ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವೀನ್ಸ್‌ ಕಾರ್ನರ್‌ಗೆ ಮರಳಿದ ಕುಟುಂಬಗಳು

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂಕುಸಿತ ಘಟನೆಯಿಂದ ಸತತ 17 ದಿನ ಹೋಟೆಲ್‌ನಲ್ಲಿ ಕಾಲ ಕಳೆದ ಕನ್ನಿಂಗ್‌ಹ್ಯಾಂ ರಸ್ತೆಯ ಕ್ವೀನ್ಸ್‌ ಕಾರ್ನರ್‌ ‘ಬಿ’ ಬ್ಲಾಕ್‌ ನಿವಾಸಿಗಳು ಗುರುವಾರ ತಮ್ಮ ಮನೆಗಳಿಗೆ ಮರಳಿದರು.

ಹಲವು ದಿನ ಹೋಟೆಲ್‌ನಲ್ಲೇ ತಂಗಿದ್ದ ಆ ನಿವಾಸಿಗಳು ಮರಳಿ ‘ಗೃಹ ಪ್ರವೇಶ’ ಮಾಡಿದ ಆ ಕ್ಷಣ ಸಮಾಧಾನದ ನಿಟ್ಟುಸಿರುಬಿಟ್ಟರು. ಜೂನ್‌ 15ರಂದು ಭೂಕುಸಿತದ ಘಟನೆ ಸಂಭವಿಸಿದಾಗ ‘ಬಿ’ ಬ್ಲಾಕ್‌ನಲ್ಲಿ ಒಟ್ಟು 32 ಕುಟುಂಬಗಳು ವಾಸವಾಗಿದ್ದವು. ಘಟನೆ ಬಳಿಕ ಆ ಎಲ್ಲ ಕುಟುಂಬಗಳನ್ನು ಅಲ್ಲಿಂದ ಕರೆದೊಯ್ದು ಹತ್ತಿರದ ಹೋಟೆಲ್‌ನಲ್ಲಿ ತಂಗಲು ಅವಕಾಶ ಮಾಡಿಕೊಡಲಾಗಿತ್ತು.

‘ಗುರುವಾರ 30 ಕುಟುಂಬಗಳು ತಮ್ಮ ಮನೆಗಳಿಗೆ ವಾಪಸ್‌ ಆಗಿವೆ’ ಎಂದು ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕಿ ಎ. ಮಾರ್ಗರೇಟ್‌ ಹೇಳಿದರು.

‘ನಾವು ಸಿಟ್ರಸ್‌ ಹೋಟೆಲ್‌ನಲ್ಲಿ ತಂಗಿದ್ದೆವು. ಅಲ್ಲಿ ನಮಗೆ ಉಚಿತ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ, ಒತ್ತಡದಿಂದ ಬಳಲಿದ್ದೆವು. ನಮ್ಮ ಮನೆಗಳಿಗೆ ಯಾವಾಗ ಮರಳಿಹೋಗಲು ಅವಕಾಶ ಸಿಗುತ್ತದೆ ಎಂದು ಆತಂಕದಿಂದ ಕಾಯುತ್ತಿದ್ದೆವು. ನನ್ನ ಮಗ ಮತ್ತು ಮಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಲಾಗದೆ ತೊಂದರೆ ಅನುಭವಿಸುತ್ತಿದ್ದರು’ ಎಂದು ಅಪಾರ್ಟ್‌ಮೆಂಟ್‌ ನಿವಾಸಿ ತಂಗಮ್‌ ವೆಂಕಿ ಪ್ರತಿಕ್ರಿಯಿಸಿದರು.

‘ಭೂಕುಸಿತದಿಂದ ಗೋಡೆ ಬಿರುಕು ಬಿಟ್ಟಾಗ ಮುಂದೇನು ಎನ್ನುವ ಚಿಂತೆ ಕಾಡಿತ್ತು. ಯಲಹಂಕದಲ್ಲಿರುವ ನಮ್ಮ ಸಂಬಂಧಿಗಳ ಮನೆಗೆ ತೆರಳಿದ್ದೆವು. ಅಲ್ಲಿಂದ ಹೋಟೆಲ್‌ಗೆ ಬಂದು ತಂಗಿದ್ದೆವು. ನಿತ್ಯ ಮನೆಯ ಸ್ಥಿತಿ ಏನು ಎಂಬುದನ್ನು ನೋಡುವುದೇ ಕಾಯಕವಾಗಿತ್ತು. ಕೊನೆಗೂ ನಮ್ಮ ನಿವಾಸಕ್ಕೆ ಮರಳಿದ ನೆಮ್ಮದಿ ಇದೆ’ ಎಂದು ಕವಿತಾ ಮತ್ತು ರಾಮಚಂದ್‌ ನಂದ್ವಾನಿ ದಂಪತಿ ಹೇಳಿದರು.

ಲೆಗಸಿ ಗ್ಲೋಬಲ್‌ ಪ್ರೊಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಹಲವು ತಿಂಗಳಿಂದ ಭೂಮಿ ಅಗೆಯುವ ಕೆಲಸ ನಡೆಸಿದೆ. ಇದರಿಂದ ನಾವು ಆತಂಕ ಎದುರಿಸಿದ್ದೆವು. ಆದರೆ, ಹಲವು ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಮಣ್ಣು ಪರೀಕ್ಷೆ ನಡೆಸಿದ್ದಾರೆ. ಕಟ್ಟಡದ ಭದ್ರತೆ ಬಗೆಗೆ ಭರವಸೆ ನೀಡಿದ್ದಾರೆ. ಹೀಗಾಗಿ ನಮಗೀಗ ಚಿಂತೆಯಿಲ್ಲ ಎಂದು ಬಹುತೇಕ ನಿವಾಸಿಗಳು ತಿಳಿಸಿದರು.
*
ಕಟ್ಟಡ ಭದ್ರವಾಗಿದೆ
ಬಿಬಿಎಂಪಿ ತಾಂತ್ರಿಕ ಸಲಹಾ ಸಮಿತಿ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ವರದಿ ನೀಡಿದ್ದು, ಕ್ವೀನ್ಸ್‌ ಕಾರ್ನರ್‌ ಕಟ್ಟಡದ ಸುಭದ್ರತೆಗೆ ಸಂಬಂಧಿಸಿದಂತೆ ಆತಂಕ ಅಗತ್ಯವಿಲ್ಲ ಎಂದು ಅದರಲ್ಲಿ ತಿಳಿಸಲಾಗಿದೆ.

‘ಮಧ್ಯಂತರ ವರದಿಯಲ್ಲಿ ತಿಳಿಸಿದಂತೆ ಕಟ್ಟಡದ ಭದ್ರತೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಈಗ ಕಟ್ಟಡ ಮರುವಾಸಕ್ಕೆ ಯೋಗ್ಯವಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ. ಆದಾಯ ತೆರಿಗೆ ವಸತಿ ಸಂಕೀರ್ಣದ ಕಟ್ಟಡದಲ್ಲೂ ಬಿರುಕು ಬಿಟ್ಟಿದ್ದು, ಅದರ ದುರಸ್ತಿಗಾಗಿ ಇನ್ನೂ 15 ದಿನ ಬೇಕಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಕುಟುಂಬಗಳು ಆರು ಕುಟುಂಬಗಳು ಬೇರೆಡೆ ಕಾಲ ಕಳೆಯುವ ಸ್ಥಿತಿ ಬಂದೊದಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT