ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ ಗೇಲ್‌ ಮಾಯೆ...

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ನನ್ನಿಂದ ಹೇಳಿಕೊಳ್ಳುವಂತಹ ಆಟ ಮೂಡಿಬಂದಿರಲಿಲ್ಲ. ಹೀಗಾಗಿ ಟ್ವಿಟರ್‌ನಲ್ಲಿ ನನ್ನ ವೈಫಲ್ಯವನ್ನು ಟೀಕಿಸಿ  ಸಾಕಷ್ಟು ಮಂದಿ ಸಂದೇಶ ಕಳುಹಿಸಿದ್ದರು. ಇನ್ನು ಕೆಲವರು ಕರೆಯನ್ನೂ ಮಾಡಿದ್ದರು. ಅವರ ಆಸೆಯನ್ನು  ಈಡೇರಿಸಿದ ಸಮಾಧಾನ ಈಗ ನನ್ನಲ್ಲಿದೆ’ ...

ಹೋದ ವಾರ ಜಿಂಬಾಬ್ವೆ ಎದುರು ನಡೆದ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ದ್ವಿಶತಕದ ಸಾಧನೆ ಮಾಡಿದ ಬಳಿಕ ವೆಸ್ಟ್‌ ಇಂಡೀಸ್‌ನ ಬ್ಯಾಟಿಂಗ್‌ ಶಕ್ತಿ ಕ್ರಿಸ್‌ ಗೇಲ್‌ ಹೇಳಿದ್ದ ಮಾತಿದು.

ನಿಜ. ಏಕದಿನ, ಟ್ವೆಂಟಿ–20 ಮತ್ತು ಟೆಸ್ಟ್‌ ಹೀಗೆ ಎಲ್ಲಾ ಮಾದರಿಗಳಲ್ಲೂ ಗೇಲ್‌ ಅಬ್ಬರಿಸಬೇಕು ಎಂದು ಅವರ ಅಭಿಮಾನಿಗಳು ಬಯಸುತ್ತಾರೆ. ಏಕೆಂದರೆ ಅವರಲ್ಲಿ ಆ ಸಾಮರ್ಥ್ಯವನ್ನು ಅವರು ಕಂಡಿದ್ದಾರೆ.

ಗೇಲ್‌ಗೂ ಇಂತಹದ್ದೊಂದು ದೊಡ್ಡ ಇನಿಂಗ್ಸ್‌ನ ಅಗತ್ಯವಿತ್ತು. ವಿಶ್ವಕಪ್‌ನಲ್ಲಿ ಅವರು ವೈಫಲ್ಯ ಕಂಡಿದ್ದರಿಂದ ಸ್ವತಃ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಡೇವ್‌ ಕ್ಯಾಮರೂನ್‌ ಅವರು ನಿವೃತ್ತಿ ಪ್ರಕಟಿಸುವಂತೆ ಗೇಲ್‌ಗೆ  ಟ್ವಿಟರ್‌ನಲ್ಲಿ ಸಂದೇಶ ಕಳುಹಿಸಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಈ ಎಲ್ಲಾ ಟೀಕೆಗೆ ಎಡಗೈ ಬ್ಯಾಟ್ಸ್‌ಮನ್‌ ಬ್ಯಾಟ್‌ ಮೂಲಕವೇ ಉತ್ತರ ನೀಡಿದ್ದಾರೆ.

ಗೇಲ್‌ ಎಂದರೇ ಹಾಗೆ. ಅವರು ಕ್ರೀಸ್‌ನಲ್ಲಿ ನಿಂತಿದ್ದಾ ರೆಂದರೆ ಎದುರಾಳಿ ಬೌಲರ್‌ಗಳಿಗೆ ನಡುಕ ಶುರುವಾಗಿರುತ್ತದೆ. ಅವರು ಒಮ್ಮೆ ಆಟಕ್ಕೆ ಕುದುರಿಕೊಂಡರೆ ಸಾಕು. ಎದುರಾಳಿ ಯಾವ ತಂಡ, ಬೌಲರ್‌ ಯಾರು, ಪಿಚ್‌ ಎಂತಹದ್ದು  ಎಂಬ ಬಗ್ಗೆ ಯೋಚಿಸುವುದೇ ಇಲ್ಲ. ಬೌಲರ್‌ ಎಷ್ಟೇ ವೇಗದಲ್ಲಿ ಬೌಲ್‌ ಮಾಡಿದರೂ ಅದನ್ನು ಲೀಲಾಜಾಲವಾಗಿ ಮೈದಾನದ ಮೂಲೆ ಮೂಲೆಗೂ ಅಟ್ಟುವ ತಾಕತ್ತು ಅವರ ತೋಳುಗಳಲ್ಲಿ ಅಡಗಿದೆ.

ಕೆರಿಬಿಯನ್‌ ನಾಡಿನ ಈ ದೈತ್ಯ ಬ್ಯಾಟ್ಸ್‌ಮನ್‌ ಇತ್ತೀಚಿನ ದಿನಗಳಲ್ಲಿ ಏಕೋ ಮಂಕಾಗಿ ಹೋಗಿದ್ದರು.  2013ರಿಂದ ಈಚೆಗೆ ಅವರು ಶತಕವನ್ನೇ ಗಳಿಸಿರಲಿಲ್ಲ. ಶತಕದ ಮಾತು ಬದಿಗಿರಲಿ ಅವರು ಕಳೆದ ಎಂಟು ಪಂದ್ಯಗಳಲ್ಲಿ ಅರ್ಧ ಶತಕವನ್ನೂ ಗಳಿಸಲು ಯಶಸ್ವಿಯಾಗಿರಲಿಲ್ಲ.

ಆದರೆ ಜಿಂಬಾಬ್ವೆ ಎದುರು ದಾಖಲಾದ  ಸ್ಮರಣೀಯ ಇನಿಂಗ್ಸ್‌ ಅವರ ಈ ಎಲ್ಲಾ ಕೊರಗನ್ನೂ ದೂರಮಾಡಿಬಿಟ್ಟಿತ್ತು. ಅಂದು ಗೇಲ್‌ ಆಟ ನೋಡಿದ್ದ ಅವರ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೆದ್ದಿದ್ದರು.

ಕ್ಯಾನ್‌ಬೆರಾದ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಅಂದು ಜಿಂಬಾಬ್ವೆ ಫೀಲ್ಡರ್‌ಗಳಿಗೆ ಏನೂ ಕೆಲಸವಿರಲಿಲ್ಲ. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರೇ ಕ್ವೇತ್ರರಕ್ಷಕರಾಗಿದ್ದರು. ಆ ಮಟ್ಟಿಗೆ ಗೇಲ್‌  ಅಂಗಳದಲ್ಲಿ ರನ್‌ ಮಳೆ ಸುರಿಸಿದ್ದರು.

ಗೇಲ್‌ ವಿಶ್ವಕಪ್‌ನಲ್ಲಿ ಸಿಡಿಸಿದ ವೇಗದ ದ್ವಿಶತಕದ ಹಾದಿ ಕಷ್ಟದ್ದಾಗಿರಲಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಏಕೆಂದರೆ ಅವರು ಈ ಸಾಧನೆ ಮಾಡಿದ್ದು ಜಿಂಬಾಬ್ವೆಯಂತಹ ದುರ್ಬಲ ತಂಡದ ಮೇಲೆ. ಬಳಿಕ ನಡೆದ ದಕ್ಷಿಣ ಆಫ್ರಿಕಾದ ಎದುರಿನ ಪಂದ್ಯದಲ್ಲಿ ಅವರು ಕೇವಲ ಮೂರೇ ರನ್‌ಗೆ ಔಟಾಗಿದ್ದೂ ಇದಕ್ಕೆ ಪುಷ್ಠಿ ನೀಡುವಂತಿತ್ತು.

ಜಿಂಬಾಬ್ವೆ ವಿರುದ್ಧದ ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿಯೇ ಗೇಲ್‌ ಎಲ್‌ಬಿ ಬಲೆಯಲ್ಲಿ ಸಿಲುಕಿದ್ದರು. ಅದು ಟಿ.ವಿ.ರೀಪ್ಲೆಯಲ್ಲೂ ಸ್ಪಷ್ಟ ವಾಗಿತ್ತು. ಆದರೆ ಅಂಗಳದ ಅಂಪೈರ್‌ ಜಿಂಬಾಬ್ವೆ ಆಟಗಾರರ ಮನವಿಯನ್ನು ಪುರಸ್ಕರಿಸಿರಲಿಲ್ಲ.

ಜಿಂಬಾಬ್ವೆ ಆಟಗಾರರೂ ಅಂಪೈರ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಿಲ್ಲ ಎಂಬುದು ಬೇರೆ ಮಾತು.

ಅದೇನೆ ಇರಲಿ. ವಿಶ್ವಕಪ್‌ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ದ್ವಿಶತಕ ಸಿಡಿಸುವುದೆಂದರೆ ಸುಲಭದ ಮಾತಲ್ಲ. ಅದನ್ನು ಗೇಲ್‌ ಮಾಡಿ ತೋರಿಸಿದ್ದಾರೆ. ಅದಕ್ಕೆ ಎಲ್ಲರೂ ಶಹಬ್ಬಾಸ್‌ ಹೇಳಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT