ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ದೌರ್ಜನ್ಯ: ದೂರು ಹೆಚ್ಚಳ

Last Updated 28 ಆಗಸ್ಟ್ 2014, 10:28 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ವಿರುದ್ಧ ದೂರು ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ದೈಹಿಕ, ಮಾನಸಿಕ ಮತ್ತು ಲೈಂಗಿಕವಾಗಿ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಪ್ರತಿನಿತ್ಯ ಕೇಳಿ ಬರುತ್ತಿದೆ.

ಎರಡು ವರ್ಷಗಳಲ್ಲಿ ಜಿಲ್ಲೆಯ ಆರು ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯ ದೂರುಗಳು ಈ ಮೇಲಿನ ಸಂಗತಿಯನ್ನು  ಪುಷ್ಠೀಕರಿಸುತ್ತವೆ. ಕಡಿಮೆ ವಿದ್ಯಾ­ಭ್ಯಾಸ ಮಾಡಿದವರು, ಅನಕ್ಷರಸ್ಥರು, ವಿದ್ಯಾವಂ­ತರು, ಬಡ ಹಾಗೂ ಸುಶಿಕ್ಷಿತ ಕುಟುಂಬಗಳಿಗೆ ಸೇರಿದ ಹಣ್ಣುಮಕ್ಕಳೂ ದೌರ್ಜನ್ಯಕ್ಕೆ ಒಳಗಾಗಿ­ರುವುದು ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

2012–13ರಲ್ಲಿ 920, 2013–14ರಲ್ಲಿ 963, 2014–15ರಲ್ಲಿ 351 (ಜುಲೈ ವರೆಗೆ) ಮಹಿಳಾ ದೌರ್ಜನ್ಯ ವಿರುದ್ಧ ದೂರುಗಳು ಸಾಂತ್ವನ ಕೇಂದ್ರದಲ್ಲಿ ದಾಖಲಾಗಿದೆ. ಅತಿ ಹೆಚ್ಚು ರೋಣ–312 ಮತ್ತು ಶಿರಹಟ್ಟಿಯಲ್ಲಿ 175 ದಾಖಲಾಗಿವೆ. ಹೆಚ್ಚಾಗಿ ಗ್ರಾಮೀಣ ಪ್ರದೇಶದವರು ದೌರ್ಜನ್ಯಕ್ಕೆ ಒಳಗಾದವರು ಎಂಬುದು ಕಂಡು ಬಂದಿರುವ ಆಘಾತಕಾರಿ ಅಂಶ.

ವರದಕ್ಷಿಣೆ ಕಿರುಕುಳ, ವಂಚನೆ, ಲೈಂಗಿಕ ಕಿರುಕುಳ, ದೈಹಿಕ, ಮಾನಸಿಕ ಹಿಂಸೆ ಹಾಗೂ ಪತಿಯ ಮನೆ ಸದಸ್ಯರಿಂದ ಹಲ್ಲೆಗೆ ಒಳಗಾದವರು ದೂರು ನೀಡಲು ಮುಂದೆ ಬರುತ್ತಿದ್ದಾರೆ. ಅನೈತಿಕ ಸಂಬಂಧ, ಕುಟುಂಬದ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು, ಕುಡಿದು ಬಂದು ಗಲಾಟೆ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ದೂರು ದಾಖಲಾಗುತ್ತಿದೆ.

ನೊಂದ ಹೆಣ್ಣುಮಕ್ಕಳ ಪೈಕಿ ಕೆಲವರು ಸಾಂತ್ವನ ಕೇಂದ್ರಕ್ಕೆ ದೂರು ನೀಡಿದರೆ, ಮತ್ತೆ ಕೆಲವರು ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಾರೆ, ಇನ್ನೂ ಕೆಲವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೊರೆ ಹೋಗುತ್ತಿದ್ದಾರೆ. ನೊಂದ ಮಹಿಳೆಯರ ಸಹಾಯಕ್ಕಾಗಿ ಐದು ತಾಲ್ಲೂಕುಗಳಲ್ಲಿಯೂ ಸಾಂತ್ವನ ಕೇಂದ್ರ (ದೂ.1091) ಆರಂಭಿಸಲಾಗಿದೆ.

ಸಾಂತ್ವನ ಕೇಂದ್ರದ ಮಹಿಳಾ ಸಿಬ್ಬಂದಿ ಪ್ರಕಾರ, ‘ಸಣ್ಣ ಪುಟ್ಟ ಸಮಸ್ಯೆ, ಪತಿ–ಪತ್ನಿ ಜಗಳ, ಗಲಾಟೆ ಮಾಡಿಕೊಂಡು ಬರುತ್ತಾರೆ. ಮೊದಲು ಎರಡೂ ಕಡೆಯವರನ್ನು ಕರೆದು ವಿಚಾರಣೆ ನಡೆಸಲಾಗುತ್ತದೆ. ಕೌನ್ಸೆಲಿಂಗ್‌ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಕೆಲವರು ವೈಯಕ್ತಿಕ ದ್ವೇಷಕ್ಕಾಗಿ ಪತಿ, ನಾದಿನಿ, ಮಾವ, ಅತ್ತೆ, ಮೈದುನ ವಿರುದ್ಧವೂ ದೂರು ನೀಡುತ್ತಾರೆ. ಎಲ್ಲವನ್ನೂ ಕೂಲಂಕುಷವಾಗಿ ವಿಚಾರಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆಯೂ ವಿಧಿಸಿದೆ’ ಎಂದು ವಿವರಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಎಚ್‌. ಅಕ್ಕಮಹಾದೇವಿ, ‘ತಿಂಗಳಿಗೆ ಹದಿನೈದ­ರಿಂದ ಇಪ್ಪತ್ತು ಪ್ರಕರಣಗಳು ಬರುತ್ತವೆ. ಮನೆಯ­ವರ ಕಿರುಕುಳ, ದೈಹಿಕ ಹಿಂಸೆ, ಅವಮಾನ, ಆರ್ಥಿಕ ಹೊರೆ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರದ ಭರವಸೆಯೊಡನೆ ಬರುತ್ತಾರೆ. ಎಲ್ಲರಿಗೂ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾ­ಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪೊಲೀಸ್‌ ಠಾಣೆಗೆ ಹೆದರಿ ಪಂಚಾಯ್ತಿ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುತ್ತಾರೆ’ ಎಂದು ತಿಳಿಸಿದರು.

‘ಶೇ 70ರಷ್ಟು ಸಮಸ್ಯೆಗಳನ್ನು ಕೌನ್ಸೆಲಿಂಗ್‌ ಮೂಲಕ ಇತ್ಯರ್ಥ ಮಾಡುತ್ತಿರುವುದರ ಪರಿಣಾಮ ಠಾಣೆಯಲ್ಲಿ ದಾಖಲಾಗುವ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದೆ. ದೈಹಿಕ ಹಲ್ಲೆಗೆ ಒಳಗಾದ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸ್ವಧಾರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆಶ್ರಯ ಹಾಗೂ 18 ವರ್ಷದೊಳಗಿದ್ದರೆ ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ನೀಡಲಾಗುತ್ತದೆ.

ಸ್ವಂತ ಉದ್ಯೋಗ ನಡೆಸಲು ಅನುಕೂಲವಾಗುಂತೆ ಮಹಿಳೆಯರಿಗೆ ಕಂಪ್ಯೂಟರ್‌, ಟೇಲರಿಂಗ್‌, ಕಸೂತಿ, ತರಬೇತಿ ನೀಡಲಾಗುವುದು. ಪತಿ ಮನೆಗೆ ಹೋಗಲು ನಿರಾಕರಿಸಿದರೆ ಹುಬ್ಬಳ್ಳಿಯ ಮಹಿಳಾ ವಸತಿ ನಿಲಯದಲ್ಲಿ ಆಶ್ರಯ ನೀಡಲಾಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT