ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ನೀರಿನ ಆಗರವಾದ ಶೆಟ್ಟಿ ಕೆರೆ

Last Updated 26 ಜನವರಿ 2015, 20:45 IST
ಅಕ್ಷರ ಗಾತ್ರ

ಬೆಂಗಳೂರು: ಆ ಜಲಮೂಲದ ತುಂಬಾ ಕಳೆ ಬೆಳೆದು ನಿಂತಿದೆ. ಅದರ ಪಾತ್ರಕ್ಕೆ ನೇರವಾಗಿ ಕೊಳಚೆ ನೀರು ಬಂದು ಸೇರುತ್ತಿರುವ ಕಾರಣ ವಾತಾವರಣವೆಲ್ಲ ಗಬ್ಬು ನಾರುತ್ತಿದೆ. ರಸ್ತೆಗೆ ಹೊಂದಿಕೊಂಡಿರುವ ಭಾಗದಲ್ಲಿ ನೀರಿದ್ದ ಜಾಗವನ್ನು ಬಲು ವೇಗವಾಗಿ ಕಟ್ಟಡ ತ್ಯಾಜ್ಯ ಆಕ್ರಮಿಸುತ್ತಿದೆ.

ಇದು ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಕಥೆ. ಹಳೇ ಮದ್ರಾಸ್‌ ರಸ್ತೆಯ ಮೇದಹಳ್ಳಿ ಮತ್ತು ಆವಲಹಳ್ಳಿ ಮಧ್ಯದಲ್ಲಿದೆ ಈ ಕೆರೆ. ‘ಸಾವಿರ ಕೆರೆ’ಗಳ ಈ ಬೀಡು ಈಗ ‘ಸಾವನ್ನಪ್ಪುತ್ತಿರುವ ಕೆರೆ’ಗಳ ತಾಣವಾಗಿದ್ದು, ಈ ಜಲಮೂಲವೂ ಅದೇ ಹಾದಿ ಹಿಡಿದಿದೆ. 300 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕೆರೆ ಒಂದುಕಾಲಕ್ಕೆ ಪ್ರಕೃತಿ ಪ್ರಿಯರ ಸ್ವರ್ಗವಾಗಿತ್ತು. ಹಲವು ಜಾತಿಗಳ ಪಕ್ಷಿಗಳಿಗೂ ನೆಲೆ ಒದಗಿಸಿತ್ತು. ಈಗ ತನ್ನ ಉಳಿವಿಗಾಗಿಯೇ ಹೋರಾಟ ನಡೆಸುತ್ತಿದೆ.

ಕೆರೆ ಸುತ್ತಲೂ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದ್ದು, ಒಂದೆಡೆ ಮಳೆನೀರು ತರುತ್ತಿದ್ದ ಬೃಹತ್‌ ಕಾಲುವೆಗಳು ಕಣ್ಮರೆಯಾದರೆ, ಇನ್ನೊಂದೆಡೆ ಕೊಳಚೆ ನೀರು ಕೆರೆ ಒಡಲಿಗೆ ಬಂದು ಸೇರುತ್ತಿದೆ.

‘ಕೊಳಚೆ ನೀರೇ ಜಲಮೂಲ ಆಗಿರುವುದ­ರಿಂದ ಈ ಕೆರೆಯೀಗ ರಾಸಾಯನಿಕಗಳ ಆಗರವಾಗಿದೆ. ಬಳಸಿದ ನೀರನ್ನು ಸಂಸ್ಕರಿಸದೆ ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದುವರೆಗೆ ಅದನ್ನು ತಡೆಯುವ ಗೋಜಿಗೆ ಹೋಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಪೀಪಲ್ಸ್‌ ಕ್ಯಾಂಪೇನ್‌ ಫಾರ್‌ ರೈಟ್‌ ಟು ವಾಟರ್‌ (ಪಿಸಿಆರ್‌ಡಬ್ಲ್ಯು) ಸಂಘಟನೆ ಮುಖ್ಯಸ್ಥ ಈಶ್ವರಪ್ಪ ಮಡಿವಾಳ.

ಕೊಳಚೆ ನೀರಿನ ಆಕ್ರಮಣ ಸಾಲದೆಂಬಂತೆ ಘನತ್ಯಾಜ್ಯ ಹೊತ್ತು ಬರುವ ಲಾರಿಗಳು ಕೂಡ ಕಸ ಚೆಲ್ಲಲು ಈ ಕೆರೆಯ ಪಾತ್ರವೇ ಸುರಕ್ಷಿತ ತಾಣ ಎಂದು ಭಾವಿಸಿವೆ. ಇದೆಲ್ಲದರ ಪರಿಣಾಮ, ದಿನದಿಂದ ದಿನಕ್ಕೆ ಕೆರೆಯ ಪಾತ್ರ ಕುಗ್ಗುತ್ತಲೇ ಹೊರಟಿದೆ. ‘ಬಿಬಿಎಂಪಿ ಸೇರಿದಂತೆ ಕೆರೆ ರಕ್ಷಣೆ ಜವಾಬ್ದಾರಿ ಇರುವ ಎಲ್ಲ ಸಂಸ್ಥೆಗಳಿಗೂ ನಾವು ದೂರು ಕೊಟ್ಟಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರುತ್ತಾರೆ ಸ್ಥಳೀಯ ನಿವಾಸಿ ಮಂಜುಳಾ.

‘ಕಲುಷಿತ ನೀರಿನ ಈ ಕೆರೆಯಲ್ಲಿ ಮೀನುಗಳು ಸಾಯುವುದು ಮಾಮೂಲಿ. ಕೆರೆಯೇ ಸಾಯುತ್ತಿರುವಾಗ ಆ ಮೀನುಗಳನ್ನು ಯಾರು ಕೇಳುತ್ತಾರೆ’ ಎಂದು ಆವಲಹಳ್ಳಿಯ ರಾಜಣ್ಣ ವಿಷಾದದಿಂದ ಹೇಳುತ್ತಾರೆ.

‘ಹಿಂದೆ ಇದೇ ಕೆರೆಯಲ್ಲಿ ಹಿಡಿದು ತಂದ ಮೀನುಗಳನ್ನು ನಾವು ಖರೀದಿಸುತ್ತಿದ್ದೆವು. ಈಗ ಉಚಿತವಾಗಿ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ. ಆದರೆ, ಇಲ್ಲಿ ಮೀನು ಹಿಡಿಯುವವರು ಅವುಗ­ಳನ್ನು ಮಾರಲು ನಗರದ ಮಾರು­ಕಟ್ಟೆಗಳಿಗೆ ಒಯ್ಯುತ್ತಾರೆ’ ಎಂದು ಅವರು ವಿವರಿಸುತ್ತಾರೆ.

‘ಕೆರೆಯ ಕೆಳಭಾಗದಲ್ಲಿ ನಮ್ಮ ಹೊಲವಿದೆ. ಬಾನಾಡಿಗಳ ದೊಡ್ಡ ದಂಡು ಇಲ್ಲಿ ಬಿಡಾರ ಹೂಡುತ್ತಿತ್ತು. ವಾರಾಂತ್ಯದ ದಿನಗಳಲ್ಲಿ ನಗರದ ಜನ ಪಕ್ಷಿಗಳನ್ನು ವೀಕ್ಷಿಸಲು, ಕ್ಯಾಮೆರಾದಲ್ಲಿ ಅವುಗಳನ್ನು ಸೆರೆ ಹಿಡಿಯಲು ಬರುತ್ತಿದ್ದರು. ಆದರೆ, ಈಗ ಪಕ್ಷಿಗಳ ಸಂಖ್ಯೆ ಕ್ಷೀಣವಾಗಿದೆ. ಸಾರ್ವಜನಿಕರು ವಾರಾಂತ್ಯದಲ್ಲಿ ಭೇಟಿ ಕೊಡುವ ಸಂಪ್ರದಾಯವೂ ತಪ್ಪಿದೆ. ಎಲ್ಲವೂ ಭರದಿಂದ ಬೆಳೆಯುತ್ತಿರುವ ನಗರೀಕರಣದ ಪ್ರಭಾವ’ ಎಂದು ರಾಜಣ್ಣ ಹೇಳುತ್ತಾರೆ.

ಬಿಬಿಎಂಪಿ ಈ ಕೆರೆಯ ಪಾಲಕನಾಗಿದ್ದು, ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನು­ವುದು ಸುತ್ತಲಿನ ಗ್ರಾಮಸ್ಥರ ದೂರಾಗಿದೆ. ಸುತ್ತ­ಲಿನ ದೊಡ್ಡ ಕಟ್ಟಡಗಳಿಂದ ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ಮೊದಲು ತಡೆಗಟ್ಟಬೇಕಿದೆ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT