ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಪತ್ತೆಗೆ ಅತ್ಯಾಧುನಿಕ ಬಸ್

ಕಿದ್ವಾಯಿ ಸಂಸ್ಥೆಗೆ ಸಂಚಾರಿ ಘಟಕ ದಾನ ನೀಡಿದ ಬಿಇಎಲ್
Last Updated 9 ಫೆಬ್ರುವರಿ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು:  ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಕ್ಯಾನ್ಸರ್‌ ಪತ್ತೆ ಮಾಡುವ  ಸಂಚಾರಿ ಘಟಕ (ಮೊಬೈಲ್‌ ಕ್ಯಾನ್ಸರ್‌ ಸ್ಕ್ರೀನಿಂಗ್‌ ಬಸ್‌) ಮಾರ್ಚ್‌ ವೇಳೆಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಕಂಪೆನಿಯು ₹1.8 ಕೋಟಿ ವೆಚ್ಚದ ಮೊಬೈಲ್‌ ಕ್ಯಾನ್ಸರ್‌ ಸ್ಕ್ರೀನಿಂಗ್‌ ಬಸ್‌ ಅನ್ನು ಕಿದ್ವಾಯಿ ಸಂಸ್ಥೆಗೆ ದಾನವಾಗಿ ನೀಡುತ್ತಿದೆ.

ಮಹಾರಾಷ್ಟ್ರದ ಮುಂಬೈನ ಟಾಟಾ ಮೆಮೊರಿಯಲ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾನ್ಸರ್‌ ಪತ್ತೆ ಮಾಡುವ ವಾಹನವಿದೆ. ಇದೇ ಮಾದರಿಯ ವಾಹನ ಹಾಗೂ ಅದರಲ್ಲಿ ಅಗತ್ಯವಾಗಿ ಇರಬೇಕಾದ ಕ್ಯಾನ್ಸರ್‌ ಪತ್ತೆ ಉಪಕರಣಗಳ  ಪಟ್ಟಿಯನ್ನು ಕಿದ್ವಾಯಿ ಸಂಸ್ಥೆಯು ಬಿಇಎಲ್‌ಗೆ ಸಲ್ಲಿಸಿದೆ.

‘ಕಿದ್ವಾಯಿ ಸಂಸ್ಥೆಯು ರಾಜ್ಯದ ವಿವಿಧೆಡೆ ಕ್ಯಾನ್ಸರ್‌ ಪತ್ತೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಸಂಸ್ಥೆಯಲ್ಲಿರುವ ಕ್ಯಾನ್ಸರ್‌ ರೋಗ ಪತ್ತೆ ಮಾಡುವ  ವಾಹನ ಹಳೆಯದಾಗಿದ್ದು, ಎರಡು ವರ್ಷದಿಂದ ಅದು ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ ಈ ವಾಹನದಲ್ಲಿದ್ದ ಉಪಕರಣಗಳು ತುಂಬ ಹಳೆಯದಾಗಿ
ದ್ದವು’ ಎಂದು ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿವಿಧ ಕಡೆಗಳಲ್ಲಿ ಕ್ಯಾನ್ಸರ್‌ ಪತ್ತೆ ಶಿಬಿರ ಆಯೋಜಿಸಿದಾಗ ಜನರು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಯಾರಿಗಾದರೂ ಕ್ಯಾನ್ಸರ್‌ನ ಲಕ್ಷಣಗಳಿವೆ ಎಂಬ ಸಂಶಯವಿದ್ದಲ್ಲಿ ಹೆಚ್ಚಿನ ಪರೀಕ್ಷೆಗಾಗಿ ಕಿದ್ವಾಯಿ ಸಂಸ್ಥೆಗೆ ಬರುವಂತೆ ವೈದ್ಯರು ತಿಳಿಸುತ್ತಿದ್ದರು. ಆ ವ್ಯಕ್ತಿ ಕಿದ್ವಾಯಿಗೆ ಬಂದು ಪರೀಕ್ಷೆ ಮಾಡಿಸಿಕೊಂಡ ಬಳಿಕ ಕ್ಯಾನ್ಸರ್‌ ರೋಗವಿಲ್ಲ ಎಂಬುದು ದೃಢಪಡುತ್ತಿತ್ತು. ಇದರಿಂದ ಹಣ, ಸಮಯ ವ್ಯರ್ಥವಾಗುತ್ತಿತ್ತು’ ಎಂದರು.

‘ಮೊಬೈಲ್‌ ಕ್ಯಾನ್ಸರ್‌ ಸ್ಕ್ರೀನಿಂಗ್‌ ಬಸ್‌ನಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗುತ್ತದೆ.  ಬಸ್‌ನಲ್ಲೇ ಎಕ್ಸ್‌–ರೇ, ಮ್ಯಾಮಾಗ್ರಫಿ ಮೊದಲಾದ ಪರೀಕ್ಷೆಗಳನ್ನು ನಡೆಸಬಹುದು. ಇದರಿಂದ ವ್ಯಕ್ತಿಯಲ್ಲಿ ಕ್ಯಾನ್ಸರ್‌ ಇದೆ ಅಥವಾ ಇಲ್ಲ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಬಹುದು’ ಎಂದು ಹೇಳಿದರು.

‘ಕ್ಯಾನ್ಸರ್‌ ಸ್ಕ್ರೀನಿಂಗ್‌ ಬಸ್‌ನಲ್ಲೇ  ವೈದ್ಯರು, ನರ್ಸ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿ ತೆರಳಬಹುದು. ಈ ಬಸ್‌ ಸೇವೆಗೆ ಸಿದ್ಧವಾದ ಬಳಿಕ ರಾಜ್ಯದಾದ್ಯಂತ ಕ್ಯಾನ್ಸರ್‌ ಪತ್ತೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ಸಿಬ್ಬಂದಿ ವರ್ಗ: ಮೊಬೈಲ್‌ ಕ್ಯಾನ್ಸರ್‌ ಸ್ಕ್ರೀನಿಂಗ್‌ ಬಸ್‌ನಲ್ಲಿ ಇಬ್ಬರು ನೋಂದಣಿ ಮಾಡಿಸಿಕೊಳ್ಳುವವರು, ತಲಾ ಒಬ್ಬರು ಇಎನ್‌ಟಿ ಸರ್ಜನ್‌, ಬಾಯಿ ಕ್ಯಾನ್ಸರ್‌ ಸರ್ಜನ್‌, ಸ್ತ್ರೀರೋಗ ತಜ್ಞ, ತಲಾ ಇಬ್ಬರು ಎಕ್ಸ್‌–ರೇ ತಂತ್ರಜ್ಞರು, ಜನರಲ್‌ ಸರ್ಜನ್‌ಗಳು, ಮ್ಯಾಮಾಗ್ರಫಿ ತಂತ್ರಜ್ಞರು, ತಲಾ ಒಬ್ಬರು ಸೈಟೊ ತಂತ್ರಜ್ಞ, ಪತೋ ತಂತ್ರಜ್ಞ, ಇಬ್ಬರು ನರ್ಸ್‌ಗಳು, ತಲಾ ಒಬ್ಬರು ಆಯಾ, ಚಾಲಕ, ಕ್ಲೀನರ್‌, ಗುಮಾಸ್ತ ಸೇರಿ ಒಟ್ಟು 19 ಸಿಬ್ಬಂದಿ ಇರಲಿದ್ದಾರೆ.

ಸೌಲಭ್ಯಗಳು
* ಡಿಜಿಟಲ್‌ ಎಕ್ಸ್‌–ರೇ

* ಡಿಜಿಟಲ್‌ ಮ್ಯಾಮಾಗ್ರಫಿ
* ಇಎನ್‌ಟಿ ಪರೀಕ್ಷಾ ಉಪಕರಣಗಳು
* ಪ್ಯಾಪ್‌ ಸ್ಮಿಯರ್‌
* ಪೆಥಾಲಜಿ ಲ್ಯಾಬ್‌
* ಕಾಲ್ಪಸ್ಕೋಪಿ (ಸ್ತ್ರೀ ಸಂಬಂಧಿ ಕ್ಯಾನ್ಸರ್‌  ಪರೀಕ್ಷೆ)
* ಜನನಾಂಗ ಕ್ಯಾನ್ಸರ್‌ ಪರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT