ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯ ರಸದ ಕೆಲವು ಹನಿಗಳು

Last Updated 24 ಜೂನ್ 2016, 10:24 IST
ಅಕ್ಷರ ಗಾತ್ರ

ಚಿತ್ರ: ರಮಣ್ ರಾಘವ್ 2.0 (ಹಿಂದಿ)
ನಿರ್ಮಾಣ: ರಿಲಯನ್ಸ್ ಹಾಗೂ ಫ್ಯಾಂಟಮ್ ಫಿಲ್ಮ್ಸ್
ನಿರ್ದೇಶನ: ಅನುರಾಗ್ ಕಶ್ಯಪ್
ತಾರಾಗಣ: ನವಾಜುದ್ದೀನ್ ಸಿಕ್ಕಿದಿ, ವಿಕ್ಕಿ ಕೌಶಲ್, ಶೋಭಿತಾ ದುಲಿಪಾಲ

ಪೊಲೀಸ್ ಅಧಿಕಾರಿಗೆ ಚಳ್ಳೆಹಣ್ಣು ತಿನ್ನಿಸಿ, ಠಾಣೆಯೊಂದರ ಮೇಲೆ ನೆಲೆಗೊಳ್ಳುವ ಪಾತ್ರದಲ್ಲಿ ಪುನೀತ್ ಅವರನ್ನು ಕನ್ನಡದಲ್ಲಿ ನೋಡಿದ್ದೆವು. ‘ಜಾಕಿ’ ಸಿನಿಮಾದ ಆ ಕಥಾಹೂರಣದಲ್ಲಿ ರೋಮಾಂಚನ ಎಂದು ಭಾವಿಸಬಹುದಾಗಿದ್ದ ತಿರುವು ಇದು. ಕೊಲೆಗಡುಕನಲ್ಲಿ ಪೊಲೀಸ್‌ ಬುದ್ಧಿ ಇಟ್ಟು, ಪೊಲೀಸ್‌ಗೆ ಕೊಲೆಗಡುಕನ ಮನಸ್ಸನ್ನು ಕೊಟ್ಟು ಅನುರಾಗ್ ಕಶ್ಯಪ್ ತಮ್ಮ ಹಿಂಸಾತ್ಮಕ ಚಿತ್ರ ಪಯಣವನ್ನು ಹಿಂದಿಯಲ್ಲಿ ಮುಂದುವರಿಸಿದ್ದಾರೆ. ‘ಜಾಕಿ’ ಸಿನಿಮಾದ ಹಿಂಸೆಯ ಕ್ರಮವೇ ಬೇರೆ; ಇಲ್ಲಿನ ಹಾದಿಯೇ ಬೇರೆ.

‘ರಮಣ್ ರಾಘವ್ 2.0’ ಸಿನಿಮಾದಲ್ಲಿ ರೂಪಕಗಳೇನೋ ಹುದುಗಿವೆ. ಆದರೆ, ಕ್ರೌರ್ಯದ ರಸದಲ್ಲಿ ಬಟ್ಟೆಯೊಂದನ್ನು ಅದ್ದಿ ಅದರಿಂದ ಉದುರುವ ರಕ್ತದ ಒಂದೊಂದೂ ಹನಿಯನ್ನು ರಸವತ್ತಾಗಿ ತೋರುವ ನಿರ್ದೇಶಕರ ಕ್ರಮ ಯಾತನೆಯ ಮುಚ್ಚಟೆಯಂತೆ ಭಾಸವಾಗುತ್ತದೆ.

ಆಧುನಿಕತೆಯ ವ್ಯಭಿಚಾರಿ ಮನಸ್ಥಿತಿಯನ್ನು ಕೊಲೆಗಡುಕ–ಪೊಲೀಸ್ ವಿಲಕ್ಷಣ ಆಟದ ಮೂಲಕ ತೋರಲು ಅನುರಾಗ್ ತಮ್ಮ ಸಿನಿಮಾ ಕೌಶಲವನ್ನು ವಿನಿಯೋಗಿಸಿರುವುದೇನೋ ಹೌದು. ಕಂತುಗಳಲ್ಲಿ ಸಿನಿಮಾ ವಿಂಗಡಿಸಿ, ಒಂದೊಂದು ಕಂತಿಗೂ ಪ್ರತ್ಯೇಕ ಶೀರ್ಷಿಕೆ ಕೊಟ್ಟು ಅವರು ಕಥನವನ್ನು ಹೆಣೆದಿದ್ದಾರೆ. ಅವರದ್ದೇ ‘ಗ್ಯಾಂಗ್ಸ್ ಆಫ್ ವಸೇಪುರ್’ ಸರಣಿಗಳೂ ಯಶಸ್ವಿಯಾದ ಕಾರಣಕ್ಕೋ ಏನೋ ಅವರು ‘ಹಿಂಸೆಯ ದರ್ಶನದ ಚಟ’ಕ್ಕೆ ಬಿದ್ದಿರುವಂತಿದೆ.

ಸಿನಿಮಾದಲ್ಲಿ ಎರಡು ಪ್ರಮುಖ ಪಾತ್ರಗಳು. ತನ್ನ ಚಾಚಾ; ಅಕ್ಕ-ಭಾವ, ಅವರ ಮಗ; ಮನೆಗೆಲಸದವಳು ಹಾಗೂ ಅವಳ ಪತಿ ಎಲ್ಲರನ್ನೂ ನಿರ್ಭಾವುಕನಾಗಿ ಕೊಲ್ಲುವ ಪಾತ್ರ ಒಂದು. ಮಾದಕದ್ರವ್ಯದ ಚಟಕ್ಕೆ ಬಿದ್ದು, ಹುಡುಗಿಯರನ್ನು ಭೋಗಕ್ಕೆ ಬಳಸಿಕೊಳ್ಳುತ್ತಾ ನಿದ್ರೆಯನ್ನೇ ಮಾಡದೆ ಪೊಲೀಸ್ ಕೆಲಸ ಮಾಡುತ್ತಾ ಖುದ್ದು ಕೊಲೆಗಡುಕನಾಗುವ ಪೊಲೀಸ್ ಪಾತ್ರ ಇನ್ನೊಂದು.

ಈ ಎರಡೂ ಪಾತ್ರಗಳ ಮನಸ್ಥಿತಿಯನ್ನು ಒಂದೇ ಸೂತ್ರದಲ್ಲಿ ಬೆಸೆದಿರುವುದು ತಂತ್ರಗಾರಿಕೆ. ಇಂಥ ಸಿನಿಮೀಯ ತಂತ್ರಗಾರಿಕೆ ಹಾಗೂ ಅಶ್ಲೀಲ ಎನ್ನಬಹುದಾದ ಮಾತುಗಾರಿಕೆಯನ್ನೂ ಸಹಜವಾಗಿ ಸಿನಿಮಾದಲ್ಲಿ ಬಳಸಿಕೊಳ್ಳುವ ಅನುರಾಗ್ ಧಾರ್ಷ್ಟ್ಯ ಬೆಚ್ಚಿಬೀಳಿಸುವಂತಿದೆ. ಹಿನ್ನೆಲೆ ಸಂಗೀತದ ಹಂಗನ್ನು ತಗ್ಗಿಸಿಕೊಂಡೂ ಅವರು ಹಿಂಸಾತೀವ್ರತೆಯನ್ನು ತೋರಿಸಿರುವುದರಲ್ಲಿನ ಸಹಜತೆಯಿಂದ ಮನಸ್ಸು ಕಲ್ಲವಿಲಗೊಳ್ಳದೇ ಇರಲು ಸಾಧ್ಯವಿಲ್ಲ.

ಕೋಳಿಮಾಂಸದ ಖಾದ್ಯ ತಯಾರಿಸುತ್ತಲೇ ಇಬ್ಬರನ್ನು ಮುಗಿಸಿ, ಮುಗ್ಧ ಮಗುವಿನ ಎದುರು ಅದನ್ನು ನಿರಾಳವಾಗಿ ತಿನ್ನುವ ಪಾತ್ರವನ್ನು ನವಾಜುದ್ದೀನ್ ಸಿದ್ದಿಕಿ ಅನುಭವಿಸಿದಂತಿದೆ. ಪಾತ್ರವೈವಿಧ್ಯದಿಂದಲೇ ಗುರುತಾಗಿರುವ ಅವರು ಇಂಥ ವಿಕೃತ ವಸ್ತುಗಳ ಭಾಗವಾಗುವುದು ಇನ್ನೆಷ್ಟು ಕಾಲ ಮುಂದುವರಿಯುವುದೋ? ಪೊಲೀಸ್ ಅಧಿಕಾರಿಯಾಗಿ ವಿಕ್ಕಿ ಕೌಶಲ್ ಗಮನಾರ್ಹ. ಶೋಭಿತಾ ದುಲಿಪಾಲ ಮೊದಲ ಸಿನಿಮಾ ಇದು ಎನಿಸದಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ.

ಇಲಿ ಬೆಕ್ಕಿನ ಆಟದಲ್ಲೇ ಯಶಸ್ಸಿನ ಸೂತ್ರವೊಂದು ಬೆಸೆದುಕೊಂಡಿದೆ. ಹಿಂಸಾತ್ಮಕ ಕಥನಕ್ಕೂ ಅದನ್ನು ಬೆಸೆಯುವ ಅನುರಾಗ್ ಕಶ್ಯಪ್ ಕೌಶಲ ಅದರಲ್ಲೇ ಕರಗಿಹೋಗಬೇಕೆ ಎನ್ನುವುದು ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT