ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸುತ್ತಿರುವ ಕೃಷಿಕರ ಸಂಖ್ಯೆ

ಆರ್ಥಿಕ ತಜ್ಞ ಪ್ರೊ.ಟಿ.ಆರ್.ಚಂದ್ರಶೇಖರ್ ಕಳವಳ
Last Updated 26 ಜನವರಿ 2015, 10:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸುತ್ತಿದೆ ಎಂದು ಖ್ಯಾತ ಆರ್ಥಿಕ ತಜ್ಞ ಪ್ರೊ.ಟಿ.ಆರ್.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

ನಗರದ ಐತಿಹಾಸಿಕ ಕೋಟೆ ಆವರಣದಲ್ಲಿ ದುರ್ಗೋತ್ಸವ 2015 ರ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಪ್ರಚಲಿತ ವಿದ್ಯಮಾನಗಳು ಗೋಷ್ಠಿಯಲ್ಲಿ ‘ಗ್ರಾಮೀಣರ ವಲಸೆ ಮತ್ತು ಮಾರ್ಗೋಪಾಯಗಳು’ ಕುರಿತು ಮಾತನಾಡಿದರು.

ರಾಜ್ಯದಲ್ಲಿ ಒಟ್ಟು ೬೮ ಲಕ್ಷ ಇದ್ದ ಭೂ ಮಾಲೀಕರು ೬೫ ಲಕ್ಷಕ್ಕೆ ಕುಸಿದಿದ್ದಾರೆ. ೬೧ ಲಕ್ಷದಷ್ಟಿದ್ದ ಭೂ ರಹಿತರ ಸಂಖ್ಯೆ ೭೦ ಲಕ್ಷಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದವರು ಉದ್ಯೋಗ ಹುಡುಕಿಕೊಂಡು ವಲಸೆ ಹೋಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೃಷಿ ಜೀವನ ಸಂಸ್ಕೃತಿ ಎತ್ತ ಸಾಗುತ್ತಿದೆ, ಗ್ರಾಮೀಣ ಪ್ರದೇಶಗಳು ಏನಾಗುತ್ತಿವೆ ಎಂಬ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.

ಒಂದೆಡೆ ವಿಶ್ವಸಂಸ್ಥೆ ವಲಸೆ ಹೋಗುವುದನ್ನು ಪ್ರೋತ್ಸಾಹಿಸಬೇಕೆಂಬುದಾಗಿ ಹೇಳಿದ್ದರೂ ಅದು ಅನಿವಾರ್ಯದ ವಲಸೆಯೇ ಅಥವಾ ವರಮಾನದ ಹಿನ್ನೆಲೆಯಲ್ಲಿ ವಲಸೆ ಹೋಗಿದ್ದಾರಾ ಎಂದು ಅಧ್ಯಯನ ಮಾಡಬೇಕಿದೆ ಎಂದು ಅವರು ಹೇಳಿದರು.

ವಲಸೆ ಹೋಗುವುದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದೆ ರಾಜ್ಯದ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ವರಮಾನದ ಕಾರಣಕ್ಕೆ ವಲಸೆ ಹೋಗಿದ್ದರೆ, ಕುಟುಂಬದ ಒಬ್ಬರು ಹೋಗಬಹುದು. ಆದರೆ, ಅನಿವಾರ್ಯವಾಗಿ ವಲಸೆ ಹೋಗಿದ್ದರೆ, ಇಡೀ ಕುಟುಂಬ ವಲಸೆ ಹೋಗುತ್ತದೆ. ಆಗ ಮಕ್ಕಳ ಶಿಕ್ಷಣಕ್ಕೆ ತಡೆ ಬೀಳುತ್ತದೆ. ಅದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು  ಪ್ರೊ. ಚಂದ್ರಶೇಖರ್‌ ಹೇಳಿದರು.

ಬಹುತೇಕ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಬಡ ಮಕ್ಕಳು ಮಾತ್ರ ಓದುತ್ತಿದ್ದಾರೆ. ರಾಜ್ಯದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ೩೬ ಲಕ್ಷ ಮಕ್ಕಳಿದ್ದು, ಅವರೆಲ್ಲರ ಪೌಷ್ಟಿಕತೆಗಾಗಿ ದಿನವೊಂದಕ್ಕೆ ಎರಡು ಮೊಟ್ಟೆ, ಒಂದು ಲೋಟ ಹಾಲು ನೀಡುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಬಜೆಟ್‌ನಲ್ಲಿ ಶೇ. ೧ ರಷ್ಟು ಹಣವನ್ನು ಮಕ್ಕಳಿಗಾಗಿ ಮೀಸಲಿಟ್ಟರೆ, ಅಪೌಷ್ಟಿಕತೆ ಕಾಡದಂತೆ ಎಚ್ಚರ ವಹಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ರಾಜ್ಯದ ಎಲ್ಲ ಜಿಲ್ಲೆಗಳು ಬೆಂಗಳೂರಿನತ್ತ ಮುಖ ಮಾಡಿವೆ. ರಾಜ್ಯವೇ ಬೆಂಗಳೂರುಮಯವಾಗಿದೆ. ಬೆಂಗಳೂರಿನಲ್ಲಿ ಒಂದು ರೂಪಾಯಿ ಬಡವಾಳ ಹೂಡದೆ, ಬೆಂಗಳೂರಿನ ಹೊರಗಡೆ ಬಂಡವಾಳ ಹೂಡುವ ಕೆಲಸ ಮಾಡಬೇಕಿದೆ. ಬೆಂಗಳೂರಿನ ಇಂದಿನ ಜನಸಂಖ್ಯೆ ೧ ಕೋಟಿ ಆಗಿದೆ ಎಂದರು.

ಗ್ರಾಮೀಣ ಬದುಕನ್ನು ಪ್ರಜ್ಞಾ ಪೂರ್ವಕವಾಗಿ ತಿರಸ್ಕರದಿಂದ ನೋಡಲಾಗುತ್ತಿದೆ. ಆರ್ಥಿಕ ತಜ್ಞರು ಗ್ರಾಮೀಣ ಮತ್ತು ಬಡ ಕುಟುಂಬಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಅವರೆಲ್ಲ ಗೌರವದಿಂದ ಬಾಳುವಂತ ಯೋಜನೆಗಳನ್ನು ರಾಜ್ಯ ಸರ್ಕಾರ ಆ ವರ್ಗಕ್ಕೆ ನೀಡಬೇಕಿದೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT