ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಶುಭಮನ್‌ ಅಜೇಯ ದ್ವಿಶತಕ

Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಆರಂಭ ಆಟಗಾರ ಶುಭಮನ್ ಗಿಲ್ ಅವರ ಭರ್ಜರಿ ದ್ವಿಶತಕದ (ಔಟಾಗದೇ 208) ನೆರವಿನಿಂದ ಉತ್ತರ ವಲಯ ತಂಡ, ಹನುಮಂತ ಸಿಂಗ್‌ ಟ್ರೋಫಿ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಕೇಂದ್ರ ವಲಯ ವಿರುದ್ಧ ಮೊದಲ ದಿನವೇ 5 ವಿಕೆಟ್‌ಗೆ 445 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು.

ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಲು ನಿರ್ಧರಿಸಿದ ಉತ್ತರ ವಲಯ 107 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತ್ತು. ಆದರೆ ನಂತರ ಪರದಾಡುವ ಸರದಿ ಕೇಂದ್ರ ವಲಯದ್ದಾಯಿತು.
ತಂಡದ ಸ್ಕೋರ್‌ 123 ಆಗಿದ್ದಾಗ ಸ್ಲಿಪ್‌ನಲ್ಲಿ ಅಜಯ್‌ ಕೈಬಿಟ್ಟ (ಬೌಲರ್‌: ಆಕಾಶ್‌ ಕುಮಾರ್‌) ಕ್ಯಾಚಿನಿಂದ ಶುಭಮನ್‌ (ಆಗ ವೈಯಕ್ತಿಕ ಮೊತ್ತ 52) ಜೀವದಾನ ಪಡೆದಿದ್ದರು. ಇದಕ್ಕಾಗಿ ಕೇಂದ್ರ ವಲಯ ಭಾರಿ ಬೆಲೆ ತೆರಬೇಕಾಯಿತು.

ಶುಭಮನ್‌ ನಾಲ್ಕನೇ ವಿಕೆಟ್‌ಗೆ ಲಕ್ಷಯ್‌ ದಲಾಲ್‌ (95) ಜೊತೆ 173 ರನ್‌ಗಳ ಭರ್ಜರಿ ಜೊತೆಯಾಟ ವಾಡಿದರು. ಶತಕವಂಚಿತರಾದ ಲಕ್ಷಯ್‌ ಒಂದು ಸಿಕ್ಸರ್‌, 12 ಬೌಂಡರಿ ಬಾರಿಸಿದರು. ಗಿಲ್‌ ಅವರ 240 ಎಸೆತಗಳ ಅಜೇಯ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌, 22 ಬೌಂಡರಿಗಳಿವೆ. ಗಿಲ್‌ ಮುರಿಯದ ಆರನೇ ವಿಕೆಟ್‌ಗೆ ವಿಕೆಟ್‌ಕೀಪರ್‌ ಸಿಮ್ರಾನ್‌ ಸಿಂಗ್‌ ಜೊತೆ 140 ರನ್‌ ಸೇರಿಸಿದ್ದಾರೆ.

ಉತ್ತಮ ಆರಂಭ: ಪೆಸಿಟ್ ಕ್ರೀಡಾಂಗಣ ದಲ್ಲಿ ದಕ್ಷಿಣ ವಲಯ ವಿರುದ್ಧ ಆರಂಭವಾದ ಇನ್ನೊಂದು ಲೀಗ್‌ ಪಂದ್ಯದಲ್ಲಿ ಪಶ್ಚಿಮ ವಲಯ
5 ವಿಕೆಟ್‌ಗೆ 268 ರನ್‌ ಗಳಿಸಿದೆ. ಮೂರನೇ ಕ್ರಮಾಂಕದ ಆಟಗಾರ ಭೂಪೇನ್‌ ಲಾಲ್ವಾನಿ 92 ರನ್‌ (230 ಎಸೆತ, 12 ಬೌಂಡರಿ) ಗಳಿಸಿ ಅಜೇಯರಾಗಿ ಉಳಿದಿದ್ದಾರೆ. 

ಯಶಸ್ಸು ಗಳಿಸುತ್ತಿರುವ ಹರ್ವಿಕ್‌ ದೇಸಾಯಿ (60, 10 ಬೌಂಡರಿ) ಜೊತೆ ಭೂಪೇನ್‌ 5ನೇ ವಿಕೆಟ್‌ಗೆ 108 ರನ್‌ ಸೇರಿಸಿದರಲ್ಲದೇ, ನಂತರ ರತ್ವಾ ಜೊತೆ ಮುರಿಯದ ಆರನೇ ವಿಕೆಟ್‌ಗೆ 39 ರನ್‌ ಸೇರಿಸಿ ತಂಡ ಕುಸಿಯದಂತೆ ತಡೆದರು.

ಸ್ಕೋರುಗಳು (ಜೆಎನ್‌ಎನ್‌ಸಿಇ ಕ್ರೀಡಾಂಗಣ): ಉತ್ತರ ವಲಯ: 90 ಓವರುಗಳಲ್ಲಿ 5 ವಿಕೆಟ್‌ಗೆ 445 (ಶುಭಮನ್‌ ಗಿಲ್‌ ಬ್ಯಾಟಿಂಗ್‌ 208, ಲಕ್ಷಯ್‌ ದಲಾಲ್‌ 95, ಪಿ.ಸಿಮ್ರಾನ್‌ ಸಿಂಗ್‌ ಬ್ಯಾಟಿಂಗ್‌ 73; ಪೂರ್ನಕ್‌ ತ್ಯಾಗಿ 52ಕ್ಕೆ3) ವಿರುದ್ಧ ಮಧ್ಯ ವಲಯ.

ಪೆಸಿಟ್‌ ಕ್ರೀಡಾಂಗಣ: ಪಶ್ಚಿಮ ವಲಯ: 86 ಓವರುಗಳಲ್ಲಿ 5 ವಿಕೆಟ್‌ಗೆ 268 (ಭೂಪೇನ್‌ ಲಾಲ್ವಾನಿ  ಬ್ಯಾಟಿಂಗ್‌ 92, ಓಂ ಭೋಸ್ಲೆ 37, ಹರ್ವಿಕ್‌ ದೇಸಾಯಿ 60, ನಿನಾದ್‌ ರತ್ವಾ ಬ್ಯಾಟಿಂಗ್‌ 30; ಶ್ರೇಯಸ್‌ 35ಕ್ಕೆ2) ವಿರುದ್ಧ ದಕ್ಷಿಣ ವಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT