ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನ ಕುಸುಮವಾದ ಕಾಲೇಜು ಶಿಕ್ಷಣ

Last Updated 15 ಮೇ 2015, 19:30 IST
ಅಕ್ಷರ ಗಾತ್ರ

ಆದ್ಯತೆ, ಆಯ್ಕೆ, ಅನಿವಾರ್ಯ, ಇವುಗಳಲ್ಲಿ ಆಯ್ಕೆಯನ್ನು ಅದುಮಿಟ್ಟು, ಯಾವ ಆದ್ಯತೆಯ ಕಾರಣವಿಲ್ಲದೇ, ಇದ್ದುದ್ದನ್ನೇ ಒಪ್ಪಿಕೊಳ್ಳುವ ಅನಿವಾರ್ಯ, ಅಂದು ಜೀವನದಲ್ಲಿ ಕಮರಿಹೋದ ಕನಸಿನ ಬಗ್ಗೆ ಈಗಲೂ ಯೋಚಿಸುವ ಮನಸ್ಸು ಅಂದು ಯಾಕೆ ದೌರ್ಬಲ್ಯವನ್ನು ತೊಡೆದುಹಾಕುವ ಒಂದು ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ ಅಂತ ಹತಾಶೆಯಿಂದ ಪದೇ ಪದೇ ಪ್ರಶ್ನಿಸುತ್ತೆ. ಹೌದು ನನ್ನ ಹದಿನೈದರ ಹರೆಯದಲ್ಲಿ ನಾನೆದುರಿಸಿದ ಅಲ್ಲ ನನ್ನ ಆಯ್ಕೆಯನ್ನು ಅದುಮಿಟ್ಟು ಅನಿವಾರ್ಯವಾಗಿ ಒಪ್ಪಿಕೊಂಡ ಪರಿಸ್ಥಿತಿಯ ಬಗ್ಗೆ ಹೇಳುತ್ತಿದ್ದೇನೆ.

ಓದಿನಲ್ಲಿ ಜಾಣೆ ಎಂದು ಹೊಗಳಿಸಿಕೊಳ್ಳುತ್ತಿದ್ದ ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣಳಾದ ನಂತರ, ನನ್ನ ಆಯ್ಕೆಯಾದ ಕಾಲೇಜಿನ ಓದಿನ ಬಗ್ಗೆ ನೂರಾರು ಆಸೆಗಳನ್ನು ಹೊತ್ತುಕೊಂಡು ಸಂಭ್ರಮಿಸುತ್ತಿದ್ದೆ. ಆದರೆ ಓದಿಗೆ ಉತ್ತೇಜನ ಕೊಡುವ, ಓದಿಸಲು ಉತ್ಸುಕರಾದ ತಂದೆತಾಯಿಗಳನ್ನು ಕಳೆದುಕೊಂಡಿದ್ದೆ. ನನಗಿಂತ ಮೂರು ವರ್ಷಕ್ಕೆ ದೊಡ್ಡವನಾದ ಇನ್ನೂ ಓದುತ್ತಿರುವ ಅಣ್ಣ, ಮೂರು ವರ್ಷ ಕಿರಿಯವಳಾದ ತಂಗಿ, ದೂರದ ಕೋಲ್ಕತ್ತಾದಲ್ಲಿದ್ದ ದೊಡ್ಡ ಅಣ್ಣ ನನಗಿಂತ ಹದಿನೈದು ವರ್ಷ ಹಿರಿಯವನಾದ ಅವನಲ್ಲಿ ಸಲುಗೆಯೂ ಇರಲಿಲ್ಲ. ಯಾರಲ್ಲಿ ಹೇಳಿಕೊಳ್ಳಲಿ ನನ್ನ ಆಸೆಯನ್ನು? ನೂರಾರು ಎಕರೆ ಜಮೀನು, ದೊಡ್ಡ ಹುದ್ದೆಯಲ್ಲಿದ್ದ ಅಣ್ಣ, ಆದರೂ ಮುಂದೆ ಓದಲಾಗದ ಪರಿಸ್ಥಿತಿ. ಈಗ ಮೂವತ್ತು ವರ್ಷಗಳ ಹಿಂದೆ ತಾಲ್ಲೂಕು ಮಟ್ಟದ ನನ್ನೂರಿನಲ್ಲಿ ಕಾಲೇಜಿರಲಿಲ್ಲ.

ನಲವತ್ತು ಕೀಲೊಮೀಟರ್ ದೂರದ ಜಿಲ್ಲಾ ಕೇಂದ್ರಕ್ಕೆ ಓಡಾಡಬೇಕಿತ್ತು. ಇದೇ ನೆಪಹೇಳಿ ಓದಿದ್ದು ಸಾಕು ಮನೆಯಲ್ಲಿಯೇ ಏನಾದರು ಕಲಿ ಅಂತ ಉಪದೇಶ. ಸೂಕ್ಷ್ಮ ಸ್ವಭಾವದವಳೂ, ಸ್ವಾಭಿಮಾನಿಯೂ ಆದ ನಾನು ಯಾರಲ್ಲೂ ಮತ್ತೆ ನನ್ನ ಆಸೆಯನ್ನು ಹೇಳಿಕೊಳ್ಳಲೂ ಇಲ್ಲ. ಅದೆಷ್ಟು ದಿನ ಮಂಕಾಗಿ ಯಾವುದರಲ್ಲೂ ಆಸಕ್ತಿಯಿಲ್ಲದೇ ಮನಸ್ಸಲ್ಲೇ ವ್ಯಥೆಪಡುತ್ತಿದ್ದ ಆ ದಿನಗಳನ್ನು ನೆನಸಿಕೊಂಡರೆ, ಈಗಲೂ ನೋವಾಗುತ್ತೆ.

ಆದರೆ ನನ್ನ ಓದುವ ಹಂಬಲ ಹತ್ತಿಕ್ಕಲಾಗದೇ ಖಾಸಗಿಯಾಗಿ ಓದಿ ನನ್ನ ಮಿತಿಯಲ್ಲಿ ಹಲವಾರು ಕೋರ್ಸ್‌ಗಳನ್ನು ಮಾಡಿಕೊಂಡೆ. ಹಿಂದಿಯ ಬಿ.ಎ. ಪದವಿ ಪಡೆದೆ ಆದರೂ ಕಾಲೇಜಿಗೆ ಹೋಗಿ ಆ ವಯಸ್ಸಿನಲ್ಲಿ ಅನುಭವಿಸಬೇಕಾದ ‘ಗೋಲ್ಡನ್ ಲೈಫ್’ ನಿಂದ ವಂಚಿತಳಾದ ನೋವು ಮರೆಯಲು ಆಗೋದಿಲ್ಲ. ಪಕ್ವವಾಗದ ಮನಸ್ಸು ಆಕಾಶದೆತ್ತರದಷ್ಟು ಆಸೆಯಿದ್ದ ನನ್ನ ಓದಿನ ಹಂಬಲ ಇಡೇರದ ಪರಿಸ್ಥಿತಿ ನನ್ನಲ್ಲಿ ಎಷ್ಟು ಕೀಳರಿಮೆ ಬೆಳಸಿತ್ತು ಎಂದರೆ ಮದುವೆಯಾದ ಮೇಲೆ ಪತಿ ಮುಂದೆ ಓದಲು ಕಾಲೇಜಿಗೆ ಸೇರಿಕೋ ಅಂದರೂ ಆಸೆಯನ್ನು ಅದಮಿಟ್ಟೇ ವಿನಃ ನನ್ನ ಕನಸು ಇಡೇರುತ್ತಿದೆ ಅನ್ನೋ ಸಂತೋಷದ ಅನುಭವವೇ ಆಗಲಿಲ್ಲ.

ಅನುಭವಗಳ ಪಾಠದಿಂದ ವಯಸ್ಸಿಗನುಗುಣವಾಗಿ ಈಗ ಪಕ್ವವಾದ ಸಮಸ್ಥಿತಿಯನ್ನು ಬೆಳಸಿಕೊಂಡ ಮನಸ್ಥಿತಿ ನನ್ನದಾಗಿದ್ದರೂ ಅಂದು ನಾನು ಅನುಭವಿಸಿದ ನಿರಾಸೆ, ದುಃಖ ನೆನೆಸಿಕೊಂಡರೆ, ಇಂದಿಗೂ ನಾನ್ಯಾಕೇ ಏನು ಅಡೆತಡೆ ಬಂದರೂ ಸವಾಲಾಗಿ ತೆಗೆದುಕೊಳ್ಳಲಿಲ್ಲ? ನನ್ನ ಗುರಿ ಮುಟ್ಟುವ ಹಠ, ಛಲ ಬೆಳಸಿಕೊಳ್ಳಲಿಲ್ಲ? ಕಳೆದುಹೋದ ದಿನಗಳು ಮತ್ತೆ ಬರಲ್ಲ ಅಂತ ನನಗೆ ಯಾಕೆ ಅನಿಸಲಿಲ್ಲ? ಕಾಲದ ಸದುಪಯೋಗ ಮಾಡಿಕೊಳ್ಳಲಿಲ್ಲ? ಅಂತ ಮನಸ್ಸಿನ ಮೂಲೆಯಲ್ಲಿ ಪ್ರಶ್ನೆಗಳೆದ್ದು ಉತ್ತರವಿಲ್ಲದ ನೋವು ಕಾಡುತ್ತೆ. ಯಾಕೆಂದರೆ ಸರಿಪಡಿಸಿಕೊಳ್ಳಲು ಕಾಲ ಹಿಂದೆ ಸರಿಯುವುದಿಲ್ಲ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT