ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ಗೂ ಬೇಡಿಕೆ ಹೆಚ್ಚಿಲ್ಲ

ಎರಡನೇ ದಿನ ದರ ಹಚ್ಚಳ, ಪ್ರಯಾಣಿಕರ ಚೌಕಾಸಿ
Last Updated 26 ಜುಲೈ 2016, 20:13 IST
ಅಕ್ಷರ ಗಾತ್ರ

ಬೆಂಗಳೂರು: ಹೊರಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಕ್ಕೆ ತೆರಳುವ ಕೆಲವು ಪ್ರಯಾಣಿಕರು ಖಾಸಗಿ ಬಸ್‌ಗಳ ಮೊರೆ ಹೋದರು. ಖಾಸಗಿ ಬಸ್‌ಗಳಿಗೆ ಮುಷ್ಕರದಿಂದಾಗಿ ಸ್ವಲ್ಪ ಮಟ್ಟಿನ ಬೇಡಿಕೆ ಹೆಚ್ಚಿದೆ.

‘ಸಾಮಾನ್ಯವಾಗಿ ಜುಲೈ ತಿಂಗಳು ನಮ್ಮ ಬಸ್‌ಗಳಿಗೆ ಬೇಡಿಕೆ ಕಡಿಮೆ. ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ನಮ್ಮ ಬಸ್‌ಗಳಿಗೆ  ಬೇಡಿಕೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿರುವುದು ನಿಜ.  ಆದರೆ ನಮ್ಮ ವಹಿವಾಟಿನಲ್ಲಿ ಭಾರಿ ಹೆಚ್ಚಳವೇನೂ ಆಗಿಲ್ಲ’ ಎನ್ನುತ್ತಾರೆ  ಖಾಸಗಿ ಬಸ್‌ ಸೇವೆ ಒದಗಿಸುವ ಸಂಸ್ಥೆಗಳ ಟಿಕೆಟ್‌ ಬುಕಿಂಗ್‌ ಏಜೆಂಟರು.

‘ಸೋಮವಾರ ಹಾಗೂ ಮಂಗಳವಾರ ನಗರದಿಂದ ಹೊರ ಜಿಲ್ಲೆಗೆ ಪ್ರಯಾಣಿಸುವವರು ಕಡಿಮೆ. ಹಾಗಾಗಿ ಸರ್ಕಾರಿ ಬಸ್‌ಗಳು ಕಾರ್ಯ ನಿರ್ವಹಿಸದಿದ್ದರೂ ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿಲ್ಲ. ಮುಷ್ಕರ ವಾರಾಂತ್ಯದವರೆಗೆ ಮುಂದುವರಿದರೆ  ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚ ಬಹುದು’ ಎನ್ನುತ್ತಾರೆ ರಾಜಾಜಿನಗರದ ‘ಶೋಭಾ ಟ್ರಾವೆಲ್ಸ್‌ ಆಂಡ್‌ ಹಾಲಿಡೇಸ್‌’ನ  ಕರುಣಾಕರ್‌.  

ಬಿಎಂಟಿಸಿ 100ಕ್ಕೂ ಅಧಿಕ ಬಸ್‌ಗಳನ್ನು ಕಾರ್ಪೊರೇಟ್‌ ಕಂಪೆನಿಗಳಿಗೆ ಒದಗಿಸುತ್ತದೆ. ಮುಷ್ಕರದ ಬಗ್ಗೆ ಮುಂಚೆಯೇ ಮಾಹಿತಿ ಇದ್ದುದರಿಂದ ಇಂತಹ ಕಂಪೆನಿಗಳು ಕ್ಯಾಬ್‌ ಸೇವೆಯನ್ನು ಗೊತ್ತುಪಡಿಸಿದ್ದವು. ಕೆಲವು ಕಂಪೆನಿಗಳು ಸಿಬ್ಬಂದಿಗೆ ಕಾರ್‌ಪೂಲಿಂಗ್‌ ಮಾಡಿಕೊಳ್ಳುವಂತೆ ಸೂಚಿಸಿದ್ದವು. 

ಕ್ಯಾಬ್‌ಗಳಿಗೂ ಬೇಡಿಕೆಯಿಲ್ಲ: ‘ಮುಷ್ಕರದಿಂದಾಗಿ ನಮಗೆ ಹೆಚ್ಚು ಬಾಡಿಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆ ಹುಸಿಯಾಗಿದೆ’ ಎಂದು ಓಲಾ ಕ್ಯಾಬ್‌ನ ಚಾಲಕ ಅಶೋಕ್‌ ತಿಳಿಸಿದರು.

ನಿನ್ನೆ ₹20, ಇಂದು ₹40! :  ಬನಶಂಕರಿಗೆ  ₹50, ಮಾರತ್‌ಹಳ್ಳಿಗೆ ₹70, ಹೆಬ್ಬಾಳಕ್ಕೆ ₹35, ಯಲಹಂಕಕ್ಕೆ ₹50, ಅರಶಿನ ಕುಂಟೆಗೆ ₹70...

–ಮೆಜೆಸ್ಟಿಕ್‌ನಿಂದ  ಹೊರಡುವ  ಖಾಸಗಿ ವಾಹನಗಳು ಪ್ರಯಾಣಿಕರಿಂದ ಕೇಳಿದ ದರಗಳು ಇವು. ಪೊಲೀಸರು ಗದರಿದಾಗ ಒಂದಿಷ್ಟು ಚೌಕಾಸಿ ಮಾಡಿ ಬಸ್‌ ಹತ್ತಿಸಿಕೊಂಡು ಹೋದರು.

‘ಮುಷ್ಕರವನ್ನು ಖಾಸಗಿ ವಾಹನಗಳು ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಸೋಮವಾರ ಸುಂಕದಕಟ್ಟೆಗೆ ₹20 ತೆಗೆದುಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಕೆಲವರು ಸ್ವಲ್ಪ ಜಾಸ್ತಿ ಮಾಡಿದರು. ಈಗ ₹40 ಕೇಳುತ್ತಿದ್ದಾರೆ. ಹೀಗಾದರೆ ಹೇಗೆ? ನೋಡಿ ಪೊಲೀಸ್ರೇ’ ಎಂದು ಮಹಿಳಾ ಪ್ರಯಾಣಿಕರೊಬ್ಬರು ಪೊಲೀಸ್‌ ಪೇದೆಯೊಬ್ಬರ ಗಮನ ಸೆಳೆದರು.

‘ಸರ್ಕಾರಿ ಬಸ್‌ಗಳಷ್ಟು  ದುಡ್ಡು ಪಡೆದರೆ ನಮಗೆ ನಷ್ಟ ಗ್ಯಾರಂಟಿ. ದಿನಾಲೂ ಇಷ್ಟೊಂದ್ ಜನಾ ಬರ್ತಾರಾ, ಲಾಭ ಮಾಡಿಕೊಳ್ಳಲು? ನಿನ್ನೆ ಇದ್ದಷ್ಟೂ  ಜನ ಇಂದಿಲ್ಲ’ ಎಂದು ಖಾಸಗಿ ವಾಹನದ ಕ್ಲೀನರ್‌ ಗೊಣಗುತ್ತಲೇ ಅವರನ್ನು ಬಸ್‌ ಹತ್ತಿಸಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT