ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಸು ಕೈಮರ

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಪಿಯುಸಿಯ ನಂತರ ಏನು ಮಾಡಬೇಕು ಎಂಬುದಕ್ಕೆ ಸಂಬಂಧಿಸಿ ಕಳೆದ ಒಂದು ತಿಂಗಳಿನಿಂದ ಎಲ್ಲಾ ಮಾಧ್ಯಮಗಳಲ್ಲಿ ಬರುತ್ತಿರುವ ಸಲಹೆಗಳನ್ನು ಓದಿದ ನಂತರವೂ ನಿಮ್ಮನ್ನು ನಿರಾಶೆ ಆವರಿಸಿ ಕೊಂಡಿದೆಯೇ? ಪತ್ರಿಕೆಗಳಲ್ಲಿ ಬರುವ ವಿವಿಧ ಹೊಸ ಕೋರ್ಸ್‌ಗಳ ಪ್ರವೇಶಾತಿಯ ಜಾಹೀರಾತನ್ನು ನೋಡುವಾಗ ಕನಿಷ್ಠ ಅಂಕದ ಪ್ರಮಾಣವನ್ನು ನೀವು ಮೊದಲು ಗಮನಿಸುತ್ತಿದ್ದೀರೇ? ಅನಿಮೇಷನ್, ಫೈರ್‌ಸೇಫ್ಟಿ ಇಂಥ ಹೊಸ ಹೊಸ ಕೋರ್ಸ್‌ಗಳ ಜಾಹೀರಾತುಗಳು ನಿಮ್ಮನ್ನು ಹೆಚ್ಚು ಆಕರ್ಷಿಸುತ್ತಿವೆಯೇ? ಮೇಲಿನ ಪ್ರಶ್ನೆಗಳಲ್ಲಿ ಯಾವುದಾದರೂ ಒಂದಕ್ಕೆ ನೀವು ಹೌದು ಎಂದು ಉತ್ತರಿಸುತ್ತೀರಾದರೆ ಈ ಬರಹ ನಿಮಗಾಗಿ.

ನಿಮ್ಮ ಸ್ಥಿತಿಯೇನು ಹೊಸತಲ್ಲ. ಪ್ರತೀ ವರ್ಷವೂ ನಿಮ್ಮಂತಹ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿರುತ್ತದೆ. ಆದ್ದರಿಂದ ನೀವು ಮೊದಲು ನಾನು ಕನಿಷ್ಠ ಅಂಕಗಳಿಸಿ ಪಾಸಾಗಿರುವ ನತದೃಷ್ಟ ಎಂಬ ಮನಃಸ್ಥಿತಿಯಿಂದ ಹೊರಬನ್ನಿ.

ಮುಂದೇನು ಮಾಡಬಹುದು ಎಂಬುದನ್ನು ತಾರ್ಕಿಕವಾಗಿ ಮತ್ತು ನಿಮಗಿರುವ ಸಾಧ್ಯತೆಗಳ ನಡುವೆಯೇ ಆಲೋಚಿಸತೊಡಗಿ. ಬಿಡುಗಡೆ ಮಾರ್ಗಗಳು ನಿಮ್ಮೆದುರೇ ತೆರೆದುಕೊಳ್ಳುತ್ತವೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಈಗಾಗಲೇ ಹುಟ್ಟಿರಬಹುದು. ಅದಕ್ಕೂ ಮೊದಲು ನಿಮ್ಮ ಸ್ಥಿತಿಯನ್ನೊಮ್ಮೆ ಅವಲೋಕಿಸೋಣ.

ಎಸ್‌ಎಸ್‌ಎಲ್‌ಸಿ ನಂತರ ವಿಜ್ಞಾನ ವಿಷಯವನ್ನು ಆರಿಸಿಕೊಳ್ಳು ವುದು ಅತ್ಯಂತ ಶ್ರೇಷ್ಠ ಎಂಬ ಮನೋಭಾವ ನಿಮ್ಮ ಮನಸ್ಸಿನೊಳಗೂ ಇದೆ. ಆದರೆ ನೀವು ಎಸ್ಎಸ್ಎಲ್‌ಸಿಯಲ್ಲಿ ಪಡೆದ ಅಂಕಗಳು ನಿಮ್ಮನ್ನು ವಿಜ್ಞಾನ ವಿಷಯದಿಂದ ದೂರವಾಗಿಸಿತು. ಹಾಗೆಂದು ನಿಮಗೆ ವಾಣಿಜ್ಯದಲ್ಲಿ ಅವಕಾಶ ಪಡೆಯುವ ಅದೃಷ್ಟವೂ ಇರಲಿಲ್ಲ. ಕೊನೆಗೆ ಕಲಾ ವಿಷಯವನ್ನು ಆರಿಸಿಕೊಂಡಿದ್ದೀರಿ. ಇಲ್ಲವಾದರೆ ಎಸ್ಎಸ್‌ಎಲ್‌ಸಿಯಲ್ಲಿ ಉತ್ತಮ ಮಟ್ಟದ ಅಂಕಗಳೇ ಇದ್ದು ವಿಜ್ಞಾನ ವಿಷಯವನ್ನು ಆರಿಸಿಕೊಂಡು, ಆದರೆ ನೀವಂದುಕೊಂಡಂತೆ ಯಾವುದೂ ಸಂಭವಿಸದೆ ಹೇಗೋ ಕಷ್ಟಪಟ್ಟು ಪಿಯುಸಿಯ ಗಡಿ ದಾಟಿದ್ದೀರಿ.

ಮುಂದೇನು ಮಾಡಬೇಕೆಂಬ ನಿಮ್ಮ ಪ್ರಶ್ನೆಗೆ ಹಲವರು ಹಲವು ಉತ್ತರಗಳನ್ನು ನೀಡುತ್ತಿದ್ದಾರೆ. ನಿಮ್ಮ ಅಂಕಗಳು ಶೇಕಡಾ ಎಪ್ಪತ್ತರ ಗಡಿ ದಾಟಿದ್ದರೆ ಏನೇನು ಮಾಡಬಹುದಿತ್ತು. ಎಂಬತ್ತನ್ನು ಮೀರಿದ್ದರೆ ಎಂತೆಂಥಾ ಅವಕಾಶಗಳಿದ್ದವು ಎಂಬುದನ್ನು ಹೇಳುತ್ತಾ ಗಾಯಕ್ಕೆ ಉಪ್ಪು ಸವರುವ ಕೆಲಸ ಮಾಡುತ್ತಿರುತ್ತಾರೆ. ಅವರಿವರನ್ನು ಕೇಳುವುದರ ಬದಲಿಗೆ ಸ್ವಪ್ರಯತ್ನವೇ ಉತ್ತಮ ಎಂದು ಪತ್ರಿಕೆಗಳು, ನಿಯತಕಾಲಿಕಗಳಲ್ಲಿ ಪ್ರಕಟವಾಗುವ ವಿವಿಧ ಕಾಲೇಜುಗಳ ಜಾಹೀರಾತುಗಳನ್ನೂ ಲೇಖನಗಳನ್ನೂ ನೀವು ಓದತೊಡಗುತ್ತೀರಿ. ಅಲ್ಲಿನ ಪರಿಸ್ಥಿತಿಯೂ ಏನೂ ಭಿನ್ನವಲ್ಲ. ನೀರು ತಗ್ಗಿರುವತ್ತ ಹರಿವಂತೆ ಎಲ್ಲಾ ಸಲಹೆಗಳೂ ಭಾರಿ ಅಂಕಗಳನ್ನು ಗಳಿಸಿದವರನ್ನೇ ಉದ್ದೇಶಿಸಿರುತ್ತವೆ. ಮಾರ್ಗದರ್ಶನವೂ ಒಂದು ಬಗೆಯ ನೇತ್ಯಾತ್ಮಕ ಧೋರಣೆಯೊಂದಿಗೇ ದೊರೆಯುತ್ತಿರುವಾಗ ಏನು ಮಾಡಬೇಕು?

ಮೋಸ ಹೋಗಬೇಡಿ
ಮನುಷ್ಯ ದುರ್ಬಲನಾಗಿರುವಾಗ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಶಿಕ್ಷಣ ತಜ್ಞರು, ವೃತ್ತಿ ಮಾರ್ಗದರ್ಶನ ನೀಡುವ ತಜ್ಞರು ಮುಂತಾದವರೆಲ್ಲಾ ಗಮನಿಸದೇ ಇರುವುದನ್ನು ವಂಚಕರು ಬಹಳ ಸೂಕ್ಷ್ಮವಾಗಿ ಗಮನಿಸಿರುತ್ತಾರೆ. ನೀವು ಪಡೆದುಕೊಂಡಿರುವ ಕನಿಷ್ಠ ಪ್ರಮಾಣದ ಅಂಕಗಳೇ ಇಂಥವರಿಗೆ ಅವಕಾಶವನ್ನು ತೆರೆದಿರುತ್ತದೆ. ಆದ್ದರಿಂದ ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಹತಾಶ ನಿರ್ಧಾರಗಳಿಗೆ ಬರಬಾರದು.

ಪಿಯುಸಿ ಮತ್ತು ಸಿಇಟಿಯ ಫಲಿತಾಂಶಗಳು ಹೊರಬೀಳುತ್ತಿದ್ದಂ ತೆಯೇ ಎಲ್ಲಾ ಮಾಧ್ಯಮಗಳಲ್ಲಿಯೂ ನಿರ್ದಿಷ್ಟ ಬಗೆಯ ಜಾಹೀರಾತು ಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ಜಾಹೀರಾತೆಂದು ಗುರುತಿಸುವಂತೆ ಇರುತ್ತವೆ. ಇನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದರಷ್ಟೇ ಜಾಹೀರಾತು ಎಂದು ತಿಳಿಯುತ್ತವೆ. ಇವುಗಳು ಭಾರಿ ಭರವಸೆಗಳನ್ನು ನೀಡುತ್ತಿರುತ್ತವೆ.

ಕೋರ್ಸ್ ಮುಗಿದ ತಕ್ಷಣ ಕೆಲಸವನ್ನು ಕೊಡಿಸುತ್ತೇವೆ ಎಂಬ ಭರವಸೆಯೂ ಇರುತ್ತದೆ. ಇವುಗಳ ಕುರಿತು ನೀವು ಎಚ್ಚರದಿಂದ ಇರಬೇಕು. ಅನಿಮೇಷನ್ ಉದ್ದಿಮೆ ಭಾರತದಲ್ಲಿ ಬೃಹತ್ತಾಗಿ ಬೆಳೆಯುತ್ತದೆ ಎಂಬ ಪ್ರಚಾರ ತೀರಾ ಇತ್ತೀಚಿನ ತನಕವೂ ನಡೆಯುತ್ತಿತ್ತು. ಅದೇ ಆಧಾರದ ಮೇಲೆ ಅನಿಮೇಶನ್ ತರಬೇತಿ ಕೊಡುವ ಅನೇಕ ಸಂಸ್ಥೆಗಳೂ ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದವು. ಈಗ ಅವೆಲ್ಲಾ ಮುಚ್ಚಿವೆ. ಅನಿಮೇಶನ್ ಕ್ಷೇತ್ರದಲ್ಲಿ ಭಾರಿ ಕ್ರಾಂತಿಯೇನೂ ಆಗಿಲ್ಲ.

ಇನ್ನು ಕೆಲವು ಸಂಸ್ಥೆಗಳು ಐಐಟಿ ಮತ್ತು ಐಐಎಂಗಳನ್ನು ಮೀರಿದ ಸಂಸ್ಥೆ ತಮ್ಮದು ಎಂದು ಹೇಳಿಕೊಂಡು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಿರುತ್ತವೆ. ಇವು ಎಷ್ಟು ಕಡಿಮೆ ಅಂಕಗಳಿಸಿದ್ದರೂ ನೀವು ನಮ್ಮ ಕೋರ್ಸ್‌ಗಳಿಗೆ ಅರ್ಹರು ಎಂದು ಜಾಹೀರು ಮಾಡುತ್ತಿರುತ್ತವೆ. ವಿದೇಶದ ವಿಶ್ವವಿದ್ಯಾಲಯಗಳಿಂದ ಪದವಿಯ ಭರವಸೆಯನ್ನು ಕೆಲವು ಸಂಸ್ಥೆಗಳು ನೀಡುತ್ತಿದ್ದರೆ ಇನ್ನು ಕೆಲವು ಸಂಸ್ಥೆಗಳು ಭಾರತದ ಅಂಗೀಕೃತ ಮುಕ್ತ ವಿಶ್ವವಿದ್ಯಾಲಯದ ಪದವಿಯ ಭರವಸೆಗಳನ್ನು ನೀಡುತ್ತಿರುತ್ತವೆ.

ಇದನ್ನು ಪೂರ್ಣ ಪ್ರಮಾಣದಲ್ಲಿ ವಂಚನೆ ಎಂದು ಹೇಳಲು ಸಾಧ್ಯವಿಲ್ಲದೇ ಇದ್ದರೂ ಈ ಸಂಸ್ಥೆಗಳು ನಿರೀಕ್ಷಿಸುವ ಶುಲ್ಕದ ಮೊತ್ತಕ್ಕೂ ಪದವಿಯ ಮಹತ್ವಕ್ಕೂ ಯಾವುದೇ ಅರ್ಥಾರ್ಥ ಸಂಬಂಧವಿರುವುದಿಲ್ಲ. ಮುಕ್ತ ವಿಶ್ವವಿದ್ಯಾಲಯಗಳು ಅಥವಾ ದೂರಶಿಕ್ಷಣದ ಮೂಲಕ ಪದವಿ ಪಡೆಯಬೇಕೆಂದಿದ್ದರೆ ಈ ಮಧ್ಯವರ್ತಿಗಳ ಅಗತ್ಯವಿಲ್ಲ ಎಂಬುದು ನಿಮಗೆ ಗೊತ್ತಿರಬೇಕು.

ಮಾಹಿತಿ ತಂತ್ರಜ್ಞಾನ, ನೆಟ್‌ವರ್ಕಿಂಗ್, ಪ್ರೋಗ್ರಾಮಿಂಗ್ ಮುಂತಾದ ತರಬೇತಿಗಳನ್ನು ನೀಡುವ ಸಂಸ್ಥೆಗಳದ್ದು ಮತ್ತೊಂದು ಬಗೆಯ ವರಸೆ. ಇವುಗಳೆಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುವಷ್ಟು ಕೌಶಲವನ್ನು ನಿಮಗೆ ನೀಡುವ ಭರವಸೆ ನೀಡುತ್ತಿರುತ್ತವೆ. ಅದೃಷ್ಟವಶಾತ್ ಇವು ಪದವಿಗಳ ಭರವಸೆ ನೀಡುವುದಿಲ್ಲ. ಆದರೆ ಇಂತಹ ಕೋರ್ಸ್‌ಗಳಲ್ಲಿ ನೀವು ಅಲ್ಪಸ್ವಲ್ಪ ಕೌಶಲವನ್ನು ಕಲಿಯಬಹುದಾದರೂ ಮುಖ್ಯವಾಹಿನಿ ಎಂಜಿನಿಯರುಗಳ ಜೊತೆ ಸ್ಪರ್ಧಿಸಲಂತೂ ಸಾಧ್ಯವಿಲ್ಲ.

ನಿಮ್ಮ ಸದ್ಯದ ಆತಂಕಕ್ಕೆ ದಿಢೀರ್ ಪರಿಹಾರ ನೀಡುವ ಇಂಥ ಕೋರ್ಸ್‌ಗಳಿಂತ ದೂರವಿರುವುದು ಕ್ಷೇಮ. ಆಯಾ ಸಂಸ್ಥೆಯ ಜಾಹೀರಾತುಗಳನ್ನಷ್ಟೇ ನೋಡಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ಯಾವುದೇ ಹೊಸ ಸಂಸ್ಥೆ ಹೊಸ ಬಗೆಯ ಪದವಿಯ ಭರವಸೆ ನೀಡುತ್ತಿದ್ದರೆ ಮೊದಲು ಯುಜಿಸಿಯ (http://www.ugc.ac.in/page/Fake-Universities.aspx) ಜಾಲತಾಣಕ್ಕೆ ಹೋಗಿ ಅದು ನಕಲಿ ವಿಶ್ವವಿದ್ಯಾಲಯವಲ್ಲ ಎಂದು ಮೊದಲು ಖಚಿತ ಪಡಿಸಿಕೊಳ್ಳಿ.

ಸಿದ್ಧ ಮಾದರಿಗಳನ್ನು ಮೀರಿ
ಈ ಕಾಲದಲ್ಲಿ ಬಿ.ಎ, ಬಿ.ಎಸ್‌ಸಿಗಳಿಗೇನೂ ಬೆಲೆ ಇಲ್ಲ. ಏನಿದ್ದರೂ ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಮತ್ತು ಮೆಡಿಕಲ್‌ಗೆ ಅಷ್ಟೇ ಬೆಲೆ ಎಂಬ ಮಾತುಗಳನ್ನು ಪದೇ ಪದೇ ಕೇಳಿಸಿಕೊಂಡು ನೀವೂ ಅದನ್ನೇ ನಂಬುತ್ತಿರುತ್ತೀರಿ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿದೆ. ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಆಗಿರುವ ಬೆಳವಣಿಗೆಗಳನ್ನು ನೋಡಿ. ಭಾರತ ಸರ್ಕಾರದ ನೆರವಿನೊಂದಿಗೆ ಸ್ಥಾಪನೆಯಾಗಿರುವ ನಳಂದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ, ಇಂಟರ್ ನ್ಯಾಷನಲ್ ಫೌಂಡೇಶನ್ ಫಾರ್ ರಿಸರ್ಚ್ ಅಂಡ್ ಎಜುಕೇಶನ್ ಸ್ಥಾಪಿಸಿರುವ ಅಶೋಕ ವಿಶ್ವವಿದ್ಯಾಲಯ, ಜಿಂದಲ್ ಸ್ಕೂಲ್ ಲಿಬರಲ್ ಆರ್ಟ್ಸ್ ಅಂಡ್ ಹ್ಯುಮಾನಿಟೀಸ್, ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯಗಳೆಲ್ಲ ಮುಖ್ಯ ಉದ್ದೇಶವೇ ತಥಾಕಥಿತ ವೃತ್ತಿಶಿಕ್ಷಣಕ್ಕಿಂತ ಭಿನ್ನವಾಗಿ ಮಾನವಿಕಗಳು (ಕಲಾ ವಿಷಯಗಳು) ಮತ್ತು ಮೂಲಭೂತ ವಿಜ್ಞಾನ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ನೀಡುವುದು. ಈ ವಿಶ್ವವಿದ್ಯಾಲಯಗಳಲ್ಲಿ ಸೀಟು ಪಡೆಯುವುದಕ್ಕೆ ಅಂಕಗಳಿದ್ದರಷ್ಟೇ ಸಾಕಾಗುವುದಿಲ್ಲ. ಅವುಗಳು ನಡೆಸುವ ಸ್ವತಂತ್ರ ಪ್ರವೇಶ ಪರೀಕ್ಷೆಗಳಲ್ಲಿಯೂ ಪಾಸಾಗಬೇಕಾಗುತ್ತದೆ.

ಮೂಲ ವಿಜ್ಞಾನ, ಮಾನವಿಕಗಳು, ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ವಿಷಯಗಳ ಕೋರ್ಸ್‌ಗಳನ್ನೇ ಅನೇಕ ವಿಶ್ವವಿದ್ಯಾಲಯಗಳು ಮುಚ್ಚಿಬಿಡುತ್ತಿರುವ ಸಂಗತಿಗಳನ್ನೆಲ್ಲಾ ನೀವು ಓದಿರುತ್ತೀರಿ. ಈ ಬೆಳವಣಿಗೆಯೇ ನಿಮಗೆ ಒಂದು ಹೊಸ ಅವಕಾಶವನ್ನೂ ತೆರೆಯುತ್ತಿದೆ ಎಂಬುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಮೂಲ ವಿಜ್ಞಾನ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಇಲ್ಲದಿದ್ದರೆ ನಮ್ಮ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದ ನೆಲೆಗಟ್ಟೇ ಕುಸಿಯುತ್ತದೆ. ಅಂದರೆ ಶಿಕ್ಷಕರೇ ಇಲ್ಲದ ಪರಿಸ್ಥಿತಿ ಉದ್ಭವಿಸುತ್ತದೆ. ಆದ್ದರಿಂದ ಈ ಕೋರ್ಸ್‌ಗಳಿಗೆ ಸೇರಿಕೊಳ್ಳುವುದು ಸ್ಪರ್ಧಾರಹಿತವಾದ ಉದ್ಯೋಗ ಕ್ಷೇತ್ರವೊಂದಕ್ಕೆ ನೀವು ಕಾಲಿರಿಸುವುದಕ್ಕೆ ಸಮಾನ ಎಂಬುದನ್ನು ಮರೆಯದಿರಿ.

ಪ್ರತಿಷ್ಠೆ ಬಿಡಿ–ಆಸಕ್ತಿಯನ್ನು ಹಿಂಬಾಲಿಸಿ
ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ದೊರೆಯದೇ ಮಾನವಿಕಗಳನ್ನೋ ಮೂಲಭೂತ ವಿಜ್ಞಾನಗಳನ್ನೋ ಕಲಿತು ಪ್ರಯೋಜನವಿಲ್ಲ ಎಂಬ ಮನಃಸ್ಥಿತಿಯನ್ನು ತೊರೆದು ಬಿಡಿ. ಸರ್ಕಾರಿ ಕಾಲೇಜು ಎಂದರೆ ಅಲ್ಲಿ ಯಾವುದೂ ಸರಿ ಇರುವುದಿಲ್ಲ ಎಂಬ ಮನೋಭಾವವಂತೂ ಇರಲೇ ಕೂಡದು. ಈ ಪ್ರತಿಷ್ಠೆಗಳನ್ನೆಲ್ಲಾ ಬದಿಗಿಟ್ಟು ನಿಮ್ಮ ಆಸಕ್ತಿ ಏನು ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ.

ನಿಮ್ಮ ಮಾರ್ಕ್ಸ್ ಕಾರ್ಡ್ ಹೇಳುತ್ತಿರುವುದಷ್ಟೇ ಸತ್ಯವಲ್ಲ. ನಿಮ್ಮ ಆಸಕ್ತಿ ಏನೆಂಬುದು ನಿಮಗೇ ಚೆನ್ನಾಗಿ ಗೊತ್ತಿರುತ್ತದೆ. ನಿಮಗಿಷ್ಟವಾಗಿರುವ ಅರ್ಥಶಾಸ್ತ್ರವನ್ನು ಕಲಿಯುವುದಕ್ಕೆ ಕಾಲೇಜೊಂದು ಅವಕಾಶ ಮಾಡಿಕೊಡುತ್ತದೆ ಎಂದಾದರೆ ಅದಕ್ಕೆ ಸೇರುವ ಧೈರ್ಯ ಮಾಡಿ. ನಿಮ್ಮಿಷ್ಟದ ಭೌತಶಾಸ್ತ್ರಕ್ಕೆ ನಿಮಗೆ ನಿಮ್ಮೂರಿನ ಪಕ್ಕದಲ್ಲೇ ಇರುವ ಸರ್ಕಾರಿ ಕಾಲೇಜಿನಲ್ಲಿ ಸೀಟು ದೊರೆತರೆ ಅದನ್ನು ಆರಿಸಿಕೊಳ್ಳಿ.

ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಯುವುದಕ್ಕಾಗಿ ನಿಮ್ಮ ಆಸಕ್ತಿಯನ್ನು ಯಾವುದೇ ಕಾರಣಕ್ಕೂ ಬಲಿಕೊಡಬೇಡಿ. ಅದು ನಿಮ್ಮನ್ನು ದೂರಗಾಮಿಯಾಗಿ ಕಾಡುತ್ತದೆ. ಇಂಥದ್ದೊಂದು ಕೋರ್ಸ್ ಆರಿಸಿಕೊಳ್ಳುವ ಹೊತ್ತಿಗೆ ನಿಮಗೆ ಅತ್ಯಂತ ದೊಡ್ಡ ಅಡ್ಡಿಯಾಗಿ ಪರಿಣಮಿಸುವುದು ಪುಕ್ಕಟೆ ಸಲಹೆಗಳು. ಅಂದರೆ ‘ಈಗ ಫಿಸಿಕ್ಸ್‌ಗೆ ಅಷ್ಟೇನೂ ಸ್ಕೋಪ್ ಇಲ್ಲ. ಕಂಪ್ಯೂಟರ್ ಸೈನ್ಸ್ ತೆಗೆದುಕೋ’ ಅಥವಾ ‘ಹಿಸ್ಟರಿ ಓದಿದರೆ ಏನಾಗುತ್ತೆ. ಯಾವುದಾದರೂ ಕಂಪ್ಯೂಟರ್ ಕೋರ್ಸ್‌ಗೆ ಸೇರು’ ಈ ಬಗೆಯ ಯಾವ ಸಲಹೆಗಳನ್ನೂ ನೀವು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಈ ಬಗೆಯ ಸಲಹೆ ಕೊಡುವವರಿಗೆ ವಾಸ್ತವದಲ್ಲಿ ಏನೇನೂ ತಿಳಿದಿರುವುದಿಲ್ಲ.

ಆಸಕ್ತಿಯ ಬೆನ್ನು ಹತ್ತಿದರೆ ನೀವು ಗಳಿಸುವ ಜ್ಞಾನ ನಿಮಗೆ ಅನ್ನ ಕೊಡಬಹುದು. ಆದರೆ ಹಣದ ಬೆನ್ನು ಹತ್ತಿದರೆ ನಿಮಗೆ ಹಣವೂ ಸಿಗುವುದಿಲ್ಲ. ಜ್ಞಾನವೂ ಸಿಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಒಮ್ಮೆ ಜ್ಞಾನ ನಿಮ್ಮ ಕೈವಶವಾಯಿತೆಂದರೆ ಉಳಿದೆಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.

ಹಳೆಯ ತಪ್ಪು ಮರುಕಳಿಸದಿರಲಿ
ಈಗಾಗಲೇ ಅಂಕವೆಂಬ ಮಾಯಾಂಗನೆ ನಿಮಗೆ ವಂಚಿಸಿದ್ದಾಳೆ. ಈ ವಂಚನೆ ಹೇಗಾಯಿತು ಎಂಬುದರ ಕುರಿತು ಸ್ವಲ್ಪ ಆಲೋಚಿಸಿ. ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಈ ಎಲ್ಲಾ ಕಾರಣಗಳೂ ನಿಮ್ಮನ್ನು ಒಂದು ಸತ್ಯದತ್ತ ಕೊಂಡೊಯ್ಯುತ್ತದೆ. ಪರೀಕ್ಷೆಗಳಲ್ಲಿ ಅಂಕ ಕಡಿಮೆಯಾಗುವುದಕ್ಕೆ ಇರುವ ಮುಖ್ಯ ಕಾರಣಗಳು ಎರಡೇ. ಮೊದಲನೆಯದ್ದು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವುದು. ಎರಡನೆಯದ್ದು ಅರ್ಥವಾಗಿರುವುದನ್ನು ಉತ್ತರ ಪತ್ರಿಕೆಯಲ್ಲಿ ಸರಿಯಾಗಿ ಮಂಡಿಸದೇ ಇರುವುದು. ಈ ಎರಡೂ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ ಎಂದು ತೀರ್ಮಾನಿಸಿ.

ಈ ತೀರ್ಮಾನವೇ ನಿಮಗೆ ಮುಂದಿನ ದಾರಿಯನ್ನು ತೋರಿಸುತ್ತದೆ. ನಿಮಗೆ ಆಸಕ್ತಿ ಇರುವ ವಿಷಯವನ್ನು ನೀವು ಕೇವಲ ತರಗತಿಯ ಪಾಠದಿಂದಷ್ಟೇ ಕಲಿಯಬೇಕಾಗಿಲ್ಲ. ಅದರ ಜೊತೆಗೆ ಗ್ರಂಥಾಲಯ, ಪತ್ರಿಕೆ, ನಿಯತಕಾಲಿಕಗಳು ಹೀಗೆ ಎಲ್ಲೆಲ್ಲಿಯೂ ಆ ವಿಷಯಕ್ಕೆ ಸಂಬಂಧಿಸಿದ್ದನ್ನು ಓದುತ್ತಾ ಹೋಗಿ. ನಿಮಗೆ ಅರ್ಥವಾದದ್ದೇನು ಎಂಬುದನ್ನು ನೀವೇ ಬರೆಯಲು ಪ್ರಯತ್ನಿಸಿ. ಈ ಪ್ರಕ್ರಿಯೆಯಲ್ಲಿ ನೀವು ವಿಷಯ ಮತ್ತು ಅದನ್ನು ಮಂಡಿಸಬೇಕಾದ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸುತ್ತಾ ಹೋಗುತ್ತೀರಿ. ಯಾವುದೇ ಪಠ್ಯವನ್ನು ಓದುವಾಗಲೂ ಅದರ ವಾಕ್ಯಬಂಧ ಮತ್ತು ತಾರ್ಕಿಕತೆಯನ್ನು ಗಮನಿಸುತ್ತಾ ಹೋಗಿ. ಅದು ನಿಮ್ಮ ಅಭಿವ್ಯಕ್ತಿ ಕೌಶಲವನ್ನು ಹೆಚ್ಚಿಸುತ್ತದೆ.

ಸವಾಲನ್ನು ಸ್ವೀಕರಿಸಿ
ವಿಜ್ಞಾನ ಮತ್ತು ಕಲಾ ವಿಷಯಗಳೆರಡರಲ್ಲೂ ಸಾಧಾರಣ ಪ್ರಮಾಣದ ಅಂಕ ಪಡೆಯುವವರನ್ನೆಲ್ಲಾ ಕಾಡುವ ಮುಖ್ಯ ಸಮಸ್ಯೆಯೆಂದರೆ ಗಣಿತ ನನಗೆ ಅರ್ಥವಾಗುವುದಿಲ್ಲ. ಚರಿತ್ರೆಯ ವಿವರಗಳು ನೆನಪಿನಲ್ಲಿ ಉಳಿಯುವುದಿಲ್ಲ ಎಂಬಂಥವು. ಕಲೆ, ವಿಜ್ಞಾನ, ತತ್ವಶಾಸ್ತ್ರ ಹೀಗೆ ಏನನ್ನು ಕಲಿಯಲು ಹೊರಟರೂ ಗಣಿತ, ಚರಿತ್ರೆ ಮತ್ತು ಭಾಷೆ ಈ ಮೂರೂ ಮುಖ್ಯವಾಗುತ್ತವೆ. ಅರ್ಥಶಾಸ್ತ್ರದಲ್ಲಿ ಗಣಿತವಿರುವುದಿಲ್ಲ ಎಂದುಕೊಂಡು ಕೋರ್ಸ್ ಆರಿಸಿಕೊಂಡು ಮುಂದೆ ಗಣಿತ ಸೂತ್ರಗಳು ಬಂದಾಗ ಕಂಗಾಲಾಗಿ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಹಾಗೆ ನೋಡಿದರೆ ಇದೇನು ಕ್ಲಿಷ್ಟದ ಗಣಿತವೂ ಅಲ್ಲ. ನಿಧಾನವಾಗಿ ಅದರ ತರ್ಕವನ್ನು ಬಿಡಿಸಲು ಪ್ರಯತ್ನಿಸದರೆ ಕಬ್ಬಿಣದ ಕಡಲೆಯೂ ಮೆತ್ತಗಾಗುತ್ತದೆ.

ಇದಕ್ಕೆ ಬೇಕಿರುವುದು ಸವಾಲನ್ನು ಎದುರಿಸುವ ಧೈರ್ಯ ಮಾತ್ರ. ಗಣಿತಕ್ಕೆ ಭಯ ಪಟ್ಟರೆ ವಿವರಗಳು ನೆನಪಿನಲ್ಲಿ ಉಳಿಯುವುದಿಲ್ಲ ಎಂದು ಬೇಸರ ಮಾಡಿಕೊಂಡರೆ ಪ್ರಯೋಜನವಿಲ್ಲ. ಅರ್ಥವಾಗದ್ದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ತಾನೇ ತಾನಾಗಿ ನೆನಪಿನಲ್ಲಿ ಉಳಿಯುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಮಗೆ ವಿವರಗಳು ನೆನಪಿನಲ್ಲಿ ಉಳಿಯುವುದೇ ಅದರ ಜೊತೆಗಿನ ಸುದೀರ್ಘ ಒಡನಾಟದಿಂದ. ಅರ್ಥವಾಗದ ವಿಷಯದ ಕುರಿತು ಹೆಚ್ಚು ಆಲೋಚಿಸಿದಷ್ಟೂ ಅದು ಹತ್ತಿರವಾಗುತ್ತದೆ.

ಎಲ್ಲದಕ್ಕಿಂತ ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕಾದ ಅಂಶವೊಂದಿದೆ. ನಿಮಗೆ ದೊರೆತಿರುವುದು ಕಡಿಮೆ ಅಂಕಗಳು ಮಾತ್ರ. ನಿಮ್ಮ ಬುದ್ಧಿಶಕ್ತಿಯೇನು ಕಡಿಮೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT