ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ–ಜ್ಞಾನದಡುಗೆಯ ಮಾಡಬೇಕಣ್ಣಾ...

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕನಸು ಮತ್ತು ಭರವಸೆಗಳನ್ನು ಹೊತ್ತು ಉನ್ನತ ಶಿಕ್ಷಣಕ್ಕೆ ಕಾಲಿಡುತ್ತಿರುವ ಹದಿಹರೆ­ಯದ ವಿದ್ಯಾರ್ಥಿಗಳ ಸ್ಥಿತಿ ಇಂದು ಬಿರುಗಾಳಿಯ ಮಧ್ಯೆ ಸಾಗುವ ನಾವೆಯಂತಾಗಿದೆ. ಇಟ್ಟು­ಕೊಂಡ ನಿರ್ದಿಷ್ಟ ಗುರಿಯತ್ತ ಸಾಗಲಾರದ ತಲ್ಲಣ­ಗಳು ಅವರಲ್ಲಿಂದು ಸೃಷ್ಟಿಯಾಗುತ್ತಿವೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಮತ್ತು ಪೋಷಕರ ಕನಸುಗಳನ್ನು ವಾಸ್ತವಗೊಳಿಸಲು ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎನ್ನುವುದಕ್ಕೆ ಆಯಾ ವಿಷಯದಲ್ಲಿ ಚಿನ್ನದ ಪದಕ ಪಡೆದೂ ತಲೆಯ ಮೇಲೆ ಕೈಹೊತ್ತು ನಿರು­ದ್ಯೋಗಿ ಹಣೆ­ಪಟ್ಟಿ ಕಟ್ಟಿಕೊಂಡು ಮನೆ­ಯಲ್ಲಿ ಕುಳಿತು­ಕೊಳ್ಳ­ಬೇಕಾದ ಅವರ ಇಂದಿನ ಸ್ಥಿತಿಯೇ ಉತ್ತರ­ವಾ­ಗಿದೆ. ವೃತ್ತಿಪರ ಶಿಕ್ಷಣ­ವೆಂದು­ಕೊಂಡ ಎಂಜಿನಿ­ಯ­ರಿಂಗ್ ಪದವಿ ಪಡೆ­ದ­ವರ ಸ್ಥಿತಿ ಕೂಡ ಇತ್ತೀಚಿನ ದಿನಗಳಲ್ಲಿ ಇದೇ ಆಗು­ತ್ತಿರುವುದು ಗಾಯಕ್ಕೆ ಉಪ್ಪು ಸವರಿದಂತಾಗು­ತ್ತಿದೆ.

ಇಂಥ ಸಂದರ್ಭದಲ್ಲಿ ಬಿ.ಎ., ಬಿ.ಎಸ್ಸಿ., ಬಿಕಾಂ., ಬಿಬಿಎಂ., ಬಿಸಿಎ ಮೊದಲಾದ ಪದವಿ ತರ­­ಗತಿಗಳ ಪುನಾರಚನೆ ಕುರಿತು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿಗೆ ಪ್ರೊ.ಚಿದಾನಂದಗೌಡ ಸಮಿತಿ ಸಲ್ಲಿಸಿರುವ ವರದಿಯಲ್ಲಿನ ಶಿಫಾರಸು­ಗಳು ಇತ್ತೀಚೆಗೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿವಾದಕ್ಕೆ ಗ್ರಾಸ­ವಾದ ವಾತಾವರಣವನ್ನು ಕರ್ನಾಟಕದಲ್ಲಿ ಸೃಷ್ಟಿ­ಸುವ ಸಾಧ್ಯತೆಗಳು ಎದ್ದುಕಾಣುತ್ತಿವೆ. ಹಾಗೆ ನೋಡಿ­ದರೆ ಜವಾಹರಲಾಲ್ ನೆಹರೂ ವಿ.ವಿ. ತನ್ನ ಸ್ನಾತಕ ಪದವಿ ತರಗತಿಗಳನ್ನು ಹಾಲಿ ಇರುವ ಮೂರು ವರ್ಷಗಳ ಬದಲಾಗಿ ನಾಲ್ಕು ವರ್ಷ­ಗಳಿಗೆ  ವಿಸ್ತರಿಸಿ ರೂಪಿಸಿದ ಪಠ್ಯಕ್ರಮ ಅತ್ಯಂತ ವಾಸ್ತ­ವಿಕವಾಗಿತ್ತು. ಬಹುಸಂಖ್ಯಾತ ಜನ ಸರಿ­ಯಾದ ಶಿಕ್ಷಣವಿಲ್ಲದೇ ಬಡತನದಲ್ಲಿ ಮುಳುಗಿ­ದರೂ ಸರಿ ಬದಲಾವಣೆಗೆ ಸಕಾರಾತ್ಮಕ­ವಾಗಿ ಸ್ಪಂದಿ­ಸಬಾರದು ಎನ್ನುವ ಜಡ್ಡುಗಟ್ಟಿದ ಮನಸ್ಸಿನ ಸ್ವ-ಹಿತಾಸಕ್ತಿಯ ಶಿಕ್ಷಣತಜ್ಞರು ಇದರ ಜಾರಿಗೆ ಅವಕಾಶ ನೀಡದೆ ಬೀದಿರಂಪ ಮಾಡಿ ವಿ.ವಿ.ಯ ಸ್ವಾಯತ್ತತೆಗೆ ಚ್ಯುತಿ ತಂದದ್ದಂತೂ ಶೋಚನೀಯ.

ಈಗ ಇದೇ  ಮಾದರಿಯಲ್ಲಿ  ಉದ್ಯೋಗ ಕೇಂದ್ರಿ­ತ ಶಿಕ್ಷಣ ಮತ್ತು ಅದರ ನಿರಂತರ ಗುಣ­ಮಟ್ಟದ ಉನ್ನತೀಕರಣ ದೃಷ್ಟಿಯಿಂದ ೨೦೧೩ರ ಫೆಬ್ರುವರಿಯಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೊ ಸಭೆಯ ತೀರ್ಮಾನಗಳನ್ನು ಆಧರಿಸಿ ಪ್ರೊ.ಚಿದಾನಂದಗೌಡರ ನೇತೃತ್ವದ ಸಮಿತಿ  ಶಿಫಾ­ರಸುಗಳನ್ನು ನೀಡಿದೆ. ಇವುಗಳ ಬಗ್ಗೆ ಅಭಿಪ್ರಾಯ ಕೇಳಿ ಕರ್ನಾಟಕ ಉನ್ನತ ಶಿಕ್ಷಣ ಪರಿ­ಷತ್ತು ರಾಜ್ಯದ ಎಲ್ಲಾ ಸಾಂಪ್ರದಾಯಿಕ ವಿ.ವಿ.­ಗಳ ಕುಲಪತಿಗಳಿಗೆ ಪತ್ರ ಬರೆದಿದ್ದು, ಅವರ ಅಭಿ­ಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುವ ಹಾದಿಯಲ್ಲಿದೆ. ಕುಲಪತಿಗಳ ಅಭಿಪ್ರಾಯ­ಗಳನ್ನು ಕಾದು ನೋಡ­ಬೇಕಾಗಿದೆ.

ಕಳೆದ ವರ್ಷ ಬೆಂಗಳೂರು ವಿ.ವಿ.ಯು ಇಂಥ ತೀರ್ಮಾನ ಕೈಗೊಂಡ ಬಗ್ಗೆ ವರದಿಯಾಗಿದ್ದು ಅದು ಇನ್ನೂ ಕಾರ್ಯಗತಗೊಳ್ಳಲಿಲ್ಲ. ಹಾಗೆಯೇ, ಎರಡು ವರ್ಷಗಳ ಹಿಂದೆ ದಾವಣಗೆರೆ ವಿ.ವಿ.ಯ ಎಂಬಿಎ ವಿಭಾಗ ಬಿಬಿಎಂ ಕೋರ್ಸನ್ನು ವೃತ್ತಿಪರ ಕೋರ್ಸ್‌ನ್ನಾಗಿ ನಾಲ್ಕು ವರ್ಷಕ್ಕೆ ವಿಸ್ತರಿಸಿ ಪುನರ್‌ರಚಿಸಿ, ಅಧ್ಯಯನ ಮಂಡಳಿಯಿಂದ ಶಿಫಾರಸು ತಂದಿತ್ತು. ಆದರೆ ಮುಂದಿನ ಹಂತಗಳಲ್ಲಿ ಅದು ಜಾರಿಯಾಗಲೇ ಇಲ್ಲ.  ಈ ಹೊಸ ಪಠ್ಯಕ್ರಮ ಅತ್ಯಂತ ವೈಜ್ಞಾನಿ­ಕವೂ, ವಾಸ್ತವಿಕವೂ ಆದದ್ದಾಗಿದ್ದು, ಬಿಬಿಎಂ ವಿದ್ಯಾರ್ಥಿಗಳಿಗೆ ತಮ್ಮ ಪದವಿ ನಂತರ ಉದ್ಯೋಗ ಹೊಂದಲು ಅತ್ಯಂತ ಭರವಸೆ ಮೂಡಿ­ಸು­ವಂತಿತ್ತು  ಎನ್ನುವುದನ್ನು ಸ್ವತಃ ಅಲ್ಲಿನ  ಕುಲಪತಿಗಳೇ ಒಪ್ಪಿ­ಕೊಂಡಿದ್ದರು. ಹಾಲಿ ಮತ್ತು ಹಳೇ ವಿದ್ಯಾರ್ಥಿಗಳ, ಅಧ್ಯಾಪಕರ, ಪೋಷಕರ ಮತ್ತು ಶಿಕ್ಷಣ ತಜ್ಞರ ಅಧಿಕೃತ ಅಭಿಪ್ರಾಯಗಳ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ರಚಿಸಿದ ಪಠ್ಯಕ್ರಮ ಅದಾಗಿತ್ತು (ಆ ಪುನಾರ­ಚನಾ ಉಪ ಸಮಿತಿಯ ಸಂಚಾಲಕ ಈ ಲೇಖಕನೇ ಹೌದು).

ಇನ್ನು ಗುಣಮಟ್ಟವೃದ್ಧಿಯ ದೃಷ್ಟಿಯಿಂದ ಅತ್ಯಂತ ಮಹತ್ವವಾದ ಮತ್ತು ಆರ್ಥಿಕ ಮಿತ­ವ್ಯಯ ನೆಪದ ಭೂತ ಹಿಡಿದವರಿಗೆ ಅಷ್ಟೇ ಅಪಥ್ಯ­ವಾದ ಮತ್ತೊಂದು ಶಿಫಾರಸೆಂದರೆ ಶಿಕ್ಷಕ- ವಿದ್ಯಾರ್ಥಿ ಅನುಪಾತವನ್ನು ತರಗತಿ ಬೋಧನೆಗೆ ೧:೬೦ ಹಾಗೂ ಪ್ರಾಯೋಗಿಕ ತರಗತಿಗಳಿಗೆ ೧:೧೫ ಎಂದು ನಿಗದಿಪಡಿಸಿರುವುದು. ಇದನ್ನು ನಿರ್ವ­ಹಿಸಲು ಬೇಕಾದ ಅಧ್ಯಾಪಕರ ನೇಮಕಾತಿ ಮತ್ತು ಮೂಲಸೌಲಭ್ಯ ನಿರ್ಮಾಣಕ್ಕಾಗಿ ಬಂಡ­ವಾಳ ಹೂಡಲು ಸಿದ್ಧವಿರುವ ವ್ಯವಸ್ಥೆಯಲ್ಲಿ ಮಾತ್ರ ಈ ಶಿಫಾರಸಿಗೆ ಬೆಲೆ ಬರುತ್ತದೆ.

ಒಂದೆಡೆ ಸದ್ಯದ ನಮ್ಮ ಸಾಂಪ್ರದಾಯಿಕ ವಿ.ವಿ.­ಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿ­ಸುವ ಹೊಣೆಯಿಂದ ದೂರ ಸರಿದು ಜಡಸ್ಥಿತಿಗೆ ಹೋಗುತ್ತಿದ್ದು, ಜಾಗತಿಕ ಬದಲಾವಣೆಯ ಆಶಯಗಳು ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರು­ವಂತಿದೆ. ನೂರಾರು ಸಂಯೋಜಿತ ಕಾಲೇಜುಗಳ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನ ಕಾಳಜಿ ಹೊತ್ತ ವಿ.ವಿ.ಗಳಲ್ಲಿ ಸಮಯಕ್ಕೆ ಸರಿಯಾಗಿ ಪಠ್ಯ ಒದಗಿಸದ ಹಾಗೂ  ಹೊರಜಗತ್ತಿನ ಉದ್ಯೋಗ ಮಾರುಕಟ್ಟೆಯ ಬೇಡಿಕೆ ತಕ್ಕಂತೆ ಮಾನವ ಸಂಪನ್ಮೂಲ ರೂಪಿಸುವ ಜ್ಞಾನ-ಕೌಶಲ ನೀಡು­ವಂತೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸದ ಸ್ಥಿತಿ ಇಂದಿಗೂ ಇರುವುದು ಶೋಚನೀಯ.

ತರಗತಿಗಳು ಆರಂಭವಾಗಿ ಒಂದೂವರೆ ತಿಂಗ­ಳಾದರೂ, ಭಾಷಾ ವಿಷಯಗಳಂಥ ಮುಖ್ಯ ವಿಷ­ಯಗಳ­ಲ್ಲಿ  ಪಠ್ಯವಿಷಯವಾಗಲೀ, ಪಠ್ಯ ಪುಸ್ತಕ­ವಾಗಲೀ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ  ತಲುಪದಿರುವ ಸ್ಥಿತಿ ಕೆಲವು ವಿ.ವಿ.ಗಳಲ್ಲಿದೆ. ಇದು ಶೈಕ್ಷಣಿಕ ಆಡಳಿತದ ವೈಫಲ್ಯವಲ್ಲವೆ? ಇಂಥ ವ್ಯವಸ್ಥೆ ಪ್ರೊ.ಚಿದಾನಂದ ಗೌಡರ ಸಮಿತಿಯ ಶಿಫಾರಸು­ಗಳನ್ನು ಎಷ್ಟರಮಟ್ಟಿಗೆ ಅರಗಿಸಿ­ಕೊಂಡು ಜಾರಿ ಗೊಳಿಸಬಹುದೆಂಬುದೇ ಅನು­ಮಾನ. ಈ ಸಮಿತಿ ವರದಿಯಲ್ಲಿ ಮಾಡಲಾ­ಗಿ­ರುವ ಶಿಫಾರಸುಗಳು ಅತ್ಯಂತ ಅವಶ್ಯಕವಾಗಿದ್ದು ಶೀಘ್ರವಾಗಿ ಜಾರಿ­ಗೊಳ್ಳಬೇಕಾಗಿದೆ. ಆದರೆ ಆಡಳಿತಾತ್ಮಕ ಪುನಾ­ರಚನೆ ಹೊಣೆಗಾರಿಕೆಯ ಬಗ್ಗೆ ಈ ವರದಿ  ಏನನ್ನೂ ಹೇಳದಿರುವುದು ಸೋಜಿಗ.

ಈ ವರದಿಯ ಜಾರಿಯ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮಾವಳಿಗೆ ಪೂರಕವಾಗಿಯೇ ನಿರ್ವಹಿಸಬಹುದಾಗಿದೆ. ಅದರಂತೆ, ವಿಶ್ವವಿದ್ಯಾ ಲಯಗಳ ಜತೆಜತೆಗೆ ಸಂಯೋಜಿತ ಮತ್ತು ಸ್ವಾಯತ್ತ ಕಾಲೇಜುಗಳಿಗೆ ಹೆಚ್ಚು ಶೈಕ್ಷಣಿಕ ಸ್ವಾಯ­ತ್ತತೆ ನೀಡಿ ವಿದ್ಯಾರ್ಥಿಗಳಿಗೆ ವಿಷಯ ಅಧ್ಯ-­ಯನದ ಹೆಚ್ಚು ಅವಕಾಶಗಳನ್ನು ಆಯಾ ಕಾಲೇ­ಜು­ಗಳ ಮಟ್ಟದಲ್ಲಿಯೇ ಸಜ್ಜುಗೊಳಿಸಬಹುದಾ­ಗಿದೆ. ವಿ.ವಿ.ಯನ್ನು ಒಂದು ದೊಡ್ಡ ಕಾಲೇ­ಜಿನ  ಪರಿ­ಕಲ್ಪನೆಯಲ್ಲಿ ಮತ್ತು ದೊಡ್ಡ ಕಾಲೇ­ಜು­­­ಗಳನ್ನು ಚಿಕ್ಕ ಹಾಗೂ ಚೊಕ್ಕ ವಿ.ವಿ. ರೀತಿಯಲ್ಲಿ ಬೆಳೆಸಿ­ದಾಗ ಮಾತ್ರ ಈ ಶಿಫಾರಸು­ಗಳನ್ನು ಪರಿ­ಣಾಮ­ಕಾರಿ­ಯಾಗಿ ಜಾರಿಗೊಳಿಸಬಹುದು.

ಆದರೆ ಆಶ್ಚರ್ಯದ ಸಂಗತಿಯೆಂದರೆ, ಇಡೀ ಜಗತ್ತಿನಲ್ಲಿ ನೂರಾರು ಕಾಲೇಜುಗಳನ್ನು ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯ­ವೊಂದರ ಸಂಯೋಜನೆಯ ಅಡಿಯಲ್ಲಿ ನಡೆ­ಸುವ ವ್ಯವಸ್ಥೆ ಇರುವುದು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲದೇಶಗಳಲ್ಲಿ ಮಾತ್ರ! ಉಳಿದಂತೆ, ಎಲ್ಲಾ ರಾಷ್ಟ್ರಗಳಲ್ಲಿ ಒಂದು ಕಾಲೇಜು ಅಥವಾ ಕೆಲವೇ ಕಾಲೇಜುಗಳ ಸಮೂಹವೇ ಒಂದು ವಿಶ್ವ­ವಿದ್ಯಾ­ಲಯ­ವಾಗಿರುತ್ತದೆ. ಇದೀಗ ಉನ್ನತ ಶಿಕ್ಷಣ ವಲಯವನ್ನು ಜಾಗತಿಕ ನಿರೀಕ್ಷೆ ಮಟ್ಟ­ದಲ್ಲಿ ಬೆಳೆಸಲು ಯುಜಿಸಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಸಂಸ್ಥೆಯು (ನ್ಯಾಕ್) ಶೈಕ್ಷಣಿಕ ಸಂಸ್ಥೆಗಳಿಗೆ ಶ್ರೇಣಿ ನೀಡುವ ಸಂದರ್ಭದಲ್ಲಿ ಪ್ರತೀ ಕಾಲೇಜನ್ನು ಒಂದು ಪ್ರತ್ಯೇಕ ವಿ.ವಿ. ಎನ್ನುವಂತೆ ಪರಿಗಣಿ­ಸಿಯೇ ಶ್ರೇಣಿ ನೀಡುತ್ತಿದೆ. ವಿದ್ಯಾರ್ಥಿಗಳನ್ನು ಉದ್ಯೋಗ ಮಾರುಕಟ್ಟೆಯ ಜಾಗತಿಕ ಪೈಪೋಟಿ ಎದುರಿಸಲು ತರಬೇತುಗೊಳಿಸುವ ಸಬಲೀಕ­ರ­ಣವೇ ಉನ್ನತ ಶಿಕ್ಷಣದ ಕೇಂದ್ರ ಬಿಂದುವಾಗಿದೆ.

ಹೀಗಿರುವಾಗ, ಇತರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ ನಮ್ಮ ಸಾಮಾನ್ಯ ಶಿಕ್ಷಣದ ಪದವಿ ತರಗತಿಗಳು ನಾಲ್ಕು ವರ್ಷದ ಅವಧಿಗೆ ವಿಸ್ತರಣೆಗೊಂಡು ಉದ್ಯೋಗ ಕೇಂದ್ರಿತ ಜ್ಞಾನ, ಕೌಶಲಗಳು ಹಾಗೂ ಜೀವನ ಮೌಲ್ಯಗಳನ್ನು ಬೆಳೆ­ಸುವತ್ತ ದಿಟ್ಟಹೆಜ್ಜೆ ಇಡಬೇಕಾಗಿದೆ. ಈ ಬಗ್ಗೆ ಶಿಫಾರಸುಗಳನ್ನು ರೂಪಿಸಿರುವ ಸಮಿತಿ ಹಳೇ ವ್ಯವಸ್ಥೆಯ ಮುಂದುವರಿಕೆಗೂ ಅವಕಾಶ ಮಾಡಿ­ಕೊಟ್ಟಿರುವುದು ಹೊಸ ವ್ಯವಸ್ಥೆಯ ಜಾರಿಯಲ್ಲಿ ತೊಡಕೇ ಎನ್ನಬಹುದು. ಬಹುಶಃ, ಹೊಸ ಮಾದರಿಗೆ ಎದುರಾಗಬಹುದಾದ ವಿರೋಧ­ಗಳನ್ನು ತಡೆಯಲು ಈ ಬಗೆಯ ರಾಜಿ ಮಾಡಿ ಕೊಂಡಿರಬಹುದೇ ಹೊರತು ಇನ್ನಾವ ಉದ್ದೇಶ ಇದೆ ಅನಿಸುವುದಿಲ್ಲ. ಏನೇ ಆದರೂ ಸಾಮಾನ್ಯ ಶಿಕ್ಷಣದ ಪದವಿ ವಿದ್ಯಾರ್ಥಿಗಳ ಆರ್ಥಿಕ ಬದುಕಿನ ದೃಷ್ಟಿಯಿಂದ ಶಿಫಾರಸುಗಳನ್ನು ರಾಜ್ಯದಾದ್ಯಂತ ಏಕರೂಪದಲ್ಲಿ ಏಕಕಾಲಕ್ಕೆ ಜಾರಿ  ಮಾಬೇಕಿದೆ.  

‘ಅಡುಗೆಯ ಮಾಡಬೇಕಣ್ಣಾ, ಸುಜ್ಞಾನದ­ಡು­ಗೆಯ ಮಾಡಬೇಕಣ್ಣಾ...’ ಎನ್ನುವ ಕನಕ­ದಾಸರ ಆಶಯವನ್ನು, ‘ಉದ್ಯೋಗದಡುಗೆಯ ಮಾಡ ಬೇಕಣ್ಣಾ...’ ಎಂದು ಉನ್ನತ ಶಿಕ್ಷಣ ವ್ಯವಸ್ಥೆ ನಿರ್ವಚಿಸಿ­ಕೊಳ್ಳಬೇಕಾಗಿದೆ. ಆಗ ಮಾತ್ರ ಕನಸು­ಗಳನ್ನು ಕಟ್ಟಿಕೊಂಡು ಉನ್ನತಶಿಕ್ಷಣಕ್ಕೆ ಕಾಲಿ­ಡುವ ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಭರವಸೆ­ಯಿಂದ ಬದುಕಿಗೆ ಕಾಲಿಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT