ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಟಾನೋಟು, ನಕಲಿ ಅಂಕಪಟ್ಟಿ: ಐವರ ಬಂಧನ

Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಹಾಸನ: ‘ಖೋಟಾನೋಟು ಹಾಗೂ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದ ಐವರು ಆರೋಪಿಗಳನ್ನು ಸಕಲೇಶಪುರ ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 2 ಖೋಟಾನೋಟುಗಳು, ಎರಡು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್, 3 ಕಲರ್‌ ಪ್ರಿಂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮನ್‌ ಗುಪ್ತ, ‘ಬಂಧಿತ ಆರೋಪಿಗಳು ಹಾಸನದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್‌್ಯಾಲಿಗೆ ಬರುವ ಕೆಲವು ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದರು’ ಎಂದು ತಿಳಿಸಿದರು.

ಕೇರಳ ಮೂಲದ ಬಾಬಾಜಾನ್‌, ಗೋಪಾಲಕೃಷ್ಣನ್, ಜೋಮನ್, ರಾಜಕುಮಾರ್ ಹಾಗೂ ಉಷಾರಾಣಿ ಬಂಧಿತ ಆರೋಪಿಗಳು. ಇವರಲ್ಲಿ ಬಾಬಾಜಾನ್‌ ಈ ತಂಡದ ಮುಖ್ಯಸ್ಥ. ಉಷಾರಾಣಿ ಸಕಲೇಶಪುರದವರೇ ಆಗಿದ್ದು. ಇವರು ಏಜೆಂಟರಂತೆ ಗ್ರಾಹಕರನ್ನು ಹುಡುಕಿ ಕೊಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದಿದೆ ಎಂದು ರಮನ್‌ ಗುಪ್ತ ತಿಳಿಸಿದರು.

ಮಂಗಳೂರು, ಪಿರಿಯಾಪಟ್ಟಣ ಸೇರಿದಂತೆ ವಿವಿಧೆಡೆ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 15 ವರ್ಷಗಳಿಂದ ಈ ದಂಧೆ ನಡೆಸುತ್ತಿರುವ ಈ ಆರೋಪಿಗಳ ವಿರುದ್ಧ 20ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ವಿವರ ನೀಡಿದರು.

ಆರೋಪಿಗಳು ಹೈ ರೆಸಲ್ಯೂಷನ್‌ ಸ್ಕ್ಯಾನರ್‌, ಅತ್ಯುತ್ತಮ ಗುಣಮಟ್ಟದ ಶಾಯಿ, ಕಾಗದಗಳನ್ನು ಬಳಸಿ ನಕಲಿ ನೋಟು ಹಾಗೂ ಅಂಕಪಟ್ಟಿಗಳನ್ನು ತಯಾರಿಸುತ್ತಿದ್ದರು. ಪ್ರಕರಣದ ತನಿಖೆಯನ್ನು ಡಿಸಿಐಬಿಗೆ ಒಪ್ಪಿಸಲಾಗಿದ್ದು, ಆರೋಪಿಗಳು ಈ ಶಾಯಿ, ಪೇಪರ್‌ ಮುಂತಾದವುಗಳನ್ನು ಎಲ್ಲಿಂದ ತರಿಸುತ್ತಿದ್ದರು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ರಮನ್‌ ಗುಪ್ತ ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ, ಸಕಲೇಶಪುರ ಡಿವೈಎಸ್‌ಪಿ ಬುಳ್ಳಕ್ಕನವರ್ ಪತ್ರಿಕಾ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT