ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗರಿಗೆ ಈ ಸಲ ಒಲಿಯದ ‘ಏಕಲವ್ಯ’

Last Updated 22 ಮೇ 2016, 19:30 IST
ಅಕ್ಷರ ಗಾತ್ರ

ಪ್ರತಿ ಪ್ರಶಸ್ತಿ ಕೂಡ ಕ್ರೀಡಾಪಟುವಿನ ಹುಮ್ಮಸ್ಸು ಹೆಚ್ಚಿಸುತ್ತದೆ. ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತದೆ.  ಆದರೆ ಈ ಬಾರಿಯ ಏಕಲವ್ಯ ಪ್ರಶಸ್ತಿ ಪಡೆಯುವಲ್ಲಿ ಕರ್ನಾಟಕ ಪುರುಷ ಕ್ರಿಕೆಟಿಗರು ಸಫಲರಾಗಿಲ್ಲ.

ರಾಜ್ಯ ಸರ್ಕಾರ ಪ್ರತಿ ವರ್ಷ ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ ನೀಡುತ್ತದೆ. ಈಗಿನ ಕರ್ನಾಟಕ ತಂಡದ ನಾಯಕರಾಗಿರುವ ಆರ್‌. ವಿನಯ್‌ ಕುಮಾರ್‌ 2011ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಆ ಬಳಿಕ ಯಾವ  ಕ್ರಿಕೆಟಿಗ ಕೂಡ ಏಕಲವ್ಯ ಪ್ರಶಸ್ತಿ ಪಡೆದಿಲ್ಲ. ಆದರೆ, 2012ರಲ್ಲಿ ಕರ್ನಾಟಕದ ಆಟಗಾರ್ತಿ ಕರುಣಾ ಜೈನ್  ಈ ಪ್ರಶಸ್ತಿ ಗಳಿಸಿದ್ದರು.

ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೇ ಎರಡನೇ ವಾರದಲ್ಲಿ ಮೈಸೂರಿ ನಲ್ಲಿ ನಡೆದ ಸಮಾರಂಭದಲ್ಲಿ ಏಕಲವ್ಯ,  ಜೀವಮಾನ ಸಾಧನೆ ಮತ್ತು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ವಿತರಿ ಸಲಾಯಿತು. ಆದರೆ ಎಲ್ಲೂ ರಾಜ್ಯದ ಕ್ರಿಕೆಟಿಗರೇ ಕಾಣಿಸಲಿಲ್ಲ.

ಇದಕ್ಕೂ ಮೊದಲು ಏಕಲವ್ಯ ಸಾಧನೆಯ ಬಗ್ಗೆ ಕೊಂಚ ತಿಳಿದುಕೊಳ್ಳೋಣ. ಏಕಲವ್ಯ ಯಾರು ಎಂಬುದು ಬಹುತೇಕರಿಗೆ ಗೊತ್ತು. ಮಹಾಭಾರತದಲ್ಲಿ ದ್ರೋಣಾಚಾರ್ಯರು ಅರ್ಜುನನಿಗೆ ಬಿಲ್ಲು ವಿದ್ಯೆ ಕಲಿಸುತ್ತಿರುವಾಗ ಅದನ್ನೇ ಗಮನಿಸುತ್ತಿದ್ದ ಏಕಲವ್ಯ ಅವರಿಗೆ ತಿಳಿಯದಂತೆ ಆ ವಿದ್ಯೆಯಲ್ಲಿ ಪರಿಣತಿ ಸಾಧಿಸಿ ಅರ್ಜುನನನ್ನೂ ಮೀರಿ ಬೆಳೆದು ಗುರುದಕ್ಷಿಣೆ ನೀಡುವ ಸಲುವಾಗಿ ತನ್ನ ಕೈಬೆರಳನ್ನೇ ಕತ್ತರಿಸಿ ನೀಡಿದ ಪ್ರಸಂಗವನ್ನು ಯಾರೂ ಮರೆಯುವಂತಿಲ್ಲ. ಅಂತಹ ಮಹಾನ್ ಸಾಧಕನ ಹೆಸರಿನಲ್ಲಿ ರಾಜ್ಯದ ಶ್ರೇಷ್ಠ ಕ್ರೀಡಾಪಟುಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಿಪಾಠವನ್ನು ರಾಜ್ಯ ಸರ್ಕಾರ 1992ರಿಂದ ಆರಂಭಿಸಿದೆ.

ಪ್ರತಿವರ್ಷ ಸಾಮಾನ್ಯವಾಗಿ ಆಗಸ್ಟ್ 29 ರಂದು ಏಕಲವ್ಯ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ. ಇದಕ್ಕೆ ಕಾರಣ ಆ ದಿನ ಭಾರತದ ಪ್ರಖ್ಯಾತ ಹಾಕಿ ಆಟಗಾರ ಧ್ಯಾನಚಂದ್ ಅವರ ಜನ್ಮದಿನ. ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಸಹ ಪರಿಗಣಿಸಲಾಗಿದೆ. ಆದರೆ ಈಗ ಆಯಾ ಪರಿಸ್ಥಿತಿಗನುಗುಣವಾಗಿ ಬೇರೆ ದಿನಗಳಂದು ಪ್ರಶಸ್ತಿ ನೀಡಿರುವ ಸಂದರ್ಭಗಳೂ ಇವೆ. 

ಏಕಲವ್ಯ ಪ್ರಶಸ್ತಿ ಪಟ್ಟಿಯಲ್ಲಿ ಸಾಮಾನ್ಯವಾಗಿ 15 ಸಾಧಕ ಕ್ರೀಡಾಪಟುಗಳು ಇರುತ್ತಾರೆ. ಒಲಿಂಪಿಕ್ಸ್‌ನಲ್ಲಿರುವ ವಿವಿಧ ಬಗೆಯ ಆಟಗಳಲ್ಲಿ ಸಾಮರ್ಥ್ಯ ಮೆರೆಯುವಂತಹವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದಂತೆ ವಿಶೇಷ ಸಾಧನೆ ಮಾಡಿರುವಂತಹ ಆಟಗಾರರಿಗೂ ಈ ಪ್ರಶಸ್ತಿ ಕೊಡಲಾಗುತ್ತದೆ.  

ಸಾಮಾನ್ಯವಾಗಿ ಸರ್ಕಾರವೇ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಅಂತಹ ಪ್ರಶಸ್ತಿಗೂ ಗೌರವವಿರುತ್ತದೆ. ಆದರೆ ಸಾಧಕರು ಇದಕ್ಕಾಗಿ ಪ್ರತಿವರ್ಷ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲು ಸ್ಕ್ರೀನಿಂಗ್ ಕಮಿಟಿ ಅರ್ಜಿಗಳನ್ನು ಪರಿಶೀಲಿಸಿ ನಂತರ ಫಲಾನುಭವಿಗಳ ಪಟ್ಟಿಮಾಡಿ ಆಯ್ಕೆ ಸಮಿತಿ ಒಪ್ಪಿಗೆಗೆ  ರವಾನಿಸುತ್ತದೆ.  ಈ ಸಮಿತಿಯ ನಿರ್ಣಯವನ್ನು ಸರ್ಕಾರ ಅನುಮೋದಿಸಿದ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.   

ಕರ್ನಾಟಕದ ಕ್ರಿಕೆಟಿಗರಾದ ಸೈಯದ್‌ ಕಿರ್ಮಾನಿ (1992), ಲೆಗ್ ಸ್ಪಿನ್ನರ್‌ ಅನಿಲ್‌ ಕುಂಬ್ಳೆ (1993), ಜಾವಗಲ್‌ ಶ್ರೀನಾಥ್‌ (1994), ವೆಂಕಟೇಶ್‌ ಪ್ರಸಾದ್‌ (1995), ರಾಹುಲ್‌ ದ್ರಾವಿಡ್‌ (2001), ದೊಡ್ಡ ಗಣೇಶ್‌ (2002), ಸುನಿಲ್‌ ಜೋಶಿ (2003), ಸುಜಿತ್‌ ಸೋಮಸುಂದರ್‌ (2005), ರಾಬಿನ್‌ ಉತ್ತಪ್ಪ (2010) ಮತ್ತು ವಿನಯ್‌ ಕುಮಾರ್‌ (2011) ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರಲ್ಲಿ ಕಿರ್ಮಾನಿ, ಕುಂಬ್ಳೆ, ದ್ರಾವಿಡ್‌್ ಅವರು ಪ್ರತಿಷ್ಠಿತ ‘ಅರ್ಜುನ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ತಂಡ ದೇಶಿ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದೆ. ಸತತ ಎರಡು ವರ್ಷ ರಣಜಿ, ಇರಾನಿ ಮತ್ತು ವಿಜಯ್‌ ಹಜಾರೆ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದೆ. ಕೆ.ಎಲ್‌. ರಾಹುಲ್‌, ಸ್ಟುವರ್ಟ್‌ ಬಿನ್ನಿ, ಕರುಣ್‌ ನಾಯರ್‌, ಮನೀಷ್‌ ಪಾಂಡೆ ಅವರೆಲ್ಲರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನಲ್ಲಿಯೂ ಮಿಂಚು ಹರಿಸುತ್ತಿದ್ದಾರೆ. ಆದರೆ ಇವರಿಗೆ ಇನ್ನು ‘ಏಕಲವ್ಯ’ ಗೆಲ್ಲಲು ಸಾಧ್ಯವಾಗಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT