ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್ತಾನುಜ ವತ್ಸರ ‘ಕನ್ನಡ ಪಂಚತಂತ್ರವು’

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ಕನ್ನಡ ಪಂಚತಂತ್ರವು’ – ಶಾಲೆಗಳ ಪ್ರಯೋಜನಾರ್ಥಕವಾದ್ದು, ಎನ್ನುವ ಈ ಪುಸ್ತಕ ಮೊದಲನೆಯ ಬಾರಿಗೆ ಪ್ರಕಟಗೊಂಡಿದ್ದು 1865ರಲ್ಲಿ (ಮರು ಮುದ್ರಣ 1867, 1892). ಇದನ್ನು ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ಸಿನವರಾದ ಪ್ಲೆಬ್ಸ್ಟ್ ಮತ್ತು ಸ್ಟೋಲ್ಷ್ ಎನ್ನುವವರು ಮುದ್ರಿಸಿ, ಮಂಗಳೂರಿನ ಮಿಷನ್ ಬುಕ್ ಶಾಪಿನ ಫ್ಲೆಡರರ್ ಮತ್ತು ರ್‍ಹೀಮ್ ಅವರು ಪ್ರಕಟಪಡಿಸಿರುತ್ತಾರೆ.

182 ಪುಟಗಳ ಈ ಕೃತಿಯ ಮೇಲೆ ಎಲ್ಲಿಯೂ ಕೃತಿಕಾರನ ಹೆಸರಿನ ನಮೂದು ಇಲ್ಲ. 1865ರಲ್ಲಿಯೇ ಬೆಂಗಳೂರಿನ ಸರ್ಕಾರೀ ಮುದ್ರಣಾಲಯದಿಂದ 225 ಪುಟಗಳ ಮತ್ತೊಂದು ‘ಕನ್ನಡ ಪಂಚತಂತ್ರವು’ ಎನ್ನುವ ಆವೃತ್ತಿ ಮುದ್ರಣಗೊಂಡಿದೆ. ಆ ಕೃತಿಯಲ್ಲಿಯೂ ಕೃತಿಕಾರನ ಹೆಸರಿನ ನಮೂದು ಇಲ್ಲ. ಹೀಗಾಗಿ ಈಗ ಚರ್ಚೆಗೆ ಒಳಪಟ್ಟಿರುವ ಬಾಸೆಲ್ ಮಿಷನ್‌ನ ಆವೃತ್ತಿಯ ಕೃತಿಕಾರನು ಕ್ರಿಸ್ತಾನುಜ ವತ್ಸ ಎಂದೂ, ಸರ್ಕಾರೀ ಮುದ್ರಣಾಲಯದ ಆವೃತ್ತಿಯ ಕತೃ ಜಾನ್ ಗ್ಯಾರೆಟ್ ಎಂದೂ ಎಲ್.ಡಿ. ಬಾರ್ನೆಟ್ ಅವರ ‘ಎ ಕ್ಯಾಟಲಾಗ್ ಆಫ್ ದ ಕನ್ನಡ, ಬಡಗ, ಅಂಡ್ ಕೂರ್ಗ್ ಬುಕ್ಸ್ ಇನ್ ದ ಲೈಬ್ರೆರಿ ಆಫ್ ದ ಬ್ರಿಟಿಷ್ ಮ್ಯೂಸಿಯಂ’ ಎನ್ನುವ ಪುಸ್ತಕದ ಮಾಹಿತಿ ಆಧರಿಸಿ ನಿರ್ಧರಿಸಬಹುದಾಗಿದೆ. ಪಂಚತಂತ್ರದ ಈ ಆವೃತ್ತಿಗಳಷ್ಟೇ ಅಲ್ಲದೆ– 1856ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ  ‘ಪಂಚತಂತ್ರದ ಕಥೆ’, 1864ರಲ್ಲಿ ರೆ. ಎಫ್. ಕಿಟೆಲ್ ಅವರ ‘ಪಂಚತಂತ್ರ’,  1892ರಲ್ಲಿ ‘ಕರ್ಣಾಟಕ ಕಾವ್ಯಮಂಜರಿ ಮಾಲೆ’ಯಿಂದ ಎಂ.ಎ. ರಾಮಾನುಜಯ್ಯಂಗಾರ್ ಅವರ ‘ಪಂಚತಂತ್ರ’ ಎನ್ನುವ ಆವೃತ್ತಿಗಳು ಕೂಡ ಕನ್ನಡದಲ್ಲಿ ಪ್ರಕಟಗೊಂಡಿವೆ.

ಪಂಚತಂತ್ರದಲ್ಲಿ ಪ್ರಾಣಿ, ಪಶು, ಪಕ್ಷಿ, ಜಂತು, ಕೀಟ, ಜಲಚರಗಳ ಕತೆ ಬರುತ್ತವೆ. ಇವುಗಳಿಗೆ ಮೂಲ ಆಕರ ಭಾರತವೇ. ಈ ಕತೆಗಳು ಎಷ್ಟು ಜನಪ್ರ್ರಿಯವೆಂದರೆ 12-13ನೆಯ ಶತಮಾನಗಳ ಹೊತ್ತಿಗೇನೇ ಜಗತ್ತಿನ ಅನೇಕ ದೇಶಗಳಿಗೆ ಇವು ರೂಪಾಂತರ ಹೊಂದಿ ವಲಸೆ ಹೋಗಿವೆ. ಅರೇಬಿಕ್, ಪರ್ಷಿಯನ್, ಹೀಬ್ರೂ, ಗ್ರೀಕ್, ಲ್ಯಾಟಿನ್, ಜರ್ಮನ್ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಪಂಚತಂತ್ರವು ಭಾಷಾಂತರಗೊಂಡಿದೆ. ಸಂಸ್ಕೃತದಲ್ಲಿ ವಿಷ್ಣುಶರ್ಮ ಎನ್ನುವವನ ‘ಪಂಚತಂತ್ರ’ವೇ ಈ ಎಲ್ಲ ಕತೆಗಳಿಗೆ ಮೂಲ.

ಆದರೆ  ಕ್ರಿ.ಶ. 1030ರ ಚಾಲುಕ್ಯರ ಜಯಸಿಂಹನ ಆಶ್ರಯದಲ್ಲಿದ್ದ ದುರ್ಗಸಿಂಹ ಎನ್ನುವ ಕನ್ನಡ ಕವಿ ಕನ್ನಡದಲ್ಲಿ ಮೊದಲ ಬಾರಿಗೆ ಪಂಚತಂತ್ರವನ್ನು ರಚಿಸಿದ್ದಾನೆ. ಆ ಕೃತಿಗೆ ಮೂಲ ಸಂಸ್ಕೃತದ ವಸುಭಾಗ ಭಟ್ಟ ಎನ್ನುವ ಕವಿ ರಚಿಸಿದ ‘ಪಂಚತಂತ್ರ’ ಆಧಾರ. ಕನ್ನಡದ ಮೂಲಕ ಸಂಸ್ಕೃತದಲ್ಲಿ ವಸುಭಾಗ ಭಟ್ಟ ಎನ್ನುವ ಕವಿ ಇದ್ದನು ಎನ್ನುವ ವಿಷಯ ಬೆಳಕಿಗೆ ಬಂದಿದ್ದು, ದುರದೃಷ್ಟವಶಾತ್ ಸಂಸ್ಕೃತದಲ್ಲಿ ವಸುಭಾಗ ಭಟ್ಟನ ಈ ಕೃತಿ ಲಭ್ಯವಿಲ್ಲ.

1840ರಿಂದ 1920ರವರೆವಿಗೆ ಜೀವಿಸಿದ್ದ ಕ್ರಿಸ್ತಾನುಜ ವತ್ಸ ಅವರು ನಮ್ಮ ದೇಶೀಯ ಮಿಷನರಿ ಪಾದ್ರಿ. ಇವರು ಮಂಗಳೂರಿನ ಬಾಸೆಲ್ ಮಿಷನ್‌ನ ಥಿಯಲಾಜಿಕಲ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರು ಬಾಸೆಲ್ ಮಿಷನ್ ಪ್ರಕಟಿಸುತ್ತಿದ್ದ ‘ಸಭಾಪತ್ರ’ ಎನ್ನುವ ಕ್ರೈಸ್ತ ಪತ್ರಿಕೆಗೆ 1868ರಿಂದ 1871ರವರೆಗೆ ಸಂಪಾದಕರಾಗಿದ್ದರು. ‘ಕನ್ನಡ ಪಂಚತಂತ್ರವು’ (1865), ‘ವಿಲಿಯಂ ಎಂಬುವನ ಚರಿತ್ರೆ’ (1866), ‘ಬೂಸಿಯ ಕಡೇ ದಿನಗಳು’ (1869, ಟಿ. ಸ್ಮಿತ್ ಅವರ ಪುಸ್ತಕದ ಅನುವಾದ), ‘ಕನ್ನಡ ಪಂಚಾಂಗವು’ (ಪಿ. ಬಾಳಪ್ಪಯ್ಯ ಅವರೊಂದಿಗೆ, 1870 ರಿಂದ 1878), ‘ಕನ್ನಡ  ಇಂಗ್ಲಿಷು ಶಬ್ದಾವಳಿಯು’ (1874), ‘ಜನ್ಮಾಂತರೋಪದೇಶವು’ (1874), ‘ದಾಂಪತ್ಯ ಜೀವನ’ (1875), ‘ಇಂಗ್ಲಿಷ್ ಕನ್ನಡ ಶಾಲಾ ನಿಘಂಟು’ (ಎಫ್. ಜೀಗ್ಲರ್ ಹಾಗೂ ಟಿ. ವಾಲ್ಷ್ ಅವರೊಂದಿಗೆ, 1876), ‘ಮಸೀಹ ವಿಜಯ’, ‘ಕಡೆಗೆ ವಜೀರನಾದ ಯೋಸೇಫನೆಂಬ ಯುವಗೋಪಾಲರತ್ನ’ (ಟಿ. ವಾಲ್ಷ್‌ರೊಂದಿಗೆ, 1876), ‘ಇಂಗ್ಲಿಷು  ಕನ್ನಡ ಸಂಭಾಷಣ ವಾಕ್ಯಗಳು’ (1879), ‘ಸಂಸ್ಕೃತ ಸಣ್ಣ ವ್ಯಾಕರಣ’ (1880), ‘ವೇದದಲ್ಲಿ ಏನಿದೆ?’ (1883, ಮರಾಠಿಯಿಂದ ಅನುವಾದ), ‘ವಿಕ್ಟೋರಿಯ ಚಕ್ರವರ್ತಿನಿ ಅವರ ಜೀವಮಾನದ ವೃತ್ತಾಂತವು’ (1897, ಇಂಗ್ಲಿಷಿನಿಂದ ಭಾಷಾಂತರ), ‘ಯಾತ್ರಿಕನ ಪ್ರಗತಿ’ (1908, ಸಾಲೊಮನ್ ಭಾಸ್ಕರ್ ಅವರೊಂದಿಗೆ), ‘ದ ಹಂಡ್ರೆಡ್ ಕ್ಯಾನರೀಸ್ ಪ್ರಾವರ್ಬ್ಸ್ ಅಂಡ್ ದೇರ್ ಕರೆಸ್ಪಾಂಡಿಂಗ್ ಇಂಗ್ಲಿಷ್ ಪ್ರಾವರ್ಬ್ಸ್’ (1908), ‘ಕನ್ನಡ  ಇಂಗ್ಲಿಷು ಲಘುಕೋಶ’ (1913), ‘ಲಘುಕೋಶ ಇಂಗ್ಲಿಷೂ ಕನ್ನಡವೂ’ (1933ರಲ್ಲಿ ಪಂಜೆ ಮಂಗೇಶ ರಾಯರಿಂದ ವಿಸ್ತರಣ ಹಾಗೂ ಪರಿಷ್ಕರಣ) ಎನ್ನುವ ಹದಿನೆಂಟು ಪುಸ್ತಕಗಳನ್ನು ಕ್ರಿಸ್ತಾನುಜ ವತ್ಸ ಅವರು ರಚಿಸಿರುತ್ತಾರೆ.

1863 ರಲ್ಲಿ ವತ್ಸ ಎನ್ನುವವರು ‘ವಿಕೀರ್ಣ ಸುಭಾಷಿತ ಪ್ರಸಂಗ ಶತಕ’ ಎನ್ನುವ ಕೃತಿ ರಚಿಸಿರುವ ಮಾಹಿತಿಯೊಂದಿದೆ, ಆದರೆ ಆ ವತ್ಸ ಅವರು ಕ್ರಿಸ್ತಾನುಜ ವತ್ಸರಲ್ಲ, ಸುವಾರ್ತಪ್ಪ ವತ್ಸ ಎನ್ನುವವರು. ಪ್ರಸ್ತುತ ಕ್ರಿಸ್ತಾನುಜ ವತ್ಸ ಅವರ ಈ ಪಂಚತಂತ್ರದ ಇಪ್ಪತ್ತು ಪುಟಗಳ ಪ್ರಿಫೇಸ್‌ನಲ್ಲಿ ಜಾನ್ ಗ್ಯಾರೆಟ್ ಅವರ ಪಂಚತಂತ್ರದ ಆವೃತ್ತಿಯನ್ನು ಉಲ್ಲೇಖಿಸಿರುವುದರಿಂದ– 1865 ರಲ್ಲಿ ಮೊದಲು ಗ್ಯಾರೆಟ್ ಅವರ, ನಂತರ ಕ್ರಿಸ್ತಾನುಜ ವತ್ಸರ ಪಂಚತಂತ್ರದ ಆವೃತ್ತಿಗಳು ಹೊರಬಂದುವೆಂದು ಸುಲಭ ತೀರ್ಮಾನಕ್ಕೆ ಬರಬಹುದು. 

ಪ್ರಸಕ್ತ ಕೃತಿಯಲ್ಲಿ ಒಟ್ಟು ಐವತ್ತು ಕತೆಗಳಿವೆ. ಮುನ್ನುಡಿಯೊಳಗೆ ಪಂಚತಂತ್ರದ ಕಾಲದ ಬಗ್ಗೆ ಮಾಡಿರುವ ಚರ್ಚೆಗಳಲ್ಲಿ ಕೆಲವು ಸ್ವಾರಸ್ಯಕರ ವಿಚಾರಗಳಿವೆ. ಸಂಸ್ಕೃತದ ಪಂಚತಂತ್ರವನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಮುದ್ರಿಸಿರುವ ಜರ್ಮನ್ ವಿದ್ವಾಂಸ ಪ್ರೊ. ಜೆ.ಈ.ಎಲ್. ಕೊಸೆಗಾರ್ಟನ್ ಉಲ್ಲೇಖಿಸಿರುವ ಒಂದು ಪ್ರಸಂಗವನ್ನು ವತ್ಸ ಅವರು ನಿರೂಪಿಸಿದ್ದಾರೆ:ರೀ A lion took away the precious life of PANINI, the author of the Grammar; an elephant suddenly slew the wise JEIMINI, the author of the Mimamsa; at the sea-shore a shark killed PINGALA who composed the knowledge of Meters (Chandassu-Prosody). From this passage we learn that Panchatantra was composed after the death of these renowned personages... ಹೀಗಾಗಿ ಪಂಚತಂತ್ರದ ಕಾಲವನ್ನು ಕೊಸೆಗಾರ್ಟನ್ ಮುಂತಾದ ವಿದ್ವಾಂಸರು ಪಾಣಿನಿ, ಪಾರಾಶರ್ಯ ವ್ಯಾಸ, ಜೈಮಿನಿ ಹಾಗೂ ಪಿಂಗಳನ ನಂತರದ ಕಾಲಘಟ್ಟಕ್ಕೆ ಸುಮಾರು ಕ್ರಿ.ಶ. 531 ರಿಂದ ಕ್ರಿ.ಶ. 579 ಎಂದು ಅಂದಾಜಿಸಿರುತ್ತಾರೆ. ಕ್ರಿ.ಪೂ. ೫೫೦ರಲ್ಲಿ ರಚನೆಗೊಂಡ ಈಸೋಪನ ನೀತಿಕತೆಗಳ ಪ್ರಭಾವ ಪಂಚತಂತ್ರದ ಮೇಲಾಗಿದೆ ಎಂಬುದನ್ನು ಇವರುಗಳು ಗುರುತಿಸಿದ್ದಾರೆ.

ಇಲ್ಲಿನ ಗದ್ಯದ ಸ್ವರೂಪದ ಮಾದರಿಗಾಗಿ ಕ್ರಿಸ್ತಾನುಜ ವತ್ಸರು ಅನುವಾದಿಸಿರುವ ಒಂದು ಕತೆಯನ್ನು ಗಮನಿಸಬಹುದು. ‘‘ಗೌಳದೇಶದಲ್ಲು ವಿಂಧ್ಯವಾಸಿಗಿರಿಯ ತಪ್ಪಲಲ್ಲು ಅಷ್ಟಪಾದವೆಂಬ ಪಟ್ಟಣದಲ್ಲು ರತ್ನಾಂಗದನೆಂಬ ರಾಯಂ ಸುಖದಿಂದ ರಾಜ್ಯವನ್ನಾಳುತ್ತಾ ಇರಲು; ಆ ಪಟ್ಟಣದ ಒಳಗೆ ಸುಖವೇದಿಯೆಂಬ ಒಬ್ಬ ಬ್ರಾಹ್ಮಣನು ಮಹಾ ವಿದ್ಯಾಸಂಪನ್ನನು; ತಾನು ಒಂದು ಹೋತನ್ನ ತಂದು ಮಹಾಯಜ್ಞವ ಮಾಡಬೇಕೆಂದು, ಆಳೋಚಿಸಿ ಕೊಂಡು ಇರಲು; ಒಂದಾನೊಂದು ದಿವಸಂ ಆ ಬ್ರಾಹ್ಮಣಂ ನದಿಯ ಸ್ಥಾನಕಂ ಹೋಗಿ, ಇರಲು; ಆ ನದಿಗೆ ಒಂದು ಹೋತು ತನ್ನ ಹಿಂಡು ತಪ್ಪಿ ಬಂದು, ನೀರು ಕುಡಿಯುತಾ ಇರಲು; ಅದನ್ನು ಆ ಬ್ರಾಹ್ಮಣಂ ಕಂಡು, ಮಹಾ ಸಂತೋಷದಿಂ ಆ ಹೋತನ ಕಾಲ ಕಟ್ಟಿ, ತಲೆಯಲ್ಲು ಹೊತ್ತುಕೊಂಡು, ಯಜ್ಞವ ಮಾಡಬೇಕೆಂದು, ತನ್ನ ಗೃಹಕ್ಕೆ ಹೋಗುತ್ತಂ ಇರಲು; ಆ ದಾರಿಯಲ್ಲು ಕಿರಾತರು ಮಹಾ ಕ್ಷುಧೆಯಂ ಬಟ್ಟು, ಈ ಬ್ರಾಹ್ಮಣನು ಹೋತನ್ನ ಹೊತ್ತುಕೊಂಡು ಹೋಗುತ್ತಾ ಇರುವದಂ ಕಂಡು, ಉಪಾಯಾಂತರದಿಂದ ಈ ಹೋತನ್ನಾ ತೆಗೆದುಕೊಳ್ಳ ಬೇಕು ಎಂದು, ತಮ್ಮೊಳು ಆಳೋಚಿಸಿಕೊಂಡು, ಆ ಬ್ರಾಹ್ಮಣ ಬರುವ ದಾರಿಯಲ್ಲು ನಿಂತುಕೊಂಡು ಇರಲು; ಈ ಬ್ರಾಹ್ಮಣ ಆ ಹೋತನ್ನ ಹೊತ್ತುಕೊಂಡು ಹೋಗುತ್ತಾ ಇರಲು; ಒಬ್ಬ ಕಿರಾತನು ಬಂದು ‘ಇದೇನು, ಬ್ರಾಹ್ಮಣಾ, ಸತ್ತುಹೋದ ಹೋತನ್ನಾ ಹೊತ್ತುಕೊಂಡು ಹೋಗಬಹುದೇ?’  ಎಂದು, ಕೇಳಲು ; ಆ ಮಾತನ್ನು ಕೇಳದೆ, ಹೊತ್ತುಕೊಂಡು ಹೋಗುತ್ತಂ ಇರಲು; ಮುಂದೆ ಮತ್ತೊಬ್ಬ ಕಿರಾತಂ ಕಂಡು, ‘ಇದೇನು ಬ್ರಾಹ್ಮಣಾ, ಸತ್ತುಹೋದ ಹೋತನ್ನಾ ಹೊತ್ತುಕೊಂಡು ಹೋಗಬಹುದೇ?’ ಎಂದು, ಕೇಳಲು; ಅದನ್ನು ಕೇಳಿ ನಿರ್ವೇದದಿಂದ ಮುಂದಕ್ಕೆ ಹೋಗುತ್ತಂ ಇರಲು; ಮುಂದೆ ಮತ್ತೊಬ್ಬ ಕಿರಾತಂ ಕಂಡು, ‘ಇದೇನು ಬ್ರಾಹ್ಮಣಾ, ಸತ್ತುಹೋದ ಹೋತನ್ನಾ ಹೊತ್ತುಕೊಂಡು ಹೋಗಬಹುದೇ?’ ಎಂದು, ಕೇಳಲು; ಆ ಬ್ರಾಹ್ಮಣಂಗೆ ಸಂದೇಹ ಹುಟ್ಟಿ, ಅಲ್ಲಿಯೇ ಬಿಸಾಟು, ಸಚೇಲಸ್ನಾನಮಂ ಮಾಡಿಕೊಂಡು, ತನ್ನ ಗೃಹಕ್ಕಂ ಬಂದು, ಸುಖದಿಂ ಕುಳಿತಿರಲು; ಈ ಮೂರು ಮಂದಿಯು ಒಂದಾಗಿ ಕೂಡಿ, ಆ ಹೋತನ್ನ ತಮ್ಮ ಗೃಹಕ್ಕೆ ಹೊತ್ತುಕೊಂಡು ಹೋಗಿ, ಪಾಕಮಂ ಮಾಡಿ, ಭಕ್ಷಿಸಿದರು. ಅದು ಕಾರಣ ಈ ಮರಿಯಾದೆಯಲ್ಲು ಉಪಾಯಾಂತರದಿಂದ ಕಾರ್ಯವಾ ಕಾಣಬೇಕು’’.

ಶತಶತಮಾನಗಳಿಂದ ಜಗತ್ತಿನಾದ್ಯಂತ ಬಹುದೇಶಗಳ ವಿದ್ವಾಂಸರನ್ನು ಆಕರ್ಷಿಸಿ ಕೋಟ್ಯಂತರ ಜನರನ್ನು ರಂಜಿಸಿ ನೂರಾರು ಭಾಷೆಗಳಲ್ಲಿ ವಿಜೃಂಭಿಸುತ್ತಿರುವ ಈ ಸಂಸ್ಕೃತ ಪಂಚತಂತ್ರದ, ಕನ್ನಡದ ಕ್ರಿಸ್ತಾನುಜ ವತ್ಸರ ಆವೃತ್ತಿಯು ಕನ್ನಡದ ‘ಪಂಚತಂತ್ರ’ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT