ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಂಡವಿದೆಕೋ ಮಾಂಸವಿದೆಕೋ...

ವನ್ಯಜೀವಿ ವ್ಯಾಪಾರದ ವಿಷವರ್ತುಲದಲ್ಲಿ ಜೀವವೈವಿಧ್ಯ ಕಂಗಾಲು
Last Updated 19 ಸೆಪ್ಟೆಂಬರ್ 2015, 19:33 IST
ಅಕ್ಷರ ಗಾತ್ರ

2012 ರ ಜುಲೈ ತಿಂಗಳ ಒಂದು ದಿನ. ಹರಿಯಾಣದ ಪಂಚಕುಳ ಜಿಲ್ಲಾ ಕೇಂದ್ರದ ಬಸ್‌ನಿಲ್ದಾಣಕ್ಕೆ ಮುಂಜಾನೆಯೇ ಬಂದ ಸುರಭಿ ಗ್ರಾಮದ ಜಗದೀಶ್‌ ಬಸ್‌ ಏರಿದ. ಅವನೊಂದಿಗೆ ಜಾಲರ್‌ ಸಿಂಗ್‌, ಲುಕುಮ್‌ಚಂದ್‌, ರೊಥಸ್‌, ಪಪ್ಪು, ಬಿಮಲಾದೇವಿ ಜತೆಗೂಡಿದರು. ಅಲ್ಲಿಂದ ದೆಹಲಿಯ ರೈಲು ನಿಲ್ದಾಣದತ್ತ ಅವರ ಪಯಣ ಸಾಗಿತು.

ಕರ್ನಾಟಕಕ್ಕೆ ಹೊರಟಿದ್ದ ರೈಲಿನ ಬೋಗಿಯೊಂದರಲ್ಲಿ ಅವರು ತೂರಿಕೊಂಡರು. ಕೊಳಕು ಬಟ್ಟೆ, ಗಬ್ಬುನಾತದ ಬಗಲ ಚೀಲ, ವಿಲಕ್ಷಣ ಮುಖದ ಈ ಆರು ಮಂದಿಯತ್ತ ಪ್ರಯಾಣಿಕರು ಅಷ್ಟಾಗಿ ದೃಷ್ಟಿ ನೆಡಲಿಲ್ಲ. ಬೆಂಗಳೂರು ತಲುಪುವವರೆಗೂ ಅವರಲ್ಲಿ ಆತಂಕ ಮಡುಗಟ್ಟಿತ್ತು. ಬೆಂಗಳೂರು ತಲುಪಿದಾಗ ತಮ್ಮ ಚೀಲದಲ್ಲಿದ್ದ ರಾಜ್ಯದ ಅರಣ್ಯ ಪ್ರದೇಶಗಳತ್ತ ಸಾಗುವ ನಕ್ಷೆಯನ್ನು ಅವರು ಹೊರತೆಗೆದರು.

ಮೆಜೆಸ್ಟಿಕ್‌ನಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಹೊರಟ್ಟಿದ್ದ ಬಸ್‌ ಏರಿದರು. ಕೆಂಗೇರಿ, ರಾಮನಗರ, ಮದ್ದೂರು, ಮಳವಳ್ಳಿ ದಾಟಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಹೊರವಲಯಕ್ಕೆ ಬರುವಾಗ ಮುಸ್ಸಂಜೆಯಾಗಿತ್ತು. ತರಾತುರಿಯಲ್ಲಿ ಗುಡಾರ ನಿರ್ಮಿಸಿದರು. ದೂರದ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ (ಬಿಆರ್‌ಟಿ) ಕಡೆಯಿಂದ ಬೀಸುತ್ತಿದ್ದ ತಂಗಾಳಿಗೆ ಗಾಢ ನಿದ್ರೆಯೂ ಬಂತು.

ಅವರು ಬಂದು ಒಂದು ವಾರ ಕಳೆದಿರಲಿಲ್ಲ. ಗುಡಾರದೊಳಗೆ ಇನ್ನೂ 15 ಮಂದಿ ಸೇರಿಕೊಂಡರು. ಇವರಲ್ಲಿ ಮಹಿಳೆಯರು, ಮಕ್ಕಳು ಇದ್ದರು. ಮುಂಜಾನೆಯೇ ಎದ್ದು ಪ್ಲಾಸ್ಟಿಕ್‌ ಹೂಗಳನ್ನು ತಯಾರಿಸುತ್ತಿದ್ದರು. ಸೂರ್ಯ ನೆತ್ತಿಗೇರುವ ವೇಳೆಗೆ ಮಹಿಳೆಯರು ಹೂ ಮಾರಾಟಕ್ಕಾಗಿ ಹಳ್ಳಿಗಳತ್ತ ಹೆಜ್ಜೆ ಹಾಕುತ್ತಿದ್ದರು. ಪುರುಷರು ಮಾತ್ರ ವಾರಗಟ್ಟಲೇ ನಾಪತ್ತೆಯಾಗುತ್ತಿದ್ದರು. ಅಂದಹಾಗೆ, ಇವರದು ಮೂಲತಃ ಬವಾರಿಯಾ ಬುಡಕಟ್ಟು ಜನಾಂಗ. ಈ ಬುಡಕಟ್ಟು ಜನರು ಕಾಳಿ ಮಾತೆಯ ಆರಾಧಕರು. ಹುಲಿ ಸೇರಿದಂತೆ ವನ್ಯಜೀವಿಗಳ ಬೇಟೆ ಅವರ ಮೂಲ ವೃತ್ತಿ.

ಪ್ರತಿ ಶುಕ್ರವಾರ ಕಾಳಿಗೆ ಪೂಜೆ ಸಲ್ಲಿಸಿದ ಬಳಿಕ ಮಾರನೇ ದಿನ ಬೇಟೆಗೆ ತೆರಳುವುದು ಅವರ ಸಂಪ್ರದಾಯ. ಅದಾಗಲೇ ಜಗದೀಶ್‌, ಜಾಲರ್‌ ಸಿಂಗ್‌, ಲುಕುಮ್‌ಚಂದ್‌ ಹಾಗೂ ರೊಥಸ್‌ ‘ಬಿಆರ್‌ಟಿ ಹುಲಿ ರಕ್ಷಿತಾರಣ್ಯ’ದ ವ್ಯಾಪ್ತಿಯ ಗುಂಡಾಲ್‌ ಜಲಾಶಯದ ಅರಣ್ಯ ಪ್ರದೇಶ ಪ್ರವೇಶಿಸಿ ಮೂರ್ನಾಲ್ಕು ದಿನ ಕಳೆದಿದ್ದವು. ಬೇಟೆ ಸಿಕ್ಕಿರಲಿಲ್ಲ. ಹುಲಿಯ ಕಳ್ಳಬೇಟೆಗೆ ಅಳವಡಿಸಿದ್ದ ದವಡೆ ಕತ್ತರಿ (ಜಾಟ್ರಾಪ್‌) ಆನೆಯ ಕಾಲಿಗೆ ಸಿಲುಕಿ ಅಪ್ಪಚ್ಚಿಯಾಗಿತ್ತು.

ಅಂದು ಶುಕ್ರವಾರದ ಸಂಜೆಗತ್ತಲು. ‘ಶಕ್ತಿ’ ಆರಾಧನೆಗೆ ಅವರ ಮನಸ್ಸು ತುಡಿಯುತ್ತಿತ್ತು. ಮನದಲ್ಲಿ ಆನೆಯನ್ನು ಶಪಿಸುತ್ತಾ ಈ ನಾಲ್ವರು ಪುಟ್ಟೀರಮ್ಮನದೊಡ್ಡಿ ಬಳಿ ಅರಣ್ಯದ  ಸೌರ ತಂತಿಬೇಲಿ ದಾಟಿದರು. ವಲಯ ಅರಣ್ಯ ಅಧಿಕಾರಿ ಕೆ.ಟಿ. ಬೋರಯ್ಯ, ವನಪಾಲಕ ಸದಾಶಿವಂ, ಅರಣ್ಯ ರಕ್ಷಕ ಪ್ರಭುಸ್ವಾಮಿ ನೇತೃತ್ವದ ತಂಡ ಧುತ್ತನೆ ಎದುರಾದಾಗ ನಾಲ್ವರು ಬೆಚ್ಚಿಬಿದ್ದರು.

ಈ ಕಳ್ಳಬೇಟೆಗಾರರನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳ ತಂಡ ದೊಡ್ಡಿಂದುವಾಡಿಗೆ ತೆರಳಿತು. ಗುಡಾರದಲ್ಲಿ ಪಪ್ಪು, ಬಿಮಲಾದೇವಿ ಸೆರೆಸಿಕ್ಕಿದರು. ಇವರ ಬುಡಕಟ್ಟು ಭಾಷೆ ಅರಣ್ಯಾಧಿಕಾರಿಗಳಿಗೆ ಅರ್ಥವಾಗಲಿಲ್ಲ. ದೆಹಲಿಯಲ್ಲಿರುವ ವನ್ಯಜೀವಿ ಅಪರಾಧ ತಡೆ ವಿಭಾಗಕ್ಕೆ (ಡಬ್ಲ್ಯುಸಿಸಿಬಿ) ಬಂಧಿತರ ಛಾಯಾಚಿತ್ರ ರವಾನಿಸಲಾಯಿತು. ಅಲ್ಲಿಂದ ಬಂದ ಮಾಹಿತಿಗೆ ಇಡೀ ಅರಣ್ಯ ಇಲಾಖೆಯೇ ಬೆಚ್ಚಿಬಿದ್ದಿತ್ತು. ಕರ್ನಾಟಕದ ಹುಲಿ ರಕ್ಷಿತಾರಣ್ಯಗಳ ಮೇಲೆ ಉತ್ತರ ಭಾರತದ ಕಳ್ಳಬೇಟೆಗಾರರ ಕಾಕದೃಷ್ಟಿ ಬಿದ್ದಿರುವುದು ಬಯಲಾಗಿತ್ತು.

ಬಂಧಿತ ಕಳ್ಳಬೇಟೆಗಾರರನ್ನು ಅರಣ್ಯದೊಳಗೆ ಕರೆದೊಯ್ಯಲಾಯಿತು. ಕಣಿವೆಯ ಒಳಭಾಗದಲ್ಲಿನ ಕಿರಿದಾದ ಕಲ್ಲಿನ ಗುಹೆಯಲ್ಲಿ 4 ದಿನಗಳ ವಾಸ್ತವ್ಯ ಹೂಡಿದ್ದ ಬಗ್ಗೆ ಅವರು ಬಾಯ್ಬಿಟ್ಟರು. ‘ದವಡೆ ಕತ್ತರಿ’ ಅಳವಡಿಸುವುದರಲ್ಲಿ ಹಾಗೂ ಹುಲಿಗಳನ್ನು ಕೊಂದು ಅವುಗಳ ಚರ್ಮ ಹದಮಾಡುವುದರಲ್ಲಿ ಈ ಹುಲಿ ಹಂತಕರು ಸಿದ್ಧಹಸ್ತರಾಗಿದ್ದರು. ಹುಲಿ ಸಾಂದ್ರತೆ ಹೆಚ್ಚಿರುವ ಅರಣ್ಯಗಳೇ ಇವರ ಬೇಟೆಗೆ ಮುಖ್ಯ ಗುರಿಯಾಗಿದ್ದವು.

ರಾತ್ರಿವೇಳೆ ಮಾತ್ರವೇ ‘ಜಾಟ್ರಾಪ್‌’ ಅಳವಡಿಸುತ್ತಿದ್ದರು. ಬೆಳಿಗ್ಗೆ ಅವುಗಳನ್ನು ನಿಷ್ಕ್ರಿಯಗೊಳಿಸಿ ಗುಹೆಯಲ್ಲಿ ನಿದ್ರೆಗೆ ಜಾರುತ್ತಿದ್ದರು. ‘ಜಾಟ್ರಾಪ್‌’ಗೆ ಹುಲಿ ಸಿಕ್ಕಿಕೊಂಡರೆ ಮೊನಚಾದ ಆಯುಧದಿಂದ ಅದರ ಕಣ್ಣಿಗೆ ಚುಚ್ಚಿ ಬಳಿಕ ಅದರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲ್ಲುತ್ತಿದ್ದರು.

ವನ್ಯಜೀವಿ ವ್ಯಾಪಾರಿಗಳ ಮಾರ್ಗದರ್ಶನದಡಿ ದೇಶದ ವಿವಿಧ ಹುಲಿ ರಕ್ಷಿತಾರಣ್ಯಗಳಿಗೆ ತೆರಳುವುದು, ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣುತಪ್ಪಿಸಿ ವ್ಯಾಘ್ರಗಳನ್ನು ಬೇಟೆಯಾಡುವುದಲ್ಲಿ ಬವಾರಿಯಾ ಜನ ನಿಷ್ಣಾತರು. ಕೊನೆಗೆ, ಕೊಳ್ಳೇಗಾಲದ ಜೆಎಂಎಫ್‌ ನ್ಯಾಯಾಲಯ ಆರೋಪಿಗಳಿಗೆ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿತು. ಈಗ ಆರೋಪಿಗಳು ಜೈಲಿನಲ್ಲಿದ್ದಾರೆ. ವನ್ಯಜೀವಿಗಳ ಕಳ್ಳಬೇಟೆ ಹಾಗೂ ಮಾರಾಟದಲ್ಲಿ ಬವಾರಿಯಾ ಸಮುದಾಯದ್ದು ಒಂದು ಸಣ್ಣ ಪಾತ್ರವಷ್ಟೇ. ಈ ದಂಧೆಯ ಕಬಂಧ ಬಾಹುಗಳು ವಿಶ್ವವನ್ನೆಲ್ಲ ವ್ಯಾಪಿಸಿವೆ.

ವನ್ಯಜೀವಿ ವ್ಯಾಪಾರ
ವನ್ಯಜೀವಿ ವ್ಯಾಪಾರ ವಿಶ್ವವ್ಯಾಪಿಯಾಗಿ ನಡೆಯುತ್ತಿರುವ ಒಂದು ವ್ಯವಸ್ಥಿತ ಮಾರಾಟ ಜಾಲ. ಈ ಜಾಲ ನಡೆಸುವ ವ್ಯಾಪಾರಿಗಳು ಅಳಿವಿನಂಚಿನಲ್ಲಿರುವ ಹುಲಿ, ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳನ್ನು ಹತ್ಯೆ ಮಾಡುವವರಿಗೆ ಬಲೆ ಬೀಸುತ್ತಾರೆ. ಬುಡಕಟ್ಟು ಕಳ್ಳಬೇಟೆಗಾರರೇ ಇವರ ಬಂಡವಾಳ. ಪ್ರಾಣಿಗಳನ್ನು ಗುಂಡಿಕ್ಕಿ ಅಥವಾ ವಿಷ ಉಣಿಸಿ ಕೊಲ್ಲುವ ಕಾಡಂಚಿನ ಹಳ್ಳಿಗರನ್ನೂ ಹಣದ ಆಮಿಷಕ್ಕೊಳಪಡಿಸಿ ಪ್ರಾಣಿಗಳ ಹತ್ಯೆಗೆ ಕಳುಹಿಸುತ್ತಾರೆ.

ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯರು ಹುಲಿಗಳನ್ನು ಉಪದ್ರವಕಾರಿ ಜೀವಿಗಳೆಂದು ಪರಿಗಣಿಸಿದ್ದರು. ಹೀಗಾಗಿ, ಹುಲಿ ಕೊಂದವನಿಗೆ ವೀರನೆಂಬ ಬಿರುದು ಸಿಗುತ್ತಿತ್ತು. ಕೈತುಂಬ ಇನಾಮು ದಕ್ಕುತ್ತಿತ್ತು. ‘ಶಿಕಾರಿ’ ಹಲವು ಶ್ರೀಮಂತರ ಮೋಜಿನ ಜೀವನದ ಭಾಗವಾಗಿತ್ತು. ದೇಶ ಸ್ವತಂತ್ರಗೊಂಡರೂ ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸಲು ಪ್ರಾಣಿಗಳಿಗೆ ಸ್ವಾತಂತ್ರ್ಯ ಸಿಗಲಿಲ್ಲ. ಸ್ವತಂತ್ರ ಭಾರತದಲ್ಲಿ ವನ್ಯಜೀವಿಗಳ ‘ಬೇಟೆ’ ಜನಸಾಮಾನ್ಯರಿಗೂ ಸುಲಭವಾಯಿತು.

ಅವ್ಯಾಹತ ಕಳ್ಳಬೇಟೆಯಿಂದ ಹುಲಿಗಳ ಸಂಖ್ಯೆ ಇಳಿಮುಖವಾಗತೊಡಗಿತು. 19ನೇ ಶತಮಾನದ ವೇಳೆಗೆ ಜನರಲ್ಲಿ ವನ್ಯಜೀವಿಗಳ ಮಹತ್ವ ನಿಧಾನವಾಗಿ ಅರಿವಿಗೆ ಬಂತು. ಆಗ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳು ಜೀವತಳೆದವು. ಕಾನೂನು ಬಿಗಿಗೊಂಡಿದ್ದರಿಂದ ಕಳ್ಳಬೇಟೆ ಮತ್ತು ವನ್ಯಜೀವಿ ವ್ಯಾಪಾರಕ್ಕೆ ಕೊಂಚಮಟ್ಟಿಗೆ ಕಡಿವಾಣ ಬಿತ್ತು. ಭಾರತದಲ್ಲಿ 1,800 ವನ್ಯಜೀವಿಗಳು, ವಿವಿಧ ಸಸ್ಯಗಳ ವ್ಯಾಪಾರವನ್ನು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972’ರಡಿ ನಿಷೇಧಿಸಲಾಗಿದೆ.

ಆದರೆ, ಅಳಿನಂಚಿನಲ್ಲಿರುವ ವನ್ಯಜೀವಿಗಳನ್ನು ಕೊಂದವರಿಗೆ ಕಾಯ್ದೆಯಡಿ ನಿಗದಿಪಡಿಸಿರುವ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ. ಹೀಗಾಗಿ, ಸುಲಭವಾಗಿ ಹೆಚ್ಚಿನ ಆದಾಯ ತರುವ ವೃತ್ತಿಯಾಗಿ ವನ್ಯಜೀವಿ ವ್ಯಾಪಾರ ಕಳ್ಳಬೇಟೆಗಾರರಿಗೆ ಆಪ್ಯಾಯಮಾನವಾಗಿದೆ. ಜಾಗತಿಕ ಅಕ್ರಮ ವ್ಯಾಪಾರಗಳಲ್ಲಿ  ಮಾದಕ ವಸ್ತುಗಳ ಕಳ್ಳಸಾಗಾಣಿಕೆಗೆ ಅಗ್ರಸ್ಥಾನ. ಆ ನಂತರದ ಸ್ಥಾನದಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ಇದೆ. ಮೂರನೇ ಸ್ಥಾನದಲ್ಲಿ ವನ್ಯಜೀವಿ ವ್ಯಾಪಾರ ಇದೆ. ಕೇಂದ್ರ ಸರ್ಕಾರದ ಇತ್ತೀಚಿನ ವರದಿಯನ್ವಯ ಭಾರತದಲ್ಲಿ ವನ್ಯಜೀವಿಗಳ ವ್ಯಾಪಾರ ಹೆಚ್ಚುತ್ತಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಈ ವ್ಯಾಪಾರದ ವಾರ್ಷಿಕ ವಹಿವಾಟು 60 ಬಿಲಿಯನ್‌ ಅಮೆರಿಕನ್‌ ಡಾಲರ್‌ ಎಂದು ಅಂದಾಜಿಸಲಾಗಿದೆ.

ಬಡಪಾಯಿ ಹುಲಿರಾಯ!
ಹುಲಿ ಭಾರತೀಯ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ. ಮಲೆಮಹದೇಶ್ವರನಿಗೆ ಹುಲಿಯೇ ವಾಹನ. ಕರಾವಳಿಯ ಜಿಲ್ಲೆಗಳಲ್ಲಿ ಹುಲಿವೇಷ ಧರಿಸಿ ಕುಣಿಯುವ ಜನಪದ ಆಚರಣೆ ಇಂದಿಗೂ ಜೀವಂತವಾಗಿದೆ. ವನ್ಯಜೀವಿ ಪ್ರವಾಸೋದ್ಯಮದ ಪರಿಕಲ್ಪನೆ ಮೂಡಿದ ಬಳಿಕ ಹುಲಿಗಳು ಭಾರತದಲ್ಲಿ ಪ್ರವಾಸಿಗರ ಆಕರ್ಷಣೆಯ ಚುಂಬಕಗಳಾಗಿವೆ. ಈ ಜನಪ್ರಿಯತೆಯೇ ಅವುಗಳ ಜೀವಕ್ಕೆ ಕಂಟಕ ತಂದಿದೆ.

ಭಾರತ ಸೇರಿದಂತೆ ವಿವಿಧ ದೇಶಗಳ ಸಂಸ್ಕೃತಿಗಳಲ್ಲಿ ಹುಲಿಯ ಚರ್ಮ, ಹಲ್ಲು, ಮೀಸೆ, ಉಗುರುಗಳನ್ನು ಪಾರಿತೋಷಕವಾಗಿ ಸಂಗ್ರಹಿಸುವ ರೂಢಿ ಇದೆ. ಹಲವು ಶತಮಾನಗಳಿಂದ ಚೀನಾ, ತೈವಾನ್‌, ಜಪಾನ್‌, ದಕ್ಷಿಣ ಕೊರಿಯಾ, ವಿಯೆಟ್ನಾಂನಲ್ಲಿ ಹುಲಿಯ ದೇಹದ ಭಾಗಗಳು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಬಳಕೆಯಾಗುತ್ತಿವೆ. ಇಂದಿಗೂ ಚೀನಾದ ಜನರು ಹುಲಿಯ ದೇಹದ ಭಾಗಗಳಿಂದ ತಯಾರಿಸಿದ ಶಕ್ತಿಪೇಯದ ಸೇವನೆಗೆ ಆದ್ಯತೆ ನೀಡುತ್ತಾರೆ. ಹುಲಿಗಳ ಮೂಳೆಗಳಿಂದ ತಯಾರಿಸಿದ ವೈನ್‌ ಸೇವನೆ ಚೀನಾದಲ್ಲಿ ಸಾಮಾನ್ಯ. ಕೆಲವು ಶ್ರೀಮಂತರು ತಮ್ಮ ಅಂತಸ್ತಿನ ಪ್ರತೀಕವಾಗಿ ಮನೆಗೆ ಬರುವ ಅತಿಥಿಗಳಿಗೆ ಈ ವೈನ್‌ ಅನ್ನು ಉಡುಗೊರೆಯಾಗಿ ನೀಡುತ್ತಾರೆ.

ಹುಲಿ ಉಗುರುಗಳನ್ನು ನಿದ್ರಾಹೀನತೆ ತಡೆಗಟ್ಟುವ ಔಷಧಿ ತಯಾರಿಕೆಗೆ ಬಳಸುತ್ತಾರೆ. ಹಲ್ಲುಗಳನ್ನು ಜ್ವರದ ಔಷಧಿ, ಕೊಬ್ಬನ್ನು ಕುಷ್ಠರೋಗ ಮತ್ತು ಸಂಧಿವಾತ ಗುಣಪಡಿಸುವ ಔಷಧಿ ತಯಾರಿಕೆಗೆ ಬಳಸುತ್ತಾರೆ. ಕಣ್ಣುಗುಡ್ಡೆಗಳನ್ನು ಮೂರ್ಚೆ ರೋಗ, ಮಲೇರಿಯಾ ಜ್ವರ ನಿವಾರಣೆ ಮದ್ದಿಗೆ ಹಾಗೂ ಹುಲಿಯ ಬಾಲವನ್ನು ಚರ್ಮವ್ಯಾಧಿ ರೋಗ ಗುಣಪಡಿಸಲು ಸಾಂಪ್ರದಾಯಿಕ ಔಷಧಿ ಪದ್ಧತಿಯಡಿ ಬಳಸುತ್ತಾರೆ. ಚೀನಿಯರ ಈ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ವೈಜ್ಞಾನಿಕ ತಳಹದಿ ಇಲ್ಲ. ಹುಲಿಯ ದೇಹದ ಭಾಗಗಳನ್ನು ಬಳಸಿ ತಯಾರಿಸಿದ ಔಷಧಿಗಳಿಂದ ರೋಗಗಳು ಗುಣವಾಗುತ್ತವೆ ಎನ್ನುವ ಅಂಶ ಪ್ರಯೋಗಾಲಯಗಳಿಂದಲೂ ದೃಢಪಟ್ಟಿಲ್ಲ.

***
ಘೇಂಡಾಮೃಗಗಳಿಗೂ ಸಂಚಕಾರ
ಹುಲಿಯಂತೆ ಹಲವು ಪ್ರಾಣಿಗಳು ವನ್ಯಜೀವಿ ವ್ಯಾಪಾರದ ಜಾಲಕ್ಕೆ ಸಿಲುಕಿವೆ. ಅಸ್ಸಾಂನ ಕಾಂಜಿರಂಗ ರಾಷ್ಟ್ರೀಯ ಉದ್ಯಾನವು ಅತಿಹೆಚ್ಚು ಒಂಟಿಕೊಂಬಿನ ಘೇಂಡಾಮೃಗಗಳಿರುವ ವಿಶ್ವದ ಏಕೈಕ ಅರಣ್ಯ. ಇದು ಅಳಿವಿನಂಚಿನಲ್ಲಿರುವ ಜೀವಿ. ಇವುಗಳದ್ದು ಸಹ ದುರಂತ ಕಥನ. ಘೇಂಡಾಮೃಗದ ಕೊಂಬಿನಿಂದ ತಯಾರಿಸಿದ ವಸ್ತುಗಳು, ಸಾಂಪ್ರದಾಯಿಕ ಔಷಧಿಗಳಿಗೆ ಭಾರೀ ಬೇಡಿಕೆ ಇದೆ.

ಹೀಗಾಗಿ, ಇವುಗಳ ಹತ್ಯೆ ಎಗ್ಗಿಲ್ಲದೆ ಸಾಗಿದೆ. ಚರ್ಮಕ್ಕಾಗಿ ಚಿರತೆಗಳ ಹತ್ಯೆ ನಡೆಯುತ್ತಿದೆ. ಕರಡಿಯ ಪಿತ್ತಕೋಶವನ್ನು ಚೀನಾದಲ್ಲಿ ಸಾಂಪ್ರದಾಯಿಕ ಔಷಧಿ ತಯಾರಿಸಲು ಬಳಸಲಾಗುತ್ತಿದೆ. ಇದರಿಂದ ಕರಡಿಗಳಿಗೂ ಅಪಾಯ ಎದುರಾಗಿದೆ. ಕುಂಚಗಳ ತಯಾರಿಕೆಗಾಗಿ ಮುಂಗುಸಿಗಳ ಹತ್ಯೆ ನಡೆದಿದೆ.

ಸಸ್ಯ ಸಂಕುಲಕ್ಕೆ ಆಪತ್ತು
ಪರಿಸರ ನಾಶವೆಂದರೆ ಅರಣ್ಯ ಹಾಗೂ ವನ್ಯಜೀವಿಗಳ ನಾಶವೆಂಬ ಸೀಮಿತ ಅರ್ಥವಿದೆ. ಕಾಡುಪ್ರಾಣಿಗಳಂತೆ ಭಾರತದಲ್ಲಿ ಸಸ್ಯಸಂಕುಲವೂ ಕಳ್ಳಸಾಗಾಣಿಕೆಯ ಜಾಲಕ್ಕೆ ಸಿಲುಕಿದೆ. ಔಷಧೀಯ ಸಸ್ಯಗಳು ವಿದೇಶಗಳಿಗೆ ಕಳ್ಳಸಾಗಣೆಯಾಗುತ್ತಿವೆ. ಅಮೂಲ್ಯ ಮರಗಳ ದಿಮ್ಮಿಗಳ ಕಳ್ಳಸಾಗಾಣಿಕೆ ಸದ್ದಿಲ್ಲದೆ ನಡೆದಿದೆ. ಇದಕ್ಕೆ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಹೆಚ್ಚುತ್ತಿರುವ ‘ರಕ್ತಚಂದನ’ದ ಕಳ್ಳಸಾಗಾಣಿಕೆಯೇ ಸಾಕ್ಷಿ.

ಈ ವರ್ಷದ ಏಪ್ರಿಲ್‌ನಲ್ಲಿ ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ರಕ್ತಚಂದನದ ಕಳ್ಳಸಾಗಣೆದಾರರ ಮೇಲೆ ನಡೆದ ಗುಂಡಿನ ದಾಳಿ ಇನ್ನೂ ಹಸಿರಾಗಿಯೇ ಇದೆ. ಈ ಘಟನೆಯಲ್ಲಿ ರಕ್ತಚಂದನ ಸಾಗಾಣಿಕೆ ನಿಗ್ರಹ ದಳದ ಗುಂಡಿಗೆ 20 ಕಳ್ಳಸಾಗಾಣಿಕೆದಾರರು ಜೀವತೆತ್ತರು. ಮಾರುಕಟ್ಟೆಯಲ್ಲಿ ಶ್ರೀಗಂಧ, ಬೀಟೆ ಮರ ಹೊರತುಪಡಿಸಿದರೆ ರಕ್ತಚಂದನಕ್ಕೆ ಹೆಚ್ಚಿನ ಮೌಲ್ಯವಿದೆ. ಆಯುರ್ವೇದ ಔಷಧಿ, ಸುಗಂಧ ದ್ರವ್ಯ ತಯಾರಿಕೆ, ಸಂಗೀತ ವಾದ್ಯ ಪರಿಕರಗಳು, ದೇವರ ಮೂರ್ತಿಗಳ ತಯಾರಿಕೆಯಲ್ಲಿ ರಕ್ತಚಂದನ ಬಳಸುತ್ತಾರೆ.

ಮಲೇಷ್ಯಾ, ಚೀನಾ, ಜಪಾನ್‌ನಲ್ಲಿ ರಕ್ತಚಂದನಕ್ಕೆ ಭಾರೀ ಬೇಡಿಕೆ ಇದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 1 ಸಾವಿರ ಟನ್‌ನಷ್ಟು ರಕ್ತಚಂದನದ ತುಂಡುಗಳನ್ನು ವಶಪಡಿಸಿಕೊಳ್ಳುತ್ತಿರುವ ಬಗ್ಗೆ ದಾಖಲೆಗಳಿವೆ. ರಕ್ತಚಂದನದಂತೆ ನೂರಾರು ಔಷಧೀಯ ಸಸ್ಯಗಳು, ಆರ್ಕಿಡ್‌ಗಳು ಕಳ್ಳಸಾಗಣೆದಾರರಿಂದ ಆಪತ್ತಿಗೆ ಸಿಲುಕಿವೆ.

ಹಕ್ಕಿಗಳ ಜೀವಕ್ಕೂ ಉರುಳು
ಪಕ್ಷಿಗಳು ಇಲ್ಲದ ಪರಿಸರವನ್ನು ಊಹಿಸಿಕೊಳ್ಳುವುದು ಕಷ್ಟಕರ. ಮಾನವನ ವಿಕಾಸದಲ್ಲಿ ಅವುಗಳ ಕೊಡುಗೆ ದೊಡ್ಡದಿದೆ. ಮನುಷ್ಯನ ಜೀವನದುದ್ದಕ್ಕೂ ಸಂಸ್ಕೃತಿ, ಕಲೆ, ಶಿಲ್ಪ, ಸಾಹಿತ್ಯ, ಸಂತಸ– ಹೀಗೆ ಎಲ್ಲ ಹಂತಗಳಲ್ಲೂ ಬಾನಾಡಿಗಳು ಸ್ಫೂರ್ತಿಯಾಗಿವೆ. ಆದರೆ, ಈ ಪಕ್ಷಿಗಳ ಸ್ವಾತಂತ್ರ್ಯಹರಣ ಕೂಡ ನಿರಂತರವಾಗಿ ನಡೆಯುತ್ತಿದೆ. ಪಂಜರದಲ್ಲಿ ಸಾಕುವ ವಿವಿಧ ಪ್ರಭೇದದ ಗಿಣಿಗಳು (ಪ್ಯಾರಕೀಟ್ಸ್‌), ಕಾಡುಮೈನಾಗಳು, ರಾಟವಾಳಗಳು (ಮುನಿಯ) ಕಳ್ಳಸಾಗಾಣಿಕೆಯಾಗುತ್ತಿವೆ. ಮಾರಾಟಕ್ಕಾಗಿಯೇ ಪ್ರತಿವರ್ಷ ದೇಶದಲ್ಲಿ ವಿವಿಧ ಪ್ರಭೇದಕ್ಕೆ ಸೇರಿದ 7 ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ಅಕ್ರಮವಾಗಿ ಸೆರೆ ಹಿಡಿಯಲಾಗುತ್ತಿದೆ ಎನ್ನುತ್ತದೆ ವನ್ಯಜೀವಿ ಮಾರಾಟ ನಿಯಂತ್ರಣಕ್ಕಾಗಿ ದುಡಿಯುತ್ತಿರುವ ‘ಟ್ರಾಫಿಕ್‌’ (TRAFFIC) ಸಂಸ್ಥೆಯ ವರದಿ.

ವನ್ಯಜೀವಿಗಳ ಮರಣಮೃದಂಗ
ಅಂತರರಾಷ್ಟ್ರೀಯ ವನ್ಯಜೀವಿ ವ್ಯಾಪಾರದ ಕಬಂಧಬಾಹುಗಳು ಅರಣ್ಯಗಳ ಅಂಚಿನಲ್ಲಿ ತಳವೂರಿವೆ. ಇದರಿಂದ ವನ್ಯಜೀವಿ ಸಂರಕ್ಷಣೆಗೆ ದೊಡ್ಡ ಸವಾಲಾಗಿದೆ. ಭಾರತದಲ್ಲಿ ವನ್ಯಜೀವಿಗಳ ದೇಹದ ಭಾಗಗಳಿಗೆ ಬೇಡಿಕೆ ಕಡಿಮೆ. ಆದರೆ, ಚೀನಾ ಸೇರಿದಂತೆ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆಯಿದೆ. ದೇಶದಲ್ಲಿ ಸಂರಕ್ಷಣಾ ಕ್ರಮಗಳು ಬಿಗಿಗೊಂಡರೂ ಪ್ರಾಣಿಗಳು ಕಳ್ಳಬೇಟೆಗಾರರ ತಂತ್ರಕ್ಕೆ ಕೊರಳೊಡುತ್ತಿವೆ.

ಹುಲಿ ಹತ್ಯೆ ಕುರಿತು ಎನ್‌ಟಿಸಿಎ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಯಾದ ‘ಟ್ರಾಫಿಕ್‌’ನ ಅಂಕಿಅಂಶಗಳು ಬೆಚ್ಚಿಬೀಳಿಸುತ್ತವೆ. ದೇಶದಲ್ಲಿ 2010ರಿಂದ 2014ರವರೆಗೆ ಒಟ್ಟು 316 ಹುಲಿಗಳು ಅಸುನೀಗಿವೆ. ಈ ಪೈಕಿ 119 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿವೆ. ಚಿರತೆಗಳು ಆಪತ್ತಿಗೆ ಸಿಲುಕಿವೆ. ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸಿರುವ ವರದಿ ಅನ್ವಯ 2012ರಿಂದ 2014ರವರೆಗೆ ದೇಶದಲ್ಲಿ 104 ಚಿರತೆಗಳ ಚರ್ಮ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಈಶಾನ್ಯ ಭಾರತದಲ್ಲಿ ಅತಿಹೆಚ್ಚಿನ ಸುದ್ದಿಯಲ್ಲಿರುವ ಪ್ರಾಣಿಯೆಂದರೆ ಒಂಟಿಕೊಂಬಿನ ಘೇಂಡಾಮೃಗ. 2012ರ ಗಣತಿ ಅನ್ವಯ ಅಸ್ಸಾಂ 2,505, ಉತ್ತರ ಪ್ರದೇಶ 30, ಪಶ್ಚಿಮಬಂಗಾಳದಲ್ಲಿ 229 ಘೇಂಡಾಮೃಗಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳು ಕಳ್ಳಬೇಟೆಗೆ ಬಲಿಯಾಗುತ್ತಿರುವುದು ದುರಂತ.

2010ರಿಂದ 2014ರ ಅವಧಿಯಲ್ಲಿ 60ಕ್ಕೂ ಹೆಚ್ಚು ಘೇಂಡಾಮೃಗಗಳು ಕಳ್ಳಬೇಟೆಗೆ ಬಲಿಯಾಗಿವೆ. ಇವುಗಳ ರಕ್ಷಣೆಗಾಗಿಯೇ ಅಸ್ಸಾಂ ಸರ್ಕಾರ ವಿಶೇಷ ರಕ್ಷಣಾ ದಳ ರಚಿಸಿದೆ. 2014ರಲ್ಲಿ 20 ಘೇಂಡಾಮೃಗಗಳು ಕಳ್ಳಬೇಟೆಗೆ ಬಲಿಯಾಗಿವೆ. ಇದೇ ವರ್ಷ ವಿಶೇಷ ದಳದ ಗುಂಡಿಗೆ 22 ಕಳ್ಳಬೇಟೆಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ, ಇವುಗಳ ಹತ್ಯೆಗೆ ಕಡಿವಾಣ ಬಿದ್ದಿಲ್ಲ. ನೀರುನಾಯಿ, ಚಿಪ್ಪುಹಂದಿಗಳು ಸಹ ಬೇಟೆಯಿಂದ ಜೀವ ಕಳೆದುಕೊಳ್ಳುತ್ತಿವೆ.

ಚೀನಾ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಚಿಪ್ಪುಹಂದಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದರ ಚಿಪ್ಪುಗಳನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಚೀನಾದಲ್ಲಿ ಚಿಪ್ಪುಹಂದಿಯನ್ನು ಮಾಂಸ, ಚರ್ಮವ್ಯಾಧಿ ಚಿಕಿತ್ಸೆ, ಶಕ್ತಿವರ್ಧಕವಾಗಿ ಬಳಸಲಾಗುತ್ತಿದೆ. ‘ಟ್ರಾಫಿಕ್‌’, ಇಂಟರ್‌ಪೋಲ್‌, ಡಬ್ಲ್ಯುಸಿಸಿಬಿ ವರದಿಯು ಚಿಪ್ಪುಹಂದಿಗಳು ಅತಿಹೆಚ್ಚು ಅಪಾಯಕ್ಕೆ ಸಿಲುಕಿರುವ ಕುರಿತು ಬೆಳಕು ಚೆಲ್ಲುತ್ತದೆ. 2009ರಿಂದ 2013ರ ನಡುವೆ ಭಾರತದಲ್ಲಿ 3,350 ಚಿಪ್ಪುಹಂದಿಗಳ ಹತ್ಯೆಯಾಗಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಳ್ಳುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವುದು ಸಾಮಾನ್ಯ. ‘ಟ್ರಾಫಿಕ್‌’ ವರದಿಯನ್ವಯ ಪ್ರತಿವರ್ಷ 10ರಿಂದ 15 ಸಾವಿರ ನಕ್ಷತ್ರ ಆಮೆಗಳು ವಿದೇಶಗಳಿಗೆ ಕಳ್ಳಸಾಗಾಣಿಕೆಯಾಗುತ್ತಿವೆ. 

ಭಾರತದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ. ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವೂ ನಡೆಯುತ್ತಿಲ್ಲ. ಮನೆ, ಮಹಲುಗಳ ಗೋಡೆಗಳ ಮೇಲೆ ಅಲಕೃಂತಗೊಂಡ ಕಲಾಕೃತಿಗಳನ್ನು ನೋಡಿ ಸಂಭ್ರಮಿಸುತ್ತೇವೆ. ಈ ಕಲಾಕೃತಿಗಳ ರಚನೆಗೆ ಬಳಸಿರುವ ಕುಂಚಗಳ ತಯಾರಿಕೆಗೆ ಅದೆಷ್ಟು ಮುಂಗುಸಿಗಳು ಕೂದಲು ನೀಡಿ ಜೀವತೆತ್ತಿವೆ ಎನ್ನುವುದನ್ನು ಯೋಚಿಸಿದರೆ ನಮ್ಮ ಸಂತೋಷದ ಹಿಂದಿನ ಕ್ರೌರ್ಯ ಭಯಹುಟ್ಟಿಸುವಂತಿದೆ. ವನ್ಯಜೀವಿಗಳ ಬೇಟೆ ಹಾಗೂ ಮಾರಾಟದ ಮೂಲಕ ಮನುಕುಲದ ನಾಳೆಗಳ ಸಂತೋಷವನ್ನೇ ನಾಶಮಾಡುತ್ತಿರುವ ಕಟು ವಾಸ್ತವವನ್ನು ಕಳ್ಳಬೇಟೆಗಾರರಿಗೆ ಹಾಗೂ ದಂಧೆಕೋರರಿಗೆ ಅರ್ಥ ಮಾಡಿಸುವುದು ಹೇಗೆ? 

***
ಆನೆಗಳ ಮಾರಣಹೋಮ
ದಕ್ಷಿಣ ಏಷ್ಯಾದ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಆನೆ ದಂತಗಳಿಂದ ತಯಾರಿಸಿದ ಕಲಾಕೃತಿಗಳಿಗೆ ಅಪಾರ ಬೇಡಿಕೆ ಇದೆ. ಚೀನಾ, ಫಿಲಿಪೈನ್ಸ್‌, ಥೈಲ್ಯಾಂಡ್‌ನಲ್ಲಿ ಆನೆ ದಂತದಿಂದ ತಯಾರಿಸಿದ ದೇವರ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ದಂತದ ಆಭರಣ ಧರಿಸುವುದು ಅಲ್ಲಿನವರಿಗೆ ಪ್ರತಿಷ್ಠೆಯ ಸಂಕೇತ. ವಾದ್ಯ ಪರಿಕರಗಳ ತಯಾರಿಕೆಯಲ್ಲೂ ಆನೆ ದಂತ ಬಳಸುತ್ತಾರೆ. ಜಪಾನ್‌ನಲ್ಲಿ ಭಾರತದಲ್ಲಿರುವಂತೆ ಪೆನ್‌ಗಳನ್ನು ಬಳಸಿ ಸಹಿ ಹಾಕುವುದಿಲ್ಲ. ಅಲ್ಲಿನವರು ತಮ್ಮದೇ ಆದ ಸಹಿ ಮುದ್ರೆ ಹೊಂದಿರುತ್ತಾರೆ. ಪ್ರತಿಷ್ಠಿತರ ಮನೆಗಳಲ್ಲಿ ಆನೆ ದಂತಗಳಿಂದ ತಯಾರಿಸಿದ ಠಸ್ಸೆಗಳಿರುತ್ತವೆ.

ಭಾರತದಲ್ಲಿಯೂ ದಂತಕ್ಕಾಗಿ ಆನೆಗಳು ಹತ್ಯೆಯಾಗುತ್ತಿವೆ. ಚೀನಾದಲ್ಲಿನ ಮಧ್ಯಮ ವರ್ಗದ ಜನರಿಗೆ ಆನೆಗಳ ದಂತದಿಂದ ತಯಾರಿಸಿದ ವಸ್ತುಗಳ ಮೇಲೆ ಅಪರಿಮಿತ ಮೋಹ. ಆಫ್ರಿಕಾ ದೇಶಗಳಲ್ಲಿನ ಬಡತನ, ರಕ್ಷಣಾ ವೈಫಲ್ಯದ ಪರಿಣಾಮ ಆಫ್ರಿಕನ್‌ ಆನೆಗಳ ಹತ್ಯೆ ಅವ್ಯಾಹತವಾಗಿದೆ. ಚೀನಾ, ಮಲೇಷ್ಯಾ, ಜಪಾನ್‌, ಥೈಲ್ಯಾಂಡ್‌, ವಿಯೆಟ್ನಾಂ, ಫಿಲಿಫೈನ್ಸ್‌ ದೇಶದ ಜನರ ಬೇಡಿಕೆಗಾಗಿ ಪ್ರತಿವರ್ಷ 30 ಸಾವಿರ ಆಫ್ರಿಕನ್‌ ಆನೆಗಳು ಜೀವಕಳೆದುಕೊಳ್ಳುತ್ತಿವೆ.

ತಾಂಜಾನಿಯಾ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ವರದಿಯು ಆಫ್ರಿಕನ್‌ ಆನೆಗಳ ಮಾರಣಹೋಮಕ್ಕೆ ಕನ್ನಡಿ ಹಿಡಿದಿದೆ. ಕಳೆದ 5 ವರ್ಷದಲ್ಲಿ ಆ ದೇಶದಲ್ಲಿ ಶೇ 60ರಷ್ಟು ಆನೆಗಳು ದಂತಕ್ಕಾಗಿ ಜೀವತೆತ್ತಿವೆ. ಆಫ್ರಿಕಾದ ಇತರೇ ದೇಶಗಳಲ್ಲಿರುವ ಆನೆಗಳ ದಯನೀಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಆಫ್ರಿಕಾದ ದೇಶಗಳಲ್ಲಿ ಆನೆ ದಂತ ಕಳ್ಳಸಾಗಾಣಿಕೆಯ ಹಿಂದೆ ಭಯೋತ್ಪಾದನಾ ಸಂಘಟನೆಗಳ ಕೈವಾಡವಿರುವುದು ಸಾಬೀತಾಗಿದೆ. ಭಾರತದಲ್ಲಿ ಹುಲಿ ಕಳ್ಳಬೇಟೆ ಮತ್ತು ಆನೆ ದಂತದ ವ್ಯಾಪಾರದಲ್ಲಿ ಭಯೋತ್ಪಾದನಾ ಸಂಘಟನೆಗಳು ತೊಡಗಿಸಿಕೊಂಡಿರುವ ಶಂಕೆಯಿದೆ.

***
ಕಳ್ಳಬೇಟೆಗಾರರ ಜಾಡುಹಿಡಿದು...

ಉತ್ತರ ಭಾರತದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಳ್ಳಬೇಟೆಗಾರರು ಹೆಚ್ಚಾಗಿದ್ದಾರೆ. ಸಾಂಪ್ರದಾಯಿಕ ಬೇಟೆಗಾರರಾದ ಬೆಹೆಲಿಯಾ, ಅಂಬಲ್ ಘರ್, ಬಡಕ, ಮೋಂಗಿಯಾ, ಬವಾರಿಯಾ, ಮಾಂಗ್ಲಿಯಾ, ಪರ್ದಿ, ಬೊಯಾ, ಕೈಕಡ್, ಕಾರವಾಲ್ ನಾಟ್, ನಿರ್ಶಿಕಾರಿ, ಪಿಚಾರಿ, ವಲಯಾರ, ಯೆನಡಿ, ಚಕ್ಮಾ, ಮಿಜೊ, ಬರು, ಸೊಲುಂಗ್, ನಯಿಷಿ ಬುಡಕಟ್ಟು ಜನರನ್ನು ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ’ (ಎನ್‌ಟಿಸಿಎ) ಗುರುತಿಸಿದೆ.

ದೇಶದಲ್ಲಿ ಈ ಬೇಟೆಗಾರರ ಸುಮಾರು 5 ಸಾವಿರ ಕುಟುಂಬಗಳಿವೆ. ಈ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಫಲಶ್ರುತಿ ಸಿಕ್ಕಿಲ್ಲ. ಕುಟುಂಬಗಳಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿ ಬೇಟೆಗಾರಿಕೆಯಿಂದ ಹೊರತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಮರ್ಪಕ ಯೋಜನೆಗಳು ಅನುಷ್ಠಾನಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT