕ ಯಾವುದೇ ಸಂತ್ರಸ್ತ ಸಮು­ದಾಯಕ್ಕೆ ನ್ಯಾಯ ದೊರೆತ ಉದಾಹರಣೆಯಂತೂ ಇಲ್ಲ. ಶ್ರೀಲಂಕಾ­ದಲ್ಲಿ ನಡೆ­ದಿ­ರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಯುಎನ್­ಎಚ್­ಆರ್‌ಸಿ ನಿರ್ಣಯ ಜಾರಿ ಪರಿಣಾಮ ಇದಕ್ಕಿಂತ ಭಿನ್ನವಾಗಲು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT