ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯದ ಗೊಂಬೆಗಳು

Last Updated 16 ಡಿಸೆಂಬರ್ 2014, 4:53 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಕುಟುಂಬ ಸಮೇತರಾಗಿ ಭಾರತಕ್ಕೆ ಬಂದಿದ್ದ ಅವಧಿಯಲ್ಲಿ ಅವರ ಪತ್ನಿ ಮಿಶೆಲ್ ಒಬಾಮ ನವದೆಹಲಿಯ ವಸ್ತು ಪ್ರದರ್ಶನದಲ್ಲಿ ರಾಮನಗರದ ಪ್ರಸಿದ್ಧ ಚನ್ನಪಟ್ಟಣದ ಬೊಂಬೆಗಳನ್ನು ಖರೀದಿಸಿದ್ದರು. ಅವರ ಮೂಲಕ ಗೊಂಬೆಗಳು ಶ್ವೇತಭವನ ತಲುಪಿದ್ದವು. ಈಗ ಚನ್ನಪಟ್ಟಣದ ಗೊಂಬೆಗಳು ಅಮೆರಿಕ ಅಧ್ಯಕ್ಷ ಬರಾಕ್‍ ಒಬಾಮ ಅವರ ಮುಂದೆ ಸಾಗಿಹೋಗಲಿವೆ.

ಇದೇ ಮೊದಲ ಸಲ ಅಮೆರಿಕ ಅಧ್ಯಕ್ಷ ಹಾಗೂ ಭಾರತದ ಪ್ರಧಾನಿಯೊಬ್ಬರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಜೊತೆ ಮೋದಿ ಹಾಗೂ ಒಬಾಮಾ ಅವರು ಜ. 26ರಂದು ನಡೆಯುವ ಗಣರಾಜ್ಯೋತ್ಸವದ ಪಥಸಂಚಲನ ವೀಕ್ಷಿಸಲಿದ್ದಾರೆ. ಇದೇ ವೇಳೆ 14 ರಾಜ್ಯಗಳ ಸ್ತಬ್ಧಚಿತ್ರಗಳು ಅವರ ಮುಂದೆ ಹಾದುಹೋಗಲಿವೆ. ಇವುಗಳ ಪೈಕಿ ಕರ್ನಾಟಕ ಚನ್ನಪಟ್ಟಣದ ಗೊಂಬೆಗಳೊಂದಿಗೆ ಪಾಲ್ಗೊಳ್ಳುತ್ತಿದೆ. ಇದೇ ಮೊದಲ ಬಾರಿ ಹಿನ್ನೆಲೆ ಸಂಗೀತವೂ ಕನ್ನಡದಲ್ಲಿ ರಾಜಧಾನಿಯಲ್ಲಿ ಅನುರಣಿಸಲಿದೆ. ನಾಡಿನ ಪಾರಂಪರಿಕ ಕಲೆಗಳಲ್ಲಿ ಒಂದಾಗಿರುವ ಚನ್ನಪಟ್ಟಣದ ಗೊಂಬೆಗಳು ಮತ್ತು ಕನ್ನಡ ಸಂಗೀತಗಳೆರಡೂ ನೋಡುಗರ ಕಣ್ಮನ ಸೆಳೆಯಲಿವೆ. 

ಗೆದ್ದ ಗೊಂಬೆ
ಆಲೆ ಮರ, ಗಂಧದ ಮರ, ತೇಗದ ಮರ ಸೇರಿದಂತೆ ವಿವಿಧ ಬಗೆಯ ಮರಗಳಿಂದ ತಯಾರಿಸಲಾಗುವ ಗೊಂಬೆಗಳು ಇಂಗ್ಲೆಂಡ್‍, ಅಮೆರಿಕ, ಜಪಾನ್‍, ಜರ್ಮನಿ, ಫ್ರಾನ್ಸ್‍, ಶ್ರೀಲಂಕಾ, ಸಿಂಗಪುರ, ಮಲೇಷಿಯಾ ಸೇರಿದಂತೆ ಹತ್ತು ಹಲವು ದೇಶಗಳಿಗೆ ರಫ್ತಾಗುತ್ತವೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯವು ಚನ್ನಪಟ್ಟಣದ ಗೊಂಬೆಗಳನ್ನು ಅದೇ ಹೆಸರಿನೊಂದಿಗೆ ಸ್ತಬ್ಧಚಿತ್ರಕ್ಕಾಗಿ ಈ ಬಾರಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದರ ಜೊತೆಗೆ ಕೊಡಗು; ಕಾಫಿಯ ನಾಡು, ಸಕಾಲ, ಸಾವಿರ ಕಂಬದ ಬಸದಿ, 18ನೇ ಶತಮಾನದ ಮೈಸೂರು ದಸರಾ ಆಚರಣೆಯಂತಹ ಐದು ವಿಷಯಗಳನ್ನೂ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಇದರಲ್ಲಿ ಆಯ್ಕೆಯಾಗಿದ್ದು ಚನ್ನಪಟ್ಟದ ಗೊಂಬೆಗಳು.

ಮೊದಲ ಹಂತ ದಾಟಿದ ಬಳಿಕ, ಸ್ತಬ್ಧಚಿತ್ರದ ಮಾದರಿ (ಕೀ ಮಾಡೆಲ್‍) ಮತ್ತು ಸಂಗೀತದ ಹಂತವನ್ನು ದಾಟಬೇಕಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಯುವ ಸಂಗೀತ ನಿರ್ದೇಶಕ ಪ್ರವೀಣ್‍ ಡಿ. ರಾವ್‍ ಅವರ ಕನ್ನಡ ಸಂಗೀತವನ್ನು ಹಾಗೆಯೇ ಉಳಿಸಿಕೊಂಡಿತು. ‘ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಈ ಬಾರಿ ರಾಜ್ಯವು ಪ್ರಶಸ್ತಿಯನ್ನು ನಿರೀಕ್ಷಿಸುತ್ತಿದೆ’ ಎನ್ನುತ್ತಾರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‍.ಆರ್‍. ವಿಶುಕುಮಾರ್‍.

ಬಣ್ಣದ ಬುಗುರಿ, ವಿಶ್ವ ಪ್ರಸಿದ್ಧ ರೈಲು, ದಿಬ್ಬಣ, ಬ್ಯಾಂಡ್ ಸೆಟ್, ದಸರಾ ಬೊಂಬೆ, ದೇವರ ಗೋಪುರ, ಪ್ರಾಣಿ-ಪಕ್ಷಿಗಳು, ಜೀಕುವ ಕುದುರೆ, ಎತ್ತಿನ ಗಾಡಿ, ನರ್ತಿಸುವ ಮಕ್ಕಳ ಬೊಂಬೆ, ತಿರುಗುವ ಗೊಂಬೆಗಳು, ಕೀ ಬಂಚ್, ಬಳೆ ಸೇರಿದಂತೆ ಹಲವಾರು ವಸ್ತುಗಳು ಚನ್ನಪಟ್ಟಣದಲ್ಲಿ ತಯಾರಾಗುತ್ತವೆ. ಸ್ತಬ್ಧಚಿತ್ರದಲ್ಲೂ ಇವುಗಳೇ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಗೊಂಬೆಗಳನ್ನು ತಯಾರಿಸುವಲ್ಲಿ ಮಗ್ನರಾಗಿರುವ ದಂಪತಿ ಪ್ರಮುಖವಾಗಿ ಕಾಣಿಸಿಕೊಂಡರೆ, ಎರಡನೇ ಹಂತದಲ್ಲಿ ಜೀಕುವ ಕುದುರೆ ಮೇಲೆ ತೂಗುತ್ತಿರುವ ಹೆಣ್ಣು ಮಗು ಗಮನ ಸೆಳೆಯಲಿದೆ.
ಮಧ್ಯಭಾಗದಲ್ಲಿ ತಿರುಗುವ ಗೊಂಬೆಗಳು ಇದ್ದರೆ, ಕೊನೆಯಲ್ಲಿ ಜೋಡಿ ಕುದುರೆ ಮೇಲೆ ಸವಾರಿ ಮಾಡುತ್ತಿರುವವರು ಕಂಗೊಳಿಸಲಿದ್ದಾರೆ. ಕೆಳಭಾಗದಲ್ಲಿ ಪ್ರಾಣಿ ಪಕ್ಷಿಗಳು, ಬ್ಯಾಂಡ್‌ಸೆಟ್‍, ದಿಬ್ಬಣ, ಮಣಿಗಳಿಂದ ಕೂಡಿರುವ ಸ್ಲೇಟ್‍ ಇರಲಿವೆ. ಸ್ತಬ್ಧಚಿತ್ರದಲ್ಲಿ ತಲಾ ನಾಲ್ಕು ಜನ ಹೆಣ್ಣು ಮತ್ತು ಗಂಡು ಮಕ್ಕಳು ಚನ್ನಪಟ್ಟಣದ ಗೊಂಬೆಗಳನ್ನು ಕೈಯಲ್ಲಿ ಎಳೆದುಕೊಂಡು ಹೋಗಲಿದ್ದಾರೆ.

ಚನ್ನಪಟ್ಟಣದ ಗೊಂಬೆ ಕತೆ
ಇಲ್ಲಿಯ ಗೊಂಬೆಗಳಿಗೆ ಸುಮಾರು 200 ವರ್ಷಗಳ ಇತಿಹಾಸವಿದೆ. ಚನ್ನಪಟ್ಟಣವು ಗೊಂಬೆಗಳ ನಾಡಾಗಲು ಟಿಪ್ಪು ಸುಲ್ತಾನ್‍ ಕಾರಣಕರ್ತ. ಈ ಗೊಂಬೆಗಳ ಅಂದ ಚೆಂದಕ್ಕೆ ಮಾರುಹೋದ ಟಿಪ್ಪು ಇದನ್ನು ಉದ್ಯಮವನ್ನಾಗಿಸಿದ. ಪರ್ಷಿಯಾದಿಂದ ಕುಶಲಕರ್ಮಿ ಗಳನ್ನು ಕರೆತಂದು ಇಲ್ಲಿನವರಿಗೆ ಗೊಂಬೆಗಳನ್ನು ಮತ್ತಷ್ಟು ಸುಂದರವಾಗಿ ಮಾಡುವುದನ್ನು ಕಲಿಸಿಕೊಟ್ಟ. ಹಿಂದೆ ಚನ್ನಪಟ್ಟಣದಲ್ಲಿ ‘ಚಿತ್ರಗಾರರು’ ಎನ್ನುವ ಕಲಾವಿದರು ಆಲೆ ಮರದಿಂದ ವಿವಿಧ ಕಲಾಕೃತಿ ತಯಾರಿಸುತ್ತಿದ್ದರು. ಇವರಿಗೆ ತರಬೇತಿ ನೀಡುತ್ತಿದ್ದ ಬಾಬಾ ಸಾಹೇಬ್ ಮಿಯಾ ಎಂಬಾತ ಗೊಂಬೆಗಳ ತಯಾರಿಕೆಯಲ್ಲಿ ಜಪಾನಿನ ತಂತ್ರಜ್ಞಾನ ಕಲಿತಿದ್ದರು. ಈ ತಂತ್ರಜ್ಞಾನವನ್ನು ಅವರು ಚನ್ನಪಟ್ಟದ ಗೊಂಬೆಗಳ ತಯಾರಿಕೆಯಲ್ಲಿಯೂ ಬಳಸಿಕೊಂಡರು.

ಟಿಪ್ಪು ನಂತರ ವಿಶೇಷ ಆಸಕ್ತಿ ತಳೆದ ಮೈಸೂರಿನ ದಿವಾನರು 1902ರಲ್ಲಿ ಚನ್ನಪಟ್ಟಣ ಕುಶಲಕರ್ಮಿ ತರಬೇತಿ ಸಂಸ್ಥೆಯನ್ನು ಆರಂಭಿಸಿದರು. ಈ ಕೇಂದ್ರದಲ್ಲಿ ಅರಗು, ಬಣ್ಣ, ತೆಂಗಿನ ನಾರಿನಿಂದ ಬಣ್ಣಗಳ ತಯಾರಿ, ಕಾರ್ಪೆಂಟರಿ, ಮಡಿಕೆ ತಯಾರಿಕೆಯಂತಹ ಮೊದಲಾದ ಬಗೆಯ ಕುಶಲ ಕಲೆಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಯಿತು. ವಿದೇಶಿಗರೂ ಚನ್ನಪಟ್ಟಣದ ಕಲೆಯ ಬೆಳವಣಿಗೆಗೆ ಸಹಕರಿಸಿದ್ದಾರೆ. ಅಮೆರಿಕದ ಜಾಕಿ ಚಂದಾನಿ ಎಂಬಾಕೆ 1970ರ ದಶಕದಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು. ಈ ಕಲೆಗೆ ಮಾರುಹೋಗಿದ್ದ  ಅವರು ಇಲ್ಲಿಯೇ ನೆಲೆ ನಿಂತು ಗೃಹಾಲಂಕಾರ ವಸ್ತುಗಳನ್ನು ತಯಾರಿಸುವುದರ ಬಗ್ಗೆ ಇಲ್ಲಿನವರಿಗೆ ಕಲಿಸಿಕೊಟ್ಟರು.

ಮೂರು ಶತಮಾನಗಳ ಇತಿಹಾಸವಿರುವ ಚನ್ನಪಟ್ಟದ ಗೊಂಬೆ ತಯಾರಿಕೆಯನ್ನೇ ಅವಲಂಬಿಸಿದ ದೊಡ್ಡ ಜನ ಸಮುದಾಯ ಈ ತಾಲ್ಲೂಕಿನಲ್ಲಿದೆ. ಗೊಂಬೆಗಳ ಕೆತ್ತನೆಗೆ ಬೇಕಾದ ಮೃದುವಾದ ಆಲೆ ಮರಗಳು ಇಲ್ಲಿಯೇ ಬೆಳೆಯುತ್ತವೆ. ಪಾರಂಪರಿಕ ಶೈಲಿಯಲ್ಲಿ ಬಗೆಬಗೆಯ ಬೊಂಬೆಗಳನ್ನು ತಯಾರಿಸುವಲ್ಲಿ ಇಲ್ಲಿನ ಕುಶಲ ಕರ್ಮಿಗಳು ನಿಪುಣರು. ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಆಧುನಿಕತೆಗೆ ಅನುಗುಣವಾಗಿ ಇಲ್ಲಿನ ಗೊಂಬೆಗಳ ವಿನ್ಯಾಸಗಳು ಬದಲಾಗುತ್ತಿವೆ. ಟಿ.ವಿ ಪ್ರಭಾವದಿಂದಾಗಿ ಛೋಟಾ ಭೀಮ್‌ನಂಥ ಕಾರ್ಟೂನ್‍ ಗೊಂಬೆಗಳೂ ಸಿಗುತ್ತಿವೆ. ಶೈಕ್ಷಣಿಕ ಮಾದರಿ ವಸ್ತುಗಳು ಹಾಗೂ ಗಣಿತ, ವಿಜ್ಞಾನ ಬೋಧನೆಗೆ ನೆರವಾಗುವ ಆಟದ ವಸ್ತುಗಳನ್ನೂ ಮಾಡಿಕೊಡಲಾಗುತ್ತಿದೆ. ಗುಲಗಂಜಿ ಗಾತ್ರದ ಗೊಂಬೆ ಕೆತ್ತನೆಯಲ್ಲಿಯೂ ಇಲ್ಲಿನ ಕುಶಲಕರ್ಮಿಗಳು ನಿಪುಣರು. ಚನ್ನಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಬಗೆಯ ಗೊಂಬೆಗಳು ಸಿದ್ಧವಾಗುತ್ತವೆ. ರೂ10 ರಿಂದ ಹಿಡಿದು ರೂ10 ಸಾವಿರದವರೆಗಿನ ಗೊಂಬೆಗಳೂ ಇವೆ.

ಉದ್ಯಮಕ್ಕೆ ಹೊಡೆತ
ಎಗ್ಗಿಲ್ಲದೆ ಲಗ್ಗೆ ಇಡುತ್ತಿರುವ ಪ್ಲಾಸ್ಟಿಕ್‍ ಮತ್ತು ಚೀನಾ ಗೊಂಬೆಗಳು ನಮ್ಮ ದೇಶದ ಪಾರಂಪರಿಕ ಗೊಂಬೆ ಉದ್ಯಮಕ್ಕೆ ಹೊಡೆತ ನೀಡಿವೆ. ಇದರಿಂದ ಚನ್ನಪಟ್ಟಣದ ಗೊಂಬೆಗಳೂ ಹೊರತಾಗಿಲ್ಲ. ಆದರೂ, ಚನ್ನಪಟ್ಟಣ ಕುಶಲಕರ್ಮಿಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಗೊಂಬೆಗಳ ಜತೆಗೇ ಗೃಹಾಲಂಕಾರಿಕ ವಸ್ತುಗಳು ಮತ್ತು ದಿನನಿತ್ಯ ಬಳಸುವ ವಸ್ತುಗಳು ಸೇರಿದಂತೆ ‘ಕಾರ್ಪೊರೇಟ್ ಗಿಫ್ಟ್’ಗಳನ್ನು ತಯಾರಿಸಿ, ಮಾರಾಟ ಮಾಡುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳುತ್ತಿದ್ದಾರೆ. ಈ ವಿಶಿಷ್ಟ ಉದ್ಯಮ ಪೈಪೋಟಿ, ಸ್ಪರ್ಧೆ, ಸಮಸ್ಯೆಗಳ ನಡುವೆಯೂ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿರುವುದು ಸಂತಸದ ಸಂಗತಿ.
* * *

ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಈ ಮೊದಲು ಎಲ್ಲಾ ರಾಜ್ಯಗಳಿಗೂ ಅವಕಾಶವಿತ್ತು. ಭದ್ರತೆ ಮತ್ತು ಇತರ ಕಾರಣಗಳಿಂದ ಭಾಗವಹಿಸುವವರ ಸಂಖ್ಯೆಯನ್ನು 14ಕ್ಕೆ ಇಳಿಸಲಾಗಿದೆ. ಅಷ್ಟೇ ಅಲ್ಲದೇ ಗುಣಮಟ್ಟ ಹಾಗೂ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು ಸತತವಾಗಿ ಐದನೇ ಬಾರಿಗೆ ಆಯ್ಕೆಯಾಗಿರುವುದು ಅಭಿಮಾನದ ಸಂಗತಿ.
ರಾಜ್ಯದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ.

ಸ್ತಬ್ಧಚಿತ್ರ: ಹಿನ್ನೋಟ...
* 2006: ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕ ಪ್ರಥಮ ಪ್ರಶಸ್ತಿ
* 2008: ಹೊಯ್ಸಳ ಕಲೆ-ದ್ವಿತೀಯ ಪ್ರಶಸ್ತಿ, ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನ್ ಪ್ರಶಸ್ತಿ
* 2011: ಬೀದರ್‌ನ ಪಾರಂಪರಿಕ ಕಲೆಯಾದ ‘ಬಿದರಿ’- ದ್ವಿತೀಯ ಪ್ರಶಸ್ತಿ
* 2012: ದಕ್ಷಿಣ ಕನ್ನಡ ಭೂತಾರಾಧನೆ- ತೃತೀಯ ಪ್ರಶಸ್ತಿ
* 2013: ಕಿನ್ನಾಳ ಕಲೆ
* 2014: ‘ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT