ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗರ ಪ್ರಣಯ ಪರ್ವ

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದಲ್ಲಿದ್ದ ಜನಪ್ರಿಯ ‘ಬ್ಯಾಚುಲರ್ಸ್‌’ ಪೈಕಿ ಕೆಲವರು ಈಗ ಲವ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿದ್ದಾರೆ. ಈ ವರ್ಷದಲ್ಲಿ ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಹರ್ಭಜನ್‌ ಸಿಂಗ್‌, ದಿನೇಶ್‌ ಕಾರ್ತಿಕ್‌, ಯುವರಾಜ್‌ ಸಿಂಗ್‌ ಹಾಗೂ ರಾಬಿನ್‌ ಉತ್ತಪ್ಪ ತಮ್ಮ ‘ಸಿಂಗಲ್‌’ ಸ್ಟೇಟಸ್‌ ಅನ್ನು ಬಹಳ ಖುಷಿಯಿಂದಲೇ ಬಿಟ್ಟುಕೊಟ್ಟಿದ್ದಾರೆ.

ಕಳೆದ ವರ್ಷದವರೆಗೂ ಭಾರತ ಕ್ರಿಕೆಟ್‌ ತಂಡದಲ್ಲಿ ಬ್ಯಾಚುಲರ್‌ ಬಾಯ್‌ಗಳದ್ದೇ ಕಾರುಬಾರು ಇತ್ತು. ಈ ವರ್ಷದ ಅಕ್ಟೋಬರ್‌ ಅಂತ್ಯದ ವೇಳೆ  ಪರಿಸ್ಥಿತಿ 180 ಡಿಗ್ರಿ ತಿರುವು ಪಡೆದುಕೊಂಡಿತು. ಅಂದರೆ, ‘ಸಿಂಗಲ್‌’ ಸ್ಟೇಟಸ್‌ ಹಾಕಿಕೊಂಡು ಓಡಾಡುತ್ತಿದ್ದ ಹುಡುಗರೆಲ್ಲ ಚೆಂದದ ಹುಡುಗಿಯರ ಗೂಗ್ಲಿಗೆ ಫಿದಾ ಆಗಿದ್ದರು. ಬ್ಯಾಚುಲರ್‌ ಲೇಬಲ್‌ ಕಳೆದುಕೊಂಡ ಈ ಹುಡುಗರೆಲ್ಲರೂ ನಂತರ  ‘ಫಿಯಾನ್ಸಿ’ ಅಥವಾ ‘ಗಂಡ’ನ ಪದವಿ ಪಡೆದುಕೊಂಡು ನಗು ಅರಳಿಸುತ್ತಿದ್ದಾರೆ. ಇದು ಭಾರತೀಯ ಕ್ರಿಕೆಟಿಗರ ವೈಯಕ್ತಿಕ ಬದುಕಿನಲ್ಲಿ ಈ ವರ್ಷ ಕಂಡುಬಂದಂತಹ ಗಮನಾರ್ಹ ಬದಲಾವಣೆ. 

ವಿರಾಟ್‌ ಕೊಹ್ಲಿ–ಅನುಷ್ಕಾ ಶರ್ಮ
ಭಾರತೀಯ ಕ್ರಿಕೆಟ್‌ ತಂಡದ ಉಪ ನಾಯಕ ಬಿ–ಟೌನ್‌ ಚೆಲುವೆ ಅನುಷ್ಕಾ ಶರ್ಮ ಅವರನ್ನು ಭೇಟಿಯಾದಾಗ ಪೌರಾಣಿಕ ಸಿನಿಮಾಗಳಲ್ಲಿ ತೋರಿಸುವಂತೆ ಆಕಾಶದಲ್ಲಿ ಕೋಲ್ಮಿಂಚು ಮೂಡಿತ್ತು! ಹೃದಯದಲ್ಲಿ ಪುಷ್ಪವೃಷ್ಟಿ ಆಗಿತ್ತು! ಅಲ್ಲಿಂದ ಮುಂದೆ ಕೊಹ್ಲಿ ಇರುವ ಜಾಗದಲ್ಲೆಲ್ಲ ಶರ್ಮ ಕಾಣಿಸಿಕೊಳ್ಳತೊಡಗಿದರು. ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ  ಕ್ರಿಕೆಟ್‌ ಪಂದ್ಯಗಳು ನಡೆದ ವೇಳೆ ಅನುಷ್ಕಾ ತನ್ನ ಗೆಳೆಯನನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ಲಗ್ಗೆ ಇಡುತ್ತಿದ್ದರು.  ಅಲ್ಲಿಯವರೆಗೂ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದ ಈ ಜೋಡಿ, ಕಳೆದ ಫೆಬ್ರುವರಿ ತಿಂಗಳಿನಲ್ಲಿ ‘ಹೌದು, ನಾವಿಬ್ಬರು ಪ್ರೇಮಿಗಳು’ ಎಂದು ಅಧಿಕೃತವಾಗಿ ಒಪ್ಪಿಕೊಂಡರು.

‘ನಾನು ಈಗಷ್ಟೇ ಎನ್‌ಎಚ್‌10 ಸಿನಿಮಾ ವೀಕ್ಷಿಸಿದೆ. ಎಂಥ ಅದ್ಭುತ ಚಿತ್ರ ಅದು. ಅದರಲ್ಲೂ ನನ್ನ ಪ್ರೀತಿಯ ಹುಡುಗಿ ಅನುಷ್ಕಾ ಶರ್ಮ ಅವರದ್ದು ಅಮೋಘ ಅಭಿನಯ. ನನಗೆ ಆಕೆಯ ಬಗ್ಗೆ ತುಂಬ ಹೆಮ್ಮೆ ಇದೆ’ ಎಂದು ‘ಎನ್‌ಎಚ್‌10’ ಸಿನಿಮಾ ಬಿಡುಗಡೆಯಾದಾಗ ಕೊಹ್ಲಿ ಟ್ವೀಟ್‌ ಮಾಡಿ ತನ್ನ ಪ್ರಿಯತಮೆಯನ್ನು ಸಿಕ್ಕಾಪಟ್ಟೆ ಹೊಗಳಿದ್ದರು.

ಸುರೇಶ್‌ ರೈನಾ–ಪ್ರಿಯಾಂಕ ಚೌಧರಿ
ಮೆನ್‌ ಇನ್‌ ಬ್ಲೂ ತಂಡದ ಜನಪ್ರಿಯ ದಾಂಡಿಗ ಸುರೇಶ್‌ ರೈನಾ ಕಳೆದ ಏಪ್ರಿಲ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕ ಚೌಧರಿ ಅವರನ್ನು ಮದುವೆಯಾದರು. ನವದೆಹಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೆಲವೇ ಕೆಲವು ಆಪ್ತರಷ್ಟೇ ಭಾಗಿಯಾಗಿದ್ದರು. ‘ಕೊನೆಗೂ ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಈ ಮೂಲಕ ಪ್ರಿಯಾಂಕ ಚೌಧರಿ ಎಂಬ ಚೆಲುವೆಯನ್ನು ನಾನು ಪತ್ನಿಯಾಗಿ ಪಡೆದುಕೊಂಡಿದ್ದೇನೆ. ಈ ಸಂದರ್ಭದಲ್ಲಿ ನಾನು ನನ್ನೆಲ್ಲಾ ಸ್ನೇಹಿತರು, ಅಭಿಮಾನಿಗಳು ಮತ್ತು ಬಂಧುಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದರು.

ರಾಬಿನ್‌ ಉತ್ತಪ್ಪ–ಶೀತಲ್‌ ಗೌತಮ್‌
ಟೀಮ್‌ ಇಂಡಿಯಾದ ಬ್ಯಾಚುಲರ್‌ಗಳೆಲ್ಲಾ ಲವ್‌ನಲ್ಲಿ ಬೀಳುತ್ತಿರುವುದನ್ನು ಕಂಡು, ಅವರಿಂದ ಪ್ರೇರಣೆ ಪಡೆದ ಕನ್ನಡದ ಹುಡುಗ ರಾಬಿನ್‌ ಉತ್ತಪ್ಪ ತಮ್ಮ ಬಹುಕಾಲದ ಗೆಳತಿ ಶೀತಲ್‌ ಗೌತಮ್‌ ಅವರೊಂದಿಗೆ ಈಚೆಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಹತ್ತು ವರ್ಷದಿಂದ ಸ್ನೇಹಿತರಾಗಿದ್ದ ಇವರಿಬ್ಬರೂ ಈಗ ಮದುವೆಯಾಗಿ ಹೊಸ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಅಂದಹಾಗೆ, ರಾಬಿನ್‌ ಅವರು ಈ ದೀಪಾವಳಿ ಹಬ್ಬದಂದು ಶೀತಲ್‌ಗೆ ಪ್ರಪೋಸ್‌ ಮಾಡಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಮುದ್ರೆ ಒತ್ತಿದ್ದರು. ‘ನಾವಿಬ್ಬರೂ ಎಂಗೇಜ್‌ ಆಗಿದ್ದೇವೆ. ಅಧಿಕೃತವಾಗಿ! ನಾನು ನನ್ನ ಮುಂದಿನ ಜೀವನವನ್ನು ಶೀತಲ್‌ ಎಂಬ ಸುಂದರಿಯೊಂದಿಗೆ ಕಳೆಯಲು ನಿರ್ಧರಿಸಿದ್ದೇನೆ’ ಎಂದು ಟ್ವೀಟ್‌ ಮಾಡುವ ಮೂಲಕ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು.

ದಿನೇಶ್‌ ಕಾರ್ತಿಕ್‌– ದೀಪಿಕಾ ಪಳ್ಳಿಕಲ್‌
ಎರಡು ವರ್ಷಗಳ ಹಿಂದೆ ಸ್ಕ್ವಾಷ್‌ ಚೆಲುವೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಈಗ ಗೃಹಸ್ಥಾಶ್ರಮದಲ್ಲಿರುವ ದಿನೇಶ್‌ ಕಾರ್ತಿಕ್‌ ಮತ್ತು ದೀಪಿಕಾ ಪಳ್ಳಿಕಲ್‌ ದಂಪತಿ ಭಲೇ ಜೋಡಿ. ಭಾರತದ ನಂಬರ್‌ 1 ಸ್ಕ್ವಾಷ್‌ ಆಟಗಾರ್ತಿ ದೀಪಿಕಾ ಮತ್ತು ಜನಪ್ರಿಯ ಕ್ರಿಕೆಟ್‌ ಆಟಗಾರ ದಿನೇಶ್‌ ಈಗ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಅಂದಹಾಗೆ, ಈ ಜೋಡಿ ಆಗಸ್ಟ್‌ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು. ಮದುವೆ ಆದ ನಂತರ ತಮ್ಮ ಮದುವೆ ಫೋಟೊದೊಂದಿಗೆ ದಿನೇಶ್‌, ‘ನಾನು ನಿಮಗೆ ಮಿಸ್ಟರ್‌ ಅಂಡ್‌ ಮಿಸೆಸ್‌ ದಿನೇಶ್‌ ಕಾರ್ತಿಕ್‌ ಅವರನ್ನು ಪರಿಚಯಿಸುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದರು.

ಯುವರಾಜ್‌ ಸಿಂಗ್‌–ಹಜೆಲ್‌ ಕೀಚ್‌
ಬ್ರಿಟಿಷ್‌ ಹಾಗೂ ಭಾರತೀಯ ನಟಿ ಹಜೆಲ್‌ ಕೀಚ್‌ ಭಾರತೀಯ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರೊಂದಿಗೆ ದಾಂಪತ್ಯ ನಡೆಸುವ ಅದೃಷ್ಟ ಪಡೆದುಕೊಂಡ ಚೆಲುವೆ. ನವೆಂಬರ್‌ 11ರಂದು ನಡೆದ ಸಮಾರಂಭದಲ್ಲಿ ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಂಗೇಜ್‌ ಆಗಿದ್ದಾರೆ. ಇವರಿಬ್ಬರು ಶೀಘ್ರದಲ್ಲೇ ಅಂದರೆ, ಮುಂದಿನ ವರ್ಷದ ಆರಂಭದ ದಿನಗಳಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ‘ಹೌದು ನಾನು ಎಂಗೇಜ್‌ ಆಗಿದ್ದೇನೆ. ನನಗೆ ನನ್ನ ಜೀವನ ಸಂಗಾತಿ ಸಿಕ್ಕಿದ್ದಾಳೆ’ ಎಂದು ಟ್ವೀಟ್‌ ಮಾಡುವ ಮೂಲಕ ಯುವಿ ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಪ್ರಕಟಿಸಿದ್ದರು.

ಹರ್ಭಜನ್‌ ಸಿಂಗ್‌–ಗೀತಾ ಬಸ್ರಾ
ಭಾರತೀಯ ಕ್ರಿಕೆಟ್‌ ತಂಡದ ‘ದೂಸ್ರಾ ಮಾಂತ್ರಿಕ’ ಹರ್ಭಜನ್‌ ಸಿಂಗ್‌  ಮತ್ತು ನಟಿ ಗೀತಾ ಬಸ್ರಾ ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬರಿಬ್ಬರ ಅದ್ದೂರಿ ರಿಸೆಪ್ಷನ್‌ ನವದೆಹಲಿಯಲ್ಲಿ ನಡೆಯಿತು. ‘ಮದುವೆ ಸಮಾರಂಭಕ್ಕೆ ಬಂದು ವಧು–ವರರನ್ನು ಹರಸಿದ್ದೀರಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಮತ್ತು ಶುಭಾಶಯಗಳಿಗೆ ನಾನು ಆಭಾರಿಯಾಗಿದ್ದೇನೆ. ಧನ್ಯವಾದಗಳು’– ಹೀಗೊಂದು ಸಂದೇಶವನ್ನು ಬರೆದು ಬಜ್ಜಿ ತಮ್ಮ ಮದುವೆ ಫೋಟೊ ಹಾಗೂ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದರು.

ರೋಹಿತ್‌ ಶರ್ಮ–ರಿತಿಕಾ ಸಾಜ್‌ದೇ
ಇವರಿಬ್ಬರೂ ಭೇಟಿಯಾಗಿದ್ದೇ ಮರೆಯಲಾಗದ ಕ್ಷಣವಂತೆ. ಮುಂಬೈನ ಬೊರಿವಿಲ್ಲಿ ಸ್ಪೋರ್ಟ್ಸ್‌ ಕ್ಲಬ್‌ನ ಮುಖಾಂತರ ವೃತ್ತಿಪರ ಕ್ರಿಕೆಟ್‌ಗೆ ಇಳಿದ ರೋಹಿತ್‌, ತನ್ನ ಬಾಳ ಸಂಗಾತಿಯನ್ನೂ ಆ ಕ್ಲಬ್‌ನಲ್ಲೇ ಮೊದಲ ಬಾರಿ ಭೇಟಿಯಾಗಿದ್ದರು. ಕಳೆದ ಜೂನ್‌ನಲ್ಲಿ ಇವರಿಬ್ಬರೂ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡರು. ತಮ್ಮ ನಿಶ್ಚಿತಾರ್ಥದ ಫೋಟೊ ಜೊತೆಗೆ ರೋಹಿತ್‌ ಹೀಗೆ ಟ್ವೀಟ್‌ ಮಾಡಿದ್ದರು: ‘ಇಬ್ಬರು ಅತ್ಯುತ್ತಮ ಗೆಳೆಯರು ಈಗ ಜೀವನ ಸಂಗಾತಿಗಳಾಗುತ್ತಿದ್ದೇವೆ. ನೆಚ್ಚಿನ ಗೆಳತಿಯೇ ಆತ್ಮಬಂಧುವಾಗಿ ಬಂದಾಗ ಬಾಳು ಅತಿಸುಂದರ. ರಿತಿಕಾಗಿಂತಲೂ ನನಗೆ ಅತ್ಯುತ್ತಮ ಬಾಳಸಂಗಾತಿ ಸಿಗುತ್ತಿರಲಿಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT