ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ: ನಾವೇ ತಂದುಕೊಳ್ಳುವ ಕಾಯಿಲೆಯೆ?

Last Updated 15 ಜುಲೈ 2016, 19:30 IST
ಅಕ್ಷರ ಗಾತ್ರ

“ಅಯ್ಯೋ ಪಾಪ, ಮನೇಲಿ ಎಷ್ಟು ಕಷ್ಟ!  ಡಿಪ್ರೆಷನ್ ಬರದೆ ಏನಾಗುತ್ತೆ? ಸ್ವಲ್ಪ ಮನಸ್ಸು ಗಟ್ಟಿ ಮಾಡ್ಕೋಬೇಕು. ಮಾತ್ರೆ-ಗೀತ್ರೆ ಅಂತ ಹೋದರೆ ಆ ಮೇಲೆ ಅದೇ ಅಭ್ಯಾಸವಾಗಿ ಬಿಡುತ್ತೆ”.

“ನನಗೆ ನಿಮ್ಮ ಹತ್ರ ಬರೋಕೇ ಬೇಸರ ಡಾಕ್ಟ್ರೇ. ನಮ್ಮ ಮನೆಯವರ್‌್್ಯಾರೂ ಸರಿ ಹೋಗಲ್ಲ. ನಾನು ಮಾತ್ರ ನಿಮ್ಮ ಹತ್ರ ಬರ್‌್್ಬೇಕು, ನಿಮ್ಮ ಮಾತು ಪಾಲಿಸ್ಬೇಕು, ಮಾತ್ರೆ ತೊಗೋಬೇಕು!”

‘ಖಿನ್ನತೆ’ಯಿಂದ ನರಳುವವರನ್ನು ನೋಡಿ ಇತರರು ಹೇಳುವ, ಸ್ವತಃ ರೋಗಿಗಳೇ ಅಂದುಕೊಳ್ಳುವ, ವೈದ್ಯರನ್ನು ಕೇಳುವ ವಿವಿಧ ರೀತಿಗಳಲ್ಲಿ ಕೆಲವು ಹೀಗಿರುತ್ತವೆ. ಇದಕ್ಕೆ ಕಾರಣವೇನು? ಮನೋವೈದ್ಯಕೀಯ ಕ್ಷೇತ್ರ ‘ಅದ್ಭುತ’ ಎನಿಸುವಂತೆ ಮುಂದುವರಿದಿದ್ದರೂ ನಮ್ಮ ಸಮಾಜದಲ್ಲಿ ಮನೋವೈದ್ಯಕೀಯ ಪರಿಕಲ್ಪನೆಗಳು ಸುಮಾರು 60-70 ವರ್ಷಗಳಷ್ಟು ಹಳೆಯದಾಗಿಯೇ ಇರುವುದೇ ಇದಕ್ಕೆ ಪ್ರಮುಖ ಕಾರಣ.

ವಿದ್ಯಾವಂತರೆನಿಸಿಕೊಂಡರೂ ಜನ ‘ಮನೋವೈದ್ಯಕೀಯ’ವನ್ನೇನೂ ಓದಿರಲಾರರಷ್ಟೆ. ಕನಿಷ್ಠ ಪಕ್ಷ ಸರಿಯಾದ ಮಾಹಿತಿಯ ಲಭ್ಯತೆಯೂ ದುರ್ಲಭವೇ. ತಪ್ಪು ನಂಬಿಕೆಗಳು, ಭಯ ಬೀಳಿಸುವಂತಹ ಪೊಳ್ಳು ವರದಿಗಳೇ ವ್ಯಾಪಕವಾಗಿರುತ್ತವೆ.

ಹಾಗಿದ್ದರೆ ‘ಖಿನ್ನತೆ’ಯ ಬಗೆಗೆ ವೈಜ್ಞಾನಿಕವಾಗಿ ಸಂಶೋಧನೆಗಳು, ರೋಗಿಗಳನ್ನು ನೋಡುವ ಅನುಭವ ಏನು ಹೇಳುತ್ತದೆ?  ಇಂದಿನ ಕಾಲಘಟ್ಟದಲ್ಲಿ ಮನೋವೈದ್ಯಕೀಯ ವಿಜ್ಞಾನ ಮಿದುಳಿನ ವಿಜ್ಞಾನವಾಗಿ ಬದಲಾಗುತ್ತಿದೆ. ಅಂದರೆ ಮನಸ್ಸಿನ ಸ್ಥಾನ ನಿಖರವಾಗಿ ಮಿದುಳೇ ಎಂದು ಸಂಶೋಧನೆಗಳು ಹೇಳುತ್ತಿವೆ.

ಮಿದುಳು ನಮ್ಮ ದೇಹದ ‘Command Centre’, ಎಂದರೆ ಎಲ್ಲವನ್ನು ನಿರ್ದೇಶಿಸುವ ಕೇಂದ್ರ.  ನಮ್ಮ ದೇಹದ ಚಲನೆಗಳನ್ನು, ಸಮತೋಲನನ್ನು ಇದು ನಿಯಂತ್ರಿಸುವ ಹಾಗೆಯೇ ನಮ್ಮ ಯೋಚನೆ-ಭಾವನೆಗಳನ್ನೂ ಅದು ನಿಯಂತ್ರಿಸುತ್ತದೆ. ಈ ಕಾರ್ಯಗಳನ್ನು ಮಿದುಳು ನಿರ್ವಹಿಸುವುದು ಹೇಗೆ? ನಮ್ಮ ಭಾವನೆಗಳು, ಯೋಚನೆಗಳು ಇವೆಲ್ಲವೂ ವಿದ್ಯುತ್ ಸಂದೇಶಗಳಾಗಿ - electric impulses ಆಗಿ ‘ನರವಾಹಕಗಳು’ ಎಂಬ ರಾಸಾಯನಿಕಗಳ ಮೂಲಕ ನರಕೋಶದಿಂದ ನರಕೋಶಕ್ಕೆ ವರ್ಗಾಯಿಸಲ್ಪಡುತ್ತದೆ.

ಈ ವಿದ್ಯುತ್ ಸಂದೇಶಗಳು ವಿದ್ಯುದ್ವೇಗದಲ್ಲಿಯೇ ಅಂದರೆ ಒಂದು ಸೆಕೆಂಡಿನ 1/5000 ಭಾಗದಲ್ಲಿ ರವಾನೆಯಾಗುತ್ತದೆ. ಪ್ರಮುಖವಾಗಿ ಮಿದುಳಿನಲ್ಲಿರುವ ಸುಮಾರು 30 ನರವಾಹಕಗಳಲ್ಲಿ ‘ಖಿನ್ನತೆ’ಯಲ್ಲಿ ದೋಷಕ್ಕೆ ಒಳಗಾಗುವವು ಸೆರೆಟೋನಿನ್, ಡೋಪಮೀನ್ ಮತ್ತು ನಾರ್ ಅಡ್ರಿನಾಲಿನ್ ಎಂಬ ಮೂರು.

ಇವು ನಮ್ಮ ಭಾವನೆಗಳು, ಒತ್ತಡಕ್ಕೆ ನಾವು ಪ್ರತಿಕ್ರಿಯಿಸುವ ಬಗೆ, ನಮ್ಮ ನಿದ್ದೆ–-ಹಸಿವು-ಲೈಂಗಿಕತೆಗಳಿಗೆ ಮುಖ್ಯವಾಗಿ ಬೇಕಾಗುವಂಥವು. ಇವು ಹೆಚ್ಚಾಗಿರುವ ‘ಹೈಪೋತಾಲಮಸ್’ (Hypothalamus)  ಮತ್ತು ‘ಲಿಂಬಿಕ್ ಸಿಸ್ಟಮ್’(Limbic system) ಎಂಬ ಮಿದುಳಿನ ಭಾಗಗಳು ನಮ್ಮ ಭಾವನೆಗಳು-ನಿದ್ದೆ-ಹಸಿವು-ಲೈಂಗಿಕತೆಗಳನ್ನು ನಿಯಂತ್ರಿಸುತ್ತವೆ.

‘ಖಿನ್ನತೆ’ ಉಂಟಾಗುವುದರಿಂದ ಮಿದುಳಿನಲ್ಲಿ ಬದಲಾವಣೆಗಳು ಉಂಟಾಗುತ್ತವೆಯೇ ಅಥವಾ ಈ ರಾಸಾಯನಿಕಗಳ ಬದಲಾವಣೆಗಳಿಂದ ‘ಖಿನ್ನತೆ’ ಉಂಟಾಗುವುದೇ ಎಂಬುದು ಇತ್ತೀಚಿನವರೆಗೆ ವಿಜ್ಞಾನಿಗಳನ್ನು ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಆದರೆ ಈಗ ಮತ್ತೆ ಮತ್ತೆ ಉಂಟಾಗುವ ಒತ್ತಡಗಳು ದೀರ್ಘಕಾಲ ಮುಂದುವರಿದಾಗ ರಾಸಾಯನಿಕ ಬದಲಾವಣೆಗಳು ಕ್ರಮೇಣ ಮಿದುಳಿನಲ್ಲಿ ಉಂಟಾಗಿ ‘ಖಿನ್ನತೆ’ಗೆ ಕಾರಣವಾಗುತ್ತವೆ ಎಂಬುದು ಸ್ಪಷ್ಟವಾಗಿದೆ.

‘ಖಿನ್ನತೆ’ ಎಂಬುದು ಬರೀ ದುಃಖವಲ್ಲ. ಅಥವಾ ದುರ್ಬಲ ವ್ಯಕ್ತಿತ್ವದವರಿಗೆ ಮಾತ್ರ ಬರುವ ಕಾಯಿಲೆಯಲ್ಲ. ಹಾಗೆಯೇ ಯಾವುದೋ ದುರ್ಘಟನೆಗೆ ನಡೆಯುವ ಮನಸ್ಸಿನ ಪ್ರತಿಕ್ರಿಯೆ ಮಾತ್ರವೂ ಅಲ್ಲ. ಈ ಬೇರೆ ಬೇರೆ ಪರಿಸ್ಥಿತಿಗಳನ್ನು (ಬಹು ಸಮಯ ‘ಸಹಜ’ವಾದವುಗಳನ್ನು) ‘ಖಿನ್ನತೆ’ ಎಂದು ಸಮಾಜ ತಪ್ಪಾಗಿ ಗುರುತಿಸುತ್ತದೆ. ಹಾಗೆಯೇ ‘ಖಿನ್ನತೆ’ಯ ಸ್ಥಿತಿ ತೀವ್ರವಾಗಿದ್ದರೂ, ಅದನ್ನು  ‘ಖಿನ್ನತೆ’ ಎಂದು ಗುರುತಿಸದ ಸಂದರ್ಭಗಳೂ ಹೆಚ್ಚೇ; ಗುರುತಿಸಿದರೂ ಅದನ್ನು ಧ್ಯಾನ-ಯೋಗ-ಹರಕೆಗಳಿಂದ ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಸಮಸ್ಯೆಯೆಂದರೆ ಕಡಿಮೆ ತೀವ್ರತೆಯ ಖಿನ್ನತೆಯಲ್ಲಿ ಇವೆಲ್ಲವೂ ಕೆಲಸ ಮಾಡಿದರೂ ತೀವ್ರತರದ ಖಿನ್ನತೆಯಲ್ಲಿ ಇವು ಸಾಧ್ಯವಾಗುವುದಿಲ್ಲ. ಏಕಾಗ್ರತೆಯೇ ಸಾಧ್ಯವಾಗದಿದ್ದಾಗ ಧ್ಯಾನ ಮಾಡುವುದಾದರೂ ಹೇಗೆ? ‘ಖಿನ್ನತೆ’ - ಡಿಪ್ರೆಷನ್ ಎಂದಾಕ್ಷಣ ನಮ್ಮೆಲ್ಲರ ಭಾವನೆ ಅವರಿಗೆ ಗಂಭೀರವಾದ ಕಾಯಿಲೆಯೇನೂ ಇಲ್ಲ ಎಂಬುದು. ಹಾಗೆಯೇ ಎಲ್ಲೋ ಒಂದೆಡೆ ಇವರೇ ಬೇಕೆಂದು ತಂದುಕೊಂಡ, ಪ್ರಯತ್ನ ಮಾಡಿದರೆ ಹೊರಬರುವ ಸಾಧ್ಯತೆ ಇದೆಯೆಂಬ ಅನುಮಾನ.

ಆದರೆ ಈಗಾಗಲೇ ವಿವರಿಸಿದ ಸಂಶೋಧನೆಗಳ ಸಾರ ಯಾರೂ ತಾವೇ ಬೇಕೆಂದು ಖಿನ್ನತೆ ತಂದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ವಿವರಿಸುತ್ತದೆ. ‘ಹೊಟ್ಟೆನೋವಿ’ನಲ್ಲಿ ನೋವು ನಮಗೆ ಕಾಣದಿದ್ದರೂ ನಾವು ‘ಹೊಟ್ಟೆನೋವಿದೆ’ ಎಂದು ನಂಬುತ್ತೇವೆ, ಗಮನ ನೀಡುತ್ತೇವೆ, ಚಿಕಿತ್ಸೆ ಮಾಡಿಸುತ್ತೇವೆ.

ಅದೇ ‘ಖಿನ್ನತೆ’ಯಲ್ಲಿ ನಮಗೆ ನಡವಳಿಕೆಯಲ್ಲಿ, ಯೋಚನೆ-ಭಾವನೆಗಳಲ್ಲಿ ಗಮನಾರ್ಹವಾಗಿಯೇ ಕಾಣುವ ಬದಲಾವಣೆಗಳನ್ನು ಉದ್ದೇಶಪೂರ್ವಕವಾಗಿ ವ್ಯಕ್ತಿ ಮಾಡುತ್ತಿರುವಂಥದ್ದು, ಬಾಯಿಬಿಟ್ಟು ಹೇಳದಿದ್ದರೂ ಅದು ‘ನಟನೆ’ ಎಂದು ಭಾವಿಸುತ್ತೇವೆ! ಮನೆಯಲ್ಲಿ ಯಾವ ತೊಂದರೆಯೂ ಇರದ, ಎಲ್ಲ ಸುಖವೂ ಇರುವ ಮಹಿಳೆಗೆ ‘ಖಿನ್ನತೆ’ ಕಂಡುಬಂದರೆ ‘ಅರೆರೆ, ಇವರಿಗೆ ಏಕೆ ‘‘ಖಿನ್ನತೆ’’ ಬಂತು?’ ಎಂದು ಕಣ್ಣರಳಿಸುತ್ತೇವೆ! ಕಾಲು ಮುರಿದ ವ್ಯಕ್ತಿಗೆ ಮೂಳೆ ಕೂಡಿಸದೇ, ‘ನೀನೇ ಮನಸ್ಸು ಮಾಡಿದರೆ ನಡೆಯಲು ಸಾಧ್ಯವಿದೆ, ಸ್ವಲ್ಪ ಗಟ್ಟಿ ಮನಸ್ಸು ಮಾಡು, ವ್ಯಾಯಾಮ ಮಾಡು’ ಎಂಬ ಸಲಹೆ ನೀಡುತ್ತೇವೆಯೇ?! ಇಲ್ಲ. ತತ್‌ಕ್ಷಣ ಮೂಳೆ ವೈದ್ಯರ ಬಳಿ ಓಡುತ್ತೇವೆ.

ಆದರೆ ‘ಖಿನ್ನತೆ’ಯಲ್ಲಿ? ‘ಮನಸ್ಸು ಮಾಡಿದರೆ ಹೊರಗೆ ಬರಲು ಸಾಧ್ಯವಿಲ್ಲವೇ? ಅದೆಂಥ ದುರ್ಬಲ ವ್ಯಕ್ತಿತ್ವ, ಗಟ್ಟಿಮನಸ್ಸು ಮಾಡಿಕೋ’ ಎಂದು ಸುಲಭವಾಗಿ ಸಲಹೆ ನೀಡುತ್ತೇವೆ. ಒತ್ತಡ, ಕಷ್ಟಕರ ಕೌಟುಂಬಿಕ ಪರಿಸ್ಥಿತಿ ಖಿನ್ನತೆಯ ಸಾಧ್ಯತೆ ಹೆಚ್ಚಿಸಬಹುದು. ಆದರೆ ಕೌಟುಂಬಿಕವಾಗಿ ಹಲವು ಕಷ್ಟಗಳಿದ್ದರೂ ಕಡುಬಡತನದಲ್ಲಿಯೂ ಮಾನಸಿಕವಾಗಿ ಆರೋಗ್ಯವಂತ ವ್ಯಕ್ತಿಗಳನ್ನು ನೋಡುತ್ತೇವೆ.

ಹಾಗೆಯೇ ಯಾವುದೇ ಕಷ್ಟ ಇರದಿದ್ದರೂ ಹೇಗೆ ಸಕ್ಕರೆ–ಕಾಯಿಲೆ ಬರಬಹುದೋ, ಟೈಫಾಯಿಡ್–ಜ್ವರ ಬರಬಹುದೋ, ರಕ್ತದೊತ್ತಡ ಏರಬಹುದೋ ಅದೇ ರೀತಿ ನಾವು ‘ಮನುಷ್ಯ’ರೆಂದ ಮೇಲೆ, ನಾವು ‘ಬದುಕಿದ್ದೇವೆ’ ಎಂದ ಮೇಲೆ ನಮಗೆ ‘ಖಿನ್ನತೆ’ ಬರಬಹುದು!

‘ಖಿನ್ನತೆ’ಯಿಂದ ನರಳಿದ ರೋಗಿಗಳು ಹೇಳುವ ಅನುಭವಗಳು ಈ ವಿಷಯವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತವೆ: ‘ನಾನು ಹಿಂದೆ ಮಾಡುತ್ತಿದ್ದ ಯಾವ ಕಾರ್ಯಗಳೂ ಆ ಸಂದರ್ಭದಲ್ಲಿ ಬೇಡವೆನಿಸುತ್ತಿತ್ತು.  ಸ್ನೇಹಿತರ ಕರೆ ಬಂದರೆ ಸಂತಸವಾಗುವ ಬದಲು ಏಕಾದರೂ ಫೋನ್ ಮಾಡುತ್ತಾರೋ ಎಂಬ ಭಾವನೆ. ಊಟ ಮಾಡಬೇಕೆಂದರೆ ‘‘ಅಯ್ಯೋ ಈಗ ತಟ್ಟೆಗೆ ಹಾಕಿಕೊಂಡು, ಕಲೆಸಿ, ಅಗಿಯಬೇಕಲ್ಲ’’ ಎನಿಸುತ್ತಿತ್ತು.

‘‘ಖಿನ್ನತೆ’’ ಇರದಾಗ ಅನಾಯಾಸವಾಗಿ ಮಾಡುತ್ತಿದ್ದ ಎಲ್ಲ ಕೆಲಸಗಳೂ ಈಗ ಬೆಟ್ಟದಷ್ಟು ಭಾರ. ಭಾವನೆಗಳೇ ಇರದ ಸ್ಥಿತಿ. ಯಾವಾಗಲೂ ಹೆದರಿಕೆ, ಹೆದರಿಕೆ ಏಕೆ ಎಂದು ಗೊತ್ತಾಗದಂಥ ಹೆದರಿಕೆ.

ಬೇರೆಯವರಿಗೆ ನೋವಾಗಬಾರದೆಂಬ ಒಂದೇ ಕಾರಣದಿಂದ ನಾನು ನನ್ನ ಪ್ರಾಣ ಕಳೆದುಕೊಳ್ಳಲಿಲ್ಲ!  ಚಿಕಿತ್ಸೆ ಪಡೆಯುವುದು, ಬಿಡುವುದು, ಖಿನ್ನತೆ ಮರುಕಳಿಸುವುದು – ಹೀಗೆ ಖಿನ್ನತೆಯಿಂದ ಹೊರಗೆ, ಮತ್ತೆ ಖಿನ್ನತೆಗೆ ಹೀಗೆ ಹಲವು ಬಾರಿ ಇದು ಮಿದುಳಿನ ತೊಂದರೆಯೇ, ನಾನೇ ತಂದುಕೊಳ್ಳುತ್ತಿರುವಂಥದ್ದೇ ಅಥವಾ ಇದಕ್ಕೆ ಏನು ಪರಿಹಾರ, ಮಾತ್ರೆಯೇ, ಅಧ್ಯಾತ್ಮಿಕ ದೃಷ್ಟಿಯೇ ಎಂಬ ಗೊಂದಲದ ಮಧ್ಯೆ. ಅಂತಿಮವಾಗಿ ನನಗೆ ಗೊತ್ತಾಗಿದ್ದು ಮಾತ್ರೆಯೊಂದಿಗೆ ನನ್ನ ಪ್ರಯತ್ನವೂ ಬೇಕೆಂಬ ಅಂಶ.”

‘ಖಿನ್ನತೆ’ಯ ಬಗೆಗಿನ ತಪ್ಪು ನಂಬಿಕೆಗಳು, ತಪ್ಪು ತಿಳಿವಳಿಕೆಗಳು ತೊಲಗಲೇಬೇಕಾದ ಅಗತ್ಯ ಸಮಾಜಕ್ಕಿದೆ. ಅದಕ್ಕೆ ಕಾರಣಗಳು ಹಲವು. ‘ಖಿನ್ನತೆ’ಯನ್ನು ಜನ ‘ಕಾಯಿಲೆ’ ಎಂದು ನಂಬಿದಾಗ ಸಹಜವಾಗಿ ಚಿಕಿತ್ಸೆಯೂ ಕಷ್ಟಸಾಧ್ಯ. ವೈದ್ಯರ ಬಳಿ ಬರುವವರ ಸಂಖ್ಯೆ ಕಡಿಮೆ. ‘ಖಿನ್ನತೆ’ಯನ್ನು ಗುಟ್ಟಾಗಿಡುವ ಪ್ರವೃತ್ತಿ ‘ಖಿನ್ನ’ರೋಗಿಯನ್ನು ಮತ್ತಷ್ಟು ಏಕಾಕಿತನಕ್ಕೆ ತಳ್ಳುತ್ತದೆ.

‘ಖಿನ್ನತೆ’ ಹಲವು ವಿಧದ ಕಾಯಿಲೆಗಳಿಗೆ ಒಂದು ‘ಅಪಾಯಕರ ಸಾಧ್ಯತೆ’ಯ ಅಂಶವಾಗಿ ಅಂದರೆ ರಿಸ್ಕ್‌ ಫ್ಯಾಕ್ಟರ್‌ ಆಗಿಯೂ ಪ್ರತಿಪಾದಿಸಲ್ಪಟ್ಟಿದೆ. ಎಲ್ಲಕ್ಕಿಂತ ಹೆಚ್ಚಿನ ದುರಂತವೆಂದರೆ ‘ಆತ್ಮಹತ್ಯೆ’ಗಳು ಹೆಚ್ಚಿರುವ ಇಂದಿನ ಪರಿಸ್ಥಿತಿ.

ಹಾಗಿದ್ದರೆ ‘ಖಿನ್ನತೆ’ಗೆ ಚಿಕಿತ್ಸೆಯೊಂದೇ ಮದ್ದೇ? ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿರುವಂತೆ ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ ಮತ್ತು ಕೆಲವು ವಿಧದ ಮನೋಚಿಕಿತ್ಸೆ  ಉಪಯುಕ್ತ. ಆದರೆ ನೀವು ಕೆಲವು ನಿಮಿಷ ಯೋಗಾಸನ ಮಾಡಿದರೆ ನಿಮ್ಮ ಮನಸ್ಸು ಉಲ್ಲಸಿತವಾಗುತ್ತಿದೆ ಎನ್ನಿ ಅಥವಾ ಬೇರೆಯವರೊಂದಿಗೆ ಬೆರೆತರೆ ಮನಸ್ಸಿಗೆ ಸಂತೋಷವಾಗುತ್ತದೆ. ಅದನ್ನು ಮಾಡುವುದು ಖಂಡಿತ ಒಳ್ಳೆಯದು.

ಏಕೆಂದರೆ ‘ಖಿನ್ನತೆ’ ಭಾವನೆ-ಯೋಚನೆಗಳ ಕಾಯಿಲೆ ಅಲ್ಲವೇ? ಅದು ಸಕ್ಕರೆ–ಕಾಯಿಲೆಗೆ ಮಾತ್ರೆಯ ಜೊತೆ ಪಥ್ಯ-ವಾಕಿಂಗ್ ಮಾಡಿದಂತೆ! ಆದರೆ ‘ಖಿನ್ನತೆ’ಯನ್ನು ನಿಮ್ಮಲ್ಲಿಯೇ ಆದರೂ, ನಿಮ್ಮ ಆತ್ಮೀಯರಲ್ಲಿಯೇ ಆದರೂ ನಿರ್ಲಕ್ಷಿಸಬೇಡಿ, ತಳ್ಳಿಹಾಕಬೇಡಿ. ಸಹಾಯ ಮಾಡುವ ಭರದಲ್ಲಿ ‘ಖಿನ್ನತೆ’ ಬೇಕೆಂದೇ ನೀನು ತಂದುಕೊಂಡ ಕಾಯಿಲೆ ಎನ್ನಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT