ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆಗೆ ಒಳಗಾಗಿದ್ದ ಸಹಪೈಲಟ್‌

ಜರ್ಮನ್‌ವಿಂಗ್‌ ವಿಮಾನ ದುರಂತ ಪ್ರಕರಣ: ಮಾಧ್ಯಮ ವರದಿಯಲ್ಲಿ ಬಹಿರಂಗ
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬರ್ಲಿನ್‌ (ಎಎಫ್‌ಪಿ): ಫ್ರೆಂಚ್‌ ಆಲ್ಪ್ಸ್ ಪರ್ವತಕ್ಕೆ ಅಪ್ಪಳಿಸಿ, 150 ಜನರನ್ನು ಬಲಿ ತೆಗೆದುಕೊಂಡ ಜರ್ಮನಿಯ ಏರ್‌­ಬಸ್‌ ಎ320 ವಿಮಾನದ ಸಹ ಪೈಲಟ್‌ ಆ್ಯಂಡ್ರಿಯಾಸ್‌ ಲುಬಿಟ್ಜ್‌ (28) ಮಾನಸಿಕ ಖಿನ್ನತೆಗೆ ಒಳಗಾಗಿದ್ದ  ಎಂದು ಮಾಧ್ಯಮ ವರದಿಯೊಂದು ಶುಕ್ರವಾರ ತಿಳಿಸಿದೆ.

ಆರು ವರ್ಷಗಳ ಹಿಂದೆ (2009ರಲ್ಲಿ) ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಲುಬಿಟ್ಜ್‌, ಆನಂತರ ನಿರಂತರವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳು­ತ್ತಿದ್ದ. ಈಗಲೂ ಆತ ವೈದ್ಯರ ನೆರವು ಪಡೆ­ಯುತ್ತಿದ್ದ. ಇದಕ್ಕೆ ಪೂರಕ ದಾಖಲು­ಪತ್ರಗಳು  ವಿಮಾನ ನಿಯಂತ್ರಕ ಕಚೇರಿ­ಯಿಂದ ಲಭ್ಯವಾಗಿದೆ. ಇಂತಹ ಪೈಲಟ್‌ಗೆ ಹೇಗೆ ವಿಮಾನ ಚಾಲನೆ ಮಾಡಲು ಅನು­ಮತಿ ನೀಡಲಾಯಿತು ಎಂದು ಜರ್ಮನ್‌ ದೈನಿಕ ‘ಬೈಲ್ಡ್‌’ ಪ್ರಶ್ನಿಸಿದೆ.

ದಾಖಲೆ ಪರಿಶೀಲಿಸಿದ ತನಿಖಾ ಮೂಲ­ಗಳು ತಿಳಿಸುವಂತೆ, ಲುಬಿಟ್ಜ್ ಮತ್ತು ಆತನ ಗೆಳತಿ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾದ ಕಾರಣ ಸಹಪೈಲಟ್‌ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಎನ್ನಲಾಗಿದೆ. ‘ಲುಫ್ತಾನ್ಸಾ’ದ ಸಿಇಒ ಕಾರ್ಸ್ಟನ್‌ ಸ್ಪಾರ್ಹ್‌ ಹೇಳುವಂತೆ, 2008ರಲ್ಲಿ ಕೆಲ ಸಮಯ ಲುಬಿಟ್ಜ್‌ನನ್ನು  ಪೈಲಟ್‌ ತರ­ಬೇತಿಯಿಂದ ಅಮಾನತು ಮಾಡ­ಲಾ­ಗಿತ್ತು.

2013ರಲ್ಲಿ ಏರ್‌ಬಸ್‌ ಎ320 ವಿಮಾನ ಚಾಲನೆಗೆ ಅರ್ಹತೆ ಪಡೆಯುವ ಮುನ್ನ ಕೆಲ ಕಾಲ ಅಮಾನತಿ­ನಲ್ಲಿದ್ದ ಎಂದು ತಿಳಿಸಿದ್ದಾರೆ. ಇಂತಹ ಘಟನೆಗಳು ಲುಬಿಟ್ಜ್‌ ಮೇಲೆ ಪರಿಣಾಮ ಬೀರಿದ್ದ ಕಾರಣ ಖಿನ್ನತೆಗೆ ಒಳ­ಗಾ­ಗಿದ್ದ. ಆನಂತರ ತನ್ನ ಮಾಂಟ­ಬಾರ್‌ನಲ್ಲಿ ಪೋಷಕ­ರೊಂ­­­ದಿಗೆ ವಾಸ­ವಿದ್ದ ಎಂದು ಪತ್ರಿಕೆ ಹೇಳಿದೆ.

ಈ ಮಧ್ಯೆ, ಅಪಘಾತಕ್ಕೀಡಾದ ವಿಮಾನದ ಸಹಪೈಲಟ್‌ ತನಗೆ ಗಂಭೀರ ಮಾನಸಿಕ ಅಸ್ವಸ್ಥತೆ ಇರುವುದನ್ನು ಮುಚ್ಚಿ­ಟ್ಟಿದ್ದ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.‌ ತನಿಖಾಧಿಕಾರಿಗಳು ಲುಬಿಟ್ಜ್‌ ತನ್ನ ಗೆಳತಿಯೊಂದಿಗೆ ವಾಸಿಸಿದ್ದ ಅಪಾರ್ಟ್‌­ಮೆಂಟ್‌ ಮತ್ತು ಪೋಷಕರ ಮನೆಯಲ್ಲಿ ಶೋಧ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ಪ್ರಮಾಣಪತ್ರಗಳನ್ನು  ಪರಿಶೀಲಿಸಲಾಗಿದೆ. ಆದರೆ ಗಂಭೀರ ಅಪರಾಧಗಳು ಕಂಡು­ಬಂದಿಲ್ಲ  ಎಂದು ಅವರು ಹೇಳಿದ್ದಾರೆ.

ವಿಮಾನದ ಕಪ್ಪು ಪೆಟ್ಟಿಗೆಯ ಧ್ವನಿ ದಾಖಲೆ ಸಾಧನದಲ್ಲಿರುವ ಮಾಹಿತಿಯ ಪ್ರಕಾರ, ಕಾಕ್‌ಪಿಟ್‌ ಹೊರಗಿದ್ದ ಮುಖ್ಯ ಪೈಲಟ್‌ನನ್ನು ಸಹಪೈಲಟ್‌ ಒಳಗೆ ಬಿಡದೆ ಬಾಗಿಲು ಮುಚ್ಚಿದ್ದು ಮತ್ತು ಉದ್ದೇಶ­ಪೂರ್ವಕ ಪತನ ಮಾಡಿದ್ದು ಒಂದು ಆತ್ಮಹತ್ಯೆ ಕೃತ್ಯ ಮತ್ತು ಸಾಮೂಹಿಕ ನರಹತ್ಯೆ ಎಂದು  ಟೀಕಿಸಿದ್ದಾರೆ. ಫ್ರಾನ್ಸ್‌ ಪ್ರಧಾನಿ ಮ್ಯಾನ್ಯುಯೆಲ್‌ ವಾಲ್ಸ್ ಅವರು ಈ ಕೃತ್ಯವನ್ನು ಅಪರಾಧ, ಆತ್ಮಹತ್ಯೆ, ಹುಚ್ಚಿನ ಕ್ರಿಯೆ ಎಂದಿದ್ದಾರೆ.

ಹೊಸ ಸುರಕ್ಷತಾ ನಿಯಮಕ್ಕೆ ಅಸ್ತು
ಜರ್ಮನಿ ವಿಮಾನಯಾನ ಸಂಸ್ಥೆಯು ವಿಮಾನ ಹಾರಾಟದ ಎಲ್ಲ ಅವಧಿಯಲ್ಲೂ ಕಾಕ್‌ಪಿಟ್‌­ನಲ್ಲಿ ಇಬ್ಬರು ಸಿಬ್ಬಂದಿ ಇರ­ಬೇ­ಕೆಂಬ ಹೊಸ ಸುರಕ್ಷತಾ ನಿಯಮ­ವನ್ನು ಜಾರಿಗೊಳಿಸಲು ಒಪ್ಪಿದೆ ಎಂದು ವಿಮಾನಯಾನ ಸಂಘ ಬಿಡಿಎಲ್‌ ಶುಕ್ರವಾರ ತಿಳಿಸಿದೆ.

ಏರ್‌ಬಸ್‌ ಎ320 ಜರ್ಮನ್‌­ವಿಂಗ್ಸ್‌ ವಿಮಾನದ ಪೈಲಟ್‌ನ್ನು ಒಳಗೆ ಬಿಡದೆ ಸಹಪೈಲಟ್‌ ಅಪಘಾತಕ್ಕೆ ಕಾರಣವಾದ ಘಟನೆ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT