ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೊಂಡನಹಳ್ಳಿಯಲ್ಲಿ ಬಿಗುವಿನ ವಾತಾವರಣ

ಸಾಮಾಜಿಕ ಕಾರ್ಯಕರ್ತನಿಗೆ ಥಳಿತ; ಪ್ರತಿಭಟನೆ
Last Updated 1 ಅಕ್ಟೋಬರ್ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಮುನೋಟ್ (49) ಹಾಗೂ ಅವರ ಸ್ನೇಹಿತರ ಮೇಲೆ ಒಂದು ಕೋಮಿನ ಗುಂಪು ಹಲ್ಲೆ ನಡೆಸಿರುವ ಘಟನೆ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿಯಲ್ಲಿ ಬುಧವಾರ ನಡೆದಿದೆ.

ಘಟನೆಯಿಂದ ಆಕ್ರೋಶಗೊಂಡ ಕೆಲ ಸಂಘಟನೆಗಳು ಆರೋಪಿಗಳನ್ನು ಬಂಧಿಸು­ವಂತೆ ಒತ್ತಾಯಿಸಿ ಠಾಣೆ ಬಳಿ ಪ್ರತಿಭಟನೆ ಮಾಡಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ­ವಾಯಿತು. ಈ ವೇಳೆ ಸ್ಥಳಕ್ಕೆ ಬಂದ ಜಂಟಿ ಪೊಲೀಸ್ ಕಮಿಷನರ್‌ ಎಸ್‌.ರವಿ ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ಅವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರ ಮನವೊಲಿಸಿದರು.

ಹಲ್ಲೆಯಿಂದ ಗಾಯಗೊಂಡಿರುವ ಮಹೇಂದ್ರ, ಸ್ನೇಹಿತರಾದ ರಾಜೇಶ್‌ ಜೈನ್, ಚಂದ್ರಶೇಖರ್‌ ಹಾಗೂ ಕಾರು ಚಾಲಕ ಉಪೇಂದ್ರ ಅವರು ಕೊಲಂ­ಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ವಿಜಯನಗರದಲ್ಲಿ ಔಷಧದ ಅಂಗಡಿ ಇಟ್ಟುಕೊಂಡಿರುವ ಮಹೇಂದ್ರ, 15 ವರ್ಷಗಳಿಂದ ‘ಗೋ ರಕ್ಷಣೆ’ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿ­ದ್ದರು. ಗೋವುಗಳಿಂದ ಮಾನವ ಕುಲಕ್ಕೆ ಆಗುತ್ತಿರುವ ಅನುಕೂಲಗಳ ಬಗ್ಗೆ ತಾವು ಸಿದ್ಧಪಡಿಸಿದ್ದ ಕಿರುಹೊತ್ತಿಗೆಯನ್ನು ವಿತರಿ­ಸಲು ಬೆಳಿಗ್ಗೆ 11 ಗಂಟೆಗೆ ಗಂಗೊಂಡನ­ಹಳ್ಳಿಯ ಎಂಎಂಐ ಉರ್ದು ಶಾಲೆಗೆ ತೆರ­ಳಿ­­ದ್ದರು.  ಪುಸ್ತಕ ಹಂಚಿ ವಾಪಸ್‌ ಬರು­ತ್ತಿದ್ದಾಗ ಅವರ ಮೇಲೆ  ಸ್ಥಳೀಯ ಯುವ­ಕರ ಗುಂಪು ದಾಳಿ ನೆಡೆಸಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲು 10 ರಿಂದ 15 ಮಂದಿಯ ಗುಂಪು ಮಹೇಂದ್ರ ಅವರ ಮೇಲೆ ಹಲ್ಲೆ ನಡೆಸಿದೆ. ಕೆಲವರು ಮುಷ್ಠಿಯಿಂದ ಮುಖಕ್ಕೆ ಗುದ್ದಿದ್ದಾರೆ. ಆಗ ರಾಜೇಶ್‌ ಜೈನ್, ಚಂದ್ರಶೇಖರ್‌, ಉಪೇಂದ್ರ ಅವರು ರಕ್ಷಣೆಗೆ ಧಾವಿಸಿ­ದ್ದಾರೆ. ಈ ಹಂತದಲ್ಲಿ ಮತ್ತಷ್ಟು ಜನರ ಗುಂಪು ಅಲ್ಲಿಗೆ ಬಂದಿದೆ. ನಂತರ ಗಲಾಟೆ ಜೋರಾ­ಗಿದ್ದು, ಮಹೇಂದ್ರಾ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂ­ತೆಯೇ ಸ್ಥಳೀಯರು ಚಂದ್ರಾಲೇಔಟ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ­ದ್ದಾರೆ. ನಂತರ ಹಿರಿಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಮಾಡಿದ್ದಾರೆ.

‘ತಂದೆಯ ತಲೆ, ಬೆನ್ನು ಹಾಗೂ ಕಣ್ಣಿನ ಭಾಗಕ್ಕೆ ಪೆಟ್ಟು ಬಿದ್ದಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಿಡಿಗೇಡಿ­ಗಳು ತಂದೆಯನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ’ ಮಹೇಂದ್ರ ಅವರ ಪುತ್ರ ಆರೋಪಿಸಿದ್ದಾರೆ. ‘ಮಹೇಂದ್ರ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಹಾಗೂ ಗೋ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕೆಲ ಸಂಘಟನೆಗಳ ಮುಖಂಡರು ನಗರ ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅನ್ಯರ ದೂರಿಗೆ ಸೇಡು
‘ಗಂಗೊಂಡನಹಳ್ಳಿಯಲ್ಲಿ ರಸ್ತೆ ಬದಿಯಲ್ಲೇ ಹಸುಗಳನ್ನು ಕಡಿದು, ಅದರ ಮಾಂಸ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನರ ಓಡಾಟಕ್ಕೆ ತೊಂದರೆ­ಯಾಗು­ತ್ತಿದೆ ಎಂದು ಕೆಲವರು ಚಂದ್ರಾ­ಲೇಔಟ್ ಠಾಣೆಗೆ ಮೂರು ದಿನಗಳ ಹಿಂದೆ ದೂರು ಕೊಟ್ಟಿದ್ದರು. ಆದರೆ, ಮಹೇಂದ್ರ ಅವರೇ ಈ ದೂರು ಕೊಟ್ಟಿದ್ದಾರೆ ಎಂದು ಭಾವಿಸಿ, ದುಷ್ಕರ್ಮಿಗಳು  ಹಲ್ಲೆ ನಡೆಸಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳಿದ್ದಾರೆ.

ಬಿಗಿ ಭದ್ರತೆ
‘ಮುಂಜಾಗ್ರತಾ ಕ್ರಮವಾಗಿ ಮೂವರು ಎಸಿಪಿ, ಆರು ಇನ್‌ಸ್ಪೆಕ್ಟರ್‌, 12 ಎಸ್‌ಐ, ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಒಂದು ತುಕಡಿ ಸೇರಿ­ದಂತೆ 80 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅನುಮಾ­ನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ’
–ಲಾಬೂರಾಮ್, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT