ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಉದ್ಯೋಗಿಗಳಿಗೆ 26 ವಾರ ಹೆರಿಗೆ ರಜೆ?

Last Updated 1 ಜುಲೈ 2016, 22:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈಗ ಲಭ್ಯವಿರುವ 12 ವಾರಗಳ ಹೆರಿಗೆ ರಜೆ ಸೌಲಭ್ಯವನ್ನು 26 ವಾರಗಳಿಗೆ ವಿಸ್ತರಿಸಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

‘ಹೆರಿಗೆ ರಜೆಯ ನಂತರ ಮಹಿಳೆಯರು ಮನೆಯಿಂದಲೇ ಕೆಲಸ ಮಾಡಲು ಈಗ ಕೆಲವು ಕಂಪೆನಿಗಳಷ್ಟೇ ಅವಕಾಶ ನೀಡುತ್ತಿವೆ. ಖಾಸಗಿ ವಲಯದಲ್ಲಿ ದುಡಿಯುವ ಎಲ್ಲಾ ಮಹಿಳೆಯರಿಗೆ ಈ ಸೌಲಭ್ಯ ಇಲ್ಲ. ಹೀಗಾಗಿ ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ’ ಎಂದು ಅವರು ವಿವರಿಸಿದ್ದಾರೆ.

‘ತಿದ್ದುಪಡಿಗೆ ಶೀಘ್ರವೇ ಸಂಪುಟದ ಅನುಮೋದನೆ ಪಡೆದು, ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ಸಚಿವಾಲಯ ಪ್ರಯತ್ನಿಸಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾಲ್‌ಗಳು ಮತ್ತು ಅಂಗಡಿಗಳು ದಿನದ 24 ಗಂಟೆಗಳೂ ತೆರೆದಿರಲು ಈಗ ಅವಕಾಶ ನೀಡಲಾಗಿದೆ. ಇದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸೂಕ್ತ ಸೌಲಭ್ಯ, ಅಗತ್ಯ ಭದ್ರತೆ ಇದ್ದರೆ ಮಹಿಳೆಯರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶವಿರಲಿದೆ. ಆದರೆ ಒಟ್ಟು ಸಿಬ್ಬಂದಿ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ನಿಗದಿಯಷ್ಟಿರಬೇಕು. ಇದರಿಂದ ಔದ್ಯೋಗಿಕ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ನೌಕರರಿಗೆ 180 ದಿನ: ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ  ಸದ್ಯ 180 ದಿನಗಳ ಹೆರಿಗೆ ರಜೆ ಇದೆ. ಇದು 2012ರಲ್ಲಿ ಜಾರಿಯಾಗಿದೆ. ಇದಕ್ಕೂ ಮೊದಲು ಕೇವಲ 90 ದಿನ ಮಾತ್ರ ಹೆರಿಗೆ ರಜೆ ನೀಡಲಾಗುತ್ತಿತ್ತು.

‘ರಾಜ್ಯ ಸರ್ಕಾರಿ ನೌಕರರ ಹೆರಿಗೆ ರಜೆಯನ್ನು 180 ದಿನಗಳಿಂದ ಇನ್ನಷ್ಟು ಹಚ್ಚಿಸಲು ಸರ್ಕಾರಕ್ಕೆ ಯಾವುದೇ ಬೇಡಿಕೆ ಸಲ್ಲಿಸಿಲ್ಲ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೇಂದ್ರ ನೌಕರರಿಗೆ ಸಿಸಿಎಲ್‌: ರಾಜ್ಯ ಸರ್ಕಾರಿ ನೌಕರರಂತೆ ಕೇಂದ್ರ ಸರ್ಕಾರಿ ನೌಕರರಿಗೂ 180 ದಿನಗಳ ಹೆರಿಗೆ ರಜೆ  ಸೌಲಭ್ಯವಿದೆ. ಇದರೊಂದಿಗೆ ಮಕ್ಕಳ ಪಾಲನಾ ರಜೆ ( Child care leave-CCL) ಸೌಲಭ್ಯವೂ ಇದೆ. ಸಿಸಿಎಲ್‌ 6 ನೇ ವೇತನ ಆಯೋಗ ಜಾರಿಯಾದ ನಂತರ ಕಾರ್ಯರೂಪಕ್ಕೆ ಬಂದಿದೆ. ಇದಕ್ಕೂ ಮೊದಲು ಕೇವಲ 180 ದಿನ ರಜೆ ಇತ್ತು. 

ಸಿಸಿಎಲ್‌ ಅನ್ನು ಮಗುವಿಗೆ 18 ವರ್ಷ ತುಂಬುವ ಒಳಗೆ ಯಾವಾಗಲಾದರೂ ತೆಗೆದುಕೊಳ್ಳಬಹುದು. 730 ದಿನ ಈ ರಜೆಯನ್ನು ತೆಗೆದುಕೊಳ್ಳಬಹುದು. 180 ದಿನ ರಜೆ ತೆಗೆದುಕೊಂಡು ಅದರೊಂದಿಗೆ 730 ದಿನ ಸಿಸಿಎಲ್‌ ಬೇಕಾದರೆ ಮುಂದುವ ರಿಸಲು ಸಾಧ್ಯವಿಲ್ಲ. ಒಂದೆರಡು ದಿನ ಕೆಲಸ ಮಾಡಿ ಸಿಸಿಎಲ್‌ಗೆ ಅರ್ಜಿ ಸಲ್ಲಿಸಬೇಕು. ಇದಲ್ಲದೆ ವಿಶೇಷ ವೇತನ ರಜೆ (Special pay leave) ಸೌಲಭ್ಯವೂ ಇದೆ. ಆದರೆ ಇದಕ್ಕೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರ ಅನುಮತಿ ಪಡೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT