ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಖರೀದಿ ವಿಳಂಬಕ್ಕೆ ಆಕ್ರೋಶ

Last Updated 1 ಏಪ್ರಿಲ್ 2015, 10:35 IST
ಅಕ್ಷರ ಗಾತ್ರ

ರಾಮನಗರ: ನಿಗದಿತ ಸಮಯಕ್ಕೆ ಕೋಳಿಗಳನ್ನು ಖರೀದಿಸುತ್ತಿಲ್ಲ ಎಂದು ಆರೋಪಿಸಿದ ರೈತರು ಇಲ್ಲಿನ ಸುಗುಣ ಚಿಕನ್ ಕಂಪೆನಿ ಕಚೇರಿ ಮುಂದೆ ಮೃತಪಟ್ಟ ಕೋಳಿಗಳನ್ನು ಸುರಿದು ಪ್ರತಿಭಟನೆ ನಡೆಸಿದ ಪ್ರಸಂಗ ಮಂಗಳವಾರ ನಡೆಯಿತು. ಕೋಳಿಗಳ ಸಾವಿನಿಂದ ಉಂಟಾಗಿರುವ ನಷ್ಟವನ್ನು ಭರಿಸಿಕೊಡುವಂತೆ  ರೈತರು     ಒತ್ತಾಯಿಸಿದರು.

ಪ್ರತಿ 42 ದಿನಕ್ಕೊಮ್ಮೆ ಕೋಳಿಗಳನ್ನು ಸುಗುಣ ಚಿಕನ್ ಸಂಸ್ಥೆ ಖರೀದಿಸಬೇಕು. ಆದರೆ ಕಳೆದ ಕೆಲವಾರು ವಾರಗಳಿಂದ 42 ದಿನ ಪೂರೈಸಿದ ಕೋಳಿಗಳನ್ನು ತೆಗೆದುಕೊಳ್ಳಲು ಸುಗುಣ ಸಂಸ್ಥೆ ವಿಳಂಬ ಮಾಡುತ್ತಿದೆ ಎಂದು ದೂರಿದರು.

ಸತ್ತ ಕೋಳಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದರಿಂದ ರೈತರ ಶ್ರಮವೂ ವ್ಯರ್ಥವಾಗುತ್ತಿದೆ ಮತ್ತು ನಷ್ಟವೂ ರೈತರದ್ದೇ ಆಗುತ್ತಿದೆ ಎಂದು ರೈತ ಮುಖಂಡ ಸಂಪತ್ ಕುಮಾರ್ ಸುಗುಣ ಚಿಕನ್ಸ್ ಸಂಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಕೆಲವು ದಿನಗಳಿಂದ ಸರಿಯಾದ ಸಮಯಕ್ಕೆ ಕೋಳಿಗಳನ್ನು ಸುಗುಣ ಸಂಸ್ಥೆ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ನೂರಾರು ಕೋಳಿಗಳು ಸಾಯುತ್ತಿವೆ. ಈ ವಿಚಾರವನ್ನು ಸುಗುಣ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನ ಸೆಳೆದರು ಉಪಯೋಗವಾಗಿಲ್ಲ. ಕೋಳಿಗಳನ್ನು ಬೆಳೆಸುವಾಗ ತೀವ್ರ ಎಚ್ಚರವಹಿಸಬೇಕಾಗುತ್ತದೆ. ವಿದ್ಯುತ್, ನೀರು, ಕೂಲಿ ಹೀಗೆ ಕೋಳಿ ಸಾಕಾಣಿಕೆಗೆ ಸಾಕಷ್ಟು ಶ್ರಮ ಮತ್ತು ಹಣ ವ್ಯಯವಾಗುತ್ತದೆ. ಆದರೆ ಸಂಸ್ಥೆ ಸತ್ತ ಕೋಳಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ರೈತರಿಗೆ ಲಾಭ ಕಡಿಮೆಯಾಗುತ್ತಿದೆ ಮತ್ತು ಶ್ರಮಕ್ಕೆ ಬೆಲೆಯೆ ಇಲ್ಲದಂತಾಗುತ್ತಿದೆ. ಸುಗುಣ ಸಂಸ್ಥೆಯ ತಪ್ಪಿಗೆ, ರೈತನಿಗೇಕೆ ಬರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ರೈತ ಮುಖಂಡ ಶಿವಲಿಂಗೇಗೌಡ ಮಾತನಾಡಿ 42 ದಿನಗಳ ನಂತರ ಕೋಳಿಗಳ ತೂಕ ಹೆಚ್ಚಾಗುತ್ತದೆ. ರುಚಿಯ ಮೇಲು ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲ ಸಂಸ್ಥೆಗಳು 42 ದಿನಗಳ ಒಳಗಾಗಿ ಕೋಳಿಗಳನ್ನು ಪಡೆದು ಮಾರುಕಟ್ಟೆಗೆ ಬಿಡುತ್ತಾರೆ. ಸುಗುಣ ಸಂಸ್ಥೆಯವರು ಕಳೆದ ಕೆಲವು ವಾರಗಳಿಂದ ನಿಗದಿತ ಸಮಯಕ್ಕೆ ಬಾರದಿರುವುದರಿಂದ ಪ್ರತಿ ಬ್ಯಾಚ್‌ನಲ್ಲೂ ತಮಗೆ ₨ 35 ರಿಂದ 40 ಸಾವಿರಗಳ ವರೆಗೆ ನಷ್ಟವಾಗುತ್ತಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಸುಗುಣ ಚಿಕನ್ ಸಂಸ್ಥೆಯ 112 ಘಟಕಗಳಿವೆ, ಎಲ್ಲ ಘಟಕಗಳಲ್ಲೂ ಇದೇ ಸಮಸ್ಯೆ ಉದ್ಭವವಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ, ರೈತರನ್ನು ಹೊಣೆಯಾಗಿಸಿ, ನಷ್ಟವನ್ನು ರೈತರ ಮೇಲೆ ಹೇರುವುದು ಸರಿಯಲ್ಲ ಎಂದು ಅವರು ಹೇಳಿದರು.
ಮೃತ ಕೋಳಿಗಳನ್ನು ರಸ್ತೆಯಲ್ಲಿ ಸುರಿದು ರೈತರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT