ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವಿನೊಳಗೆ ಕೆಲಸ ಮುಗಿಸಲು ಮೋದಿ ಕರೆ

Last Updated 20 ಆಗಸ್ಟ್ 2014, 10:32 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ವಿಶ್ವವು ತುಂಬಾ ವೇಗವಾಗಿ ಬದಲಾಗುತ್ತಿದ್ದು, ವೇಗವರ್ಧನೆಯ ಮೂಲಕ ತಮ್ಮ ಯೋಜನೆಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸೂಚಿಸಿದ್ದಾರೆ.

ದೇಶದ ಏಕೈಕ ರಕ್ಷಣಾ ಸಂಶೋಧನಾ ಸಂಸ್ಥೆಯಾಗಿರುವ ಡಿಆರ್‌ಡಿಒ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮೋದಿ ಅವರು, ‘ಜಗತ್ತು ನಮಗಾಗಿ ಕಾಯುವುದಿಲ್ಲ. ನಾವು ಸಮಯವನ್ನು ಹಿಂದಿಕ್ಕಿ ಸಾಗಬೇಕು. ಅದಕ್ಕಾಗಿ ನಾವು ಏನೇ ಮಾಡಲಿ ಅದನ್ನು ನಿಗದಿತ ವೇಳೆಗೂ ಮುನ್ನವೇ ಮುಗಿಸಲು ಕಠಿಣವಾಗಿ ಪ್ರಯತ್ನಿಸಬೇಕು. 1992ರಲ್ಲಿ ಒಂದು ಯೋಜನೆ ರೂಪಿಸಿ, 2014ರಲ್ಲೂ ಅದನ್ನು ಕಾರ್ಯಗತಗೊಳಿಸಲು ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ ಎನ್ನುತ್ತೇವೆ. ಹೀಗಾದರೆ ಜಗತ್ತು ನಮ್ಮನ್ನು ಹಿಂದಿಕ್ಕಿ ಮುಂದೆ ಸಾಗುತ್ತದೆ’ ಎಂದು ಪ್ರಧಾನಿ ನುಡಿದರು.


ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ತುಂಬಾ ವೇಗವಾಗಿ ಬದಲಾಗುತ್ತಿದ್ದು, ತಂತ್ರಜ್ಞಾನವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದ ಅವರು, ‘ನಾವು ಒಂದು ವ್ಯವಸ್ಥೆಯ ಪರಿಕಲ್ಪನೆ ರೂಪಿಸುವ ಮೊದಲೇ  ಉತ್ಪನ್ನಗಳು ಎರಡು ಹಂತ ಮುಂದುವರಿದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ನಾವು ಹಿಂದೆ ಉಳಿಯುತ್ತೇವೆ. ಹೀಗಾಗಿ ನಿಗದಿತ ಗಡುವಿಗೂ ಮೊದಲು ಯೋಜನೆಗಳನ್ನು ಪೂರ್ಣಗೊಳಿಸುವ ಸವಾಲು ದೇಶದ ಎದುರಿದೆ. ಜಗತ್ತು 2020ರಲ್ಲಿ ಕೆಲವು ಉತ್ಪನ್ನಗಳನ್ನು ಪರಿಚಯಿಸಲಿದೆ ಎಂದರೆ 2018ರಲ್ಲಿಯೇ ನಾವು ಅವುಗಳೊಂದಿಗೆ ಹಾಜರಿರಬೇಕು’ ಎಂದು ಪರಿಸ್ಥಿತಿ ಮನವರಿಕೆಯ ಜೊತೆಗೆ  ಸ್ಫೂರ್ತಿ ತುಂಬಲು  ಪ್ರಯತ್ನಿಸಿದರು.

ಅಲ್ಲದೇ, ‘ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡುತ್ತಿರೋ ಅಥವಾ ಅದಕ್ಕೂ ಪೂರ್ವದಲ್ಲೇ ಕಾರ್ಯಪ್ರವೃತ್ತರಾಗಿ   ಜಗತ್ತಿಗೆ  ಕಾರ್ಯಸೂಚಿಗಳನ್ನು ನಿಗದಿಪಡಿಸುತ್ತಿರೊ ಎಂಬುದನ್ನು ಡಿಆರ್‌ಡಿಒ ನಿರ್ಧರಿಸಬೇಕು. ಅನುಸರಣೆಯ ಮೂಲಕ ನಾವು ವಿಶ್ವದ  ನಾಯಕರೆನಿಸಲು ಸಾಧ್ಯವಿಲ್ಲ. ನಾವು ಜಾಗತಿಕ ಸಮಿತಿಗೆ ಕಾರ್ಯಸೂಚಿಯನ್ನು ರೂಪಿಸುವಂತಾಗಬೇಕು’ ಎಂದರು.

‘ಭಾರತದಲ್ಲಿ ಪ್ರತಿಭಾವಂತರ ಕೊರತೆ ಇಲ್ಲ. ಆದರೆ ನಡೆಯುತ್ತೆ (ಚಲ್ತಾ ಹೈ) ಎನ್ನುವ ಮನೋಭಾವ ಇದೆ ಎನಿಸುತ್ತದೆ. ಮೋದಿಜಿ ನಿಮ್ಮ ಸರ್ಕಾರದಿಂದ ನಮಗೆ ಅಪಾರ ಭರವಸೆಗಳಿವೆ ಎಂದು ಜನರು ಹೇಳುತ್ತಾರೆ. ಯಾರು ಕೆಲಸ ಮಾಡುತ್ತಾರೆ ಅವರ ಮೇಲೆ ಜನರು ಭರವಸೆ ಇಡುತ್ತಾರೆ. ಕೆಲಸ ಮಾಡದಿರುವವರ ಮೇಲೆ ಯಾರೂ ಭರವಸೆ ಇಡುವುದಿಲ್ಲ. ನನಗೆ ಡಿಆರ್‌ಡಿಒ ಮೇಲೆ ಭರವಸೆಯಿದೆ. ಡಿಆರ್‌ಡಿಒಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವಿದೆ ಎಂಬುದು ನನಗೆ ಗೊತ್ತಿದೆ’ ಎಂದು ತಮ್ಮ ಸರ್ಕಾರ ಹಾಗೂ ಡಿಆರ್‌ಡಿಒ ನಡುವಣ ಸಾಮ್ಯತೆ ಮನವರಿಕೆ ಮಾಡಲು ಮೋದಿ ಪ್ರಯತ್ನಿಸಿದರು.

ಲಘು ಯುದ್ಧ ವಿಮಾನ ತೇಜಸ್‌, ನಾಗ್‌ ಕ್ಷಿಪಣಿ, ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಯೋಜನೆ ಹಾಗೂ ವಾಯುಗಾಮಿ ಮುನ್ಸೂಚನೆ ಹಾಗೂ ನಿಯಂತ್ರಣ ವ್ಯವಸ್ಥೆಯಂಥ  ಹಲವು ಯೋಜನೆಗಳು ಹಲವು ವರ್ಷಗಳಿಂದ ವಿಳಂಬವಾಗುತ್ತಿವೆ. ಅದಕ್ಕೆ ನಿಗದಿಗಿಂತಲೂ ಹೆಚ್ಚಿನ ವೆಚ್ಚ ತಗುಲುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT