ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಯಾತ್ರಿ ಕಿರೊಬೊ

ಗಿನ್ನೆಸ್ ಪುಟ ಸೇರಿದ
Last Updated 7 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಎಂಬುದು ‘ಕ್ಷೇತ್ರ’ದ ಗಡಿದಾಟಿ ‘ಯುಗ’ದ ಪರಿಧಿಯತ್ತ ದಾಪುಗಾಲಿಟ್ಟಿದೆ. ‘ಸ್ಮಾರ್ಟ್‌ಫೋನ್‌’ ವರ್ತಮಾನ ಕಾಲ ಎಂಬುದು ಎಷ್ಟು ನಿಜವೋ, ‘ಭವಿಷ್ಯ’ದ ಕಾಲ ರೋಬೊಟ್‌ಗಳದ್ದು (ಯಂತ್ರ ಮಾನವರದ್ದು)  ಎಂಬುದೂ ಅಷ್ಟೇ ಸತ್ಯ.

ಕೈಗಾರಿಕಾ ಕ್ಷೇತ್ರದ ಬೆನ್ನೆಲುಬಾಗಿ ರೂಪು ಗೊಳ್ಳುತ್ತಿರುವ ರೋಬೊಗಳು, ಮನುಷ್ಯನಿಗೆ ಸವಾಲಾಗುವ ಕೆಲಸಗಳನ್ನು ಸಲೀಸಾಗಿ ಮಾಡುವ ಚಾಕಚಕ್ಯತೆ ಹೊಂದಿವೆ. ಮಾಡುವ ಕಾರ್ಯಗಳಿಗೆ ಅನ್ವಯಿಸಿ ಅವುಗಳ ಕಾಯ, ಬುದ್ಧಿಮತ್ತೆ ರಚನೆಯು ನಡೆಯುತ್ತಿದೆ.

‘ಕೃತಕ ಬುದ್ಧಿಮತ್ತೆ‘ಯಲ್ಲಿ ತಜ್ಞರ ಸಂಶೋಧನೆಗೆ ಗ್ರಾಸ ಒದಗಿಸುತ್ತಿರುವ ನಟ್ಟು–ಬೋಲ್ಟುಗಳ ತಡಿಕೆಯ ಯಂತ್ರಮಾನವ, ದಿನಗಳೆದಂತೆ ಸಾಧನೆಯ ಶಿಖರವೇರುತ್ತಲೇ ನಡೆದಿದ್ದಾನೆ.

ಹೌದೇ! ಎಂದು ಅಚ್ಚರಿಯಿಂದ ಹುಬ್ಬೇರಿಸದಿರಿ. ಅಸಾಮಾನ್ಯ ಸಾಧನೆ ಮಾಡಿದ ಒಂದು ಯಂತ್ರಮಾನವ (ಒಬ್ಬ ಯಂತ್ರಮಾನವ ಎನ್ನಬಹುದೇ?) ಇದೀಗ ಗಿನ್ನೆಸ್ ಪುಟ ಸೇರಿದೆ. ಅಲ್ಲದೇ ಎರಡು ಗಿನ್ನೆಸ್ ದಾಖಲೆಗಳನ್ನು  ಮಾಡಿ ಸಾಧನೆಯ ಕಿರೀಟವನ್ನು ಮುಡಿಗೇರಿಸಿಕೊಳ್ಳು ವುದರ ಜತೆಗೇ, ‘ಗಗನಯಾತ್ರಿ’ ಎಂಬ ಗರಿಯೂ ಅದಕ್ಕೆ ದಕ್ಕಿದೆ.

ಯಾವುದು ಅಂಥ ರೋಬೊ ಅಂತೀರಾ?
ಅದರ ಹೆಸರು ‘ಕಿರೊಬೊ’. 34 ಸೆಂಟಿ ಮೀಟರ್‌ಗಳಷ್ಟು ಎತ್ತರ  ಹಾಗೂ ಒಂದು ಕೆ.ಜಿ ತೂಗುವ ಕಿರೊಬೊ ಸಾಮಾನ್ಯದ್ದಲ್ಲ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಳಿದು ವಾಪಸ್‌ ಬಂದಿದೆ. ಆಧುನಿಕ ಅಸ್ಟ್ರೋನಾಟ್ (ಗಗನಯಾತ್ರಿ) ಕಣ್ರೀ ಕಿರೊಬೊ!

ಅದಕ್ಕೆ ಮತ್ತೆ ಎರಡೆರಡು ಗಿನ್ನಿಸ್ ದಾಖಲೆ ಸೃಷ್ಟಿಯಾಗಿದ್ದು. ರೋಬೊ ಆಗಿ ಭೂಮಿಯಿಂದ ಅತಿ ಎತ್ತರಕ್ಕೆ ಏರಿದ್ದಕ್ಕಾಗಿ ಒಂದು ದಾಖಲೆ; ಅಂತರಿಕ್ಷದಲ್ಲಿ ಸಂವಹನ ನಡೆಸಿದಕ್ಕಾಗಿ ಮತ್ತೊಂದು ದಾಖಲೆ.

ಜಪಾನಿನ ತನೆಗಶಿಮಾ ಬಾಹ್ಯಾಕಾಶ ಕೇಂದ್ರದಿಂದ 2013ರ ಆಗಸ್ಟ್ 4ರಂದು ಭೂಮಿಯಿಂದ ಹಾರಿದ್ದ ಕಿರೊಬೊ, ಆರು ದಿನಗಳ ಪ್ರಯಾಣದ ನಂತರ ಆಗಸ್ಟ್ 10ರಂದು ಗಮ್ಯ ತಲುಪಿ, ತನ್ನ ಮಾನವ ಸಹೋದ್ಯೋಗಿ ವಕಾಟಾ ಅವರನ್ನು ಸಂದಿಸಿತ್ತು. ಇದಾದ 11 ದಿನಗಳ ಬಳಿಕ ಮಾತನಾಡಿದ ಕಿರೊಬೊ, ‘ಎಲ್ಲರ ಒಳತಿಗಾಗಿ ಭವ್ಯ ಭವಿಷ್ಯದತ್ತ ರೋಬೊ 2013ರ ಆಗಸ್ಟ್ 21ರಂದು  ಅಂತರಿಕ್ಷದಲ್ಲಿ ಮೊದಲಡಿಯಿಟ್ಟಿದೆ’ ಎಂದು ಉದ್ಗರಿಸಿತ್ತು.

ನಂತರ, ಸಮುದ್ರಕ್ಕಿಂತ 414.2 ಕಿಲೋಮೀಟರ್ ಎತ್ತರದಲ್ಲಿ ಕವಾಟಾ ಅವರೊಂದಿಗೆ ಬಹುವಿಧ ಮಹತ್ವಪೂರ್ಣ ಸಂವಹನ ನಡೆಸುವಲ್ಲಿ 2013ರ ಡಿಸೆಂಬರ್ 7ರಂದು ಕಿರೊಬೊ ಯಶ ಕಂಡಿತ್ತು.

ಕಿರೊಬೊ ಅಂತರಿಕ್ಷದಲ್ಲೇನು ಮಾಡಿತು ಅಂತೀರಾ?
ಜಪಾನ್‌ ಗಗನಯಾತ್ರಿ ಕೊಯಿಚಿ ವಕಾಟಾ ಅವರಿಗೆ ಕಂಪನಿ (ಸಾಹಚರ್ಯ) ನೀಡಲು ಅಂತರಿಕ್ಷಕ್ಕೆ ತೆರಳಿತ್ತಂತೆ.
ಒಂದು ವೇಳೆ, ಗಗನಯಾತ್ರಿಗಳು ನಿಗದಿತ ಸಮಯಕ್ಕಿಂತಲೂ ಹೆಚ್ಚಿನ ಅವಧಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಟಿಯಾಗಿ ಉಳಿಯಬೇಕಾದ ಸಂದರ್ಭ ಸೃಷ್ಟಿಯಾದಾಗ ಅವರು ಎದುರಿಸುವ ಮಾನಸಿಕ ಒತ್ತಡ, ಏಕಾಂಗಿತನದ ನೋವನ್ನು ನೀಗಿಸುವಲ್ಲಿ ರೋಬೊಗಳು ನೆರವಾಗಬಲ್ಲವೇ ಎಂಬುದನ್ನು ಪರೀಕ್ಷಿಸುವ ಸಲುವಾಗಿಯೇ ರೂಪಿಸಿದ್ದ ಈ ಯೋಜನೆಯ ಭಾಗವಾಗಿ ಕಿರೊಬೊವನ್ನು ಅಂತರಿಕ್ಷಕ್ಕೆ ಕಳುಹಿಸಲಾಗಿತ್ತು.

ಆಂಡ್ರಾಯಿಡ್‌ ಸಾಮರ್ಥ್ಯದ ಕಿರೊಬೊ, ಜಪಾನಿ ಭಾಷೆಯಲ್ಲಿ ಸಂವಹನ ನಡೆಸಬಲ್ಲಷ್ಟು ಶಕ್ತ. ಶೂನ್ಯ ಗುರುತ್ವದಲ್ಲಿ ಸ್ಥಿರವಾಗಿರಬಲ್ಲದು. ಮುಂದುವರಿದ ಭಾಷಾ ಸಂಸ್ಕರಣ ವ್ಯವಸ್ಥೆ ಹಾಗೂ ಪೂರ್ವನಿಗದಿತ ಅಭಿನಯಗಳ ಗ್ರಂಥಾಲಯ ಹೊಂದಿರುವ ಅತ್ಯಾಧುನಿಕ ಧ್ವನಿ ಸಂಶ್ಲೇಷಣಾ ವ್ಯವಸ್ಥೆ ಕಿರೊಬೊನಲ್ಲಿ ಅಂತರ್ಗತವಾಗಿದೆ.

ಇಂತಿಪ್ಪ ಕಿರೊಬೊ,  18 ತಿಂಗಳ  ಅಂತರಿಕ್ಷ ವಾಸದ ಬಳಿಕ ಕಳೆದ ಫೆಬ್ರುವರಿ 10ರಂದು, ಸ್ಪೇಸ್‌ಎಕ್ಸ್‌ ಸಿಆರ್‌ಎಸ್‌–5 ಡ್ರ್ಯಾಗನ್ ಸರಕು ಮರುಪೂರಣ ನೌಕೆಯಲ್ಲಿ ಕ್ಯಾಲಿಫೋರ್ನಿಯದ ಕಡಲ ತೀರದಲ್ಲಿ ಸುರಕ್ಷಿತವಾಗಿ ಭೂಮಿ ತಲುಪಿತ್ತು.

ಮಾರ್ಚ್ 12ರಂದು ಜಪಾನಿಗೆ ಮರಳಿದ ಕಿರೊಬೊ, ‘ಮೇಲಿಂದ ಭೂಮಿ ಹೊಳೆಯುತ್ತಿರುವ ನೀಲಿ ಎಲ್‌ಇಡಿಯಂತೆ ಕಾಣಿಸುತ್ತಿತ್ತು’ ಎಂದು ಅನುಭವ ಹಂಚಿಕೊಂಡಿತ್ತು.

ಜಾಹೀರಾತು ಸಂಸ್ಥೆ ಡೆಂಟ್ಸು, ಟೋಕಿಯೊದ ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರ ರೋಬೊ ಗ್ಯಾರೇಜ್, ಟೊಯೊಟೊ ಮೋಟಾರ್ ಕಾರ್ಪೋರೇಷನ್‌ ಹಾಗೂ ಜಪಾನಿನ ಅಂತರಿಕ್ಷ ಪರಿಶೋಧನಾ ಸಂಸ್ಥೆ ಜಾಕ್ಸಾ (ಜೆಎಎಕ್ಸ್ಎ) ಸಹಯೋಗದ ಐದು ವರ್ಷಗಳ ಜಂಟಿ ಸಂಶೋಧನೆಯ ಭಾಗವಾಗಿ ಕಿರೊಬೊ ಜೀವತಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT