ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ತರಬೇತಿಗೆ ‘ಟೊಯೊಟಾ ತಂತ್ರಜ್ಞ’

ಟೊಯೊಟಾ ಕಿರ್ಲೋಸ್ಕರ್‌–ಎಎಸ್‌ಡಿಸಿ ನಡುವೆ ಒಡಂಬಡಿಕೆ
Last Updated 27 ಮೇ 2016, 9:46 IST
ಅಕ್ಷರ ಗಾತ್ರ

ರಾಮನಗರ: ಯುವಜನರಿಗೆ ಕೌಶಲ ತರಬೇತಿ ನೀಡುವ ಸಂಬಂಧ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪೆನಿ ಹಾಗೂ ಆಟೊಮೊಟಿವ್‌ ಸ್ಕಿಲ್ಸ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌ (ಎಎಸ್‌ಡಿಸಿ) ಒಂಡಂಬಡಿಕೆ ಮಾಡಿಕೊಂಡಿವೆ.

ಬಿಡದಿ ಸಮೀಪ ಇರುವ ಟೊಯೊಟಾ ಕಿರ್ಲೋಸ್ಕರ್‌ ಕಾರ್ಖಾನೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಟೊಯೊಟಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಕಿಟೊ ಟಾಚಿಬಾನ್‌ ಹಾಗೂ ಎಎಸ್‌ಡಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಚತುರ್ವೇದಿ ಈ ಒಡಂಬಡಿಕೆಗೆ ಸಹಿ ಹಾಕಿದರು.

ಈ ಒಪ್ಪಂದದ ಅನ್ವಯ ಟೊಯೊಟಾ ಕಂಪೆನಿಯು ‘ಟೊಯೊಟಾ ತಂತ್ರಜ್ಞ’ ಕಾರ್ಯಕ್ರಮದ ಅಡಿ 18–25 ವರ್ಷ ವಯಸ್ಸಿನ ಯುವಕರಿಗೆ ಕೌಶಲ ತರಬೇತಿ ನೀಡಲಿದೆ. ಒಂದು ವರ್ಷ ಅವಧಿಯ ತರಬೇತಿ ಇದಾಗಿದ್ದು, ಒಟ್ಟು 600 ಗಂಟೆ ಕಾಲ ತರಗತಿಯನ್ನು ಒಳಗೊಂಡಿದೆ. ಇದಕ್ಕೆ ಅಗತ್ಯವಾದ ಪಠ್ಯವನ್ನು ಎಎಸ್‌ಡಿಸಿ ಒದಗಿಸಲಿದೆ. ತರಬೇತಿಯ ಕೊನೆಯಲ್ಲಿ ಅಭ್ಯರ್ಥಿಗಳ ಮೌಲ್ಯಮಾಪನ ನಡೆಸಿ ಪ್ರಮಾಣಪತ್ರವನ್ನು ನೀಡಲಿದೆ.

‘ತರಬೇತಿಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಜೊತೆಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ಕ್ಯಾಂಟೀನ್‌ ಸೌಲಭ್ಯ ಒದಗಿಸಲಾಗುವುದು. ಕೊನೆಯಲ್ಲಿ ಉದ್ಯೋಗ ಮೇಳ ಆಯೋಜನೆಯ ಮೂಲಕ ಉದ್ಯೋಗ ದಾತರೊಡನೆ ಅವರಿಗೆ ಸಂಪರ್ಕ ಕಲ್ಪಿಸಲಾಗುವುದು’ ಎಂದು ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಡಿಜಿಎಂ ನಮೃತ್‌ ಐಯ್ಯಮ್ಮ ವಿವರ ನೀಡಿದರು.

‘ಭಾರತವು ಅಪಾರ ಮಾನವ ಸಂಪನ್ಮೂಲ ಹೊಂದಿದ್ದಾಗ್ಯೂ ಕುಶಲ ಕಾರ್ಮಿಕರ ಕೊರತೆ ಇದೆ. ಈ ನಿಟ್ಟಿನಲ್ಲಿ ಟೊಯೊಟಾದೊಂದಿಗಿನ ಒಪ್ಪಂದ ಹೆಚ್ಚು ಉಪಯೋಗವಾಗಲಿದೆ’ ಎಂದು ಎಎಸ್‌ಡಿಸಿ ಸಿಇಓ ಸುನಿಲ್‌ ಚತುರ್ವೇದಿ ವಿಶ್ವಾಸ ವ್ಯಕ್ತಪಡಿಸಿದರು. ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಜೆ. ಮಂಜುನಾಥ್ ಮಾತನಾಡಿ ‘ದೇಶದ ಶೇ 64 ಜನರು ದುಡಿಯುವ ವರ್ಗದವರಾಗಿದ್ದಾರೆ.

ಇವರಲ್ಲಿ ಯುವಜನರ ಪಾಲು ಹೆಚ್ಚಿದೆ. ಆದರೆ ಶೇ 95ರಷ್ಟು ಕಾರ್ಮಿಕರಿಗೆ ಕೌಶಲ ತರಬೇತಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ‘ಸ್ಕಿಲ್‌ ಇಂಡಿಯಾ’ ಮೂಲಕ ಕೌಶಲಯುಕ್ತ ಭಾರತದ ನಿರ್ಮಾಣಕ್ಕೆ ಅಭಿಯಾನ ನಡೆದಿದೆ’ ಎಂದರು.

‘ಕೇವಲ ಕಂಪೆನಿಗೆ ಮಾತ್ರವಲ್ಲ. ಇಡೀ ಸಮಾಜಕ್ಕೆ ಇಂದು ಕುಶಲ ತರಬೇತಿ ಪಡೆದವರ ಅಗತ್ಯ ಇದೆ’ ಎಂದು ಟೊಯೊಟಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಕಿಟೊ ಟಾಚಿಬಾನ್‌ ಹೇಳಿದರು. ಟಿಕೆಎಂನ ಉಪಾಧ್ಯಕ್ಷ ಶೇಖರ್‌ ವಿಶ್ವನಾಥನ್‌, ರಾಜು ಕೇತ್ಕಲೆ, ಡಿಜಿಎಂ ಗೋಪಿನಾಥ ರಾವ್‌, ಪ್ರಧಾನ ವ್ಯವಸ್ಥಾಪಕ ಜಿ. ಶಂಕರ ಈ ಸಂದರ್ಭ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT