ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮಲ್‌ಗೆ ‘ವಿಷ್ಣು’ ಕಟಾಕ್ಷ!

Last Updated 28 ಮೇ 2015, 19:30 IST
ಅಕ್ಷರ ಗಾತ್ರ

ಗೆಲುವಿಗಾಗಿ ಎದುರು ನೋಡುತ್ತಿರುವ ನಟ ಕೋಮಲ್‌ಕುಮಾರ್ ‘ಲೊಡ್ಡೆ’ ಚಿತ್ರ ತಮ್ಮ ಕೈ ಹಿಡಿಯುತ್ತದೆ ಎಂಬ ಭರವಸೆಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ವಿಶ್ವಾಸ ಅವರ ಮೊಗದಲ್ಲಿ ತುಸು ಹೆಚ್ಚಾಗಿಯೇ ಕಾಣುತ್ತಿತ್ತು. ಇದನ್ನು ಸಮರ್ಥಿಸುವಂತೆ ಇಡೀ ತಂಡದವರು ಕೋಮಲ್‌ ಅವರನ್ನು ಹೊಗಳಿದ್ದೇ ಹೊಗಳಿದ್ದು. ವಿಶೇಷವೆಂದರೆ ವಿಷ್ಣುಸೇನಾ ಸಮಿತಿಯ ಸದಸ್ಯರು ಸೀಡಿ ಬಿಡುಗಡೆ ಮಾಡಿದರು.

ವಿಷ್ಣು ಅವರ ಹೆಸರು ಈ ಚಿತ್ರಕ್ಕೆ ಖಂಡಿತ ಸಹಾಯವಾಗುತ್ತದೆ ಎನ್ನುತ್ತಾರೆ ಕೋಮಲ್. ಹಿಂದೊಮ್ಮೆ ‘ನನ್ನ ಮುಂದಿನ ಚಿತ್ರವನ್ನು ನೀನು ನಿರ್ದೇಶಿಸುವೆ’ ಎಂದು ವಿಷ್ಣುವರ್ಧನ್ ಅವರು ಕೋಮಲ್‌ಗೆ ಹೇಳಿದ್ದರಂತೆ. ಅದು ಸಾಧ್ಯವಾಗದ ಮಾತು ಎಂದುಕೊಂಡಿದ್ದ ಕೋಮಲ್, ‘ಲೊಡ್ಡೆ’ ಚಿತ್ರದಲ್ಲಿ ವಿಷ್ಣು ಗುಣಗಾನ ಮಾಡುವ ಮೂಲಕ ಅವರಿಗೆ ಚಿತ್ರವನ್ನು ಅರ್ಪಿಸಲು ಸಿದ್ಧರಾಗಿದ್ದಾರೆ. ಕೋಮಲ್‌ಗೆ ನಾಯಕಿಯಾಗಿ ಆಮದು ಬೆಡಗಿ ಆಕಾಂಕ್ಷ ಪೂರಿ ನಟಿಸಿದ್ದಾರೆ. ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಇಲ್ಲಿ ಜೀವನಕ್ಕೆ ಹತ್ತಿರವಾದ ಪಾತ್ರವೇ ಸಿಕ್ಕಿದೆಯಂತೆ. ಮಮ್ಮೂಟಿ ಚಿತ್ರದಲ್ಲಿ ನಟಿಸಿರುವುದು ಅವರ ಹೆಮ್ಮೆ. ಕರಿಸುಬ್ಬು ಅವರು ಕೋಮಲ್ ತಂದೆಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

‘ಲೊಡ್ಡೆ’ ಶೀರ್ಷಿಕೆ ಸಿಗುತ್ತದೋ ಇಲ್ಲವೋ ಎಂಬ ಬಗ್ಗೆ ನಿರ್ದೇಶಕ ಎಸ್.ವಿ. ಸುರೇಶ್ ಅವರಿಗೆ ಅನುಮಾನ ಇತ್ತಂತೆ. ಆದರೆ ಎಡಚರ ಸಾಧನೆಯನ್ನು ನೋಡಿ, ಸಂತಸ ಪಟ್ಟು ಒಂದಷ್ಟು ಶ್ರಮ ವ್ಯಯಿಸಿ ಶೀರ್ಷಿಕೆಯನ್ನು ಪಡೆದುಕೊಂಡಿದ್ದಾರೆ ಅವರು. ತೆಲುಗು ಸಂಗೀತ ನಿರ್ದೇಶಕ ಚರಣ್ ಬ್ಯಾಂಜೊ ಮೊದಲ ಬಾರಿ ಕನ್ನಡ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಮೊಬೈಲ್ ನೋಡಿಕೊಂಡು ಕನ್ನಡ ಮಾತನಾಡುತ್ತಲೇ ‘ಇದು ನನ್ನ ಕನಸಿನ ಆಲ್ಬಂ’ ಎಂದರು ಚರಣ್. ಈ ಚಿತ್ರಕ್ಕಾಗಿ ಹಲವು ಖ್ಯಾತ ಗಾಯಕ ಗಾಯಕಿಯರ ಜೊತೆ ಕೆಲಸ ಮಾಡಿದ್ದು ಅವರಿಗೆ ಖುಷಿ ತಂದಿದೆ.

ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ವಿ. ನಾಗೇಂದ್ರಪ್ರಸಾದ್, ಹೃದಯಶಿವ, ಜಯಂತ ಕಾಯ್ಕಿಣಿ, ಎಸ್.ವಿ. ಸುರೇಶ್ ಸಾಹಿತ್ಯ ರಚಿಸಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕುನಾಲ್ ಗಾಂಜಾವಾಲ, ವಿಜಯ್‌ಪ್ರಕಾಶ್, ಶ್ರೇಯಾ ಘೋಷಾಲ್, ಹೇಮಂತ್ ಮುಂತಾದವರು ಹಾಡಿದ್ದಾರೆ. ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ವಿಷ್ಣುವರ್ಧನ್ ಸೂಪರ್‌ಸ್ಟಾರ್’ ಎಂಬ ಹಾಡನ್ನು ಹೃದಯಶಿವ ಬರೆದಿದ್ದಾರೆ. ಇದು ‘ಲುಂಗಿ ಡಾನ್ಸ್’ ಹಾಡಿನಿಂದ ಪ್ರೇರಣೆ ಪಡೆದಿದ್ದಂತೆ. ಅದಕ್ಕೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೀವತುಂಬಿದ್ದಾರೆ. ಮಂಜುನಾಥ್ ಎಂಬ ಹೊಸಬರ ನಿರ್ಮಾಣ ಇರುವ ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಆನಂದ್ ಆಡಿಯೊ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT