ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆತುನಾರುವ ವ್ಯವಸ್ಥೆಗೆ ಕೊನೆ ಎಂದು?

ಬದಲಾವಣೆ ಬೇಕಾಗಿದೆ
Last Updated 1 ಜುಲೈ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಪಾಲಿಕೆಗೆ ನಾನು ಎರಡು ಸಲ ಆಯುಕ್ತನಾಗಿ ಕೆಲಸ ಮಾಡಿದ್ದೇನೆ. ಆ ಅನುಭವದಿಂದ ಹೇಳುವುದಾದರೆ ಪಾಲಿಕೆಯಲ್ಲಿ ಆಡಳಿತ ಸುಸೂತ್ರವಾಗಿ ನಡೆಯಲು ಮೊದಲು ಉತ್ತಮ ಸದಸ್ಯರು ಇರಬೇಕು. ಜನಹಿತ ಅರಿತು, ಅವರ ಕುಂದು–ಕೊರತೆ ಆಲಿಸಿ ಪಾಲಿಕೆ ಸಿಬ್ಬಂದಿಯಿಂದ ಕೆಲಸ ಮಾಡಿಸುವ ಚಾಕಚಕ್ಯತೆ ಅವರಲ್ಲಿರಬೇಕು. ಆದರೆ, ಜನಹಿತಕ್ಕಿಂತ ಸ್ವಹಿತಾಸಕ್ತಿಯೇ ಇತ್ತೀಚಿನ ದಿನಗಳಲ್ಲಿ ಎದ್ದು ಕಾಣುತ್ತಿದೆ.

ನನ್ನ ಆಡಳಿತದ ಅವಧಿಯಲ್ಲಿ ಎರಡೂ ವಿಧದ ಸದಸ್ಯರು ಇದ್ದರು. ಜನಹಿತ ಬಯಸಿದವರು ಮುಂದೆ ಉನ್ನತ ಸ್ಥಾನಕ್ಕೆ ಹೋದರು. ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ ಗುರಿ ಆಗಿಸಿಕೊಂಡವರು ಮುಂದೆ ಏನಾದರು ಎಂಬುದನ್ನೂ ಸಮಾಜ ಕಂಡಿದೆ. ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ನಗರ ಪ್ರಗತಿ ಸಾಧ್ಯ.

ಆಡಳಿತ ನಡೆಸಬೇಕಾದ ಅಧಿಕಾರಿಗಳು ಮತ್ತು ಸದಸ್ಯರು ಸರಿ ಇಲ್ಲದಿದ್ದರೆ ಮೂರಲ್ಲ, ಇಪ್ಪತ್ತು ಪಾಲಿಕೆಗಳನ್ನು ರಚಿಸಿದರೂ ಪ್ರಯೋಜನವಿಲ್ಲ. ಬಿಬಿಎಂಪಿಯಲ್ಲಿ ಕಾಣುವ ದುರವಸ್ಥೆಯ ಪ್ರತಿಬಿಂಬವನ್ನೇ ಮಿಕ್ಕೆಲ್ಲ ಕಡೆಗೂ ಕಾಣಬೇಕಾಗುತ್ತದೆ. ಅಧಿಕಾರಿಗಳು ಮತ್ತು ಸದಸ್ಯರ ನಡತೆ ಕುರಿತು ನಾನೇಕೆ ಇಷ್ಟೊಂದು ಒತ್ತುಕೊಟ್ಟು ಹೇಳುತ್ತಿದ್ದೇನೆ ಎಂಬುದು ಹಲವರಿಗೆ ಪ್ರಶ್ನೆಯಾಗಿ ಕಾಡಬಹುದು. ಆದರೆ, ಪಾಲಿಕೆ ಆಡಳಿತ ಕಾನೂನು ಚೌಕಟ್ಟಿನಲ್ಲಿ ನಡೆಯಬೇಕಾದರೆ ಅಲ್ಲಿದ್ದು ಆಡಳಿತ ನಡೆಸುವವರಲ್ಲಿ ಸನ್ನಡತೆ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಅದರ ಕೊರತೆ ಎದ್ದು ಕಂಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.

ನಗರದ ಜನ ತೆರಿಗೆ ರೂಪದಲ್ಲಿ ಕೊಟ್ಟ ಪ್ರತಿ ಪೈಸೆಯೂ ಸದುದ್ದೇಶಕ್ಕೆ ಖರ್ಚಾಗಬೇಕು. ಆ ಹಣ ಅಪವ್ಯಯ ಆಗಲು ಬಿಡಬಾರದು. ನಮ್ಮ ಯೋಜನೆಗಳು ಹೇಗಿರುತ್ತವೆ ಎಂದರೆ ಭರ್ತಿ ಮಳೆಗಾಲದಲ್ಲಿ ರಸ್ತೆ ಇಲ್ಲವೆ ಚರಂಡಿ ದುರಸ್ತಿಗೆ ಟೆಂಡರ್‌ ಕರೆಯುತ್ತೇವೆ. ಬೇಸಿಗೆಯಲ್ಲೇ ಚರಂಡಿಗಳ ಹೂಳು ತೆಗೆದು ಮಳೆಗಾಲಕ್ಕೆ ಸನ್ನದ್ಧಗೊಳಿಸಬೇಕು, ರಸ್ತೆ ಗುಂಡಿಗಳನ್ನೂ ಮುಚ್ಚಬೇಕು ಎಂಬ ಸಂಗತಿ ಏಕೋ ಮರೆತುಹೋಗುತ್ತದೆ.

ಯಾವುದೇ ಸ್ಥಳೀಯ ಸಂಸ್ಥೆ ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮೂರೇ ಮೂರು. ರಸ್ತೆ ಹಾಗೂ ಬೀದಿದೀಪ ಯಾವಾಗಲೂ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನೈರ್ಮಲ್ಯ ಕಾಪಾಡಬೇಕು ಮತ್ತು ಶುದ್ಧ ಕುಡಿಯುವ ನೀರು ಪೂರೈಸಿ, ಬಳಕೆಯಾದ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ನಗರ ಆಡಳಿತಕ್ಕೆ ರೂಪಿಸಲಾದ ಕರ್ನಾಟಕ ಮುನ್ಸಿಪಲ್‌ (ಕೆಎಂಸಿ) ಕಾಯ್ದೆಯಲ್ಲಿ ಉಲ್ಲೇಖವಾಗಿರುವ ಮುಖ್ಯ ಸಂಗತಿಗಳು ಇವಾಗಿವೆ.

ನಗರಕ್ಕೆ ನೀರು ಪೂರೈಸುವ ಮತ್ತು ಕೊಳಚೆಯನ್ನು ಸಾಗಿಸುವ ಹೊಣೆಯನ್ನು ಜಲಮಂಡಳಿ ಹೊತ್ತಿದೆ. ಉಳಿದಿರುವ ಕಾರ್ಯಗಳೆಂದರೆ ರಸ್ತೆ ಮತ್ತು ಬೀದಿದೀಪಗಳ ನಿರ್ವಹಣೆ ಮತ್ತು ತ್ಯಾಜ್ಯ ವಿಲೇವಾರಿ ಮೂಲಕ ನೈರ್ಮಲ್ಯ ವಾತಾವರಣದ ನಿರ್ಮಾಣ. ಈ ಕೆಲಸಗಳನ್ನು ಮಾಡಲು ಪಾಲಿಕೆ ಇಷ್ಟೊಂದು ತಿಣುಕಾಡಬೇಕೇ?

ಪಾಲಿಕೆಯಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು ತಕ್ಕ ಸಾಮರ್ಥ್ಯ ಹೊಂದಿರಬೇಕು. ಆದಾಯಕ್ಕೆ ತಕ್ಕಷ್ಟೇ ಬಜೆಟ್‌ ತಯಾರಿಸುವುದು, ಹಾಕಿಕೊಂಡ ಎಲ್ಲ ಯೋಜನೆ–ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಮುಗಿಸುವುದು, ಯಾವುದೇ ಕಾಮಗಾರಿ ಗುತ್ತಿಗೆ ನೀಡುವಾಗ ಅದರ ಆರಂಭ ಮತ್ತು ಮುಕ್ತಾಯದ ದಿನವನ್ನು ಮೊದಲೇ ನಿಗದಿಪಡಿಸುವುದು, ಗುಣಮಟ್ಟ ಕಾಯ್ದುಕೊಳ್ಳಲು ಸೂಕ್ತ ಷರತ್ತುಗಳನ್ನು ವಿಧಿಸುವುದು, ಅಂದಾಜು ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕುವುದು, ಕಾಮಗಾರಿ ನಡೆದಾಗ ತಪಾಸಣೆ ನಡೆಸುವುದು... ಇವೇ ಒಳ್ಳೆಯ ಸಾಮರ್ಥ್ಯದಿಂದ ಕೂಡಿದ ಆಡಳಿತದ ಲಕ್ಷಣಗಳು.

ತನ್ನ ಮೂಲ ಕೆಲಸಗಳನ್ನೇ ಮಾಡಲು ತಿಣುಕಾಡುತ್ತಿರುವ ಬಿಬಿಎಂಪಿ ಶಿಕ್ಷಣ ಮತ್ತು ಆರೋಗ್ಯದಂತಹ ಅಧಿಕ ಕಾರ್ಯಭಾರವನ್ನೂ ಹೊತ್ತುಕೊಂಡಿದೆ. ನಾನು ಆಯುಕ್ತನಾಗಿದ್ದಾಗ ಎಲ್ಲ ಶಾಲೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸುಪರ್ದಿಗೆ ಒಪ್ಪಿಸುವ ಪ್ರಯತ್ನ ಮಾಡಿದೆವು. ಆದರೆ, ಸಾಧ್ಯವಾಗಲಿಲ್ಲ. ಈಗಲೂ ಆ ಶಾಲೆಗಳಲ್ಲಿ ಸಾವಿರಾರು ಕಾಯಂ ಶಿಕ್ಷಕರ ಕೊರತೆ ಇದೆ. ಅಲ್ಲಿನ ಮಕ್ಕಳಿಗೆ ಸಕಾಲಕ್ಕೆ ಸಮವಸ್ತ್ರ ಸಹ ಸಿಗುವುದಿಲ್ಲ. ಶಿಕ್ಷಣಕ್ಕೆ ಮೀಸಲಾದ ಸ್ಥಾಯಿ ಸಮಿತಿಯೂ ಇದೆ. ಆ ಸಮಿತಿಗೆ ಬೇಕಾದ ಸಿಬ್ಬಂದಿ–ವಾಹನಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಶಾಲೆಗಳ ಸಮಸ್ಯೆ ಮಾತ್ರ ಹಾಗೇ ಇದೆ.

ಆರೋಗ್ಯ ಸೇವೆಯನ್ನು ಕೊಡಬೇಕಾದುದು ಸ್ಥಳೀಯ ಆಡಳಿತದ ಕರ್ತವ್ಯವೇನೋ ಹೌದು. ಪಾಲಿಕೆ ನಡೆಸುತ್ತಿರುವ ಆಸ್ಪತ್ರೆಗಳ ಸೇವಾ ಗುಣಮಟ್ಟ ಹೆಚ್ಚಿಸಲು ರಾಜ್ಯ ಆರೋಗ್ಯ ಇಲಾಖೆ ನೆರವಿಗೆ ಧಾವಿಸಬೇಕು. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರಿನ ಜನರ ಆರೋಗ್ಯದ ಹೊಣೆ ಸಹ ಈ ಇಲಾಖೆ ಮೇಲಿದೆ ಎಂಬುದನ್ನು ಮರೆಯುವಂತಿಲ್ಲ.

ಪಾಲಿಕೆಗಳ ರಚನೆಯಾದಾಗ ಇದ್ದ ಆಡಳಿತಾತ್ಮಕ ವ್ಯವಸ್ಥೆಯನ್ನೇ ಈಗಲೂ ಯಥಾಪ್ರಕಾರ  ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಇಂದಿನ ಅಗತ್ಯಗಳಿಗೆ ತಕ್ಕಂತೆ ಕೆಲವು ಮಾರ್ಪಾಡು ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಹಲವು ಇಲಾಖೆಗಳ ಅಗತ್ಯ ಇರಬಹುದು, ಕೆಲವು ಇಲ್ಲದಿರಬಹುದು. ಕೆಲವನ್ನು ಹೊಸದಾಗಿ ಸೃಜಿಸುವ ಅಗತ್ಯ ಇರಬಹುದು. ಅದಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕು.

ಒಂದು ಉದಾಹರಣೆ ಕೊಡುವುದಾದರೆ ಇದು ಇ–ಆಡಳಿತದ ಕಾಲ. ಮಾಹಿತಿ ತಂತ್ರಜ್ಞಾನ ಸಲಹೆಗಾರರನ್ನು ಬಿಟ್ಟರೆ ಅದಕ್ಕೆ ತಕ್ಕ ಶಾಖೆ ಪಾಲಿಕೆಯಲ್ಲಿಲ್ಲ. ಈ ಕುರಿತು ಆಲೋಚಿಸಬೇಕು. ಜನನ–ಮರಣ ಪ್ರಮಾಣಪತ್ರ ಸೇರಿದಂತೆ ಎಲ್ಲ ಸೌಲಭ್ಯ ಜನಸಾಮಾನ್ಯರಿಗೆ ಸುಲಭವಾಗಿ ಸಿಗಬೇಕು. ಒಂದೊಂದು ಕಡತ 22 ಟೇಬಲ್‌ಗಳಿಗೆ ಓಡಾಡುವಂತಹ ಕೊಳತು ನಾರುವ ವ್ಯವಸ್ಥೆಯನ್ನು ತೆಗೆದುಹಾಕಬೇಕು. ಕಡತದ ಸಾಚಾತನ ಪರಿಶೀಲಿಸಲು ಇಷ್ಟೊಂದು ಸಂಕೀರ್ಣ ವ್ಯವಸ್ಥೆ ಏಕೆ ಬೇಕು?

ಪಾಲಿಕೆಯ ದಸ್ತಾವೇಜು ಮತ್ತು ಉಗ್ರಾಣ ವಿಭಾಗ ಕಡತಗಳ ರಾಶಿಯಿಂದ ತುಂಬಿಹೋಗಿದೆ. ಈಗ ನಮಗೆ ಬೇಕಿರುವುದು ಕಡತಗಳ ವಿಲೇವಾರಿ ಮಾಡುತ್ತಾ ಕಾಲಹರಣ ಮಾಡುವುದಲ್ಲ, ಕ್ಷೇತ್ರಗಳಿಗೆ ತೆರಳಿ ಕರ್ತವ್ಯ ಪಾಲನೆ ಮಾಡುವುದು. ಸ್ಥಾಯಿ ಸಮಿತಿಗಳ ಹೆಸರಿನಲ್ಲಿ ನಡೆದ ಅನಗತ್ಯ ವೆಚ್ಚಗಳಿಗೂ ಕಡಿವಾಣ ಹಾಕಬೇಕು. ಎರವಲು ಹಾಗೂ ತಾತ್ಕಾಲಿಕ ಸೇವೆಗೆ ಕೊನೆಹಾಡಿ ಕಾಯಂ ಸಿಬ್ಬಂದಿ ನೇಮಕ ಮಾಡಬೇಕು. ಇದರಿಂದ ಕೆಲಸ ಮಾಡಿಸುವುದು ಸುಲಭವಾಗುತ್ತದೆ. ಕರ್ತವ್ಯಲೋಪಕ್ಕೆ ಶಿಕ್ಷೆ ಅನುಭವಿಸುವ ಭಯವೂ ಅವರಿಗೆ ಇರುತ್ತದೆ.

ಪಾಲಿಕೆಗಿಂತ ಅಧಿಕ ಸಿಬ್ಬಂದಿಯನ್ನು ಹೊಂದಿದ ಹಲವು ಸಂಸ್ಥೆಗಳು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಅವುಗಳೆಲ್ಲ ಅಷ್ಟೊಂದು ಶಿಸ್ತಾಗಿ ಕಾರ್ಯ ನಿರ್ವಹಣೆ ಮಾಡುವಾಗ ನಮಗೇಕೆ ಅದು ಅಸಾಧ್ಯ? ಪಾಲಿಕೆ ಕಚೇರಿಗಳಲ್ಲೂ ಅಂತಹ ಕಾರ್ಪೋರೇಟ್‌ ಶಿಸ್ತು ಬರಬೇಕು. ಇತ್ತೀಚೆಗೆ ನಾನು ಗಮನಿಸಿದಂತೆ ಅಧಿಕಾರಿಗಳಲ್ಲಿ ಹುಮ್ಮಸ್ಸು ಕಡಿಮೆಯಾಗಿದೆ. ‘ನಾವು ಕೆಲಸಕ್ಕೆ ಬಂದಿರುವುದು ಕೇವಲ ಹೊಟ್ಟೆಪಾಡಿಗಲ್ಲ’ ಎಂಬುದನ್ನು ಪಾಲಿಕೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ನೆನಪಿಡಬೇಕು.

ನನ್ನ ಊರು, ನನ್ನ ಜನಕ್ಕೆ ಏನಾದರೂ ಮಾಡಬೇಕು ಎಂಬ ಉತ್ಸಾಹ ಎಲ್ಲರಲ್ಲೂ ಪುಟಿದೇಳಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಇದೇ ಕಾರಣದಿಂದ ವಾರಕ್ಕೊಮ್ಮೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದೇಶ ಮತ್ತು ನಾಡಭಕ್ತಿ ಗೀತೆಗಳನ್ನು ಕೇಳಿಸುವ ವ್ಯವಸ್ಥೆ ಮಾಡುತ್ತಿದ್ದೆ. ಜನರೂ ಅಷ್ಟೇ. ಕೇವಲ ಅಧಿಕಾರಿಗಳನ್ನು ಬೈಯುತ್ತಾ ಕೂರುವಲ್ಲಿ ಅರ್ಥವಿಲ್ಲ.

ಎಷ್ಟು ಜನರಿಗೆ ಅಧಿಕಾರಿಗಳ ಹೆಸರು ಗೊತ್ತು? ತಮ್ಮ ದೂರು–ದುಮ್ಮಾನಗಳನ್ನು ಸೌಜನ್ಯದಿಂದ ಹೇಳಿ ಬಗೆಹರಿಸಿಕೊಳ್ಳುವ ಎಷ್ಟು ಜನರಿದ್ದಾರೆ? ಕೇಳಿದ ಸೌಲಭ್ಯ ನೀಡುವಷ್ಟು ಸಾಮರ್ಥ್ಯ ಅವರಿಗಿದೆಯೇ ಎಂಬುದನ್ನು ಯಾರು ಅವಲೋಕಿಸಿದ್ದಾರೆ? ಬಿಬಿಎಂಪಿಯಿಂದ ಉತ್ತಮ ಆಡಳಿತ ಮೂಡಿಬರಬೇಕಾದರೆ ಅಧಿಕಾರಿಗಳ ಸಮರ್ಪಣಾಭಾವ ಹಾಗೂ ಜನರ ಸಹಭಾಗಿತ್ವ, ಜನಪ್ರತಿನಿಧಿಗಳಲ್ಲಿ ಜನಹಿತ ಮನೋಭಾವ ಮೂರೂ ಸಮ್ಮಿಳಿತ ಆಗಬೇಕು.

(ಲೇಖಕ: ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ)
***

ಬಿಬಿಎಂಪಿಗೆ ಚುನಾವಣೆ ಘೋಷಣೆ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ‘ಪ್ರಜಾವಾಣಿ’ ತಜ್ಞರಿಂದ ಲೇಖನ ಆಹ್ವಾನಿಸಿ ಪ್ರಕಟಿಸುತ್ತಿದೆ. ಬಿಬಿಎಂಪಿಯಲ್ಲಿ ಬರುವ ಹೊಸ ಕೌನ್ಸಿಲ್‌ನ ಆಡಳಿತಕ್ಕೆ ಈ ಲೇಖನಮಾಲೆ ಒಂದು ದಿಕ್ಸೂಚಿ ಆಗಬೇಕು ಎನ್ನುವ ಆಶಯ ಪತ್ರಿಕೆಯದಾಗಿದೆ. ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT