ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯದ ನೆಲೆಗಾಗಿ ಗೋಡೆಗಳ ಮಧ್ಯೆ ತಡಕಾಟ

ಪರಿಚಿತರಿಂದಲೇ ಮಹಿಳೆಯರ ಮೇಲೆ ಶೇ 40ರಷ್ಟು ದೌರ್ಜನ್ಯ: ವಿವೇಕ್ ಬೆನೆಗಲ್‌
Last Updated 20 ಜುಲೈ 2014, 20:21 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲರ ಮೊಗದಲ್ಲೂ ಕ್ರಾಂತಿಯ ಕಿಡಿ, ಜೊತೆಗೆ ಮಾತುಗಳ ಚಾಟಿ ಏಟು. ಒಮ್ಮೆಲೇ ಕಂಗಳಲ್ಲಿ ವಿಷಾದದ ನೀರು. ವ್ಯವಸ್ಥೆಯ ವಿರುದ್ಧ ಕಟ್ಟೆಯೊಡೆದ ಆಕ್ರೋಶ. ಇದರ ಮಧ್ಯೆ ಹೆಣ್ಣಿನ ಮೇಲಿನ ಕ್ರೌರ್ಯದ ನೆಲೆ ಕಂಡುಕೊಳ್ಳಲು ತಡಕಾಟ. ಗಂಡಿನ ಈ ಮನಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆಗೆ ಸಿಗದ ಸ್ಪಷ್ಟ ಉತ್ತರದಿಂದ ಮತ್ತೆ ನಿರಾಸೆ...

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿವಿಧ ರೂಪ, ಅದಕ್ಕೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳಲು ಆಯೋಜಿಸಲಾಗಿದ್ದ ‘ಹಿಂಸೆಯ ನೆಲೆ  ಹೆಣ್ಣೇ?’ ಎಂಬ ವಿಚಾರ ಸಂಕಿರಣದಲ್ಲಿ ಈ ತಡಕಾಟ, ತೊಳಲಾಟ ನಡೆದಿತ್ತು. ನಗರದ ಸುಚಿತ್ರ ಸಿನಿಮಾ ಹಾಗೂ ಸಾಂಸ್ಕೃತಿಕ ಅಕಾಡೆಮಿಯಲ್ಲಿ ಭಾನುವಾರ ಈ ಕಾರ್ಯಕಮ ಆಯೋಜಿಸಿದ್ದು ಕನ್ಸರ್ನ್‌ ಇಂಡಿಯಾ ಫೌಂಡೇಷನ್‌, ಚಿತ್ರ ಸಮುದಾಯ ಹಾಗೂ ಇಂಟರ್‌ನ್ಯಾಷನಲ್ ಅಸೋಸಿಯೇ­ಷನ್‌ ಆಫ್‌ ವುಮೆನ್‌ ಇನ್‌ ರೇಡಿಯೊ ಅಂಡ್‌ ಟೆಲಿವಿಷನ್‌ (ಐಎಡಬ್ಲ್ಯುಆರ್‌ಟಿ) ಸಂಘಟನೆ. ಅದೊಂದು ವಿಮರ್ಶಾತ್ಮಕ ವಾಚನ, ವ್ಯಾಖ್ಯಾನ.

ಮನೋವೈದ್ಯರು, ವಕೀಲರು,  ಹೋರಾಟ­ಗಾರ್ತಿಯರು, ಸಿನಿಮಾ ಕಲಾವಿ­ದರು ತಮ್ಮ ಅಂತರಾಳದ ಮಾತುಗಳ ಮೂಲಕ ಸಮಸ್ಯೆ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದರು. ಸಭಿಕರು ಅಷ್ಟೇ ಧ್ಯಾನಾಸಕ್ತ­ರಾಗಿ ಅವರ ಮಾತುಗಳಿಗೆ ಕಿವಿಯಾದರು. ಕೆಲ­ವರು ಎದೆಯೊಳಗಿನ ಆಕ್ಷೇಪವನ್ನು ಹೊರಹಾ­ಕಲು ಕಾಯುತ್ತಿದ್ದರು. ಹೊರಗಿನ ಪ್ರತಿಭಟನೆಗ­ಳಿಗಿಂತ ಒಳಗಿನ ಆಕ್ರೋಶ ಹೆಚ್ಚು ಬಿಸಿಯಾದಂತಿತ್ತು.

‘ಮಹಿಳೆಯರ ಮೇಲಿನ ಶೇ 40ರಷ್ಟು ದೌರ್ಜನ್ಯಗಳು ಪರಿಚಿತರಿಂದಲೇ ನಡೆಯುತ್ತಿವೆ. ಕುಟುಂಬವರ್ಗದವರು ಹಾಗೂ ಸಂಬಂಧಿಕರು ದೌರ್ಜನ್ಯ ಎಸಗುತ್ತಿದ್ದಾರೆ. ಶೇ 6ರಷ್ಟು ಪ್ರಕರಣಗಳು ಅಪರಿಚಿತರಿಂದ ಜರುಗುತ್ತಿವೆ. ಇದು ವಿವಿಧ ಅಧ್ಯಯನಗಳಿಂದ ದೃಢಪಟ್ಟಿದೆ. ಮದ್ಯಪಾನ ಪರಿಣಾಮದಿಂದಾಗಿಯೂ ಸಮಾಜದಲ್ಲಿ ಕ್ರೌರ್ಯ ಹೆಚ್ಚಾಗುತ್ತಿದೆ’ ಎಂದು ನಿಮ್ಹಾನ್ಸ್‌ನ ಮನೋವೈದ್ಯ ಡಾ.ವಿವೇಕ್‌ ಬೆನಗಲ್‌ ಪ್ರತಿಪಾದಿಸಿದರು.

‘ಹೆಣ್ಣಿನ ಮೇಲೆ ದೈಹಿಕ ಹಿಂಸೆಗಿಂತ ಮಾನಸಿಕ ಹಿಂಸೆ ಹೆಚ್ಚಾಗಿದೆ. ಆ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಮಾಧ್ಯಮಗಳು ಹಾಗೂ ಸಮಾಜದಲ್ಲಿನ ಕೆಲ ಅಹಿತಕರ ಘಟನೆಗಳಿಂದ ಯುವ ಮನಸ್ಸುಗಳಲ್ಲಿ ಕ್ರೌರ್ಯದ ವರ್ತನೆ ತುಂಬಿದೆ. ಇದರತ್ತ ಸಮಾಜ ಮೊದಲು ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡಿದರು.

ನಿವೃತ್ತ ಪೊಲೀಸ್‌ ಅಧಿಕಾರಿ ಗೋಪಾಲ್‌ ಹೊಸೂರ್‌, ‘ಪೊಲೀಸ್‌ ಠಾಣೆಗೆ ಬರುವ ಶೇ 50ರಷ್ಟು ದೂರುಗಳು ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಸಂಬಂಧಿಸಿರುತ್ತವೆ. ಠಾಣೆಗೆ ಬಂದರೂ ಕೆಲವರು ದೂರು ನೀಡಲು ಹಿಂಜ­ರಿ­ಯುತ್ತಾರೆ. ಇದಕ್ಕೆ ಕಾರಣ ಮಾಧ್ಯಮಗಳ ಮೂಲಕ ವಿಷಯ ಬಹಿರಂಗವಾಗಿ ಮರ್ಯಾದೆ ಹೋಗತ್ತದೆ ಎಂಬ ಆತಂಕ. ಇದು ನಿಜ ಕೂಡ. ಸುದ್ದಿ ವಾಹಿನಿಗಳು ಅದೇ ವಿಷ­ಯವನ್ನು ಹಿಡಿದು ದಿನವಿಡೀ ಜಾಲಾಡುತ್ತವೆ. ಯಾವುದೋ ಬೀದಿಯಲ್ಲಿ ಪ್ರತಿಭಟನಾಕಾರರು ಎರಡು ಟೈರು ಸುಟ್ಟರೆ ಇಡೀ ಬೆಂಗಳೂರು ಹೊತ್ತಿ ಉರಿಯುತ್ತಿದೆ ಎಂಬಂತೆ ಬಿಂಬಿಸುತ್ತವೆ. ಜನರು  ಭಯಭೀತರಾಗುತ್ತಾರೆ’ ಎಂದು ಅವರು ವಿಶ್ಲೇಷಿಸಿದರು.

‘ಎಲ್ಲ ಘಟನೆಗಳಿಗೂ ಪೊಲೀಸರನ್ನು ಹೊಣೆ­ಯಾಗಿಸಬಾರದು. ಪೊಲೀಸರ ಇತಿಮಿತಿಗಳನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಕೆಲಸದ ಒತ್ತಡ ಹಾಗೂ ಪ್ರಭಾವಿಗಳ ಒತ್ತಡ ಎರಡನ್ನೂ ನಿಭಾಯಿಸಬೇಕಾಗಿದೆ. ಪೊಲೀಸ್‌ ಠಾಣೆಗಳು ಉದ್ಘಾಟನೆಯಾದ ಮೇಲೆ ಅವು ಯಾವತ್ತೂ ಮುಚ್ಚುವುದಿಲ್ಲ’ ಎಂದು ಅವರು ಪೊಲೀಸರನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

ಕಿರುತೆರೆ ನಿರ್ದೇಶಕ ಬಿ.ಸುರೇಶ್‌ ಮಾತ­ನಾಡಿ, ‘ದೈಹಿಕ ಶೋಷಣೆಗಿಂತ ಆರ್ಥಿಕ ಹಾಗೂ ಬೌದ್ಧಿಕ ಶೋಷಣೆ ಅಧಿಕವಾಗಿದೆ. ಶತಮಾನಗಳಿಂದಲೂ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಮನುಷ್ಯ ಜೀವಿ ಈ ಭೂಮಿ ಮೇಲೆ ಇರುವ ತನಕ ಈ ಸಮಸ್ಯೆ ಇದ್ದೇ ಇರುತ್ತದೆ. ಕೇವಲ ಸಿನಿಮಾ, ಧಾರಾವಾಹಿಗಳು ಈ ಸಮಸ್ಯೆಗೆ ಕಾರಣವಲ್ಲ. ಆದಾಗ್ಯೂ ದೌರ್ಜನ್ಯವನ್ನು ತೆರೆಯ ಮೇಲೆ ಪ್ರಸ್ತುತಪಡಿಸುವಾಗ ಇತಿಮಿತಿ­ಗಳಿರಬೇಕು. ಹೆಚ್ಚು ವೈಭವೀಕರಿಸಬಾರದು’ ಎಂದರು.

ಐಸೆಕ್‌ನ  ಡಾ.ಕೆ.ಜಿ.ಗಾಯತ್ರಿ ದೇವಿ, ‘ಮಹಿಳೆ ಮೇಲೆ ನಡೆಯುತ್ತಿರುವ ಕ್ರೌರ್ಯ ಆಕೆಯ ಮೇಲಿನ ದೈಹಿಕ ದಬ್ಬಾಳಿಕೆಯೇ? ಅಥವಾ ಪುರುಷನ ಪಾರಮ್ಯವೇ?’ ಎಂದು ಪ್ರಶ್ನಿಸಿದರು. ‘ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಮನೆಯೇ ಮೂಲ. ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ ನಡೆಯುತ್ತದೆ. ಮನೆಯಲ್ಲಿಯೇ ಮಹಿಳೆಗೆ ಸರಿಯಾದ ರಕ್ಷಣೆ ಇಲ್ಲ’ ಎಂದು ವಿಷಾದಿಸಿದರು.

ವಕೀಲೆ ಅಪರ್ಣಾ ರವಿ ಮಾತನಾಡಿ, ‘ವಿಶಾಖ ಮಾರ್ಗಸೂಚಿಗಳಂತೆ 10ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಕಚೇರಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಲು ಆಂತರಿಕ ಸಮಿತಿ ರಚಿಸಿರಬೇಕು. ಈ ನಿಯಮಗಳನ್ನು ಕಚೇರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದರು. ವಿಚಾರ ಸಂಕಿರಣದ ನಂತರ ದೌರ್ಜನ್ಯಕ್ಕೆ ಸಂಬಂಧಿಸಿದ ‘ಟೈಮ್‌ ಲೈನ್‌’ ಎಂಬ ಬೀದಿ ನಾಟಕ ಪ್ರದರ್ಶಿಸಲಾಯಿತು.

ಇನ್‌ಲ್ಯಾಂಡ್‌ ಪತ್ರ ಹೇಳಿದ ಸತ್ಯ...
ಚಿತ್ರದುರ್ಗದಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದಾಗ ಜರುಗಿದ ಒಂದು ಘಟನೆಯನ್ನು ಗೋಪಾಲ್ ಹೊಸೂರ್‌ ನೆನಪಿಸಿಕೊಂಡರು. ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೆ ಕಾರಣ ನಮಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೆ ಒಂದು ಇನ್‌ಲ್ಯಾಂಡ್‌ ಪತ್ರದಿಂದ ಪ್ರಕರಣ ಬಯ­ಲಾಯಿತು. ಗಂಡ, ಅತ್ತೆ ಹಾಗೂ ಮಾವ ತನ್ನ ಮೇಲೆ ಎಸಗುತ್ತಿರುವ ದೌರ್ಜನ್ಯವನ್ನು ಆಕೆ ಪತ್ರದ ಮೂಲಕ ತಂದೆಗೆ ತಿಳಿಸಿದ್ದಳು. ಆ ಪತ್ರ ನಾವು ನಡೆಸುತ್ತಿದ್ದ ವಿಚಾರಣೆಗೆ ಪ್ರಮುಖ ಸಾಕ್ಷ್ಯವಾಯಿತು. ಪ್ರಕರಣದಲ್ಲಿ ಪತಿಗೆ ಶಿಕ್ಷೆಯಾಯಿತು ಎಂದರು.

ಮೊದಲು ಊಟ ತಗೋಬರ್ರಿ....
ದೌರ್ಜನ್ಯ ಸಂಬಂಧ ದೂರು ನೀಡಲು ಒಬ್ಬ ಮಹಿಳೆ ಠಾಣೆಗೆ ಹೋದರೆ ಮೊದಲು ಊಟ ಕೊಡಿಸಿ ಎಂದು ಪೊಲೀಸರು ಧಮಕಿ ಹಾಕುತ್ತಾರೆ. ವಾಹನ ವ್ಯವಸ್ಥೆ ಮಾಡಿ ಎಂದು ಆ ಮಹಿಳೆಗೇ ಹೇಳುತ್ತಾರೆ. ನಾಳೆ ಬಾ ನಾಡಿದ್ದು ಬಾ ಎಂದು ದೂರು ನೀಡಲು ಬಂದವರನ್ನು ಸಾಗ ಹಾಕಲು ಪ್ರಯತ್ನಿಸುತ್ತಾರೆ.

ಪಾಪ, ದೂರು ನೀಡಲು ಬಂದ ಆಕೆಯ ಪರಿಸ್ಥಿತಿ ಹೇಗಿರಬೇಡ ಹೇಳಿ. ಮಹಿಳಾ ಪೊಲೀಸರೇ ಸರಿಯಾಗಿ ಸ್ಪಂದಿಸುವುದಿಲ್ಲ. ಗಂಡನೊಂದಿಗೆ ಹೊಂದಿಕೊಂಡು ಬಾಳಮ್ಮ ಎಂಬ ಪುಕ್ಕಟ ಸಲಹೆ  ನೀಡಲು ಬರುತ್ತಾರೆ. ಇದು ಕಾಲ್ಪನಿಕ ಕಥೆ ಅಲ್ಲ; ವಾಸ್ತವ ಘಟನೆ. ಪೊಲೀಸರಲ್ಲಿ ಮಾನವೀಯ ಮಾಲ್ಯಗಳೇ ಇಲ್ಲ.

–ಈ ರೀತಿ ನೋವು ತೋಡಿಕೊಂಡು ಭಾವುಕರಾಗಿದ್ದು ವಿಮೋಚನಾ ಸಂಘಟನೆಯ ಸದಸ್ಯೆ ಹಾಗೂ ಮಹಿಳಾ ಹೋರಾಟಗಾರ್ತಿ ಮಮತಾ. ಆಗ ಸಭಾಂಗಣದಲ್ಲಿ ನೀರವ ಮೌನ. ಕೆಲವರ ಕಂಗಳಲ್ಲಿ ನೀರು ಜಿನುಗಲು ಶುರುವಾಯಿತು. ಸಂಕಿ­ರಣದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್‌ ಅಧಿಕಾರಿಗಳಾದ ಕೆ.ವಿ.ಆರ್‌.ಟ್ಯಾಗೋರ್‌ ಹಾಗೂ ಗೋಪಾಲ್‌ ಹೊಸೂರ್‌ ಕೂಡ ಆ ಮಹಿಳಾ ಹೋರಾಟಗಾರ್ತಿಯ ಮಾತನ್ನು ನಿಸ್ಸ­ಹಾಯಕವಾಗಿ ಒಪ್ಪಿಕೊಂಡರು. ಈ ರೀತಿಯ ಘಟನೆಗಳು ನಿಜ ಎಂದು ತಲೆಬಾಗಿದರು.

‘ಮಕ್ಕಳ ಸಮಸ್ಯೆಯನ್ನು ಪೋಷಕರು ಗಮನವಿಟ್ಟು ಆಲಿಸಬೇಕು. ಅವರೊಂದಿಗೆ ಹೆಚ್ಚೆಚ್ಚು ಮಾತನಾಡಬೇಕು. ಇಲ್ಲದಿದ್ದರೆ ಮಕ್ಕಳು ಬೇರೆಯವರೊಂದಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳುವ ಅಪಾಯವಿರುತ್ತದೆ. ಅದು ಮತ್ತೊಂದು ದುರ್ಘಟನೆಗೆ ಕಾರಣವಾಗಬಹುದು’ ಎಂದು ಟ್ಯಾಗೋರ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT