ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಲೋಕದಲ್ಲಿ ‘ಟೈಗರ್ಸ್‌’ ಹೆಜ್ಜೆಗಳು...

Last Updated 20 ಸೆಪ್ಟೆಂಬರ್ 2015, 19:45 IST
ಅಕ್ಷರ ಗಾತ್ರ

ಅಭಿಮಾನಿಗಳ ಗಾಢ ಪ್ರೀತಿ ಏನೆಲ್ಲಾ ಬದಲಾವಣೆಗೆ ಕಾರಣವಾಗುತ್ತದೆ ಎಂಬುದಕ್ಕೆ ಬಾಂಗ್ಲಾದೇಶದಲ್ಲಿ ಕ್ರಿಕೆಟ್‌ ಬೆಳೆಯುತ್ತಿರುವ ರೀತಿ ಉತ್ತಮ ಉದಾಹರಣೆ. ಬಾಂಗ್ಲಾದಲ್ಲಿ ಮೊದಲು ಫುಟ್‌ಬಾಲ್‌ ನೆಚ್ಚಿನ ಕ್ರೀಡೆಯಾಗಿತ್ತು. ಕಬಡ್ಡಿಗೆ ನಂತರದ ಸ್ಥಾನವಿತ್ತು. ಈ ಕ್ರೀಡೆಗಳಿಗೆ ಸಂಬಂಧಿಸಿದ ಚಟುವಟಿಕೆಗಳೇ ಹೆಚ್ಚಾಗಿರುತ್ತಿದ್ದವು. ಆದರೆ, ಟೆಸ್ಟ್‌ ಆಡುವ ಮಾನ್ಯತೆ ಪಡೆದ 15 ವರ್ಷಗಳಲ್ಲಿಯೇ ‘ಟೈಗರ್ಸ್‌’ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ.

ಅದರಲ್ಲೂ ಇತ್ತೀಚಿನ ಐದಾರು ವರ್ಷಗಳಲ್ಲಿ ಬಾಂಗ್ಲಾ ತಂಡ ಏಷ್ಯಾದ ದೈತ್ಯ ಶಕ್ತಿಯಾಗಿ ಬೆಳೆದಿದೆ. ಏಷ್ಯಾದ ಪ್ರಬಲ ರಾಷ್ಟ್ರಗಳಾದ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳನ್ನೂ ಮೀರಿಸುವ ಸಾಮರ್ಥ್ಯ ಗಳಿಸಿಕೊಂಡಿದೆ. ಈ ಎಲ್ಲಾ ಬದಲಾವಣೆ ಇರುಳು ಕಳೆದು ಹಗಲು ಮೂಡುವಷ್ಟರಲ್ಲಿ ಆಗಿದ್ದಲ್ಲ. ಇದರ ಹಿಂದೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಮತ್ತು ಆಟಗಾರರ ಅಪಾರ ಶ್ರಮವಿದೆ.

ಬಾಂಗ್ಲಾ ತಂಡ ಟೆಸ್ಟ್‌ ಆಡುವ ಮಾನ್ಯತೆ ಪಡೆದುಕೊಳ್ಳುವ ಮೊದಲೇ ಏಕದಿನ ಮಾದರಿಯಲ್ಲಿ ಗಮನ ಸೆಳೆದಿತ್ತು. 1988 ಮತ್ತು 2000ರ ಎಸಿಸಿ ಏಷ್ಯಾ ಕಪ್‌ ಟೂರ್ನಿಗಳಲ್ಲಿ ಆಡಿತ್ತು. 1998ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಪಾಲ್ಗೊಂಡಿತ್ತು. ಏಷ್ಯನ್‌ ಟೆಸ್ಟ್ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿತ್ತು. ಬಾಂಗ್ಲಾ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿತ್ತಾದರೂ ಒಮ್ಮೆಯೂ ದೊಡ್ಡ ಪ್ರಶಸ್ತಿ ಜಯಿಸಿರಲಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ 2000ರಲ್ಲಿ ಬಾಂಗ್ಲಾಕ್ಕೆ ಟೆಸ್ಟ್ ಆಡಲು ಮಾನ್ಯತೆ ನೀಡಿತು. ಏಕದಿನ ಮಾದರಿಯಲ್ಲಿ ಆರಂಭದಲ್ಲಿ ಕಂಡಿದ್ದ ಸತತ ಸೋಲುಗಳ ಸರಮಾಲೆ ಟೆಸ್ಟ್‌ನಲ್ಲೂ ಮುಂದುವರಿಯಿತು. 2000ರಿಂದ 2002ರ ಅವಧಿಯಲ್ಲಿ ಸತತ 21 ಟೆಸ್ಟ್‌ ಸೋತ ಕುಖ್ಯಾತಿಯೂ ಈ ತಂಡಕ್ಕಿದೆ. 2001ರಿಂದ  2004ರಲ್ಲಿ ಸತತ 23 ಏಕದಿನ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದೆ. ಟೆಸ್ಟ್‌ ಮತ್ತು ಏಕದಿನ ಎರಡೂ ಮಾದರಿಗಳಲ್ಲಿ ಈ ತಂಡ ಹಲವು ಬಾರಿ ನೂರು ರನ್‌ ಒಳಗೆ ಔಟಾದ ಉದಾಹರಣಿಗಳಿವೆ.

ಟೆಸ್ಟ್‌ನಲ್ಲಂತೂ ಬಾಂಗ್ಲಾ ತಂಡದ್ದು ಕಳಪೆ ಸಾಧನೆ. ಈ ತಂಡ ಮೊದಲ ಟೆಸ್ಟ್ ಜಯಿಸಿದ್ದು ಐಸಿಸಿ ಮಾನ್ಯತೆ ಪಡೆದ ಐದು ವರ್ಷಗಳ ಬಳಿಕ! ಸರಣಿ ಜಯಿಸಲು ಒಂಬತ್ತು ವರ್ಷಗಳೇ ಬೇಕಾದವು. 2009ರಲ್ಲಿ ಶಕೀಬ್‌ ಅಲ್ ಹಸನ್‌ ನಾಯಕತ್ವದಲ್ಲಿ ವೆಸ್ಟ್‌ ಇಂಡೀಸ್‌ ಎದುರು ಚೊಚ್ಚಲ ಸರಣಿ ಜಯಿಸಿತ್ತು.

ಬಾಂಗ್ಲಾ ನೀರಸ ಆಟ ಸಾಕಷ್ಟು ಸಲ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. 1999ರಲ್ಲಿ ಕೆನ್ಯಾ ಎದುರು ಏಕದಿನ ಪಂದ್ಯ ಸೋತಾಗಲಂತೂ ಅಲ್ಲಿನ ಕ್ರಿಕೆಟ್‌ ಪ್ರೇಮಿಗಳು ಕೆಂಡಾಮಂಡಲವಾಗಿದ್ದರು. ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಮುಂದೆ ಪ್ರತಿಭಟನೆ ನಡೆಸಿ ‘ಮಂಡಳಿಯನ್ನು ಮುಚ್ಚಿಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಚ್ಚರಿಯೆಂದರೆ ಈ ಘಟನೆ ನಡೆದ ಮುಂದಿನ ವರ್ಷವೇ ಬಾಂಗ್ಲಾಕ್ಕೆ ಟೆಸ್ಟ್ ಆಡಲು ಮಾನ್ಯತೆ ಸಿಕ್ಕಿತ್ತು!

ಢಾಕಾದ ಬಂಗಬಂಧು ಕ್ರೀಡಾಂಗಣದಲ್ಲಿ 2000ರಲ್ಲಿ ಬಾಂಗ್ಲಾ ತಂಡ ಭಾರತದ ಎದುರು ಚೊಚ್ಚಲ ಟೆಸ್ಟ್‌ ಆಡಿತು. ಅದು ಆ ದೇಶದ ಅಭಿಮಾನಿಗಳ ಪಾಲಿಗೆ ಅತ್ಯಂತ ಭಾವುಕ ಸಂದರ್ಭ. ಟೆಸ್ಟ್ ಆಡುವ ಅವಕಾಶ ಲಭಿಸಿದ್ದು ಬಾಂಗ್ಲಾಕ್ಕೆ ಹೆಮ್ಮೆಯೆನಿಸಿತ್ತು. ಆಗ ಬಾಂಗ್ಲಾ ಕ್ರಿಕೆಟ್‌ ಮಂಡಳಿ (ಬಿಸಿಬಿ) ಅಧ್ಯಕ್ಷರಾಗಿದ್ದ ಮುಸ್ತಫಾ ಕಮಲ್ ‘ಬಾಂಗ್ಲಾ ಜನ ಕ್ರಿಕೆಟ್‌ ಅನ್ನು ಧರ್ಮ ಎಂದು ಪೂಜಿಸುತ್ತಾರೆ. ಇದನ್ನು ಅರಿತು ಆಡಿದರೆ ನಮ್ಮದು ಮುಂದಿನ ಕೆಲವೇ ವರ್ಷಗಳಲ್ಲಿ ಬಲಿಷ್ಠ ತಂಡವಾಗಿ ಬೆಳೆಯುತ್ತದೆ’ ಎಂದಿದ್ದರು.

ಪ್ರತಿಭಟನೆಗಳ ಬಿಸಿ ಹಾಗೂ ಟೆಸ್ಟ್‌ಗೆ ಮಾನ್ಯತೆ ಲಭಿಸಿದ ಖುಷಿಯ ನಡುವೆಯೂ ಬಿಸಿಬಿ ಕ್ರಿಕೆಟ್ ಬೆಳವಣಿಗೆಗೆ ಹೆಚ್ಚು ಒತ್ತು ನೀಡತೊಡಗಿತು. 20 ವರ್ಷಗಳ ಹಿಂದೆ ಬೆರಳೆಣಿಕೆಯಷ್ಟೇ ಇದ್ದ ದೇಶಿ ಟೂರ್ನಿಗಳು ಹೆಚ್ಚುತ್ತಾ ಹೋದವು. ನ್ಯಾಷನಲ್‌ ಕ್ರಿಕೆಟ್‌ ಲೀಗ್‌ ಹಾಗೂ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳ ಸಂಖ್ಯೆ ಹೆಚ್ಚಿದವು. ಪ್ರತಿ ಜಿಲ್ಲೆ, ವಲಯವಾರು ಟೂರ್ನಿಗಳು ಆರಂಭವಾದವು.

‘ಬಾಂಗ್ಲಾ ಮಂಡಳಿ ಪ್ರತಿ ಎರಡು ವರ್ಷಗಳಿಗೊಮ್ಮೆ 24ರಿಂದ 30 ಆಟಗಾರರನ್ನು (19 ವರ್ಷದ ಒಳಗಿನವರು) ಬಿಸಿಬಿ ನ್ಯಾಷನಲ್ ಅಕಾಡೆಮಿಗೆ ಆಯ್ಕೆ ಮಾಡಿ ತರಬೇತಿ ಕೊಡುತ್ತದೆ. ಎರಡು ದಶಕಗಳ ಹಿಂದೆ ಬಾಂಗ್ಲಾದಲ್ಲಿ ಒಂದೂ ಪ್ರಥಮ ದರ್ಜೆ ಪಂದ್ಯಗಳು ಇರಲಿಲ್ಲ. ಕ್ಲಬ್‌ಗಳ ಸಂಖ್ಯೆಯೂ ಬೆರಳೆಣಿಕೆಯಷ್ಟೇ. ಮೊದಲೆಲ್ಲಾ ವರ್ಷಕ್ಕೆ ಎರಡರಿಂದ ಮೂರು ಟೂರ್ನಿಗಳಷ್ಟೇ ನಡೆಯುತ್ತಿದ್ದವು’ ಎಂದು ಬಾಂಗ್ಲಾ ಚೊಚ್ಚಲ ಟೆಸ್ಟ್‌ ಆಡಿದಾಗ ತಂಡದಲ್ಲಿದ್ದ ಅಕ್ರಮ್‌ ಖಾನ್‌ ಅದೊಮ್ಮೆ ಹೇಳಿದ್ದರು.

ಬಾಂಗ್ಲಾದಲ್ಲಿ ನಡೆಯುವ ಲೀಗ್‌ಗಳು ಈಗ ಸಾಕಷ್ಟು ಖ್ಯಾತಿ ಹೊಂದಿವೆ. ಅಜಯ್ ಜಡೇಜ, ಅರ್ಜುನ್ ರಣತುಂಗಾ ಹಾಗೂ ವಾಸಿಮ್‌ ಅಕ್ರಮ್‌ ಬಾಂಗ್ಲಾ ಲೀಗ್‌ಗಳಲ್ಲಿ ಆಡಿದ್ದಾರೆ. ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಕೂಡ ಯುವ ಆಟಗಾರರ ಪ್ರತಿಭೆಗೆ ವೇದಿಕೆ ಒದಗಿಸಿದೆ.

ಸೌಲಭ್ಯದಲ್ಲೂ ಮುಂದು
ಬಾಂಗ್ಲಾ ಮಂಡಳಿ ಆಟಗಾರರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಬಿಸಿಸಿಐಗಿಂತಲೂ ಮುಂದಿದೆ. ತಂಡಕ್ಕೆ ಸಹಾಯಕ ಸಿಬ್ಬಂದಿ ವಿಷಯದಲ್ಲಂತೂ ವಿಶೇಷ ಆಸಕ್ತಿ ವಹಿಸಿದೆ. ಮುಖ್ಯ ಕೋಚ್‌, ಸಹಾಯಕ ಕೋಚ್‌, ಬ್ಯಾಟಿಂಗ್‌ ಕೋಚ್‌, ವೇಗದ ಬೌಲಿಂಗ್‌, ಸ್ಪಿನ್‌ ಬೌಲಿಂಗ್‌, ಫೀಲ್ಡಿಂಗ್‌, ಸ್ಟ್ರಂಥ್‌ ಮತ್ತು ಕಂಡೀಷನಿಂಗ್ ಕೋಚ್‌ ಹೀಗೆ ಪ್ರತಿ ವಿಭಾಗಕ್ಕೂ ತರಬೇತುದಾರರನ್ನು ನೇಮಿಸಿದೆ.

ಆದ್ದರಿಂದ ಮುಸ್ತಫಿಜುರ್‌ ರಹಮಾನ್‌, ಸೌಮ್ಯ ಸರ್ಕಾರ್‌, ಲಿಟನ್‌ ಕುಮಾರ್‌ ದಾಸ್‌, ಅನಾಮುಕ್ ಹಕ್‌, ರೋನಿ ತಾಲ್ಲೂಕದಾರ್‌, ಮೊಮಿನುಲ್‌ ಹಕ್‌ ಅವರಂಥ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬಂದಿದ್ದಾರೆ.

ಎಲ್ಲಕ್ಕಿಂತ ಅಚ್ಚುಕಟ್ಟಾಗಿ ಟೂರ್ನಿಗಳನ್ನು ಆಯೋಜಿಸುವ ಕಲೆ ಬಾಂಗ್ಲಾಕ್ಕೆ ಕರಗತವಾಗಿದೆ. ಈ ದೇಶ 2011ರ ಏಕದಿನ ವಿಶ್ವಕಪ್‌, ಐಸಿಸಿ ಚಾಂಪಿಯನ್ಸ್‌ ಟ್ರೋಫಿ, ಹೋದ ವರ್ಷ ಟ್ವೆಂಟಿ–20 ವಿಶ್ವಕಪ್‌, ನಾಲ್ಕು ಬಾರಿ (1988, 2000, 2012 ಮತ್ತು 2014) ಎಸಿಸಿ ಟೂರ್ನಿಗೆ ಆತಿಥ್ಯ ವಹಿಸಿ ಸೈ ಎನಿಸಿಕೊಂಡಿದೆ. ಮಳೆ ಬಂದಾಗ ಕ್ರೀಡಾಂಗಣವನ್ನು ಮುಚ್ಚಲು ಹಾಗೂ ಬೇಗನೆ ನೀರು ಹೊರ ಹಾಕುವ ಹೋವರ್ ಟವರ್‌ನಂಥ ಆಧುನಿಕ ತಂತ್ರಜ್ಞಾನವನ್ನೂ ಬಾಂಗ್ಲಾ ಮಂಡಳಿ ಉಪಯೋಗಿಸುತ್ತಿದೆ.

ಹೀಗೆ ಸೌಲಭ್ಯಗಳನ್ನು ಒದಗಿಸಿ ತಳಮಟ್ಟದಲ್ಲಿ ಸಾಕಷ್ಟು ಟೂರ್ನಿಗಳನ್ನು ನಡೆಸಿದ್ದರಿಂದ ಬಾಂಗ್ಲಾ ತಂಡ ಈಗ ಬಲಿಷ್ಠವಾಗಿ ಬೆಳೆಯುತ್ತಿದೆ. ಬಾಂಗ್ಲಾ ಏಕದಿನ ವಿಶ್ವಕಪ್‌ನಲ್ಲಿ ಈ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ತವರಿನಲ್ಲಿ ಇತ್ತೀಚಿಗೆ ಆಡಿದ ಹಿಂದಿನ ನಾಲ್ಕೂ ಸರಣಿಗಳಲ್ಲಿ ಗೆಲುವು ಪಡೆದಿದೆ.

ಬಾಂಗ್ಲಾ 2014ರಲ್ಲಿ ಜಿಂಬಾಬ್ವೆ ಎದುರು ಮೂರೂ ಟೆಸ್ಟ್‌ನಲ್ಲಿ ಜಯ ಸಾಧಿಸಿದೆ. ಇದೇ ತಂಡದ ಎದುರು ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧಿಸಿತ್ತು. ಬಲಿಷ್ಠ ತಂಡ ಪಾಕಿಸ್ತಾನವನ್ನು ಏಕದಿನ ಸರಣಿಯಲ್ಲಿ 3–0ರಲ್ಲಿ ಮಣಿಸಿತ್ತು. ಅಷ್ಟೇ ಏಕೆ, ಏಕದಿನ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತವನ್ನು 2–1ರಲ್ಲಿ ಸೋಲಿಸಿತ್ತು. ದಕ್ಷಿಣ ಆಫ್ರಿಕಾ ತಂಡವನ್ನೂ ಬಗ್ಗು ಬಡಿದಿತ್ತು.

ಬಾಂಗ್ಲಾ ಕೋಚ್‌ಗಳಾಗಿದ್ದ ವೆಸ್ಟ್‌ ಇಂಡೀಸ್‌ನ ಗೋರ್ಡನ್‌ ಗ್ರಿನೇಜ್‌, ಆಸ್ಟ್ರೇಲಿಯಾದ ಟ್ರಾವೆರ್‌ ಚಾಪೆಲ್‌, ಶೇನ್ ಜುಗೆನ್‌ಸನ್‌, ಪಾಕಿಸ್ತಾನದ ಡೇವ್‌ ವಾಟ್ಮೋರ್‌ ಆ ತಂಡದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹೋದ ವರ್ಷ ಶ್ರೀಲಂಕಾದ ಚಂಡಿಕಾ ಹತುರಸಿಂಘಾ ಕೋಚ್‌ ಆಗಿ ನೇಮಕವಾದ ಬಳಿಕ ತಂಡದ ಅದೃಷ್ಟವೇ ಬದಲಾಗಿದೆ.

ಬಾಂಗ್ಲಾ ಮುಂದಿನ ತಿಂಗಳು ಆಸ್ಟ್ರೇಲಿಯಾ ಎದುರು ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಆ ಸರಣಿಗೆ ಸಜ್ಜಾಗಲು ಭಾರತ ‘ಎ’ ತಂಡದ ಎದುರು ಬೆಂಗಳೂರು ಮತ್ತು ಮೈಸೂರಿನಲ್ಲಿ ಸರಣಿ ಆಡುತ್ತಿದೆ. ಬಾಂಗ್ಲಾ ಹೆಸರಿಗೆ ಮಾತ್ರ ‘ಎ’ ತಂಡ. ಈ ತಂಡದ ಒಟ್ಟು 15 ಆಟಗಾರರಲ್ಲಿ 14 ಜನ ರಾಷ್ಟ್ರೀಯ ತಂಡದಲ್ಲಿ ಆಡಿದವರೇ ಇದ್ದಾರೆ.

ಸತತ ನಾಲ್ಕು ಸರಣಿಗಳಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿರುವ ಕಾರಣ ಸಹಜವಾಗಿಯೇ ಬಾಂಗ್ಲಾದ ವಿಶ್ವಾಸ ಹೆಚ್ಚಿದೆ. ಆದರೆ, ಇಷ್ಟಕ್ಕೆ ಬಾಂಗ್ಲಾ ಖುಷಿಪಡುವಂತಿಲ್ಲ. ಏಕೆಂದರೆ ಈ ತಂಡ ಎಲ್ಲಾ ಸರಣಿಗಳನ್ನು ಜಯಿಸಿದ್ದು ತವರಿನಲ್ಲಿ. ತವರಿನಲ್ಲಿ ನೀಡಿದ ಸಾಮರ್ಥ್ಯವನ್ನು  ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂಥ ಕಠಿಣ ಪಿಚ್‌ಗಳಲ್ಲಿ ನೀಡಿದರೆ ಆಗ ಮೆಚ್ಚಿಕೊಳ್ಳಬಹುದು. ಆದ್ದರಿಂದ ಆಸ್ಟ್ರೇಲಿಯಾ ಎದುರಿನ ಸರಣಿ ‘ತವರಿನ ಹುಲಿ’ಗಳಿಗೆ ಅಗ್ನಿಪರೀಕ್ಷೆಯೆನಿಸಿದೆ. ಈ ಕಾರಣಕ್ಕಾಗಿಯೇ ಬಾಂಗ್ಲಾ ತಂಡದ ಆಯ್ಕೆ ಸಮಿತಿ ‘ಎ’ ತಂಡಗಳ ಸರಣಿಗೆ ಬಲಿಷ್ಠ ತಂಡವನ್ನೇ ಕಳುಹಿಸಿದೆ.

ಆ್ಯಷಸ್‌ ಸರಣಿಯಲ್ಲಿ ಸೋತು ಕುಗ್ಗಿ ಹೋಗಿದ್ದ ಆಸೀಸ್‌ ಏಕದಿನ ಸರಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ. ಆದ್ದರಿಂದ ಬಾಂಗ್ಲಾದ ನಿಜವಾದ ಸಾಮರ್ಥ್ಯ ಕಾಂಗರೂಗಳ ನಾಡಿನ ಎದುರು ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT