ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಮನದಲ್ಲಿ ಅದೆಷ್ಟು ಗುಟ್ಟು?

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಇಂಗ್ಲೆಂಡ್‌ ಎದುರು ಟೆಸ್ಟ್ ಸರಣಿ ಸೋತ ಭಾರತದ ಆಟಗಾರರು ಕಟುಕರ ಮುಂದೆ ನಿಂತ ಕುರಿಗಳಂತೆ ಕಂಡರು...’
ಆಂಗ್ಲರ ನೆಲದಲ್ಲಿ ಭಾರತ ತೋರಿದ ಪ್ರದರ್ಶನ ವನ್ನು ಹೀಗೆ ಕಟುವಾಗಿ ಟೀಕಿಸಿದ್ದು ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಜೆಫ್ರಿ ಬಾಯ್ಕಾಟ್‌.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿದ್ದು ಈಗ ಹಳೆ ವಿಷಯ. ಆದರೆ, ವಿದೇಶದಲ್ಲಿ ಸರಣಿ ಆಡಲು ಹೋದಾಗ ಕ್ರಿಕೆಟಿಗರಿಗೆ ತಮ್ಮ ಪತ್ನಿ ಅಥವಾ ಗೆಳತಿಯ ಜೊತೆ ತಂಗಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದ್ದು  ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಸಿಸಿಐ ಮತ್ತು ಭಾರತ ತಂಡದ ಸಿಬ್ಬಂದಿ ನಡುವೆಯೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.

ಭಾರತ ತಂಡದ ಭಾವಿ ನಾಯಕ ಹಾಗೂ ಸಚಿನ್‌ ದಾಖಲೆಗಳನ್ನು ಅಳಿಸಿ ಹಾಕಬಲ್ಲ ಸಾಮರ್ಥ್ಯವಿರುವ ಭರವಸೆಯ ಆಟಗಾರ ಎಂದೆಲ್ಲಾ

ಕರೆಯಿಸಿಕೊಂಡಿದ್ದ ವಿರಾಟ್‌ ಕೊಹ್ಲಿ ವಿವಾದಕ್ಕೆ ಕಾರಣರಾಗಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮ ಜೊತೆಗೆ ಸುತ್ತಾಟ, ಶಾಪಿಂಗ್‌, ಪಬ್‌ ಹಾಗೂ ಕ್ಲಬ್‌ಗಳಲ್ಲಿ ಕೊಹ್ಲಿ ಕಾಲ ಕಳೆಯುತ್ತಿದ್ದಾರೆ. ಅವರಿಗೆ ಅಭ್ಯಾಸ ನಡೆಸಲು ಸಮಯವೇ ಇಲ್ಲದಂತಾಗಿದೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ. ಅಭ್ಯಾಸದ ಅವಧಿಯಲ್ಲಿ ಗೆಳತಿ ಜೊತೆ ಸುತ್ತುವುದೇ ಕೊಹ್ಲಿಗೆ ‘ಅಭ್ಯಾಸ’ವಾಗಿ ಬಿಟ್ಟಿದೆ.

ಟೆಸ್ಟ್ ಸರಣಿಯಲ್ಲಿ ಮುಖಭಂಗ ಅನುಭವಿಸಿದ ನಂತರ ಮಿಡ್ಲ್‌ಸೆಕ್ಸ್‌ ವಿರುದ್ಧ ಒಂದು ಅಭ್ಯಾಸ ಪಂದ್ಯವಿತ್ತು. ಇದು ಏಕದಿನ ಸರಣಿಗೆ ಸಜ್ಜಾಗಲು ವೇದಿಕೆಯೂ ಆಗಿತ್ತು. ಆದರೆ, ಕೊಹ್ಲಿ ಮಾತ್ರ ಅಭ್ಯಾಸ ನಡೆಸಲು ನೆಟ್ಸ್‌ನತ್ತ ಸುಳಿಯಲಿಲ್ಲ. ಇದು ಇಂಗ್ಲೆಂಡ್‌ನ ಮಾಧ್ಯಮಗಳಲ್ಲಿ ಬಹುಚರ್ಚೆಗೆ ಕಾರಣವಾಗಿತ್ತು.

ಒಂದು ವರ್ಷದ ಹಿಂದಿನ ಮಾತನ್ನು ಇಲ್ಲಿ ಹೇಳಲೇಬೇಕಿದೆ. ಕೊಹ್ಲಿ ಕ್ರೀಸ್‌ನಲ್ಲಿದ್ದರೆ ಸಾಕು. ಅದೇನೊ ಭರವಸೆ. ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ ಎನ್ನುವ ನಂಬಿಕೆ ಇರುತ್ತಿತ್ತು. ಅದರೆ, ಆಂಗ್ಲರ ನಾಡಿನಲ್ಲಿ ಅವರು ತೋರಿದ ಪ್ರದರ್ಶನ ಟೀಕಾಕಾರರಿಗೆ ಆಹಾರವಾಗಿದೆ. ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆರಂಭದಿಂದಲೂ ಕೊಹ್ಲಿ ಆಟದ ಬಗ್ಗೆ ಸಾಕಷ್ಟು ಬದ್ಧತೆ ಮೈಗೂಡಿಸಿಕೊಂಡಿದ್ದರು. ಅದಕ್ಕೆ ಇಲ್ಲೊಂದು ಉದಾಹರಣೆಯಿದೆ.

ಅದು 2006ರಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕ ಎದುರಿನ ರಣಜಿ ಪಂದ್ಯ. ಆಗ ವಿರಾಟ್‌ ತಂದೆ ಪ್ರೇಮ್‌ ಕೊಹ್ಲಿ ಮೃತಪಟ್ಟಿದ್ದರು. ಆಗ ತಂದೆಯ ಅಂತ್ಯಸಂಸ್ಕಾರ ದಲ್ಲಿ ಪಾಲ್ಗೊಂಡು ಬಂದು ಆ ಪಂದ್ಯದಲ್ಲಿ ಆಡಿ 90 ರನ್ ಗಳಿಸಿದ್ದರು. ಇದು ಕೊಹ್ಲಿ ಆಟದ ಬಗ್ಗೆ ಹೊಂದಿದ್ದ ಬದ್ಧತೆಗೆ ಸಾಕ್ಷಿ. ಆದರೆ ಈಗ?

ಕ್ರಿಕೆಟ್‌ ಈಗ ಕೇವಲ ಕ್ರೀಡೆಯಾಗಿಯಷ್ಟೇ ಉಳಿದಿಲ್ಲ ಎನ್ನುವುದು ಹೊಸ ವಿಷಯವೇನಲ್ಲ. ಈ ಮೋಹದ ಮಾಯಾಜಾಲದೊಳಗೆ ಹಣ, ಹೆಸರು, ಕೀರ್ತಿ, ಪ್ರತಿಷ್ಠೆ ಎಲ್ಲವೂ ಅಡಕವಾಗಿದೆ. ಆದ್ದರಿಂದ ಆಟಗಾರರು ಆಟಕ್ಕಿಂತ ಹೆಚ್ಚಾಗಿ ಇತರ ವಿಷಯಗಳ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಿದ್ದಾರೆ.

‘ಕೊಹ್ಲಿ ಅವರನ್ನು ನಾನು ಮದುವೆಯಾಗುವುದಿಲ್ಲ’ ಎಂದು ಹೇಳುತ್ತಿರುವ ಬಾಲಿವುಡ್‌ ನಟಿ ಅನುಷ್ಕಾ ಇಂಗ್ಲೆಂಡ್‌ನಲ್ಲಿ ಕೊಹ್ಲಿ ಜೊತೆ ಕೈ ಕೈ

ಹಿಡಿದು ಅಡ್ಡಾಡುತ್ತಿದ್ದಾರೆ. ಜೋಧಫುರ, ನ್ಯೂಜಿಲೆಂಡ್‌, ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ವೇಳೆ ಈ ಜೋಡಿ ಬಹಿರಂಗ ವಾಗಿಯೇ ಸಾಕಷ್ಟು ಸಲ ಕಾಣಿಸಿಕೊಂಡಿದೆ. ಅನುಷ್ಕಾ ಜನ್ಮದಿನದಿಂದು ಒಟ್ಟಾಗಿ ಪಾರ್ಟಿ ಮಾಡಿದ್ದು, ಇದೇ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿಕೊಂಡು ಮುಂಬೈಗೆ ಬಂದ ಕೊಹ್ಲಿ ನೇರವಾಗಿ ಅನುಷ್ಕಾ ಮನೆಗೆ ಹೋಗಿದ್ದು ಯಾವುದೂ ಗುಟ್ಟಾಗಿ ಉಳಿದಿಲ್ಲ. ಆದರೆ, ‘ನಮ್ಮಿಬ್ಬರ ನಡುವೆ ಉತ್ತಮ ಸ್ನೇಹವಿದೆಯಷ್ಟೇ‘ ಎಂದು ಅನುಷ್ಕಾ ಜಾರಿಕೊಳ್ಳುತ್ತಾಳೆ. ಆದರೆ, ದಿಕ್ಕು ಬದಲಿಸಿರುವ ಕೊಹ್ಲಿ ಹಾಗೂ ಅನುಷ್ಕಾ  ಮನದಲ್ಲಿ ಅದೆಷ್ಟು ಗುಟ್ಟುಗಳಿವೆಯೋ?

ಕೊಹ್ಲಿ ಆಟಕ್ಕಿಂತ ಹೆಚ್ಚಾಗಿ ಗೆಳತಿ ಜೊತೆ ಸಮಯ ಕಳೆಯುತ್ತಿರುವುದಕ್ಕೆ ಭಾರತ ತಂಡದ ಮ್ಯಾನೇಜರ್ ಸುನಿಲ್ ದೇವ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ ಎದುರಿನ ಸರಣಿಗೆ ನಿರ್ದೇಶಕರಾಗಿರುವ ಮಾಜಿ ನಾಯಕ ರವಿ ಶಾಸ್ತ್ರಿ ಕೂಡಾ ಆಕ್ಷೇಪಿಸಿದ್ದಾರೆ. ಆದರೆ, ಕೊಹ್ಲಿ ಮತ್ತು ಅನುಷ್ಕಾ ಒಟ್ಟಾಗಿ ಇರಲು ಬಿಸಿಸಿಐ ಒಪ್ಪಿಗೆ ನೀಡಿದೆ. ಒಂದೇ ಆಡಳಿತದ ಬಿಸಿಸಿಐನಲ್ಲಿ ಅದೆಷ್ಟೊಂದು ದ್ವಂದ್ವಗಳು ಇವೆಯಲ್ಲವೇ?

ಮತ್ತೆ ಈಗ ಆಟದ ವಿಷಯಕ್ಕೆ ಬರೋಣ. ಕೊಹ್ಲಿ ಜೂನಿಯರ್ ಕ್ರಿಕೆಟ್‌ನಿಂದಲೂ ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿ ಹೆಸರು ಮಾಡಿದವರು. ಇವರ ನಾಯಕತ್ವದಲ್ಲಿ ಭಾರತ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು. ಮೂರು ವರ್ಷಗಳ ಹಿಂದೆ ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯಲ್ಲೂ ಅವರು ಆಡಿದ್ದರು. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಾಗ ಒಟ್ಟು ಗರಿಷ್ಠ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಹೋದ ವರ್ಷ ಜಿಂಬಾಬ್ವೆ ಎದುರಿನ ಏಕದಿನ ಸರಣಿಗೆ ತಂಡವನ್ನು ಮುನ್ನಡೆಸಿದ್ದರು. ಆದರೆ, ಕೊಹ್ಲಿ ಈಗ ಹಿಂದಿನ ಹತ್ತು ಟೆಸ್ಟ್‌ನಿಂದ ಒಂದೂ ಅರ್ಧಶತಕ ಬಾರಿಸಿಲ್ಲ. ಈ ಸಲದ ಟೆಸ್ಟ್‌ ಸರಣಿಯ ಹತ್ತೂ ಇನಿಂಗ್ಸ್ ಸೇರಿ ಅವರು ಗಳಿಸಿದ್ದು 134 ರನ್‌ ಮಾತ್ರ!

ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಅವರು ಸೊನ್ನೆ ಸುತ್ತಿದ್ದಾರೆ. ಆರು ತಿಂಗಳು ಕಳೆದರೆ ಸಾಕು ಮಹತ್ವದ ಐಸಿಸಿ ವಿಶ್ವಕಪ್‌ ಆರಂಭವಾಗುತ್ತದೆ. ಆ ಟೂರ್ನಿಗೆ ಸಜ್ಜಾಗುವ ಸಲುವಾಗಿಯೇ ಬಿಸಿಸಿಐ ಇಂಗ್ಲೆಂಡ್‌ ಪ್ರವಾಸವನ್ನು ಆಯೋಜಿಸಿತ್ತು. ಮುಂದೆ ಏಕದಿನ ಮತ್ತು ಟೆಸ್ಟ್‌ ಸರಣಿ ಆಡಲು ವೆಸ್ಟ್‌ ಇಂಡೀಸ್‌ ಭಾರತಕ್ಕೆ ಬರಲಿದೆ. ನಂತರ ದೋನಿ ಪಡೆ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ವರ್ಷ ಪೂರ್ತಿ ಕ್ರಿಕೆಟ್ ಚಟುವಟಿಕೆಗಳೇ ಇರುವ ಕಾರಣ ಪತ್ನಿಯ ಜೊತೆ ತಂಗಲು ಆಟಗಾರರಿಗೆ ಬಿಸಿಸಿಐ ಸಮ್ಮತಿ ನೀಡಿದೆ. ಚೇತೇಶ್ವರ ಪೂಜಾರ, ಸ್ಟುವರ್ಟ್‌ ಬಿನ್ನಿ, ಆರ್‌. ಅಶ್ವಿನ್‌, ಗೌತಮ್‌ ಗಂಭೀರ್‌ ಅವರು ಇಂಗ್ಲೆಂಡ್‌ಗೆ ತಮ್ಮ ಪತ್ನಿಯರನ್ನು ಕರೆದು ಕೊಂಡು ಹೋಗಿದ್ದಾರೆ. ಆದರೆ, ಇವರೆಲ್ಲರಿಗಿಂತ ಹೆಚ್ಚಾಗಿ ಕೊಹ್ಲಿ ಮತ್ತು ಅನುಷ್ಕಾ ಜೋಡಿ ಹೆಚ್ಚು ಸುದ್ದಿ ಮಾಡಿದೆ. ಗೆಳತಿಯ ಜೊತೆಗಿನ ಸುತ್ತಾಟದ ಕಾರಣ ದಿಂದಲೇ ಕೊಹ್ಲಿ ಆಟ ಮಂಕಾಗಿದೆ ಎಂದು ಅವರ ಅಭಿಮಾನಿಗಳು ಅವಲತ್ತುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT