ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಸಚಿವರ ಕಚೇರಿ ಎದುರಲ್ಲೇ ಸಮಸ್ಯೆಗಳ ಸಾಲು...

ಕ್ರೀಡಾ ಹಾಸ್ಟೆಲ್‌ ಕಥೆ–ವ್ಯಥೆ * ಬೆಂಗಳೂರು
Last Updated 19 ಜುಲೈ 2015, 19:35 IST
ಅಕ್ಷರ ಗಾತ್ರ

ದೂರದಿಂದ ನೋಡಿದರೆ ಎಲ್ಲವೂ ಸರಿ ಇದೆ ಎನಿಸುವಂತೆ ಕಾಣುವ ಕಟ್ಟಡ. ಹತ್ತಿರ ಹೋದಂತೆ ಒಂದೊಂದಾಗಿ ಗೋಚರಿಸುವ ಸಮಸ್ಯೆಗಳು. ಒಳಗಿನ ಹುಳುಕುಗಳು ಹೊರಕ್ಕೆ ಕಾಣಬಾರದೇನೋ ಎಂಬಂತೆ ಕಟ್ಟಡಕ್ಕೆ ಹೊರಗಿನಿಂದ ಸುಣ್ಣಬಣ್ಣದ ಜತೆಗೆ ಹೊಳೆಯುವ ಗಾಜಿನ ಫಲಕಗಳು. ಒಳಗೆ ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಸ್ನಾನದ ಕೋಣೆಗಳು. ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ.

ಇದ್ಯಾವುದೋ ದೂರದ ಹೋಬಳಿ ಕೇಂದ್ರದ ಹಳೆಯ ಸರ್ಕಾರಿ ಕಟ್ಟಡದ ಕಥೆಯಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನ  ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಕ್ರೀಡಾ ಹಾಸ್ಟೆಲ್‌ನ ಚಿತ್ರಣವಿದು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್‌ ಅವರ ಕ್ರೀಡಾ ಪ್ರಾಧಿಕಾರ ಕಚೇರಿ ಹಾಗೂ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಹೊಂದಿಕೊಂಡಂತಿರುವ ಕ್ರೀಡಾ ಹಾಸ್ಟೆಲ್‌ನ ಸ್ಥಿತಿ ಇದು. ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಅಭಯಚಂದ್ರರ ಕಚೇರಿಯಿಂದ ಕೇವಲ ಹತ್ತು ಹೆಜ್ಜೆ ದೂರದಲ್ಲಿರುವ ಈ ಹಾಸ್ಟೆಲ್‌ನ ಅವ್ಯವಸ್ಥೆಯನ್ನು ಸಮೀಪದಿಂದ ನೋಡಿದವರಿಗಷ್ಟೇ ಗೊತ್ತಾಗುತ್ತೆ ಒಳಗುಟ್ಟು.

ಎರಡು ಮಹಡಿಗಳ ಈ ಹಾಸ್ಟೆಲ್‌ನಲ್ಲಿ ಇಪ್ಪತ್ತು ಕೊಠಡಿಗಳಿವೆ. ಪ್ರತಿ ಕೊಠಡಿಯಲ್ಲಿ ಆರರಿಂದ ಎಂಟು ಮಂದಿ ಕ್ರೀಡಾಪಟುಗಳು ಮಲಗುವ ವ್ಯವಸ್ಥೆ ಇದೆ. ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ಫುಟ್‌ಬಾಲ್‌, ಹಾಕಿ ಕ್ರೀಡೆಗೆ ಸಂಬಂಧಿಸಿದ ಒಟ್ಟು 120  ಕ್ರೀಡಾಪಟುಗಳು ಈ ಹಾಸ್ಟೆಲ್‌ನಲ್ಲಿದ್ದಾರೆ. ಹಾಸ್ಟೆಲ್‌ನ ನೆಲ ಮಹಡಿಯಲ್ಲಿರುವ ಊಟದ ಕೊಠಡಿಯಲ್ಲಿ ಕುಡಿಯುವ ನೀರಿನ ಫಿಲ್ಟರ್‌ನ ನಿರ್ವಹಣೆ ಸರಿಯಿಲ್ಲ. ಒಂದು ಕಡೆಗೆ ಫಿಲ್ಟರ್‌ ಸೋರುತ್ತಿದ್ದರೆ, ಅದರ ಪಕ್ಕದಲ್ಲೇ ಹಸಿತ್ಯಾಜ್ಯ ಹಾಕುವ ಕಸದಬುಟ್ಟಿ ಇಡಲಾಗಿದೆ. ಅದರ ಪಕ್ಕಕ್ಕೇ ಇರುವ ಕೈತೊಳೆಯುವ ಸಾಲು ನಲ್ಲಿಗಳು ಸೋರುತ್ತಿವೆ. ಹೊರಗೆ ಕಾಣುವ ಬಣ್ಣ ಒಳಭಾಗದಲ್ಲಿಲ್ಲ. ಹಾಸ್ಟೆಲ್‌ನ ಕೊಠಡಿಗಳ ಬಣ್ಣ ಮಾಸಿದೆ. ಅಲ್ಲಲ್ಲಿ ಟ್ಯೂಬ್‌ಲೈಟ್‌ಗಳು ಕೆಟ್ಟು ಹೋಗಿವೆ.

ಹಾಸ್ಟೆಲ್‌ನ ಶೌಚಾಲಯ, ಸ್ನಾನದ ಕೋಣೆಗಳ ನಿರ್ವಹಣೆ ಸರಿಯಾಗಿಲ್ಲ. ಶೌಚಾಲಯ ಮತ್ತು ಸ್ನಾನದ ಕೋಣೆಗಳಲ್ಲಿ ಶುಚಿತ್ವ ಕಾಪಾಡಿಲ್ಲ. ಬಹುತೇಕ ಶೌಚಾಲಯ ಮತ್ತು ಸ್ನಾನದ ಕೋಣೆಗಳ ಬಾಗಿಲಿಗೆ ಚಿಲಕವೇ ಇಲ್ಲ. ಇಲ್ಲಿನ ಕೆಲವು ಕೋಣೆಗಳ ನಲ್ಲಿಗಳಲ್ಲಿ ನೀರು ಬರುವುದಿಲ್ಲ. ಕೈತೊಳೆಯುವ ಸಿಂಕ್‌ಗಳಿಗೆ ನೀರಿನ ಸಂಪರ್ಕವೇ ಇಲ್ಲ. ‘ಶೌಚಾಲಯ, ಸ್ನಾನದ ಕೋಣೆ ಶುಚಿಗೊಳಿಸಲು ಇಬ್ಬರು ಸಿಬ್ಬಂದಿ ಇದ್ದಾರೆ. ಶುಚಿಮಾಡಲು ಬೇಕಾದ ಸಾಮಾಗ್ರಿಗಳನ್ನು ಒದಗಿಸದೆ ಬರಿದೇ ಶುಚಿ ಮಾಡಿ ಎಂದರೆ ಅವರು ಕೇವಲ ನೀರು ಸುರಿದು ಹೋಗುತ್ತಾರಷ್ಟೇ.

ಕೆಲ ತಿಂಗಳ ಹಿಂದೆ ಶೌಚಾಲಯದ ಪೈಪ್‌ ಕಟ್ಟಿಕೊಂಡು ಕೊಳಚೆ ನೀರೆಲ್ಲಾ ಉಕ್ಕಿ ಹರಿದಿತ್ತು. ಇಲ್ಲಿನ ಪೈಪ್‌ಗಳ ದುರಸ್ತಿ ಮಾಡಿಸಿದರೆ ಈ ಸಮಸ್ಯೆ ಸರಿಹೋಗುತ್ತದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಕ್ರೀಡಾಪಟು. ‘ಹಾಸ್ಟೆಲ್‌ನಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಇತ್ತೀಚೆಗೆ ಹೊಸ ಹಾಸಿಗೆಗಳನ್ನು ಕೊಟ್ಟಿರುವುದರಿಂದ ಹಾಸಿಗೆ ಸಮಸ್ಯೆ ದೂರಾಗಿದೆ. ಕೆಲವು ಮಂಚಗಳು ರಿಪೇರಿಗೆ ಬಂದಿವೆ. ಕಟ್ಟಡದ ನಿರ್ವಹಣೆ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ದೂರುವುದಕ್ಕಿಂತ ನಾವೇ ಅನುಸರಿಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ಮತ್ತೊಬ್ಬ ಕ್ರೀಡಾಪಟು.

‘ಪೌಷ್ಠಿಕ ಆಹಾರ ನೀಡಿ’
ಹಾಸ್ಟೆಲ್‌ನಲ್ಲಿ ಶುಚಿತ್ವದ ಕೊರತೆಯ ಜತೆಗೆ ಪೌಷ್ಠಿಕ ಆಹಾರದ ಕೊರತೆಯೂ ಇದೆ ಎಂಬುದು ಇಲ್ಲಿನ ಕ್ರೀಡಾಪಟುಗಳ ದೂರು. ಪೌಷ್ಠಿಕ ಆಹಾರ ನೀಡದೆ ಸಾಮಾನ್ಯ ಆಹಾರವನ್ನೇ ನಿತ್ಯ ಪೂರೈಸಲಾಗುತ್ತಿದೆ ಎಂಬ  ಅಳಲು ಅವರದ್ದು. ‘ವಾರಕ್ಕೆ ಮೂರು ದಿನ ನಾಲ್ಕು ಖರ್ಜೂರ, ನಾಲ್ಕು ಬಾದಾಮಿ ಕೊಡುತ್ತಾರೆ. ನಿತ್ಯ ಸಾಮಾನ್ಯ ಊಟ ತಿಂಡಿಯನ್ನೇನೋ ನೀಡುತ್ತಾರೆ. ಆದರೆ, ಕ್ರೀಡಾಪಟುಗಳಿಗೆ ಪೌಷ್ಠಿಕ ಆಹಾರ ಅಗತ್ಯ. ಹೀಗಾಗಿ ಹಾಸ್ಟೆಲ್‌ನಲ್ಲಿ ಪೌಷ್ಠಿಕ ಆಹಾರ ಪೂರೈಸಬೇಕು’ ಎಂಬುದು ಇಲ್ಲಿನ ಕ್ರೀಡಾಪಟುಗಳ ಒತ್ತಾಯ.

‘ಹಾಸ್ಟೆಲ್‌ನಲ್ಲಿ ಆಹಾರದ ಗುಣಮಟ್ಟ ಸರಿಯಿಲ್ಲ. ಗುಣಮಟ್ಟದ ಆಹಾರ ಪೂರೈಸಬೇಕೆಂದು ಹಿಂದೆ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿ ದ್ದೆವು. ಆದರೆ, ಪರಿಸ್ಥಿತಿ ಸುಧಾರಿಸಿಲ್ಲ’ ಎಂಬುದು ಕ್ರೀಡಾಪಟುಗಳ ದೂರು. ಹಾಸ್ಟೆಲ್‌ನ ಒಳಭಾಗದಲ್ಲಿ ಮಾತ್ರವಲ್ಲ ಈ ಕಟ್ಟಡದ ಅಕ್ಕಪಕ್ಕ ಹಾಗೂ ಹಿಂಭಾಗದಲ್ಲೂ ಶುಚಿತ್ವದ ಕೊರತೆ ಇದೆ. ಹಳೆಯ ಹಾಸಿಗೆ, ದಿಂಬು, ಮುರಿದ ಕುರ್ಚಿ, ಮೇಜುಗಳನ್ನು ಹಾಸ್ಟೆಲ್‌ನ ಕಟ್ಟಡದ ಪಕ್ಕದಲ್ಲೇ ಎಸೆಯಲಾಗಿದೆ. ಹಾಸ್ಟೆಲ್‌ನ ಹಿಂಭಾಗದಲ್ಲಿ ಕೊಳಚೆ ನೀರು ಹರಿಯುವ ಚರಂಡಿಯ ಮೇಲ್ಭಾಗವನ್ನು ಮುಚ್ಚದೆ ತೆರೆದು ಬಿಡಲಾಗಿದೆ.

ಕಂಠೀರವ ಕ್ರೀಡಾಂಗಣದ ಹಿಂಭಾಗದ ತಗ್ಗು ಪ್ರದೇಶದಲ್ಲಿ ಹಾಸ್ಟೆಲ್‌ ಕಟ್ಟಡ ಇರುವುದರಿಂದ ಜೋರು ಮಳೆ ಬಂದರೆ ಹಾಸ್ಟೆಲ್‌ನ ನೆಲ ಮಹಡಿಗೆ ನೀರು ನುಗ್ಗುತ್ತದೆ. ‘ಕಳೆದ ಮಳೆಗಾಲದಲ್ಲಿ ಜೋರು ಮಳೆ ಬಂದಾಗ ನೆಲ ಮಹಡಿಗೆ ಮಳೆ ನೀರು ನುಗ್ಗಿ ಊಟದ ಕೊಠಡಿ ತುಂಬಾ ನೀರು ನಿಂತಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಕ್ರೀಡಾಪಟುಗಳು.
*
ಸಮಸ್ಯೆ ಪರಿಹರಿಸುತ್ತೇವೆ
‘ಹಾಸ್ಟೆಲ್‌ನಲ್ಲಿ ಸಮಸ್ಯೆಗಳಿವೆ. ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುತ್ತೇವೆ. ಹಾಸ್ಟೆಲ್‌ನ ಒಳಭಾಗದ ನವೀಕರಣ ಕಾರ್ಯ ಕೆಲ ದಿನಗಳಲ್ಲೇ ಆರಂಭವಾಗಲಿದೆ. ಶೌಚಾಲಯ, ಸ್ನಾನದ ಕೋಣೆಯ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ಸಮಸ್ಯೆಗಳ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಹಂತ ಹಂತವಾಗಿ ಎಲ್ಲವನ್ನೂ ಸರಿಪಡಿಸಲಾಗುವುದು’
– ಫಿಲಿಪ್‌,
ವಾರ್ಡನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT