ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ 17 ಉಗ್ರರ ಶಿಬಿರ ಸಕ್ರಿಯ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಗಡಿಯಲ್ಲಿ 17 ಉಗ್ರರ ಶಿಬಿರಗಳು ಸಕ್ರಿಯವಾಗಿವೆ. ಈ ಶಿಬಿರಗಳಲ್ಲಿರುವ 800ರಿಂದ 1000 ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದೊಳಕ್ಕೆ ನುಗ್ಗಿಸಿ ಲೋಕಾಸಭಾ ಚುನಾವಣೆಯಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶವನ್ನು ಈ ಶಿಬಿರಗಳನ್ನು ನಿರ್ವಹಿಸುತ್ತಿರುವ ವಿಧ್ವಂಸಕ ಶಕ್ತಿಗಳು ಹೊಂದಿವೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ನಾಲ್ಕು ವಿವಿಧ ಸ್ಥಳಗಳಲ್ಲಿ ಈ ಶಿಬಿರಗಳು ಹರಡಿ­ಕೊಂಡಿವೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.

ಮುಜಫರಾಬಾದ್ ಮತ್ತು ಕೋಟಾಲಿಗಳಲ್ಲಿ ತಲಾ ಐದು, ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಮನ್ಸೆ­ಹರ್‌ನಲ್ಲಿ ನಾಲ್ಕು, ಪಾಕ್‌ನ ಪಂಜಾಬ್‌ ಪ್ರಾಂತ್ಯದಲ್ಲಿ ಎರಡು ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಬರ್ನಾಲಾದಲ್ಲಿ ಒಂದು ಶಿಬಿರಗಳು ಇವೆ ಎಂದು ಗುಪ್ತಚರ ಇಲಾಖೆಯ ವರದಿ ತಿಳಿಸಿದೆ.

‘ಇವುಗಳಲ್ಲಿ ಕನಿಷ್ಠ ಎರಡು ಶಿಬಿರಗಳು ದೇಶದ ಗಡಿಯಿಂದ 15 ಕಿ.ಮೀ. ದೂರದಲ್ಲಿವೆ ಮತ್ತು ಉಳಿದ ಶಿಬಿರಗಳು ಈ ಎರಡು ಶಿಬಿರಗಳಿಗೆ ಸಮೀಪದಲ್ಲೇ ಇವೆ. ಉಗ್ರರ 42 ತರಬೇತಿ ಕೇಂದ್ರಗಳಿಗೆ ಈ ಶಿಬಿರಗಳು ಸೇರಿವೆ. ಈ ತರಬೇತಿ ಕೇಂದ್ರಗಳ ಬಗ್ಗೆ ದೇಶದ ಭದ್ರತಾ ಪಡೆಗಳಿಗೆ ಮಾಹಿತಿ ಇದೆ’ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಮೇಲಿನ ಭಾಗದಲ್ಲಿ ಅಕ್ರಮ ಒಳನುಸುಳುವಿಕೆ ಪ್ರಯತ್ನ­ಗಳು ಮಾರ್ಚ್‌ನಲ್ಲಿ ನಡೆಯುತ್ತವೆ. ಆದರೆ, ಈ ವರ್ಷ ತೀವ್ರ ಹಿಮಪಾತವಾಗಿರುವ ಕಾರಣ ಒಳನುಸುಳುವಿಕೆ ಪ್ರಯತ್ನ ರಾಜ್ಯದ ಕೆಳಭಾಗದಲ್ಲಿ ನಡೆಯುತ್ತಿದೆ.

ಹೆಪ್ಪುಗಟ್ಟಿರುವ ಹಿಮರಾಶಿಯು ಕರಗುವ ಸಮಯದಲ್ಲೇ ಉಗ್ರರು ಅಕ್ರಮವಾಗಿ ಒಳನುಸುಳುವ ಪ್ರಯತ್ನಗಳು ಹೆಚ್ಚಾಗುತ್ತವೆ. ಇದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇದು ಭದ್ರತಾ ಪಡೆಗಳ ಕಳವಳಕ್ಕೆ ಕಾರಣವಾಗಿದೆ.

ರಾಜ್ಯದ ಆರು ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್‌ 10, 17, 24, 30 ಮತ್ತು ಮೇ 7ರಂದು ಮತದಾನ ನಡೆಯಲಿದೆ.
‘ಒಳನುಸುಳುವಿಕೆಯು ಒಳನಾಡಿನಲ್ಲಿ ಅಶಾಂತಿಗೆ ಕಾರಣವಾಗಬಹುದು. ಉಗ್ರರು ಚುನಾವಣೆಗೆ ಅಡ್ಡಿ ಉಂಟು ಮಾಡಬಹುದು. ಕನಿಷ್ಠ ಐದು ಪ್ರತ್ಯೇಕತಾ­ವಾದಿ ಗುಂಪುಗಳು ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿವೆ’ ಎಂದು ಮೂಲಗಳು ಹೇಳಿವೆ.

ಬಂಡಿಪುರ ಜಿಲ್ಲೆಯ ಬಾಪುರಾದಲ್ಲಿ ಭಾನುವಾರ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

2014ರಲ್ಲಿ ಈವರೆಗೆ 21 ಉಗ್ರರು ಹತರಾಗಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಇಬ್ಬರು ಉಗ್ರರು ಮಾತ್ರ ಹತರಾಗಿದ್ದರು.
ಉಗ್ರರ ಚಟುವಟಿಕೆ ಇಲ್ಲದ ಜಮ್ಮು ಪ್ರದೇಶದ ಕತುವಾ ಜಿಲ್ಲೆಗೆ ಮೂವರು ಉಗ್ರರು ಶುಕ್ರವಾರ ನುಗ್ಗಿ ದಿನವೀಡಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಸೇನಾ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ.

‘ಅಂತರರಾಷ್ಟ್ರೀಯ ಗಡಿಯಲ್ಲಿ ಕಳ್ಳಮಾರ್ಗಗಳನ್ನು ಉಗ್ರರು ಕಂಡುಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇಂತಹ ಸ್ಥಳಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಕಾರ್ಯೋನ್ಮುಖವಾಗಬೇಕು. ಅಕ್ರಮ ಒಳನುಸುಳುಕೋರರ ಪ್ರಯತ್ನವನ್ನು ನಿಗ್ರಹಿಸಬೇಕು’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಶುಕ್ರವಾರ ನಡೆದ ಉಗ್ರರ ದಾಳಿ ನಂತರ ‘ಟ್ವಿಟರ್‌’ನಲ್ಲಿ ಬರೆದಿದ್ದಾರೆ.

ಶಂಕಿತ ಐಎಂ ಉಗ್ರನ ಬಂಧನ
ಜೈಪುರ (ಐಎಎನ್‌ಎಸ್‌):
ಇಂಡಿಯನ್‌ ಮುಜಾ­ಹಿದೀನ್‌ (ಐಎಂ) ಸಂಘಟನೆಯ ಇನ್ನೊಬ್ಬ ಶಂಕಿತನನ್ನು ರಾಜಸ್ತಾನ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.

೨೨ ವರ್ಷದ ಈತನನ್ನು ಸಿಕರ್‌ನಲ್ಲಿ ಬಂಧಿಸಲಾಗಿದೆ. ಈತ ರಾಜಸ್ತಾನದಲ್ಲಿ ವಿಧ್ವಂಸಕ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಿಕರ್‌ನಲ್ಲಿ ಸಿವಿಲ್‌ ಎಂಜಿನಿಯ­ರಿಂಗ್‌ನಲ್ಲಿ ಡಿಪ್ಲೊಮೊ ಓದುತ್ತಿದ್ದಾನೆ. ರಾಜಸ್ತಾನ ಎಟಿಎಸ್‌ ಇದುವರೆಗೆ ಆರು  ಶಂಕಿತ ಉಗ್ರರನ್ನು ಬಂಧಿಸಿದ್ದು, ಇವರೆಲ್ಲ ವಿದ್ಯಾರ್ಥಿಗಳಾ­ಗಿ­ದ್ದಾರೆ. ಈ ಪೈಕಿ ಐದು ಮಂದಿಯನ್ನು ಜೋಧಪುರದಲ್ಲಿ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT