ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಯಲ್ಲಿ ಹಣ ಇಡಿ, ಕಡಿತ ಆಗಿದೆಯೇ ನೋಡಿ

Last Updated 25 ಮೇ 2016, 11:13 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ)ಗಳ ವ್ಯಾಪ್ತಿಗೊಳಪಟ್ಟವರ ವಿಮೆ ಕಂತು ಪಾವತಿಯನ್ನು ಮೇ 25ರಿಂದ 31ರ ವರೆಗೆ ಆಟೊ ಡೆಬಿಟ್‌ ಮೂಲಕ ಆಯಾ ಬ್ಯಾಂಕ್‌ಗಳೇ ಮಾಡಲಿವೆ.

ಈ ವಿಮೆಗಳನ್ನು ಹೊಂದಿರುವವರು ಅವುಗಳ ಮುಂದುವರೆಸುವಿಕೆ (ರಿನಿವಲ್‌)ಗಾಗಿ ಬ್ಯಾಂಕ್‌ಗಳಿಗೆ ಹೋಗಿ ಸರದಿ ಸಾಲಿನಲ್ಲಿ ನಿಂತು ಹಣ ಪಾವತಿಸಬೇಕಿಲ್ಲ. ತಮ್ಮ ಜೀವಿತ ಪ್ರಮಾಣ ಪತ್ರ ನೀಡುವ ಅವಶ್ಯಕತೆಯೂ ಇಲ್ಲ.  ಯಾವ ಬ್ಯಾಂಕ್‌ ಶಾಖೆಯಲ್ಲಿ ಆ ವಿಮೆ ಮಾಡಿಸಿದ್ದಾರೋ ಅಲ್ಲಿಯ ಖಾತೆಯಲ್ಲಿ ಕಂತು ಪಾವತಿಗೆ ಬೇಕಿರುವ ಪಿಎಂಜೆಜೆಬಿವೈಗೆ ₹330 ಮತ್ತು ಪಿಎಂಎಸ್‌ಬಿವೈಗೆ ₹12 ಹಣ ಜಮೆ ಇರುವಂತೆ ನೋಡಿಕೊಳ್ಳುವುದು ಕಡ್ಡಾಯ.

ಖಾತೆಯಲ್ಲಿ ಹಣ ಇದ್ದರೂ ಸಾಲ ಮತ್ತಿತರ ಕಾರಣಗಳಿಗಾಗಿ ಬ್ಯಾಂಕ್‌ಗಳವರು ಅವರ ಖಾತೆಯಿಂದ ಹಣ ಪಾವತಿ ತಡೆ ಹಿಡಿದಿದ್ದರೆ ಆಟೊ ಡೆಬಿಟ್‌ ಸೌಲಭ್ಯದ ಮೂಲಕ ಈ ವಿಮೆಗಳ ಕಂತು ಪಾವತಿಯಾಗುವುದಿಲ್ಲ.

ಒಂದೊಮ್ಮೆ ಹಣ ಇದ್ದರೂ ತಾಂತ್ರಿಕ ಕಾರಣಗಳಿಗಾಗಿ ವಿಮೆ ಕಂತು ಪಾವತಿ ಆಗಿರದಿದ್ದರೆ ಮತ್ತು ಖಾತೆಯಲ್ಲಿ ಹಣ ಇಲ್ಲದ ಕಾರಣಕ್ಕೆ ವಿಮೆ ಕಂತು ಪಾವತಿ ಆಗದವರು ಮೇ 31ರ ನಂತರ ಆಯಾ ಬ್ಯಾಂಕ್‌ ಶಾಖೆಗೆ ಹೋಗಿ ಸ್ವಯಂ ದೃಢೀಕರಣ ಪತ್ರ ನೀಡಬೇಕಾಗುತ್ತದೆ. ಈ ಸ್ವಯಂ ದೃಢೀಕರಣ ನಮೂನೆ ಬ್ಯಾಂಕ್‌ನಲ್ಲಿಯೇ ದೊರೆಯುತ್ತದೆ.

ಸ್ಟೇಟ್‌ ಬ್ಯಾಂಕ್‌ ಸಮೂಹದ ಬ್ಯಾಂಕ್‌ಗಳು ಸ್ಟೇಟ್‌ ಬ್ಯಾಂಕ್‌ ಜೀವ ವಿಮೆ ಸಂಸ್ಥೆಯ ಮೂಲಕ, ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಭಾರತೀಯ ಜೀವ ವಿಮಾ ನಿಗಮ ಮತ್ತಿತರೆ ವಿಮಾ ಸಂಸ್ಥೆಗಳ ಮೂಲಕ ‘ತಮ್ಮ ಗ್ರಾಹಕರಿಗೆ’ ಈ ವಿಮೆಗಳ ಸೌಲಭ್ಯ ಕಲ್ಪಿಸಿವೆ.

ವಿಮೆ ಕಂತು ಮರುಪಾವತಿ ಕುರಿತು ಈ ವಿಮಾ ಸಂಸ್ಥೆಗಳು ಗ್ರಾಹಕರಿಗೆ ಈಗಾಗಲೇ ಎಸ್‌ಎಂಎಸ್‌ಗಳನ್ನೂ ರವಾನಿಸಿವೆ. ಪಿಎಂಜೆಜೆಬಿವೈ ಅಡಿ ರಾಜ್ಯದಲ್ಲಿ 29 ಲಕ್ಷ, ಜಿಲ್ಲೆಯಲ್ಲಿ40 ಸಾವಿರ ಹಾಗೂ ಪಿಎಂಎಸ್‌ಬಿವೈ ಅಡಿ ರಾಜ್ಯದಲ್ಲಿ 61.82ಲಕ್ಷ, ಜಿಲ್ಲೆಯಲ್ಲಿ 90 ಸಾವಿರದಷ್ಟು ಜನ ವಿಮೆ ವ್ಯಾಪ್ತಿಗೊಳಪಟ್ಟಿದ್ದಾರೆ.

‘ಇತರೆ ವಿಮೆಗಳಂತೆ ಈ ವಿಮೆಗೆ ಗ್ರಾಹಕರಿಗೆ ವಿಮಾ ಸಂಸ್ಥೆಯಿಂದ ಬಾಂಡ್‌ ಬರಲ್ಲ. ಆದರೆ, ಗ್ರಾಹಕರು ತಮ್ಮ ಬ್ಯಾಂಕ್‌ಗಳ ಮೂಲಕ ಸರ್ಟಿಫಿಕೆಟ್‌ ಆಫ್‌ ಇನ್ಶೂರೆನ್ಸ್ ಪಡೆದುಕೊಳ್ಳಬಹುದು’ ಎಂಬುದು  ಜಿಲ್ಲಾ ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ರಮೇಶ ಕೆ.ದಾಬಡೆ ಅವರ ಸಲಹೆ.

‘ಈ ಎರಡೂ ಯೋಜನೆಗಳ ವಿಮೆ ಕಂತು ಪಾವತಿ ಮೇ 25ರಿಂದ ಮೇ 31ರ ವರೆಗೆ ನಡೆಯಲಿದೆ. ಬಹುಪಾಲು ಬ್ಯಾಂಕ್‌ಗಳು ಮೇ 25ರಂದೇ ಖಾತೆಯಿಂದ ಹಣ ಕಡಿತಗೊಳಿಸಿ, ಈ ವಿಮೆ ಕಂತು ಪಾವತಿಸಲಿವೆ. ಕುರಿತು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್‌ ಕಳಿಸಲಿವೆ. ಎಸ್‌ಎಂಎಸ್‌ ಬರದಿದ್ದರೆ ತಮ್ಮ ಖಾತೆಯಿಂದ ಕಂತಿನ ಹಣ ಕಡಿತವಾಗಿದೆಯೇ ಎಂಬುದನ್ನು ಗ್ರಾಹಕರು ಪರಿಶೀಲಿಸಿಕೊಳ್ಳಬೇಕು. ಖಾತೆಯಿಂದ ಕಂತಿನ ಹಣ ಕಡಿತವಾಗಿದ್ದರೆ ಆ ವಿಮೆ ರಿನಿವಲ್‌ ಆಗಿದೆ ಎಂದೇ ಅರ್ಥ’ ಎನ್ನುತ್ತಾರೆ ಅವರು.

2 ಮತ್ತು 4 ವರ್ಷದ ಅವಕಾಶ: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ವರ್ಷಕ್ಕೆ ₹12)ಯ ವಿಮೆ ಹೊಂದಿರುವವರು, ಎರಡು ಮತ್ತು ನಾಲ್ಕು ವರ್ಷಗಳ ವಿಮೆ ಕಂತನ್ನು ಏಕಕಾಲಕ್ಕೆ ಪಾವತಿಸುವ ಅವಕಾಶ ಇದೆ. ಬ್ಯಾಂಕ್‌ಗಳಿಗೆ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವಾಗ ಅದರಲ್ಲಿರುವ ಕಾಲಂನಲ್ಲಿ ಈ ಕುರಿತು ಮಾಹಿತಿ ನಮೂದಿಸಿ 2, 4 ವರ್ಷಗಳ ಕಂತನ್ನು ಪಾವತಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ವಿಮಾ ಯೋಜನೆಗಳ ಮಾಹಿತಿ
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ:  ಇದು ₹2 ಲಕ್ಷ ಜೀವ ವಿಮೆ. ವಾರ್ಷಿಕ ಕಂತು ₹330. ಅರ್ಹತೆ ವಯಸ್ಸು 18ರಿಂದ 50 ವರ್ಷ.  ಯಾವುದೇ ಕಾರಣಕ್ಕೆ ಸಾವು ಸಂಭವಿಸಿದರೂ ಅವರ ವಾರಸುದಾರರಿಗೆ ₹2 ಲಕ್ಷ ಪರಿಹಾರ ನೀಡಲಾಗುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ: ಇದು ₹2 ಲಕ್ಷ ಪರಿಹಾರ ನೀಡುವ ಅಪಘಾತ ವಿಮೆ. ವಾರ್ಷಿಕ ಕಂತು ₹12. ಅರ್ಹತೆ ವಯಸ್ಸು 18ರಿಂದ 70 ವರ್ಷ.
ಅಪಘಾತದಲ್ಲಿ ಮೃತಪಟ್ಟರೆ ಅವರ ವಾರಸುದಾರರಿಗೆ ₹2 ಲಕ್ಷ ವಿಮೆ ದೊರೆಯುತ್ತದೆ. ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯತೆಗೆ ಒಳಗಾದರೆ ₹2 ಲಕ್ಷ, ಭಾಗಶಃ ಅಂಗವೈಕಲ್ಯತೆಗೆ ಒಳಗಾದರೆ ₹1 ಲಕ್ಷ ಪರಿಹಾರ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT