ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ 11 ಮಾರುಕಟ್ಟೆ ಅಭಿವೃದ್ಧಿ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಸೇರಿದ 11 ಮಾರುಕಟ್ಟೆಗಳನ್ನು ಖಾಸಗಿ ಸಹಭಾಗಿತ್ವ­ದಲ್ಲಿ ಅಭಿವೃದ್ಧಿಪಡಿಸಲು ಬುಧವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ನಿರ್ಣಯ ಕೈಗೊಳ್ಳಲಾಯಿತು.

ಮಾರುಕಟ್ಟೆಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಅಗತ್ಯವನ್ನು ಆಡಳಿತ ಪಕ್ಷ­ವಾದ ಬಿಜೆಪಿ ಸದಸ್ಯರು ಪ್ರಬಲವಾಗಿ ಪ್ರತಿಪಾದಿಸಿದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸದ­ಸ್ಯರು ಅದಕ್ಕೆ ವಿರೋಧ ವ್ಯಕ್ತಪಡಿಸಿ ಮೇಯರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು. ವಿರೋಧ ಪಕ್ಷಗಳ ಸದಸ್ಯರ ಧಿಕ್ಕಾರ ಘೋಷಣೆ ನಡುವೆಯೇ ನಿರ್ಣಯವನ್ನು ಅಂಗೀಕರಿಸಲಾಯಿತು.

ಜಾನ್ಸನ್‌, ಆಸ್ಟಿನ್‌ಟೌನ್‌, ರಿಚರ್ಡ್‌ ಸ್ಕ್ವೇರ್‌, ಮೋರ್‌ ರಸ್ತೆ, ಮರ್ಫಿ ಟೌನ್‌, ಮಾಗಡಿ ರಸ್ತೆ, ಶ್ರೀರಾಂಪುರ, ಅಕ್ಕಿಪೇಟೆ, ಕಬ್ಬನ್‌ ಪೇಟೆ, ಚಿಕ್ಕಮಾವಳ್ಳಿ ಹಾಗೂ ಎಸ್‌.ಕೆ.ಆರ್‌. ಮಟನ್‌ ಮಾರುಕಟ್ಟೆ­ಗಳನ್ನು ಬಿಬಿಎಂಪಿ– ಖಾಸಗಿ ಜಂಟಿ ಸಹ­ಭಾ­ಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕು ಮತ್ತು ಅದಕ್ಕಾಗಿ ಇ–ಟೆಂಡರ್‌ ಕರೆಯ­ಬೇಕು ಎಂದು ಸಭೆ ತೀರ್ಮಾನಿಸಿತು.

ಬಂಡಿಮೋಟ್‌, ಒಣಮೀನು, ಹಲ­ಸೂರು, ಸಿರ್ಸಿ ವೃತ್ತ, ದರ್ಜಿಪೇಟೆ, ಬಳ್ಳಾ­ಪುರ, ಬಳೇಪೇಟೆ ಮತ್ತು ಮಲ್ಲೇಶ್ವರ ಎಂಟನೇ ಕ್ರಾಸ್‌ನ ಮಟನ್‌ ಮಾರುಕಟ್ಟೆ­ಯನ್ನು ಬಿಬಿಎಂಪಿ ವತಿಯಿಂ­ದಲೇ ಅಭಿವೃ­ದ್ಧಿ­ಪಡಿಸಲು ನಿರ್ಣಯ ಕೈಗೊಳ್ಳಲಾಯಿತು. ಈ ಎಲ್ಲ ಮಾರುಕಟ್ಟೆಗಳು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ­ಲ್ಲಿವೆ. ಜಾನ್ಸನ್‌ ಮಾರುಕಟ್ಟೆ 100 ವರ್ಷ­ದಷ್ಟು ಹಳೆಯದಾದರೆ, ಉಳಿ­ದವು 20 ವರ್ಷ­ದಿಂದ 80 ವರ್ಷದಷ್ಟು ಹಳೆಯ ಮಾರುಕಟ್ಟೆಗಳು ಆಗಿವೆ.

ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಬಿ.ಎನ್‌. ಮಂಜುನಾಥ್‌ ರೆಡ್ಡಿ, ‘ಮಾರುಕಟ್ಟೆಗಳ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಪಾಲಿಕೆ­ಯಿಂದಲೇ ಅವುಗಳನ್ನು ಮರು ನಿರ್ಮಾಣ ಮಾಡಬೇಕು. ಖಾಸಗಿ ಸಹ­ಭಾ­ಗಿತ್ವದ ಹೆಸರಿನಲ್ಲಿ ಅವುಗಳನ್ನು ಪರ­ಭಾರೆ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಜೆಡಿಎಸ್‌ ನಾಯಕ ಆರ್‌. ಪ್ರಕಾಶ್‌, ‘ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ಕೊಟ್ಟ ಗರುಡಾ ಮಾಲ್‌ ಕಥೆ ಈಗೇನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಡವರು ಯಾರೂ ಅಲ್ಲಿ ಕಾಲಿ­ಡುವ ಹಾಗಿಲ್ಲ. ಇಂತಹ ಮಾರು­ಕಟ್ಟೆ­ಗಳು ನಮಗೆ ಬೇಕಿಲ್ಲ. ಬಿಬಿಎಂಪಿ ಮಾರು­ಕಟ್ಟೆ­ಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಪಾಪದ ಕೆಲಸ ಮಾಡು­ವುದು ಬೇಡ’ ಎಂದು ಆಗ್ರಹಿಸಿದರು.

‘ಖಾ­ಸಗಿ ಸಂಸ್ಥೆಗಳಿಗೆ ವಹಿಸಿಕೊಡುವ ಬದಲು ನಾವೇ ಹಂತ–ಹಂತವಾಗಿ ಈ ಮಾರುಕಟ್ಟೆಗಳನ್ನು ಕಟ್ಟೋಣ’ ಎಂದು ಸಲಹೆಯನ್ನೂ ನೀಡಿದರು. ಕಾಚರಕನ­ಹಳ್ಳಿ ವಾರ್ಡ್‌ ಸದಸ್ಯ ಪದ್ಮನಾಭ ರೆಡ್ಡಿ, ‘ಆದಾಯವನ್ನೇ ನೀಡದ ಶಿಥಿಲಾವಸ್ಥೆ­ಯಲ್ಲಿ ಇರುವ ಈ ಮಾರುಕಟ್ಟೆ­ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಿದರೆ ತಪ್ಪೇನು’ ಎಂದು ಪ್ರಶ್ನಿಸಿದರು. ‘ಈ ಮಾರುಕಟ್ಟೆಗಳ ಪ್ರತಿ ಮಳಿಗೆ­ಯಿಂದ ದಿನಕ್ಕೆ ಒಂದು ರೂಪಾಯಿ ಬಾಡಿ­ಗೆಯೂ ಸಿಗುವುದಿಲ್ಲ. ಅವುಗಳಿಂದ ಬರುವ ಆದಾಯದಿಂದ ನಿರ್ವಹಣೆ ಮಾಡಲು ಆಗುತ್ತಿಲ್ಲ’ ಎಂದು ಹೇಳಿದರು.

ನಾಗಪುರ ವಾರ್ಡ್‌ ಸದಸ್ಯ ಎಸ್‌. ಹರೀಶ್‌, ‘ಕಾಂಗ್ರೆಸ್‌ ಆಡಳಿತದ ಅವಧಿ­ಯಲ್ಲಿ ಗರುಡಾ ಮಾಲ್‌, ಮಹಾರಾಜ ಕಾಂಪ್ಲೆಕ್ಸ್‌ಗಳನ್ನು ಖಾಸಗಿ ಸಹಭಾಗಿತ್ವ­ದಲ್ಲಿ ಅಭಿವೃದ್ಧಿಪಡಿಸಿದರೆ ಸರಿ. ನಾವು ಅಭಿವೃದ್ಧಿ ಮಾಡಲು ಹೊರಟರೆ ತಪ್ಪೇ’ ಎಂದು ಕೇಳಿದರು. ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌, ‘ಕಾಂಗ್ರೆಸ್‌ ಆಡಳಿತ ಅವಧಿ­ಯಲ್ಲಿ 150 ಆಸ್ತಿಗಳನ್ನೇ ಮಾರಾಟ ಮಾಡಿದೆ. ನಾವು ಬಿಬಿಎಂಪಿ ಆಸ್ತಿಯನ್ನು ಮಾರಾಟ ಮಾಡುತ್ತಿಲ್ಲ. ಬದಲು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ಹೊರಟಿದ್ದೇವೆ’ ಎಂದು ಹೇಳಿದರು.

ಹನುಮಂತನಗರ ವಾರ್ಡ್‌ ಸದಸ್ಯ ಕೆ.ಚಂದ್ರಶೇಖರ್‌, ‘ಕಾಂಗ್ರೆಸ್‌ ಈ ಹಿಂದೆ ತಪ್ಪು ಮಾಡಿದೆ ನಿಜ. ಅದನ್ನು ನೀವೂ ಮುಂದುವರಿಸಬೇಕೇ’ ಎಂದು ಕೇಳಿದರು. ‘ಮಾರುಕಟ್ಟೆಗಳನ್ನು ಹೀಗೇ ಖಾಸಗಿಯ­ವ­ರಿಗೆ ವಹಿಸಿಕೊಡುತ್ತಾ  ಹೋದರೆ ಆಯ­ವ್ಯಯ ಪತ್ರದಲ್ಲಿ ಆಸ್ತಿಗಳ ವಿಷಯದ ಮುಂದೆ ಬರೆಯಲು ಏನು ಉಳಿಯು­ತ್ತದೆ’ ಎಂದು ಪ್ರಶ್ನಿಸಿದರು.

ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್‌. ನಂಜುಂಡಪ್ಪ, ‘ಎಂ.ಜಿ. ರಸ್ತೆಯ­ಲ್ಲಿ­ರುವ ಪಬ್ಲಿಕ್‌ ಯುಟಿಲಿಟಿ ಕಟ್ಟಡದ ಮೊದಲ ಮೂರು ಮಹಡಿಗಳು ಖಾಲಿ ಇವೆ. ಹಲವು ಬಾಡಿಗೆದಾರರು ಕೋರ್ಟ್‌ ಮೊರೆ ಹೋಗಿದ್ದು ಆದಾಯವೇ ಬರು­ತ್ತಿಲ್ಲ. ಕೆ.ಆರ್‌. ಮಾರುಕಟ್ಟೆಗೆ ವಾರ್ಷಿಕ ₨ 5.5 ಕೋಟಿ ಖರ್ಚು ಮಾಡಿದರೆ ಬರು­ತ್ತಿರುವ ಆದಾಯ ಕೇವಲ ₨1 ಕೋಟಿ. ಇಂತಹ ಸನ್ನಿವೇಶದಲ್ಲಿ ಮಾರು­ಕಟ್ಟೆ­ಗಳನ್ನು ಹೇಗೆ ಅಭಿವೃದ್ಧಿ ಮಾಡಬೇಕು’ ಎಂದು ಕೇಳಿದರು.

‘ಮಾರುಕಟ್ಟೆ ಮಳಿಗೆಗಳಿಂದ ವಾರ್ಷಿಕ ₨ 20 ಕೋಟಿ ಆದಾಯ ಬರುತ್ತದೆ. ಕಳೆದ ವರ್ಷದ ಬಾಕಿಯೂ ಸೇರಿ ₨ 20 ಕೋಟಿ ಬಾಡಿಗೆ ಇನ್ನೂ ಬರಬೇಕಿದೆ. ಅದರಲ್ಲಿ ರಾಜ್ಯ ಸರ್ಕಾರವೇ ₨15 ಕೋಟಿ ನೀಡಬೇಕಿದೆ. ಹಲವು ಮಳಿಗೆಗಳ ಬಾಡಿಗೆ ಕಳೆದ 25 ವರ್ಷಗಳಿಂದಲೂ ಬರುತ್ತಿಲ್ಲ’ ಎಂದು ವಾಸ್ತವ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT