ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಕೆರಂಗ ಇಸ್ತಾಂಬುಲ್!

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ನಾ ಕೋಳೀಕೆ ರಂಗಾ
‘ಕೋ’ ನು ‘ಳೀ’ ನು ‘ಕೇ’ ನು ‘ರ’ ನು ‘ಸೊನ್ನೆ’ಯುನು‘ಗಾ’...
ಕೈಲಾಸಂ ಅವರ ಈ ಹಾಡು ಗುನುಗದವರಿಲ್ಲ. ಇಂಗ್ಲಿಷ್‌ನ ‘ಕಾನ್‌ಸ್ಟಾಂಟಿನೋಪಲ್’ ಹಾಡನ್ನು ‘ಕೋಳಿಕೆರಂಗ’ ಆಗಿಸಿದ್ದ ಟಿಪಿಕಲ್‌ ಟಿ.ಪಿ. ಕೈಲಾಸಂ ಅವರ ರಚನೆಯನ್ನು ಜನಪ್ರಿಯಗೊಳಿಸಿದ್ದು ಸಿ.ಆರ್‌. ಸಿಂಹ ಮತ್ತು ಸಿ. ಅಶ್ವತ್ಥ್‌ ಜೋಡಿ. ‘ಕಾನ್‌ಸ್ಟಾಂಟಿನೋಪಲ್’ ಇಂಗ್ಲಿಷ್‌ ಹಾಡನ್ನು ಸಿ.ಆರ್‌. ಸಿಂಹ ಹಾಡಿದ್ದರೆ, ‘ನಾನ್‌ ಕೋಳೀಕೆ ರಂಗಾ’ ಎಂದು ಸಿ. ಅಶ್ವತ್ಥ್‌ ಹಾಡಿದ್ದರು.

ಎಲ್ಲೋ ದೂರದ ‘ಏಷ್ಯಾ ಮೈನರ್‌’ನ ಭಾಗವಾದ, ಹಿಂದೊಮ್ಮೆ ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾನ್‌ಸ್ಟಾಂಟಿನೋಪಲ್, ಕೈಲಾಸಂ ಅವರ ಕಾರಣದಿಂದ ಕನ್ನಡಿಗರಿಗೆ ಪರಿಚಿತ ಹೆಸರು. ಟರ್ಕಿ ದೇಶದ ಪ್ರಮುಖ ನಗರ ಕಾನ್‌ಸ್ಟಾಂಟಿನೋಪಲ್ ಅನ್ನು ಈಗ ಇಸ್ತಾನ್‌ಬುಲ್‌ ಎನ್ನುತ್ತಾರೆ.

ಇತಿಹಾಸ
ಸುಮಾರು 28 ಶತಮಾನಗಳ ಐತಿಹ್ಯವಿರುವ ಈ ನಗರಿಯನ್ನು ಬೈಜಾಂಟೈನ್‌, ಕಾನ್‌ಸ್ಟಾಂಟಿನೋಪಲ್ ಮತ್ತು ಇಸ್ತಾನ್‌ಬುಲ್‌ ಎಂಬ ಹೆಸರುಗಳಿಂದ ಕರೆಯಲಾಗಿದೆ. ಕ್ರಿ.ಶ. 340ರಿಂದ 1453ರವರೆಗಿನ ಸುಮಾರು 11 ಶತಮಾನಗಳ ಅವಧಿಯಲ್ಲಿ ಕಾನ್‌ಸ್ಟಾಂಟಿನೋಪಲ್ ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಎಂದು ಪರಿಗಣಿತವಾಗಿತ್ತು. ಆಗ ಕಾನ್‌ಸ್ಟಾಂಟಿನೋಪಲ್ ಇಡೀ ಯೂರೋಪ್‌ಗೇ ವೈಭವೋಪೇತ ಮತ್ತು ಸಂಪದ್ಭರಿತ ನಗರವೆಂದು ಪ್ರಸಿದ್ಧವಾಗಿತ್ತು. ವಿಶೇಷವೆಂದರೆ ಪ್ಯಾರಿಸ್‌ ಮತ್ತು ಲಂಡನ್‌ ಆಗ ಪ್ರಗತಿಯನ್ನೇ ಕಾಣದ ಕೇವಲ ಶೈಶಾವಸ್ಥೆಯ ಊರುಗಳಾಗಿದ್ದವು.

ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಮಧ್ಯೆ ನಡುವೆ ಇದ್ದ ಪ್ರಾಚೀನ ವ್ಯಾಪಾರ ಮಾರ್ಗದಲ್ಲಿನ ಪ್ರಮುಖ ಸ್ಥಳ ಕಾನ್‌ಸ್ಟಾಂಟಿನೋಪಲ್. 1453ರಲ್ಲಿ ಟರ್ಕಿಯ ರಾಜ ಎರಡನೆಯ ಮಹಮ್ಮದ್‌ನು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಅಲ್ಲಿಗೆ ಇಸ್ಲಾಂ ಪ್ರವೇಶ ಪಡೆಯಿತು. ಪ್ರಾಚೀನ ವ್ಯಾಪಾರ ಮಾರ್ಗ ತಪ್ಪಿಹೋಗಿ ಯೂರೋಪಿನ ವರ್ತಕರು ಪರ್ಯಾಯ ಮಾರ್ಗದ ಅನ್ವೇಷಣೆ ಮಾಡುವಂತಾಯಿತು.

ಇಸ್ತಾನ್‌ಬುಲ್‌ನ ಪ್ರಸಿದ್ಧ ‘ತೊಪ್ಕಾಪಿ ಅರಮನೆ’, ‘ಗ್ರಾಂಡ್‌ ಬಜಾರ್‌’ ಮತ್ತು ‘ಬೃಹತ್‌ ಮಸೀದಿ’ಗಳ ನಿರ್ಮಾಣವಾದದ್ದು ಎರಡನೆಯ ಮಹಮ್ಮದ್‌ ಅವಧಿಯಲ್ಲಿ. ಆದರೆ ಒಟ್ಟೊಮಾನ್‌ ಸಾಮ್ರಾಜ್ಯ ತನ್ನ ಉತ್ತುಂಗವನ್ನು ಕಂಡದ್ದು ಸುಲೇಮಾನ್‌ (1522–66) ದೊರೆಯ ಅವಧಿಯಲ್ಲಿ. ಒಟ್ಟೊಮಾನ್‌ ದೊರೆಗಳು 1914ರ ಮೊದಲ ವಿಶ್ವಯುದ್ಧದಲ್ಲಿ ಜರ್ಮನಿ, ಆಸ್ಟ್ರಿಯಾ ಮತ್ತು ಹಂಗೇರಿಯ ಪರವಾಗಿದ್ದರು. 1923 ರಲ್ಲಿ ಸ್ವತಂತ್ರ ರಾಷ್ಟ್ರವಾದ ಟರ್ಕಿ, ಅಂಕಾರ ನಗರವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡಿತು.

ಜನಜಂಗುಳಿಯಿಂದ ಗಿಜಿಗುಡುವ ಪುರಾತನ ಗ್ರ್ಯಾಂಡ್‌ ಬಜಾರ್‌, ಬೃಹತ್‌ ಮಸೀದಿಗಳು, ಸಾಮೂಹಿಕ ಸ್ನಾನ ಗೃಹಗಳಾದ ಹಮಾಮ್‌ಗಳು, ಅದ್ಭುತ ಅರಮನೆಗಳು ಕಾನ್‌ಸ್ಟಾಂಟಿನೋಪಲ್‌ನ ಓಟ್ಟೊಮನ್‌ ಕಾಲದ ಹಿರಿಮೆಯನ್ನು ಪ್ರತಿನಿಧಿಸುತ್ತವೆ. ಮಸೀದಿಯ ಪ್ರಾರ್ಥನಾ ಸದ್ದಿನ ಹಿನ್ನೆಯಲ್ಲಿ ಕಂಡು ಬರುವ ತಲೆಗೆ ಸ್ಕಾರ್ಫ್‌ ಸುತ್ತಿಕೊಂಡ ಹೆಣ್ಣುಮಕ್ಕಳು, ಹುಕ್ಕಾ ಸೇದುವ ಗಂಡಸರು, ವಿಶೇಷ ಟರ್ಕಿಶ್‌ ಚಿತ್ರಕಲೆ, ವಸ್ತ್ರವಿನ್ಯಾಸ, ಖಾದ್ಯ, ಟೀ ಮುಂತಾದವುಗಳೊಂದಿಗೆ ಆಧುನಿಕ ಇಸ್ತಾನ್‌ಬುಲ್‌ ಕಂಗೊಳಿಸುತ್ತದೆ. ಹಳತು ಹೊಸತುಗಳ ಸಮ್ಮಿಶ್ರಣದಿಂದ ಈ ನಗರವು ಕ್ರಿಯಾಶೀಲವಾಗಿ, ಉತ್ಸಾಹಭರಿತವಾಗಿ, ಆಧುನಿಕವಾಗಿ ಕಾಣಿಸುತ್ತಿದೆ. ತನ್ನ ದೇಶದ ರಾಜಧಾನಿಯಾಗದಿದ್ದರೂ ಈ ನಗರವು ಟರ್ಕಿ ರಾಷ್ಟ್ರದ ವಾಣಿಜ್ಯ, ಸಾಂಸ್ಕೃತಿಕ ಮತ್ತು ಪ್ರಾಜ್ಞ ಮನಸ್ಸಿನ ಹೃದಯದಂತಿದೆ.

ಬಾಸ್ಫೋರಸ್‌ ಜಲಸಂಧಿಯು ಇಸ್ತಾನ್‌ಬುಲ್‌ ನಗರವನ್ನು ಏಷಿಯಾ ಮತ್ತು ಯೂರೋಪ್‌ ಖಂಡದಿಂದ ಬೇರ್ಪಡಿಸುತ್ತದೆ. ಆಧುನಿಕ ಮತ್ತು ಪುರಾತನ ಅಂಶಗಳೊಂದಿಗೆ ಏಷಿಯಾ – ಯೂರೋಪ್‌ ಎರಡೂ ಖಂಡಗಳ ಗುಣಾಂಶಗಳನ್ನೂ ಈ ನಗರ ಒಳಗೊಂಡಿದೆ.

ರಸಿಕರ ಕಂಗಳ ಸೆಳೆಯುವ ನೋಟ
ಹೇಗಿಯಾ ಸೋಫಿಯಾ ಅಥವಾ ಅಯಾ ಸೋಫಿಯಾ ಇಸ್ತಾನ್‌ಬುಲ್‌ನ ಒಂದು ಪ್ರಮುಖ ಆಕರ್ಷಣೆ. ಇದು ಮೂಲತಃ ಪುರಾತನ ಬೈಜಾಂಟೈನ್‌ ಕಾಲದ ಸುಂದರ ಚರ್ಚ್‌ ಆಗಿದ್ದು, ಒಟ್ಟೊಮಾನ್‌ ಕಾಲದಲ್ಲಿ ಮಸೀದಿಯಾಗಿ, ಈಗ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ವಸ್ತುಸಂಗ್ರಹಾಲಯವಾಗಿದೆ. ಅಲ್ಲಿರುವ ವಸ್ತುಗಳೊಂದಿಗೆ ಈ ಕಟ್ಟಡದ ವಾಸ್ತುಶಿಲ್ಪವೂ ನೋಡುಗರ ಆಕರ್ಷಣೆಯ ಭಾಗವಾಗಿದೆ.

ಸುಮಾರು 400 ವರ್ಷಗಳ ಕಾಲ ಒಟ್ಟೊಮಾನ್‌ ಅರಸರ ವಾಸಸ್ಥಳವಾಗಿದ್ದ ನಗರದೊಳಗಿನ ನಗರದಂತಿರುವ ತೊಪ್ಕಾಪಿ ಅರಮನೆ ನೋಡಲೇಬೇಕಾದ ಸ್ಥಳ. ರಾಜರ ಸೇವೆಗಾಗಿ ಆ ಕಾಲದಲ್ಲಿ ಸುಮಾರು 7000 ಮಂದಿ ಅರಮನೆಯಲ್ಲಿ ದುಡಿಯುತ್ತಿದ್ದರಂತೆ. ಅಲ್ಲಿನ 300 ಕೋಣೆಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ 40 ಕೋಣೆಗಳು ಮಾತ್ರ ಲಭ್ಯವಿವೆ. ಪರ್ಷಿಯಾ ದೊರೆ ನಾದಿರ್‌ ಷಾ ದೆಹಲಿಯನ್ನು ಲೂಟಿ ಮಾಡಿದಾಗ ತೆಗೆದುಕೊಂಡು ಹೋಗಿದ್ದ ಮುತ್ತು, ರತ್ನ, ವಜ್ರಖಚಿತ ‘ಮಯೂರ ಸಿಂಹಾಸನ’ ಇಲ್ಲಿ ಪ್ರದರ್ಶನಕ್ಕಿದೆ. ಇದು ಷಾಜಹಾನನ ಚಿನ್ನದ ಸಿಂಹಾಸನ.

ಗೋಡೆಗೆ ಅಳವಡಿಸಿರುವ ನೀಲಿ ಬಣ್ಣದ ಇಜ್ನಿಕ್‌ ಹಾಸುಬಿಲ್ಲೆಗಳಿಂದಾಗಿ ‘ಬ್ಲೂ ಮಾಸ್ಕ್‌’ ಎಂದು ಪ್ರಸಿದ್ಧವಾಗಿರುವ ‘ಸುಲ್ತಾನ್‌ ಅಹ್ಮದ್‌ ಮಸೀದಿ’ಯನ್ನು ಮೊದಲನೇ ಅಹ್ಮದ್‌ (1603–1617) ನಿರ್ಮಿಸಿದ. ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ ಹೊರತುಪಡಿಸಿದರೆ ‘ಬ್ಲೂ ಮಾಸ್ಕ್‌’ ಮಾತ್ರ ಆರು ಮಿನಾರುಗಳನ್ನು ಹೊಂದಿದೆ. ಮಧ್ಯ ಭಾಗದ ಎತ್ತರದ ಗುಮ್ಮಟ ಅಮೋಘವಾಗಿದೆ. 

ಇಸ್ತಾನ್‌ಬುಲ್‌ನಲ್ಲಿ ಎರಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಒಂದನ್ನು ಆಧುನಿಕ ಟರ್ಕಿಯ ನಿರ್ಮಾತೃ ಮುಸ್ತಾಫಾ ಕೆಮಲ್‌ ಅಟಾತುರ್ಕ್‌ ಹೆಸರಿನಿಂದ ಕರೆದರೆ, ಮತ್ತೊಂದನ್ನು ಆತನ ಸಾಕು ಮಗಳು ಹಾಗೂ ವಿಶ್ವದ ಮೊಟ್ಟ ಮೊದಲ ಮಹಿಳಾ ಪೈಲಟ್‌ (ಯುದ್ಧ ವಿಮಾನ) ಸಬೀಹಾ ಗೋಕ್ಜೆನ್‌ ಹೆಸರಿನಿಂದ ಕರೆಯಲಾಗುತ್ತಿದೆ.

ಖಾದ್ಯ
ಸಮಕಾಲೀನ ಟರ್ಕಿಷ್ ಪಾಕಪದ್ಧತಿ ಸಹ ಇಸ್ತಾನ್‌ಬುಲ್‌ಗೆ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಟ್ಯುಲಿಪ್‌ ಹೂವಿನ ಆಕೃತಿಯ ಗಾಜಿನ ಲೋಟದಲ್ಲಿ ನೀಡುವ ಟರ್ಕಿಯ ಟೀ ಮತ್ತು ಕಾಫಿಗೆ ಮನಸೋಲದವರಿಲ್ಲ. ಕಾಫಿ ಹೌಸ್‌ನಲ್ಲಿ ಹುಕ್ಕಾ ಸೇವನೆ ಕೂಡ ಮತ್ತೊಂದು ಆಕರ್ಷಣೆ. ಮದ್ಯಪ್ರಿಯರಿಗೆ ಟರ್ಕಿಯ ರಾಕ್‌ ಅಥವಾ ರಾಕಿ ಅಚ್ಚುಮೆಚ್ಚು. ನಾನಾ ನಮೂನೆಯಲ್ಲಿ ತಯಾರಾಗುವ ಟರ್ಕಿಶ್‌ ಡಿಲೈಟ್‌ ಎಂಬ ಸಿಹಿ ಖಾದ್ಯ ಕಣ್ಣು, ಮನಸ್ಸು, ನಾಲಿಗೆ ಎರಡನ್ನೂ ಏಕಕಾಲದಲ್ಲಿ ತಣಿಸಬಲ್ಲುದು. ಇಲ್ಲಿನ ಖರ್ಜೂರ, ಅಂಜೂರ, ಕೇಸರಿ ಉತೃಷ್ಟವಾದವು. ಇವರ ವಿಶಿಷ್ಟ ಕೈಮಗ್ಗದ ನೆಲಹಾಸುಗಳು, ಸಾಂಬಾರು ಪದಾರ್ಥಗಳು, ಸೆರಾಮಿಕ್‌ ಕೂಡ ಖ್ಯಾತಿ ಪಡೆದಿವೆ.

ಇಸ್ತಾನ್‌ಬುಲ್‌ ವಿಶೇಷತೆಗಳು
ಏಷಿಯಾ ಮತ್ತು ಯೂರೋಪ್‌ ಎರಡೂ ಖಂಡಗಳನ್ನು ಅಪ್ಪಿಕೊಂಡ ವಿಶ್ವದ ಏಕೈಕ ನಗರ ಇಸ್ತಾನ್‌ಬುಲ್. ರೋಮನ್ನರಿಂದ ಒಟ್ಟೊಮಾನ್‌ ಸಾಮ್ರಾಜ್ಯದ ತನಕ ನೂರಾರು ವರ್ಷಗಳ ಕಾಲ ರಾಜಧಾನಿಯಾಗಿ ಮೆರೆದ ಈ ನಗರ ಈಗ ಟರ್ಕಿಯ ರಾಜಧಾನಿಯಲ್ಲ. ಆದರೂ ಟರ್ಕಿಯ ಹೆಚ್ಚು ಜನಸಂಖ್ಯೆ ಹೊಂದಿರುವ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಇದರದ್ದು. ಏಳು ಬೆಟ್ಟಗಳ ಮೇಲೆ ನಿರ್ಮಾಣವಾದ ರೋಮ್‌ ಅನ್ನು ನೆನಪಿಸುವ ಈ ನಗರವನ್ನು ರೋಮನ್‌ ದೊರೆ ಕಾನ್ಸ್‌ಸ್ಟಾಂಟೈನ್‌ ಹೆಸರಿನಿಂದ ಕಾನ್‌ಸ್ಟಾಂಟಿನೋಪಲ್ ಎಂದು ಕರೆಯಲಾಯಿತು. ಒಟ್ಟೊಮಾನ್‌ ಸಾಮ್ರಾಜ್ಯದ ಕಾಲದಲ್ಲಿ ಈ ನಗರದಲ್ಲಿ 1400 ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳಿದ್ದವಂತೆ.

ನೆದರ್‌ಲ್ಯಾಂಡ್‌ ಅಥವಾ ಹಾಲೆಂಡಿನ ಪ್ರಸಿದ್ಧ ಪುಷ್ಪ ಟ್ಯುಲಿಪ್‌ನ ಮೂಲ ಈ ಇಸ್ತಾನ್‌ಬುಲ್‌. ಇಲ್ಲಿನ ‘ಗ್ರಾಂಡ್‌ ಬಜಾರ್‌’ 3000 ಅಂಗಡಿಗಳನ್ನು ಒಳಗೊಂಡಿದ್ದು, ಒಂದೇ ಛಾವಣಿ ಅಡಿಯಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಮತ್ತು ಪುರಾತನ ಏಕ ಛತ್ರ ವ್ಯಾಪಾರ ಮಳಿಗೆ ಎಂದು ಖ್ಯಾತವಾಗಿದೆ.

ಖ್ಯಾತ ಬ್ರಿಟಿಷ್‌ ಲೇಖಕಿ ಅಗಾಥ ಕ್ರಿಸ್ಟಿ ಈ ನಗರದಲ್ಲಿ ತಂಗಿದ್ದು, ತನ್ನ ಖ್ಯಾತ ಪತ್ತೇದಾರಿ ಕಾದಂಬರಿ ‘ಮರ್ಡರ್‌ ಆನ್‌ ದ ಓರಿಯಂಟ್‌ ಎಕ್ಸ್‌ಪ್ರೆಸ್‌’ ಬರೆದದ್ದು ಇತಿಹಾಸ. ಈ ನಗರವನ್ನು ಸುತ್ತುವರೆದ ಸಾಗರವನ್ನು ಬಾಸ್ಫೋರಸ್‌ ಜಲಸಂಧಿಯು ಛೇದಿಸುತ್ತದೆ. ಸಾಗರದ ಅಂಚಿನಲ್ಲಿದ್ದರೂ ಇಲ್ಲಿ ವಾರ್ಷಿಕವಾಗಿ 18 ಇಂಚ್‌ ಹಿಮಪಾತವಾಗುತ್ತದೆ. ಈ ನಗರವು ಪಾಲ್‌ ಥೋರಾಕ್ಸ್‌, ಹೆಮಿಂಗ್ವೆ, ಟರ್ಕಿಯ ನೋಬೆಲ್‌ ಪ್ರಶಸ್ತಿ ವಿಜೇತ ಓರ್ಹಾನ್ ಪಾಮುಕ್‌ ಮುಂತಾದ ಪ್ರಸಿದ್ಧ ಲೇಖಕರಿಗೆ ಪ್ರೇರಣೆ ನೀಡಿದೆ.

ಖ್ಯಾತ ಟರ್ಕಿಶ್‌ ಲೇಖಕ ಓರ್ಹಾನ್ ಪಾಮುಕ್‌ ಇಸ್ತಾನ್‌ಬುಲ್‌ ನಗರದ ಇಡೀ ಸ್ವರೂಪವನ್ನು ಒಂದೇ ಶಬ್ದದಲ್ಲಿ ಬಣ್ಣಿಸಲು ಹ್ಯುಝುನ್ ಅಥವಾ ಮೆಲಂಕಲಿ (ದುಗುಡ) ಎಂಬ ಪದ ಬಳಸುತ್ತಾನೆ. ಆದರೆ ರೋಮನ್ನರ ಕಾನ್‌ಸ್ಟಾಂಟಿನೋಪಲ್, ಒಟ್ಟೊಮಾನ್‌ ಅರಸರ ಇಸ್ತಾನ್‌ಬುಲ್‌ ಈಗ ತನ್ನೊಡಲಿನಲ್ಲಿ ಸುಮಾರು 12 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಬೃಹತ್‌ ನಗರವಾಗಿದೆ. ಇಲ್ಲಿನ ಮೂರು ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದೂವರೆ ಲಕ್ಷ ವಿದ್ಯಾರ್ಥಿಗಳಿದ್ದಾರೆ. ಯುವಜನರೇ ಹೆಚ್ಚಿರುವುದರಿಂದ ನಗರವು ಚೈತನ್ಯದ ಚಿಲುಮೆಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT